ಡಾಲಿ ಧನಂಜಯ್, ಸ್ಯಾಂಡಲ್ವುಡ್ನ ಬಹುಬೇಡಿಕೆ ನಟ. ನಿರ್ಮಾಪಕ ಕೂಡಾ ಹೌದು. ತಮ್ಮ 'ಡಾಲಿ ಪಿಕ್ಚರ್ಸ್' ಮೂಲಕ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಾರೆ. ಕಂಟೆಂಟ್ ಅಧಾರಿತ ಸಿನಿಮಾಗಳಿಗೆ ಸಂಪೂರ್ಣ ಬೆಂಬಲ ಕೊಡುತ್ತಾರೆ. ಇವರ ಅಭಿನಯ ಅಮೋಘ. ಹೀಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಟಾರ್ಡಮ್ ಹೊಂದಿರುವ ನಟ ನಿರ್ಮಾಣ ಮಾಡುತ್ತಿರುವ ಮುಂದಿನ ಬಹುನಿರೀಕ್ಷಿತ ಚಿತ್ರ 'ವಿದ್ಯಾಪತಿ'.
ಹೌದು, ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಒಡೆತನದ ಚಲನಚಿತ್ರ ನಿರ್ಮಾಣ ಸಂಸ್ಥೆ 'ಡಾಲಿ ಪಿಕ್ಚರ್ಸ್' ನಿರ್ಮಾಣ ಮಾಡುತ್ತಿರುವ ನಾಲ್ಕನೇ ಸಿನಿಮಾ ''ವಿದ್ಯಾಪತಿ''. ಶೀರ್ಷಿಕೆಯಿಂದಲೇ ಸಿನಿಪ್ರಿಯರ ಕುತೂಹಲ ದುಪ್ಪಟ್ಟು ಮಾಡಿರುವ ಈ ಚಿತ್ರದ ಶೂಟಿಂಗ್ ಮುಕ್ತಾಯಗೊಂಡಿದೆ. ಇತ್ತೀಚೆಗಷ್ಟೇ 'ವಿದ್ಯಾಪತಿ'ಗೆ ಕುಂಬಳಕಾಯಿ ಪ್ರಾಪ್ತಿಯಾಗಿದೆ. ''ಟಗರು ಪಲ್ಯ'' ಮೂಲಕ ಮಸ್ತ್ ಮನರಂಜನೆ ನೀಡಿದ್ದ ನಾಗಭೂಷಣ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, 'ಉಪಾಧ್ಯಕ್ಷ'ನ ಬೆಡಗಿ ಮಲೈಕಾ ವಸೂಪಾಲ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಕರಾಟೆ ಕಿಂಗ್ ಗೆಟಪ್ನಲ್ಲಿ ನಾಗಭೂಷಣ್ ಕಾಣಿಸಿಕೊಳ್ಳುತ್ತಿದ್ದು, ಅವರಿಗೆ ಮಾಸ್ಟರ್ ಆಗಿ ಹಿರಿಯ ನಟ ರಂಗಾಯಣ ರಘು ಅಭಿನಯಿಸಿದ್ದಾರೆ.
ಈ ಹಿಂದೆ ಇಕ್ಕಟ್ ಸಿನಿಮಾ ಮೂಲಕ ಭರವಸೆ ಹುಟ್ಟಿಸಿದ್ದ ಇಶಾಂ ಮತ್ತು ಹಸೀಂ ಖಾನ್ ''ವಿದ್ಯಾಪತಿ'' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ, ಸಿನಿಮಾವನ್ನು ಇವರೇ ಬರೆದು, ಸಂಕಲನದ ಜವಾಬ್ದಾರಿಯನ್ನೂ ತಾವೇ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಲವಿತ್ ಅವರ ಛಾಯಾಗ್ರಹಣ ಇದೆ. ಡಾಸ್ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ವಿದ್ಯಾಪತಿ ಸಿನಿಮಾಗಿದೆ.
ಇದನ್ನೂ ಓದಿ: ಪ್ರಭು ಮುಂಡ್ಕುರ್ ಅಭಿನಯದ 'ಮರ್ಫಿ' ಸಿನಿಮಾ ಸಾಂಗ್ ರಿಲೀಸ್ - Mogachi song from Murphy
ಕೊನೆಯದಾಗಿ ಟಗರು ಪಲ್ಯ ಸಿನಿಮಾ ನಿರ್ಮಾಣ ಮಾಡಿದ್ದ ಡಾಲಿ ಧನಂಜಯ್ ಇದೀಗ 'ವಿದ್ಯಾಪತಿ' ಪ್ರೊಡ್ಯೂಸ್ ಮಾಡುತ್ತಿದ್ದಾರೆ. ಚಿತ್ರದಲ್ಲಿ ಆ್ಯಕ್ಷನ್ ಜೊತೆಗೆ ಹಾಸ್ಯವೂ ಇರಲಿದೆ. ಸದ್ಯ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಪ್ರಚಾರ ಕಾರ್ಯವನ್ನು ಆರಂಭಿಸಲಿದೆ.
ಇದನ್ನೂ ಓದಿ: ಲೈಂಗಿಕ ಕಿರುಕುಳ ಆರೋಪ: ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ಗೆ 14 ದಿನಗಳ ನ್ಯಾಯಾಂಗ ಬಂಧನ - Jani Master Case
ಡಾಲಿ ಧನಂಜಯ್ ನಟನೆಯ ಮುಂದಿನ ಸಿನಿಮಾ ವಿಚಾರ ಗಮನಿಸೋದಾದ್ರೆ, ಇತ್ತೀಚೆಗಷ್ಟೇ ''ಜೀಬ್ರಾ'' ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ತೆಲುಗಿನ ಪ್ರತಿಭಾನ್ವಿತ ನಟ ಸತ್ಯದೇವ್ ಜೊತೆ ಸ್ಕ್ರೀನ್ ಶೇರ್ ಮಾಡಿರುವ ಬಹುನಿರೀಕ್ಷಿತ ಚಿತ್ರ ಮುಂದಿನ ತಿಂಗಳು ಅಕ್ಟೋಬರ್ 31ಕ್ಕೆ ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮಂದಿರ ಪ್ರವೇಶಿಸಲಿದೆ. ಕಳೆದ ತಿಂಗಳು ಆಗಸ್ಟ್ 23ಕ್ಕೆ ನಟ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅಂದು 'ಜಿಂಗೋ' ಸಿನಿಮಾ ಅನೌನ್ಸ್ ಆಗಿತ್ತು. 'ಉತ್ತರಕಾಂಡ' ಧನಂಜಯ್ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಚಿತ್ರ. 'ಅಣ್ಣ From Mexico' ಸಿನಿಮಾದಲ್ಲೂ ನಟರಾಕ್ಷಸ ಕಾಣಿಸಿಕೊಳ್ಳಲಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ತೆಲುಗು ನಟ ಅಲ್ಲು ಅರ್ಜುನ್ ಜೊತೆ 'ಪುಷ್ಪ 2'ನಲ್ಲಿಯೂ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಹೀಗೆ ಸರಣಿ ಸಿನಿಮಾಗಳು ನಟನ ಕೈಯಲ್ಲಿದ್ದು, ಪ್ರೇಕ್ಷಕರು ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.