ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಟಾಲಿವುಡ್ನ ಪಾಪ್ಯುಲರ್ ಆನ್ಸ್ಕ್ರೀನ್ ಜೋಡಿ. 2019ರಲ್ಲಿ ತೆರೆಕಂಡ ಈ ಜೋಡಿಯ ಚಿತ್ರ 'ಡಿಯರ್ ಕಾಮ್ರೇಡ್' ಯೂಟ್ಯೂಬ್ನಲ್ಲಿ 400 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಈ ಹಿನ್ನೆಲೆ, ತಾರಾ ಜೋಡಿ ಅಭಿಮಾನಿಗಳ ಮೇಲೆ ಪ್ರೀತಿಯ ಸುರಿ ಮಳೆಗೈದಿದ್ದಾರೆ. ವಿಜಯ್, ರಶ್ಮಿಕಾ ಇಬ್ಬರೂ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ, ಸಿನಿಮಾದ ಫೋಟೋ ಜೊತೆಗೆ ಹೃದಯಸ್ಪರ್ಶಿ ಬರಹವನ್ನು ಹಂಚಿಕೊಂಡಿದ್ದಾರೆ.
ಜೂನ್ 14ರಂದು ವಿಜಯ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಡಿಯರ್ ಕಾಮ್ರೇಡ್ ಚಿತ್ರದ ಫೋಟೋ ಶೇರ್ ಮಾಡಿದ್ದಾರೆ. ಆನ್ಸ್ಕ್ರೀನ್ ತಾರಾಜೋಡಿ ನದಿ ತೀರದಲ್ಲಿ ಕುಳಿತಿರುವ ಸುಂದರ ಫೋಟೋವಿದು. "ನಿಮ್ಮಲ್ಲಿ 400 ಮಿಲಿಯನ್ ಜನರು ಡಿಯರ್ ಕಾಮ್ರೇಡ್ ಅನ್ನು ವೀಕ್ಷಿಸಿದ್ದೀರಿ. 2019ರಲ್ಲಿ ಸಿನಿಮಾ ತೆರೆಕಂಡ ದಿನ ನಾವು ಅನುಭವಿಸಿದ ದುಃಖದಿಂದ, ಚಿತ್ರದ ಬಗ್ಗೆ ಹೊಂದಿರುವ ಅಪಾರ ಪ್ರೀತಿಯವರೆಗೆ ಒಂದು ಪಯಣ. ಡಿಯರ್ ಕಾಮ್ರೇಡ್ ನಾನು ಇಷ್ಟಪಟ್ಟು ಮಾಡಿದ ಸಿನಿಮಾ, ನಾನು ಹೇಳಲು ಇಷ್ಟಪಡುವ ಕಥೆ'' ಎಂದು ಬರೆದುಕೊಂಡಿದ್ದಾರೆ. ಇದೇ ಸ್ಟೋರಿಯ ಸ್ಕ್ರೀನ್ಶಾಟ್ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ, 'ಡಿಯರ್ ಕಾಮ್ರೇಡ್ ಎಂದೆಂದಿಗೂ ನನಗೆ ಬಹಳ ವಿಶೇಷ' ಎಂದು ಬರೆದುಕೊಂಡಿದ್ದಾರೆ.
ಭರತ್ ಕಮ್ಮಾ ನಿರ್ದೇಶನದ ಡಿಯರ್ ಕಾಮ್ರೇಡ್ ತೆರೆಕಂಡು ಜುಲೈ 26ಕ್ಕೆ 5 ವರ್ಷ ಪೂರ್ಣಗೊಳ್ಳಲಿದೆ. ಈ ಚಿತ್ರ ವಿಜಯ್ ಮತ್ತು ರಶ್ಮಿಕಾ ಕಾಂಬಿನೇಶನ್ನ ಎರಡನೇ ಸಿನಿಮಾ. 2018ರಲ್ಲಿ ಬಂದ ಮೊದಲ ಚಿತ್ರ ಗೀತ ಗೋವಿದಂ ಕೂಡ ಯಶಸ್ವಿಯಾಯಿತು. ಡಿಯರ್ ಕಾಮ್ರೇಡ್ ಚಿತ್ರಕ್ಕೆ ಜಸ್ಟಿನ್ ಪ್ರಭಾಕರನ್ ಸಂಗೀತ ಸಂಯೋಜಿಸಿದ್ದರು. ಆದರೆ ಸಿನಿಮಾ ತೆರೆಕಂಡ ಸಂದರ್ಭ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದನ್ನೂ ಓದಿ: ಸಂಕಷ್ಟದಿಂದ ಪಾರಾಗಲು ದರ್ಶನ್ ಭಾವನಿಂದ ಕೈಗಾದಲ್ಲಿ ವಿಶೇಷ ಪೂಜೆ - Special Puja by Darshan relative
ಇವರ ಸಿನಿಮಾ ವಿಚಾರ ಗಮನಿಸುವುದಾದರೆ, ರಶ್ಮಿಕಾ ಅವರು ಧನುಷ್ ಜೊತೆಗಿನ ತಮಿಳು ಚಿತ್ರ ಕುಬೇರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ತೆಲುಗು ಚಿತ್ರ ದಿ ಗರ್ಲ್ಫ್ರೆಂಡ್, ತಮಿಳು - ತೆಲುಗು ದ್ವಿಭಾಷಾ ಸಿನಿಮಾ ರೈನ್ಬೋ ಮತ್ತು ಬಾಲಿವುಡ್ನ ಛಾವಾ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಛಾವಾ ಚಿತ್ರದಲ್ಲಿ ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ತೆರೆಹಂಚಿಕೊಂಡಿದ್ದಾರೆ. ಅಲ್ಲದೇ, ಶೀಘ್ರದಲ್ಲೇ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆಗಿನ ಸಿಖಂದರ್ ಚಿತ್ರೀಕರಣವನ್ನು ಪ್ರಾರಂಭಿಸಲಿದ್ದಾರೆ. ಇನ್ನೂ, ಪುಷ್ಪ 2: ದಿ ರೂಲ್ ಬಗ್ಗೆ ವಿಶೇಷ ಪರಿಚಯ ಬೇಕೆನಿಸದು. ಸದ್ಯ ಸಿನಿವಲಯದಲ್ಲಿ ಇದೇ ಸಿನಿಮಾದ ಸದ್ದು. ಮತ್ತೊಂದೆಡೆ, ವಿಜಯ್ ದೇವರಕೊಂಡ ಅವರು ರವಿಕಿರಣ್ ಅವರ ಆ್ಯಕ್ಷನ್ ಥ್ರಿಲ್ಲರ್ನಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರವನ್ನು ಎಸ್ವಿಸಿ59 ಎಂದು ಹೆಸರಿಸಲಾಗಿದೆ.