ಗೌರಿ ಚಿತ್ರದ ಟೈಟಲ್ನಿಂದಲೇ ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಟಾಕ್ ಆಗುತ್ತಿದೆ. ಸ್ಟೈಲಿಷ್ ಡೈರೆಕ್ಟರ್ ಅಂತಾನೇ ಕರೆಯಿಸಿಕೊಂಡಿರುವ ಇಂದ್ರಜಿತ್ ಲಂಕೇಶ್ ನಿರ್ದೇಶನದ ಜೊತೆಗೆ ಅದ್ದೂರಿಯಾಗಿ ನಿರ್ಮಾಣ ಮಾಡಿರೋ ಈ ವರ್ಷದ ಬಹು ನಿರೀಕ್ಷಿತ ಚಿತ್ರ ಗೌರಿ.
![Directer Indrajit Lankesh](https://etvbharatimages.akamaized.net/etvbharat/prod-images/21-05-2024/kn-bng-02-gowri-cinemada-bhagge-indrajitlankesh-mathu-7204735_21052024172318_2105f_1716292398_344.jpg)
ಇತ್ತೀಚೆಗಷ್ಟೇ ಟೀಸರ್ ಹಾಗೂ ಹಾಡುಗಳಿಂದ ಕ್ರೇಜ್ ಹುಟ್ಟಿಸಿರುವ ಗೌರಿ ಚಿತ್ರದಿಂದ ಇಂದ್ರಜಿತ್ ತಮ್ಮ ಮಗ ಸಮರ್ಜಿತ್ ಲಂಕೇಶ್ನನ್ನ ಬಾಲಿವುಡ್ ಶೈಲಿಯಲ್ಲಿ ಇಂಟ್ರಡ್ಯೂಸ್ ಮಾಡ್ತಾ ಇದ್ದಾರೆ. ಗ್ರ್ಯಾಂಡ್ ಮೇಕಿಂಗ್ ಹಾಗೂ ಕಂಟೆಂಟ್ನಿಂದ ಸೌಂಡ್ ಮಾಡುತ್ತಿರುವ ಗೌರಿ ಚಿತ್ರದ ಬಗ್ಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈ ಚಿತ್ರದ ಇಂಟ್ರಸ್ಟ್ರಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ನಿರ್ದೇಶಕ ಇಂದ್ರಜಿತ್ ಲಂಕೇಶ್ ಮಾತನಾಡಿ, ಟೀಸರ್ ನೋಡಿದವರೆಲ್ಲ ಇದೊಂದು ಆ್ಯಕ್ಷನ್ ಸಿನಿಮಾ ಅಂತಾ ಅಂದುಕೊಂಡಿದ್ದಾರೆ. ಆದರೆ ಗೌರಿ ಒಂದು ಆ್ಯಕ್ಷನ್ ಚಿತ್ರವಲ್ಲ, ಮ್ಯೂಸಿಕಲ್ ಸಿನಿಮಾ. ಇದರಲ್ಲಿ ಪ್ರೀತಿ ಇದೆ, ಎಮೋಷನ್ ಇದೆ, ಭರ್ಜರಿ ಆಕ್ಷನ್ ಚಿತ್ರದಲ್ಲಿವೆ ಅಂತಾರೆ.
