ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಆರೋಪದಲ್ಲಿ ಬಂಧಿತರಾಗಿರುವ ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ನಿರ್ದೇಶಕ ಮಿಲನ ಪ್ರಕಾಶ್ ಅವರಿಗೆ ಇಂದು ಸಹ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ನೋಟಿಸ್ ಹಿನ್ನೆಲೆ ಶುಕ್ರವಾರ ವಿಜಯನಗರ ಉಪವಿಭಾಗದ ಎಸಿಪಿ ಕಚೇರಿಯಲ್ಲಿ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ಎದುರು ಮಿಲನ ಪ್ರಕಾಶ್ ಹಾಜರಾಗಿದ್ದರು. ಪ್ರಕರಣ ಸಂಬಂಧ ಇಂದೂ ಸಹ ವಿಚಾರಣೆಗೆ ಹಾಜರಾಗುವಂತೆ ಮಿಲನ ಪ್ರಕಾಶ್ ಅವರಿಗೆ ಸೂಚಿಸಲಾಗಿದೆ. ರೇಣುಕಾಸ್ವಾಮಿಯ ಹತ್ಯೆಯ ನಂತರ ಮೈಸೂರಿಗೆ ತೆರಳಿದ್ದ ನಟ ದರ್ಶನ್, ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಚಿತ್ರಕ್ಕಾಗಿ ದರ್ಶನ್ ಬಹುಕೋಟಿ ರೂಪಾಯಿ ಸಂಭಾವನೆ ಸಹ ಪಡೆದಿದ್ದಾರೆ ಎನ್ನಲಾಗಿದೆ. ಹಾಗಾಗಿ, ಡೆವಿಲ್ ನಿರ್ದೇಶಕರಿಗೆ ನೋಟಿಸ್ ನೀಡಿರುವ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
ಮೋಹನ್ ರಾಜ್ ವಿಚಾರಣೆ: ದರ್ಶನ್ ಅವರಿಗೆ 40 ಲಕ್ಷ ರೂ. ನೀಡಿದ್ದ ಹಿನ್ನೆಲೆ, ನಟನ ಪರಿಚಿತರೂ ಆಗಿರುವ ಬಿಬಿಎಂಪಿ ಮಾಜಿ ಉಪಮೇಯರ್ ಮೋಹನ್ ರಾಜ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದರು. ಸೂಚನೆ ಮೇರೆಗೆ, ನಿನ್ನೆ ಬಸವೇಶ್ವರ ನಗರ ಠಾಣೆಗೆ ಆಗಮಿಸಿ ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ಎದುರು ವಿಚಾರಣೆಗೊಳಗಾದರು. ನಂತರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ''ಕೊಲೆ ಕೇಸ್ನಲ್ಲಿ ನನ್ನ ಯಾವುದೇ ಪಾತ್ರವಿಲ್ಲ. ದರ್ಶನ್ ಮತ್ತು ನಾನು ಪರಿಚಿತರು. ನಟನಿಂದ ಪಡೆದುಕೊಂಡಿದ್ದ ಹಣವನ್ನು ವಾಪಸ್ ಕೊಟ್ಟಿದ್ದೆ. ಲಿಖಿತ ರೂಪದಲ್ಲಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಹೆಚ್ಚೇನು ಹೇಳುವುದಿಲ್ಲ'' ಎಂದು ತಿಳಿಸಿದರು.
ಇದನ್ನೂ ಓದಿ: ಪಡೆದುಕೊಂಡಿದ್ದ ಹಣವನ್ನು ದರ್ಶನ್ಗೆ ವಾಪಸ್ ಕೊಟ್ಟಿದ್ದೇನಷ್ಟೇ: ವಿಚಾರಣೆ ಬಳಿಕ ಮೋಹನ್ ರಾಜ್ - Mohan Raj On Darshan Case