ಭಾರತೀಯ ಚಿತ್ರರಂಗದ ಜನಪ್ರಿಯ ನಿರ್ದೇಶಕ ಅನುರಾಗ್ ಕಶ್ಯಪ್ ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶ ಕೊಡುವ ಮೂಲಕ ಹೆಸರುವಾಸಿಯಾಗಿದ್ದಾರೆ. ಆದ್ರೀಗ ನಿರ್ದೇಶಕರ ನಡೆ ಬದಲಾದಂತೆ ತೋರುತ್ತಿದೆ. ಹಲವರಿಂದ ನಿರ್ದೇಶಕರಿಗೆ ಕಿರಿಕಿರಿಯಾದಂತೆ ತೋರುತ್ತಿದೆ. ಇನ್ಮುಂದೆ ನಿರ್ದೇಶಕರು ತಮ್ಮ ಸಮಯ, ಸಲಹೆಯನ್ನು ಉಚಿತವಾಗಿ ನೀಡುವುದಿಲ್ಲ. ಬದಲಿಗೆ ಭೇಟಿಗಾಗಿ 5 ಲಕ್ಷ ರೂ.ವರೆಗೆ ಶುಲ್ಕ ವಿಧಿಸಲಿದ್ದಾರೆ.
1.1 ಮಿಲಿಯನ್ ಫಾಲೋವರ್ಸ್ ಹೊಂದಿರುವ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಶನಿವಾರದಂದು ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಶಾರ್ಟ್‌ಕಟ್ಸ್ ಹುಡುಕುತ್ತಿರುವ ಜನರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಒಂದು ಭೇಟಿಗಾಗಿ ಸಮಯದ ಆಧಾರದ ಮೇಲೆ ಶುಲ್ಕ ಪಡೆಯೋದಾಗಿ ಈ ಬರಹದಲ್ಲಿ ಅವರು ತಿಳಿಸಿದ್ದಾರೆ.
ಅನುರಾಗ್ ಕಶ್ಯಪ್ ಪೋಸ್ಟ್ನಲ್ಲಿ ಏನಿದೆ? ''ಹೊಸಬರಿಗೆ ಸಹಾಯ ಮಾಡಲು ಹೋಗಿ ನಾನು ನನ್ನ ಸಾಕಷ್ಟು ಸಮಯ ವ್ಯರ್ಥ ಮಾಡಿದ್ದೇನೆ. ತಮ್ಮನ್ನು ಸೃಜನಶೀಲ ಪ್ರತಿಭೆಗಳು ಎಂದು ಭಾವಿಸಿರುವ ಗೊತ್ತು ಗುರಿಯಿಲ್ಲದ ಜನರನ್ನು ಭೇಟಿಯಾಗಲು ನಾನು ನನ್ನ ಸಮಯವನ್ನು ವ್ಯರ್ಥ ಮಾಡಲು ಬಯಸುವುದಿಲ್ಲ. ಹಾಗಾಗಿ ನಾನು ಭೇಟಿಗಾಗಿ ಶುಲ್ಕ ನಿಗದಿಪಡಿಸಿದ್ದೇನೆ. ಯಾರಾದರೂ ನನ್ನನ್ನು 10-15 ನಿಮಿಷಗಳ ಕಾಲ ಭೇಟಿಯಾಗಲು ಬಯಸಿದರೆ 1 ಲಕ್ಷ ರೂ., ಅರ್ಧ ಗಂಟೆಗೆ 2 ಲಕ್ಷ ರೂ. ಮತ್ತು 1 ಗಂಟೆಗೆ 5 ಲಕ್ಷ ರೂ. ಶುಲ್ಕ ವಿಧಿಸುತ್ತೇನೆ. ಇಷ್ಟು ಭೇಟಿಯ ರೇಟ್. ಜನರನ್ನು ಭೇಟಿ ಮಾಡುವ ಮೂಲಕ ಸಮಯ ವ್ಯರ್ಥ ಮಾಡುವುದರಿಂದ ನನಗೆ ಸಾಕಾಗಿದೆ. ನಿಜವಾಗಿಯೂ ಶುಲ್ಕ ಭರಿಸಲು ನಿಮಗೆ ಸಾಧ್ಯವಾದರೆ, ನನಗೆ ಕರೆ ಮಾಡಿ ಅಥವಾ ದೂರವಿರಿ. ಹಣವನ್ನು ಮುಂಚಿತವಾಗಿಯೇ ಪಾವತಿ ಮಾಡಬೇಕು'' ಎಂದು ಸೂಚಿಸಿ ತಮ್ಮ ಬರಹದ ಪೋಸ್ಟ್ ಮುಕ್ತಾಯಗೊಳಿಸಿದ್ದಾರೆ.
ಇದನ್ನೂ ಓದಿ: ರಾಮಾಯಣ: ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ಸೀಮಿತಗೊಳಿಸಿದ ಯಶ್, ರಣ್ಬೀರ್, ಸಾಯಿ ಪಲ್ಲವಿ - Ramayana
ಅಷ್ಟೇ ಅಲ್ಲದೇ ತಮ್ಮ ಈ ಪೋಸ್ಟ್ಗೆ, "ಆ್ಯಂಡ್ ಐ ಮೀನ್ ಇಟ್. ನನಗೆ ಮೆಸೇಜ್ ಅಥವಾ ಕರೆ ಮಾಡಬೇಡಿ. ಪಾವತಿಸಿ, ನಿಮಗೆ ಸಮಯ ಸಿಗುತ್ತದೆ. ನಾನು ಚಾರಿಟಿ ಅಲ್ಲ. ಶಾರ್ಟ್‌ಕಟ್‌ಗಳನ್ನು ಹುಡುಕುವ ಜನರಿಂದ ನಾನು ಬೇಸತ್ತಿದ್ದೇನೆ" ಎಂಬ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ.
ಇದನ್ನೂ ಓದಿ: ಪಂದ್ಯದ ವೇಳೆ ಸ್ಟೇಡಿಯಂನಲ್ಲಿ ಶಾರುಖ್ ಖಾನ್ ಸ್ಮೋಕಿಂಗ್: ವಿಡಿಯೋ ವೈರಲ್ - Shah Rukh Khan Smoking
ಈ ಪೋಸ್ಟ್ಗೆ ನಾನಾ ತರನಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, ''ಒಂದು ವೇಳೆ ನನ್ನ ಬಳಿ 5 ಲಕ್ಷ ರೂ. ಇದ್ದರೆ, ನಿಮ್ಮನ್ನು ಭೇಟಿಯಾಗಲು ನಾನು ನನ್ನ ಸಮಯವನ್ನೇಕೆ ವ್ಯರ್ಥ ಮಾಡುತ್ತೇನೆ?'' ಎಂದು ತಿಳಿಸಿದ್ದಾರೆ. ಮತ್ತೋರ್ವರು 'ಕ್ಯಾಶ್ ನಡೆಯುತ್ತಾ?' ಎಂದು ಪ್ರಶ್ನಿಸಿದ್ದಾರೆ. ಹೀಗೆ ಹಲವು ಕಾಮೆಂಟ್ಗಲು ಬಂದಿವೆ. ಇನ್ನೂ, ಅನುರಾಗ್ ಕಶ್ಯಪ್ ನಿರ್ದೇಶಕರಾಗಿ ಮಾತ್ರವಲ್ಲದೇ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ನಿರ್ಮಾಪಕರಾಗಿ ಸದ್ಯ ಎರಡು ಸೀರಿಸ್ಗಳನ್ನು ಹೊಂದಿದ್ದಾರೆ.