ಬೆಂಗಳೂರು : ಹೆಣ್ಣು ಸ್ಪೂರ್ತಿಯಾಗಿದ್ದಾಳೆ. ಅವಳು ಇಲ್ಲದೇ ಹೋದರೆ ಜೀವನ ವ್ಯರ್ಥವಾದರಂತೆ. ಹೆಣ್ಣು ಇಲ್ಲವೆಂದರೆ ಸಮಾಜದಲ್ಲಿ ಏನೂ ಇಲ್ಲ. ಪುರುಷರಿಗಿಂತ ಮಹಿಳೆಯರೇ ಹೆಚ್ಚು ಶಕ್ತಿಶಾಲಿಗಳು. ನನ್ನ ತಾಯಿಯ ಜೊತೆಗಿನ ಆತ್ಮೀಯ ಒಡನಾಟ, ನನಗೆ ಮಹಿಳೆಯರ ಬಗ್ಗೆ ಹೆಚ್ಚು ಗೌರವ ಮೂಡುವಂತೆ ಮಾಡಿತು ಎಂದು ಕ್ರೇಜಿಸ್ಟಾರ್ ವಿ. ರವಿಚಂದ್ರನ್ ಹೇಳಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯ ಡಾ. ರಾಜ್ಕುಮಾರ್ ಗಾಜಿನಮನೆ ಆವರಣದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಅಂತಾರಾಷ್ಟ್ರೀಯ ವಿಶ್ವ ಮಹಿಳಾ ದಿನಾಚರಣೆ ಮತ್ತು ವಿವಿಧ ಕ್ಷೇತ್ರಗಳಲ್ಲಿನ ಸಾಧಕಿಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರಧಾನ ಸಮಾರಂಭ ಗುರುವಾರ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವು ಎಷ್ಟೇ ದೊಡ್ಡವರಾದರೂ ತಾಯಿಗೆ ನಾವು ಚಿಕ್ಕ ಮಕ್ಕಳಾಗಿ ಇರುತ್ತೇವೆ. ಅಭಿಮಾನಿಗಳ, ಜನರ ಕಣ್ಣಿನಲ್ಲಿರುವ ಪ್ರೀತಿ ನೋಡಿದರೆ ನನ್ನ ತಂದೆ, ತಾಯಿ ನೆನಪಾಗುತ್ತಾರೆ. ನಾನು ಮನೆಯಿಂದ ಹೊರ ಹೋಗಬೇಕಾದರೆ ಹೆಂಡತಿ ಅಥವಾ ಮಗಳ ಮುಖ ನೋಡಿಕೊಂಡು ಮುಂದಿನ ಕಾರ್ಯರಂಭ ಮಾಡುತ್ತೇನೆ. ಮಹಿಳೆಯರು ಕಷ್ಟ, ಅಳು, ದುಃಖ ಹಂಚಿಕೊಳ್ಳುವುದಿಲ್ಲ. ನಗುವ ಮೂಲಕ ಎಲ್ಲರ ಮನಸ್ಸನ್ನ ಗೆಲ್ಲುತ್ತಾರೆ ಎಂದು ಹೇಳಿದರು.
ಡಾ. ರಾಜ್ಕುಮಾರ್, ಅಂಬರೀಷ್, ಶಿವಣ್ಣ, ಪುನೀತ್ ರಾಜ್ಕುಮಾರ್ ಒಡನಾಟದಿಂದ ಚಲನಚಿತ್ರರಂಗದಲ್ಲಿ ಬೆಳೆಯಲು ಸಾಧ್ಯವಾಯಿತು. ಪ್ರೇಮಲೋಕ ಭಾಗ -2 ಶೀಘ್ರದಲ್ಲಿ ಆರಂಭವಾಗಲಿದೆ. ಜೀವನದಲ್ಲಿ ಜನರ ಪ್ರೀತಿ ಇದ್ದರೆ ಸಾಕು ಜೀವನ ಗೆದ್ದಂತೆ ಎಂದರು.
ಹೆಸರಾಂತ ಚಲನಚಿತ್ರ ನಟಿ ಮಾಲಾಶ್ರೀ ಮಾತನಾಡಿ, ಮಹಿಳೆಯರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡುತ್ತಾರೆ. ಹೆಣ್ಣು ಮಕ್ಕಳು ಜೀವನದ ಸ್ಪೂರ್ತಿಯಾಗಿದ್ದಾರೆ. ಮಹಿಳೆಯರು ಸಮಾಜದ ಕಣ್ಣು ಮತ್ತು ಮಹಿಳೆಯರಿಗೆ ಗೌರವ ಕೊಟ್ಟರೆ ದೇವರೇ ಒಲಿಯುತ್ತಾನೆ ಎಂದು ಪುರಾಣದಲ್ಲಿ ಹೇಳುತ್ತಾರೆ ಎಂದರು.
ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, ಬಿಬಿಎಂಪಿಯಲ್ಲಿ ಶೇಕಡಾ 50ರಷ್ಟು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಪೌರ ಕಾರ್ಮಿಕರಲ್ಲಿ ಶೇಕಡ 80ರಷ್ಟು ಮಹಿಳೆಯರು ಕಾರ್ಯನಿರ್ವಹಿಸುತ್ತ ಇದ್ದಾರೆ. ಬಿಬಿಎಂಪಿ ಇರುವುದು ನಾಗರಿಕರ ಸೇವೆ ಮಾಡಲು. ಒಳ್ಳೆಯ ಸೇವೆ ನೀಡಲು ಮಹಿಳಾ ಸಿಬ್ಬಂದಿ ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ನಿರ್ವಹಣೆ, ಅತ್ತೆ, ಮಾವ, ಪತಿಯ ನೋಡಿಕೊಂಡು ಕೆಲಸದಲ್ಲಿ ಉತ್ತಮ ಸೇವೆ ಮಾಡುವ ಮಹಿಳೆಯ ದಿಟ್ಟತನ ಮೆಚ್ಚಬೇಕು. ಆದ್ದರಿಂದ ಮಹಿಳೆ ಮಾತೃಸ್ವರೂಪಿಯಾಗಿ ನಿಲ್ಲುತ್ತಾಳೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್ ಷಡಕ್ಷರಿ ಮತ್ತು ಐ.ಎ.ಎಸ್ ಅಧಿಕಾರಿಗಳಾದ ಮೌನೀಶ್ ಮೌದ್ದೀಲ್, ಸ್ನೇಹಾಲ್, ಸೂರಳ್ಕರ್ ವಿಕಾಸ್ ಕಿಶೋರ್, ಡಾ. ಕೆ ಹರೀಶ್ ಮತ್ತು ಕೆ.ಎ.ಎಸ್ ಅಧಿಕಾರಿ ಡಾ. ಮಂಜುನಾಥಸ್ವಾಮಿ, ಪಾಲಿಕೆ ಜಂಟಿ ಆಯುಕ್ತೆ ಲಕ್ಷ್ಮಿದೇವಿ, ಪಾಲಿಕೆ ನೌಕರರ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷ ಎ. ಅಮೃತ್ ರಾಜ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ : ಅಂತಿಮ ಹಂತದಲ್ಲಿ 'ಪರವಶ': ಹೊಸ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್