ಬಾಲಿವುಡ್ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಅಭಿನಯದ ಯಶಸ್ವಿ ಸಿನಿಮಾ 'ದಂಗಲ್'ನಲ್ಲಿ ಬಾಲ 'ಬಬಿತಾ ಫೋಗಟ್' ಪಾತ್ರದಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್ ಅವರು ಇಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಯುವ ಪ್ರತಿಭೆ ಕೇವಲ 19ರ ಹರೆಯದವರಾಗಿದ್ದರು. ನಿಧನಕ್ಕೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಅವರು ಫರಿದಾಬಾದ್‌ನ ಸೆಕ್ಟರ್ 17ರಲ್ಲಿ ವಾಸಿಸುತ್ತಿದ್ದರು. ಅಂತ್ಯಕ್ರಿಯೆ ಸೆಕ್ಟರ್ 15ರ ಅಜ್ರೋಂಡಾ ಸ್ಮಶಾನದಲ್ಲಿ ನಡೆಯಲಿದೆ.
ಸುಹಾನಿ ಭಟ್ನಾಗರ್ ನಿಧನದ ಸುದ್ದಿ ಹೊರಬಿದ್ದ ಬಳಿಕ, ಚಲನಚಿತ್ರ ಪ್ರೊಡಕ್ಷನ್ ಹೌಸ್ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದೆ. "ನಮ್ಮ ಸುಹಾನಿ ನಿಧನದ ಸುದ್ದಿ ಕೇಳಲು ನಮಗೆ ಬಹಳ ದುಃಖವಾಗಿದೆ. ಅವರ ತಾಯಿ ಪೂಜಾ ಜಿ ಮತ್ತು ಇಡೀ ಕುಟುಂಬಕ್ಕೆ ನಮ್ಮ ಸಂತಾಪಗಳು. ಪ್ರತಿಭಾವಂತ ಹುಡುಗಿ, ತಂಡದ ಉತ್ತಮ ಆಟಗಾರ್ತಿ, ಸುಹಾನಿ ಇಲ್ಲದೇ 'ದಂಗಲ್' ಅಪೂರ್ಣ. ಸುಹಾನಿ ನೀವು ಯಾವಾಗಲೂ ನಮ್ಮ ಹೃದಯದಲ್ಲಿರುತ್ತೀರಿ. ಮೇ ಯೂ ರೆಸ್ಟ್ ಇನ್ ಪೀಸ್" ಎಂದು ಬರೆಯಲಾಗಿದೆ.

ಸುಹಾನಿ ಭಟ್ನಾಗರ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನಲ್ಲಿ ಕೊನೆಯದಾಗಿ ನವೆಂಬರ್ನಲ್ಲಿ ಪೋಸ್ಟ್ ಶೇರ್ ಮಾಡಿದ್ದರು. ಬಿಸಿಲಿನಲ್ಲಿ ನಿಂತು ಕ್ಲಿಕ್ಕಿಸಿಕೊಂಡಿರುವ ಸುಂದರ ಸೆಲ್ಫಿ ಶೇರ್ ಮಾಡಿದ್ದ ನಟಿ, "ನವೆಂಬರ್??" ಎಂದು ಕ್ಯಾಪ್ಷನ್ ಕೊಟ್ಟಿದ್ದರು. ಸಿನಿಮಾ ನಿರ್ದೇಶಕ ನಿತೇಶ್ ತಿವಾರಿ ಮತ್ತು ನಟರಾದ ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಅವರೊಂದಿಗಿನ ಫೋಟೋಗಳು ಸೇರಿದಂತೆ ದಂಗಲ್ ಪ್ರಚಾರದುದ್ದಕ್ಕೂ ಸುಹಾನಿ ಆಗಾಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಅಮೀರ್ ಖಾನ್ ಮತ್ತು ಶಂಕರ್ ಮಹಾದೇವನ್ ಜೊತೆಗೆ ಚಿತ್ರದ ಪಾತ್ರವರ್ಗ ಮತ್ತು ನಿರ್ದೇಶಕರೊಂದಿಗೆ ವಿಮಾನದಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನೂ ಅವರು ಶೇರ್ ಮಾಡಿದ್ದರು.
ಇದನ್ನೂ ಓದಿ: ಮುಂದುವರಿದ 'ದೆಹಲಿ ಚಲೋ': ಪ್ರತಿಭಟನೆಯ ಚಿತ್ರಣ ಕಂಡಿದ್ದು ಹೀಗೆ
ದಂಗಲ್ ಸಿನಿಮಾ 2016ರಲ್ಲಿ ತೆರೆಗಪ್ಪಳಿಸಿ ಯಶಸ್ಸು ಕಂಡಿತ್ತು. ದಂಗಲ್‌ನಲ್ಲಿನ ತಮ್ಮ ಪಾತ್ರದ ನಂತರ, ಶಿಕ್ಷಣದೆಡೆಗೆ ಗಮನ ಕೊಡಲು ಸುಹಾನಿ ನಟನೆಯಿಂದ ದೂರ ಉಳಿದಿದ್ದರು. ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶಿಸಿದ್ದರು. 'ಅಮೀರ್ ಖಾನ್ ಪ್ರೊಡಕ್ಷನ್ಸ್' ಅಡಿ ಅಮೀರ್ ಖಾನ್ ಮತ್ತು ಕಿರಣ್ ರಾವ್ ಚಿತ್ರವನ್ನು ನಿರ್ಮಿಸಿದ್ದರು. ಮಹಾವೀರ್ ಸಿಂಗ್ ಫೋಗಟ್ ಎಂಬ ಕುಸ್ತಿಪಟುವಾಗಿ ಅಮೀರ್ ಕಾಣಿಸಿಕೊಂಡಿದ್ದರು. ಅವರು ತಮ್ಮ ಪುತ್ರಿಯರಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರಿಗೆ ಕುಸ್ತಿಯಲ್ಲಿ ಸಾಧನೆಗೈಯಲು ತರಬೇತಿ ನೀಡಿದರು. ಫಾತಿಮಾ ಸನಾ ಶೇಖ್ ಮತ್ತು ಸಾನ್ಯಾ ಮಲ್ಹೋತ್ರಾ ಅವರು ಫೋಗಟ್ ಸಹೋದರಿಯರ ಹರೆಯದ ಪಾತ್ರವನ್ನು ನಿರ್ವಹಿಸಿದರೆ, ಝೈರಾ ವಾಸಿಮ್ ಮತ್ತು ಸುಹಾನಿ ಭಟ್ನಾಗರ್ ಬಾಲ್ಯಾವಸ್ಥೆಯ ಪಾತ್ರಗಳನ್ನು ನಿರ್ವಹಿಸಿದ್ದರು.
ಇದನ್ನೂ ಓದಿ: ಕುತೂಹಲ ಕೆರಳಿಸುತ್ತದೆ ಭಿಂಬೆಟ್ಕಾ ಶಿಲಾ ವರ್ಣಚಿತ್ರಗಳು; ಮಾನವ ಇತಿಹಾಸದಲ್ಲಡಗಿವೆ ಹಲವು ರಹಸ್ಯಗಳು