ಬೆಂಗಳೂರು: ನಟ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರ 'ಮಾರ್ಟಿನ್' ಇಂದು ತೆರೆಕಂಡಿದೆ. 13 ಭಾಷೆಗಳಲ್ಲಿ 3,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ರಿಲೀಸ್ ಆಗಿರುವ ಸಿನಿಮಾಗೆ ಆರಂಭಿಕವಾಗಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಕೆಲ ಕ್ಷಣಗಳ ಕಾಲ ಶೋ ಸ್ಥಗಿತಗೊಂಡಿತ್ತು.
ನಗರದ ನರ್ತಕಿ ಚಿತ್ರಮಂದಿರ ಸೇರಿದಂತೆ ಕೆಲವೆಡೆ ಶೋ ಸ್ಥಗಿತಗೊಂಡಿದೆ. ಸ್ಕ್ರೀನ್ ಗುಣಮಟ್ಟದ ಸಮಸ್ಯೆಯಿಂದ ಪ್ರದರ್ಶನಗಳು ನಿಂತವು. ಹಾಗಾಗಿ, ಗೊಂದಲವೂ ಉಂಟಾಗಿತ್ತು. ಸರಿಯಾಗಿ ಥಿಯೇಟರ್ ನಿರ್ವಹಣೆ ಮಾಡದಿರುವುದಕ್ಕೆ ಅಭಿಮಾನಿಗಳು, ವೀಕ್ಷಕರು ಅಸಮಾಧಾನ ಹೊರಹಾಕಿದರು. ನಂತರ ಸಮಸ್ಯೆ ಸರಿಪಡಿಸಿ, ಪ್ರದರ್ಶನಗಳನ್ನು ಮುಂದುವರಿಸಲಾಗಿದೆ.
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಒಂದಿಷ್ಟು ಗ್ಯಾಪ್ ಬಳಿಕ ಮಾರ್ಟಿನ್ ಎಂಬ ಬಿಗ್ ಬಜೆಟ್ ಸಿನಿಮಾ ಮೂಲಕ ಬಿಗ್ ಸ್ಕ್ರೀನ್ಗೆ ಮರಳಿದ್ದಾರೆ. ಹೈ ವೋಲ್ಟೇಜ್ನಿಂದ ಕೂಡಿದ್ದ ಟ್ರೇಲರ್ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಅವರು ಸಿನಿಮಾ ಹೇಗಿರಬಹುದೆಂದು ಊಹಿಸತೊಡಗಿದ್ದರು.
ಬೆಳಗ್ಗೆ ಬನಶಂಕರಿ ಸಮೀಪವಿರುವ ತಮ್ಮ ನಿವಾಸದಲ್ಲಿ ಮೊದಲು ಗೋವುಗಳಿಗೆ ಪೂಜೆ ಸಲ್ಲಿಸಿದರು. ಬಾಳೆಹಣ್ಣು, ಬೆಲ್ಲ ಕೊಟ್ಟು ಗೋಪೂಜೆ ಸಲ್ಲಿಸಿದ ನಾಯಕ ನಟ ತಾಯಿಯ ಆರ್ಶೀವಾದವನ್ನೂ ಪಡೆದರು. ಮನೆಯ ಪೂಜೆ ಬಳಿಕ ಕೆ.ಆರ್.ರಸ್ತೆಯಲ್ಲಿರುವ ಉಮಾಮಹೇಶ್ವರಿ ದೇವಸ್ಥಾನಕ್ಕೆ ತೆರಳಿ ಪ್ರಾರ್ಥಿಸಿದರು.
ಮಾರ್ಟಿನ್ ದೇಶಪ್ರೇಮ ಆಧರಿತ ಚಿತ್ರ. ಮುದ್ದಾದ ಪ್ರೇಮ್ ಕಹಾನಿ ಮತ್ತು ಕೌಟುಂಬಿಕ ಕಥೆಯನ್ನೊಳಗೊಂಡಿದೆ. ಧ್ರುವ ಸರ್ಜಾ ಜೊತೆ ವೈಭವಿ ಶಾಂಡಿಲ್ಯಾ ಬಣ್ಣ ಹಚ್ಚಿದ್ದು, ಅನ್ವೇಶಿ ಜೈನ್, ನಿಕಿತಿನ್ ಧೀರ್ ಸೇರಿದಂತೆ ಹಲವರು ನಟಿಸಿದ್ದಾರೆ.
ಇದನ್ನೂ ಓದಿ: ದರ್ಶನ್ ಫ್ಯಾನ್ಸ್ಗೆ ಗುಡ್ ನ್ಯೂಸ್: ರೀ ರಿಲೀಸ್ ಆಗಲಿದೆ ಸೂಪರ್ ಹಿಟ್ 'ನವಗ್ರಹ' ಸಿನಿಮಾ
ಚಿತ್ರದ ಶೂಟಿಂಗ್ ಅನ್ನು ಬೆಂಗಳೂರು ಮತ್ತು ಕಾಶ್ಮೀರದ ಸುಂದರ ತಾಣಗಳಲ್ಲಿ ನಡೆಸಲಾಗಿದೆ. ಕ್ಲೈಮ್ಯಾಕ್ಸ್ ಸೀನ್ಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮಾ ಮತ್ತು ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ. ನಿರ್ಮಾಪಕ ಉದಯ್ ಮೆಹ್ತಾ ಮೊದಲ ಬಾರಿಗೆ ಪ್ಯಾನ್ ವರ್ಲ್ಡ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಇದು ಬಿಗ್ ಬಜೆಟ್ನಲ್ಲಿ ತಯಾರಾಗಿರುವ ಚಿತ್ರ. ಮಣಿಶರ್ಮಾ ಸಂಗೀತ ಸಂಯೋಜನೆ, ಸತ್ಯ ಹೆಗಡೆ ಅವರ ಕ್ಯಾಮರಾ ಕೈಚಳಕ, ಮಹೇಶ್ ರೆಡ್ಡಿ ಸಂಕಲನ ಈ ಚಿತ್ರಕ್ಕಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ 3,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಸಿನಿಮಾದ ಕಲೆಕ್ಷನ್ ಮೇಲೆ ಎಲ್ಲರ ಗಮನ ಇದೆ.
ಇದನ್ನೂ ಓದಿ: 13 ಭಾಷೆಗಳಲ್ಲಿ, 3,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯ್ತು ಧ್ರುವ ಸರ್ಜಾ ಮುಖ್ಯಭೂಮಿಕೆಯ 'ಮಾರ್ಟಿನ್'
ದೊಡ್ಡ ಮಟ್ಟದಲ್ಲಿ ಸಿನಿಮಾದ ಪ್ರಚಾರ ಕಾರ್ಯ ನಡೆದಿದೆ. ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಿರುವ ಹಿನ್ನೆಲೆಯಲ್ಲಿ ಮೊದಲ ದಿನದ ಗಳಿಕೆ ಉತ್ತಮವಾಗಿರಲಿದೆ ಎಂಬ ವಿಶ್ವಾಸ ಬಹುತೇಕರದ್ದು. ಎಲ್ಲದಕ್ಕೂ ನಾಳೆವರೆಗೂ ಕಾಯಬೇಕಿದೆ.