ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯಭೂಮಿಕೆಯ ಹೈ ವೋಲ್ಟೇಜ್ ''ಮಾರ್ಟಿನ್'' ಸಿನಿಮಾ ಇಂದು 13 ಭಾಷೆಗಳಲ್ಲಿ 3,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಿದೆ. ಈ ಹಿನ್ನೆಲೆ, ಧ್ರುವ ಸರ್ಜಾ ದೇವರ ಮೊರೆ ಹೋಗಿದ್ದಾರೆ. ಬನಶಂಕರಿ ಸಮೀಪವಿರುವ ತಮ್ಮ ಮನೆಯಲ್ಲಿ ಮೊದಲು ಗೋವುಗಳಿಗೆ ಪೂಜೆ ಸಲ್ಲಿಸಿದರು. ಬಾಳೆಹಣ್ಣು, ಬೆಲ್ಲ ಕೊಟ್ಟು ಪೂಜೆ ಸಲ್ಲಿಸಿದ ಧ್ರುವ ಸರ್ಜಾ ಸಿನಿಮಾ ಯಶಸ್ಸಿಗೆ ತಾಯಿಯ ಆರ್ಶೀವಾದ ಪಡೆದರು.
ಉಮಾಮಹೇಶ್ವರಿ ಆಶೀರ್ವಾದ ಪಡೆದ ಧ್ರುವ: ನಂತರ ಕೆ.ಆರ್ ರಸ್ತೆಯಲ್ಲಿರೋ ಉಮಾಮಹೇಶ್ವರಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ದೇವಿಗೆ ಪೂಜೆ ಸಲ್ಲಿಸಿ, ಪ್ರಾರ್ಥಿಸಿದರು. ಕೆ.ಆರ್ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರಕ್ಕೆ ಬಂದು ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಲಿದ್ದಾರೆ. ಈಗಾಗಲೇ ಹೈದರಾಬಾದ್ನಲ್ಲಿಯೂ ಮಾರ್ಟಿನ್ ಸಿನಿಮಾ ಬಿಡುಗಡೆಯಾಗಿ, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಯಕ ನಟನಿಗಿದ್ದ ಸಿನಿಮಾ ಆರಂಭ ಹೇಗಿರುತ್ತದೆಯೋ ಎಂಬ ಆತಂಕ ದೂರವಾಗಿದೆ.
ವೈಭವಿ ಶಾಂಡಿಲ್ಯಾ ನಟನೆ: ದೇಶಪ್ರೇಮ, ಮುದ್ದಾದ ಲವ್ ಸ್ಟೋರಿ ಹಾಗೂ ಕೌಟುಂಬಿಕ ಕಥೆಯನ್ನೊಳಗೊಂಡಿರುವ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ಕುತೂಹಲವನ್ನಿಟ್ಟುಕೊಂಡಿದ್ದರು. ಧ್ರುವ ಅವರಿಗೆ ಜೋಡಿಯಾಗಿ ವೈಭವಿ ಶಾಂಡಿಲ್ಯಾ ನಟಿಸಿದ್ದು, ಅನ್ವೇಶಿ ಜೈನ್, ನಿಕಿತಿನ್ ಧೀರ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಬೆಂಗಳೂರು ಹಾಗೂ ಕಾಶ್ಮೀರದ ಸುಂದರ ತಾಣಗಳಲ್ಲಿ ಶೂಟಿಂಗ್ ನಡೆಸಲಾಗಿದೆ. ಕಾಶ್ಮೀರದ ಐಸ್‌ವಾರ್ ಸಾಹಸ ದೃಶ್ಯಗಳ ಜೊತೆಗೆ ರೋಮಾಂಚನಕಾರಿ ಸ್ಕೇಟಿಂಗ್ ಆ್ಯಕ್ಷನ್ ಸೀನ್‌ಗಳು ಚಿತ್ರದಲ್ಲಿವೆ. ಕ್ಲೈಮ್ಯಾಕ್ಸ್ ಸನ್ನಿವೇಶಗಳನ್ನು ಸಾಹಸ ನಿರ್ದೇಶಕರಾದ ರವಿವರ್ಮಾ ಹಾಗೂ ರಾಮ್ ಲಕ್ಷ್ಮಣ್ ಕಂಪೋಸ್ ಮಾಡಿದ್ದಾರೆ.
ಇದನ್ನೂ ಓದಿ: ಇದು 'ಮರ್ಯಾದೆ ಪ್ರಶ್ನೆ' ಅಂತಿದ್ದಾರೆ ಸ್ಯಾಂಡಲ್ವುಡ್ನ ರಾಕೇಶ್ ಅಡಿಗ, ಸುನೀಲ್ ರಾವ್, ಶೈನ್ ಶೆಟ್ಟಿ
ಕನ್ನಡದಲ್ಲಿ ಕೃಷ್ಣನ್ ಲವ್ ಸ್ಟೋರಿ, ಬಚ್ಚನ್, ಕೃಷ್ಣ ರುಕ್ಕು, ಬ್ರಹ್ಮಚಾರಿ ಅಂತಹ ಸಿನಿಮಾಗಳನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಿರುವ ನಿರ್ಮಾಪಕ ಉದಯ್ ಮೆಹ್ತಾ ಮೊದಲ ಬಾರಿಗೆ ಪ್ಯಾನ್ ವರ್ಲ್ಡ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ತೆಲುಗಿನ ಹೆಸರಾಂತ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನೊಂದು ವಿಶೇಷತೆಯೆಂದರೆ, ಸಂಗೀತ ನಿರ್ದೇಶಕ ರವಿ ಬಸ್ರೂರ್ ಈ ಚಿತ್ರತಂಡದ ಜೊತೆ ಕೈಜೋಡಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಚಿತ್ರಕ್ಕಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ 13 ಭಾಷೆಗಳಲ್ಲಿ 3,000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರುವ ಸಿನಿಮಾ ಆರಂಭಿಕವಾಗಿ ಪಾಸಿಟಿವ್ ರೆಸ್ಪಾನ್ಸ್ ಸ್ವೀಕರಿಸಿದೆ.
ಇದನ್ನೂ ಓದಿ: ಧ್ರುವ ಸರ್ಜಾ 'ಮಾರ್ಟಿನ್' ಕಾಸ್ಟೂಮ್, ಟ್ಯಾಟೂ ಹಿಂದಿನ ಸೂತ್ರಧಾರರು ಇವ್ರೇ