ಚಿತ್ರಕ್ಕೆ ಎಷ್ಟು ಫೈಟ್‍ಗಳು ಬೇಕೋ ಅವು ಚಿತ್ರದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಯಾರೂ ಮ್ಯೂಸಿಕಲ್ ಸಿನಿಮಾಗಳನ್ನು ಮಾಡುವುದಿಲ್ಲ. ಅಂಥ ಚಿತ್ರ ಮಾಡಬೇಕೆಂದರೆ ಬಜೆಟ್ ಹೆಚ್ಚಾಗುತ್ತದೆ. ಚಿತ್ರೀಕರಣ, ಸಂಗೀತ ಸಂಯೋಜನೆ, ಸೆಟ್, ಫಾರಿನ್ ಚಿತ್ರೀಕರಣ, ಡ್ಯಾನ್ಸರ್ಸ್ ಇವೆಲ್ಲದರಿಂದ ಬಜೆಟ್ ವಿಪರೀತ ಹೆಚ್ಚಾಗುತ್ತದೆ. ಅದೇ ಕಾರಣಕ್ಕೆ ಸಿನಿಮಾಗಳಲ್ಲಿ ಹಾಡುಗಳನ್ನು ಬಳಸಿಕೊಳ್ಳುವುದೇ ಕಡಿಮೆಯಾಗಿದೆ. ನಾನು ಆ ಬಗ್ಗೆ ಯೋಚಿಸಲಿಲ್ಲ ಎಂದಿದ್ದಾರೆ.
![Sanya Iyer with Samarjit Lankesh](https://etvbharatimages.akamaized.net/etvbharat/prod-images/21-05-2024/21524491_thumb.jpg)
ಈ ಚಿತ್ರದಲ್ಲಿ ಏಳು ಹಾಡುಗಳು ಇರುತ್ತವೆ ಎನ್ನುವ ಅವರು, ಕಥೆಗೆ ಬೇಕಾಗಿದ್ದರಿಂದ ಏಳು ಹಾಡುಗಳನ್ನಿಟ್ಟಿದ್ದೇನೆ. 4 ಜನ ಸಂಗೀತ ನಿರ್ದೇಶಕರು, 14 ಗಾಯಕರು, ಐವರು ಗೀತರಚನೆಕಾರರು ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಸಹಜವಾಗಿಯೇ ಬಜೆಟ್ ಜಾಸ್ತಿ ಆಗಿದೆ. ಒಬ್ಬ ಹೊಸ ಹೀರೋಗೆ ಯಾರೂ ಇಷ್ಟು ದೊಡ್ಡ ಬಜೆಟ್ ಹಾಕಿ ಸಿನಿಮಾ ಮಾಡುವುದಿಲ್ಲ. ನನ್ನ ಮಗ ಎಂದು ಇಷ್ಟು ಬಜೆಟ್ ಹಾಕಿಲ್ಲ. ಕಥೆಗೆ ಅವಶ್ಯಕತೆ ಇತ್ತು. ಹಾಗಾಗಿ ಸಿನಿಮಾ ರಿಚ್ ಆಗಿ ಬಂದಿದೆ ಎಂದರು.
ಗೌರಿ ಚಿತ್ರಕ್ಕೆ ಜೆಸ್ಸಿ ಗಿಫ್ಟ್, ಚಂದನ್ ಶೆಟ್ಟಿ, ಶಿವು ಭೇರ್ಗಿ ಹಾಗೂ ಅನಿರುದ್ದ್ ಶಾಸ್ತ್ರಿ ಸಂಗೀತ ಸಂಯೋಜಿಸಿದರೆ, ಮ್ಯಾಥ್ಯೂಸ್ ಮನು ರೀ ರೆಕಾರ್ಡಿಂಗ್ ಮಾಡಿದ್ದಾರೆ. ವಿ. ನಾಗೇಂದ್ರಪ್ರಸಾದ್, ಕವಿರಾಜ್, ಕೆ. ಕಲ್ಯಾಣ್, ವರದರಾಜ್ ಚಿಕ್ಕಬಳ್ಳಾಪುರ, ಗುಬ್ಬಿ ಹಾಡುಗಳನ್ನು ರಚಿಸಿದ್ದಾರೆ. ಕೈಲಾಶ್ ಖೇರ್, ಚಂದನ್ ಶೆಟ್ಟಿ, ಅನಿರುದ್ಧ ಶಾಸ್ತ್ರಿ, ಜಾವೇದ್ ಅಲಿ, ಅನನ್ಯ ಭಟ್, ನಿಹಾಲ್ ತೌರೋ , ಅದಿತಿ ಸಾಗರ್, ಬಾಲಸುಬ್ರಹ್ಮಣ್ಯಂ, ಪ್ರಜ್ಞಾ ಮರಾಠೆ, ಸಮರ್ಜಿತ್ ಮುಂತಾದವರು ಈ ಚಿತ್ರದ ಹಾಡುಗಳನ್ನು ಹಾಡಿದ್ದಾರೆ.
ಸಮರ್ಜಿತ್ ಲಂಕೇಶ್ ಜೊತೆ ಸಾನ್ಯಾ ಅಯ್ಯರ್ ಸ್ಕ್ರೀನ್ ಹಂಚಿಕೊಂಡಿದ್ದು, ಈಗಾಗ್ಲೇ ಇವರಿಬ್ಬರ ಕೆಮಿಸ್ಟ್ರಿ ಬಹಳ ಚೆನ್ನಾಗಿ ವರ್ಕ್ ಔಟ್ ಆಗಿದೆ. ಇವರ ಜೊತೆ ನೀನಾಸಂ ಅಶ್ವಥ್, ಮಾನಸೀ ಸುಧೀರ್, ಸಂಪತ್ ಮೈತ್ರೇಯಾ ಸೇರಿದಂತೆ ಸಾಕಷ್ಟು ಜನ ಕಲಾವಿದರು ಇದ್ದಾರೆ.
ಗೌರಿ ಚಿತ್ರಕ್ಕೆ ಎ. ಜೆ ಶೆಟ್ಟಿ ಹಾಗೂ ಕೃಷ್ಣಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಮಾಸ್ತಿ ಮಂಜು, ರಾಜಶೇಖರ್ ಹಾಗೂ ಮಧು ಸಂಭಾಷಣೆ ಬರೆದಿದ್ದಾರೆ. ರವಿವರ್ಮ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ ಮಾಡಿದ್ದಾರೆ. ಸದ್ಯ ಗೌರಿ ಸಿನಿಮಾ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ.
ಈಗಾಗಲೇ ಚಿತ್ರದ ಟೀಸರ್ ಮತ್ತು ಟೈಮ್ ಬರತ್ತೆ ಎಂಬ ಹಾಡು ಒಂದು ಮಿಲಿಯನ್ಗೂ ಹೆಚ್ಚು ಜನ ನೋಡಿ ಮೆಚ್ಚಿಕೊಂಡಿದ್ದಾರೆ. ಹೀಗಾಗಿ ನಿರ್ದೇಶಕ ಇಂದ್ರಜಿತ್ ಲಂಕೇಶ್ಗೆ ನಮ್ಮ ಚಿತ್ರ ಸಿನಿಮಾ ಪ್ರೇಮಿಗಳಿಗೆ ಇಷ್ಟ ಆಗುತ್ತೆ ಎಂಬ ನಂಬಿಕೆಯಿಂದ ಮುಂದಿನ ತಿಂಗಳು ಗೌರಿ ಚಿತ್ರವನ್ನ ಬಿಡುಗಡೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಮತ್ತೊಂದು ಕಡೆ ಗೌರಿ ಚಿತ್ರ ಸಮರ್ಜಿತ್ ಲಂಕೇಶ್ಗೆ ದೊಡ್ಡ ಮಟ್ಟದ ಹೆಸರು ತಂದುಕೊಡುವ ಸೂಚನೆ ಸಿಗ್ತಾ ಇದೆ.
ಇದನ್ನೂ ಓದಿ : ಸಾನ್ಯಾ ಅಯ್ಯರ್, ಇಂದ್ರಜಿತ್ ಲಂಕೇಶ್ ಪುತ್ರನ 'ಟೈಮ್ ಬರುತ್ತೆ' ಹಾಡಿಗೆ ಫ್ಯಾನ್ಸ್ ಫಿದಾ - Gowri Movie