2023ರ ಕೊನೆಯಲ್ಲಿ ತೆರೆಕಂಡ 'ಕಾಟೇರ' ಚಿತ್ರದ ಯಶಸ್ಸಿನ ಬಳಿಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗಲಿಲ್ಲ. ಚಂದನವನದಲ್ಲಿ ಕನ್ನಡ ಸಿನಿಮಾಗಳ ಸಂಖ್ಯೆ ಕಡಿಮೆಯಾಗಿ ಸಿಂಗಲ್ ಸ್ಕ್ರೀನ್ ಥಿಯೇಟರ್ಸ್ನಲ್ಲಿ ಕೆಲಸ ಮಾಡುವ ಕಾರ್ಮಿಕರಿಂದ ಹಿಡಿದು ಮಾಲೀಕರಿಗೂ ತೊಂದರೆ ಆಗುತ್ತಿದೆ. ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರೋ ಮುಖ್ಯ ಚಿತ್ರಮಂದಿರಗಳಾದ ಸಂತೋಷ್, ನರ್ತಕಿ, ಸ್ವಪ್ನ ಇದಕ್ಕೆ ಸೂಕ್ತ ಉದಾಹರಣೆ.
ಹೌದು, 2024ರ ಅರ್ಧ ವರ್ಷದಲ್ಲಿ ಸ್ಟಾರ್ ಸಿನಿಮಾಗಳಿಲ್ಲದೇ ಸಂತೋಷ್ ಚಿತ್ರಮಂದಿರವನ್ನು 3 ತಿಂಗಳು ಮುಚ್ಚಲಾಗಿತ್ತು. ಮತ್ತೊಂದೆಡೆ ನರ್ತಕಿ ಹಾಗೂ ಸ್ವಪ್ನ ಚಿತ್ರಮಂದಿರಗಳನ್ನು ಮುಚ್ಚಬಾರದೆಂಬ ಉದ್ದೇಶದಿಂದ ಬಹು ಭಾಷೆಯ ಸಿನಿಮಾಗನ್ನು ಹಾಕಲಾಗುತ್ತಿದೆ. ಅದಕ್ಕೆ ಸಾಕ್ಷಿಯೆಂಬಂತೆ ನರ್ತಕಿ ಚಿತ್ರಮಂದಿರದಲ್ಲಿ 23 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ 'ಮುರಾರಿ' ಸಿನಿಮಾವನ್ನು ಪ್ರದರ್ಶನ ಮಾಡಲಾಗುತ್ತಿದೆ. ಕನ್ನಡ ಚಿತ್ರಮಂದಿರಗಳಲ್ಲಿ ಬಹುಭಾಷೆಯ ಸಿನಿಮಾಗಳು ಪ್ರದರ್ಶನ ಕಾಣುತ್ತಿರುವ ಬಗ್ಗೆ ನರ್ತಕಿ ಚಿತ್ರಮಂದಿರದಲ್ಲಿ 40 ವರ್ಷಗಳಿಂದ ಸೂಪರ್ ವೈಸರ್ ಆಗಿರುವ ಮನೋಹರ್ ಮಾತನಾಡಿದ್ದಾರೆ.
ಕನ್ನಡದ ಸ್ಟಾರ್ ನಟರು ವರ್ಷಕ್ಕೆ ಎರಡು ಅಥವಾ ಮೂರು ಸಿನಿಮಾಗಳನ್ನು ಮಾಡಿದಾಗ ಚಿತ್ರಮಂದಿರಗಳ ಮಾಲೀಕರು ಹಾಗೂ ನಮ್ಮಂಥ ಕಾರ್ಮಿಕರಿಗೆ ಸಂಬಳ ಸಿಗುತ್ತದೆ. ಇಲ್ಲವಾದಲ್ಲಿ ಜೀವನ ನಡೆಸೋದು ಕಷ್ಟ. ಕಳೆದ ಆರು ತಿಂಗಳಿನಿಂದ ಒಬ್ಬ ಸ್ಟಾರ್ ನಟರ ಸಿನಿಮಾ ಕೂಡಾ ರಿಲೀಸ್ ಆಗದೇ ನಮ್ಮ ಚಿತ್ರಮಂದಿರದ ಮಾಲೀಕರು ಸರಿಯಾಗಿ ಸಂಬಳ ಕೊಟ್ಟಿಲ್ಲ. ನಾನು ನಮ್ಮ ಯಜಮಾನರ ಮೇಲೆ ಆರೋಪ ಮಾಡುತ್ತಿಲ್ಲ. ಥಿಯೇಟರ್ ನಡೆಸೋದು ಅವರಿಗೆ ಕಷ್ಟ ಆಗಿದೆ. ಕರೆಂಟ್ ಬಿಲ್, ಟ್ಯಾಕ್ಸ್ ಜೊತೆಗೆ ಕೆಲಸ ಮಾಡುವವರಿಗೆ ಸಂಬಳ ಕೊಡಬೇಕಂದ್ರೆ ಸಿನಿಮಾಗಳು ಬರಬೇಕು. ಸ್ಟಾರ್ ನಟರ ಸಿನಿಮಾಗಳು ರಿಲೀಸ್ ಅದಾಗ ಚಿತ್ರಮಂದಿರಗಳು ತುಂಬುತ್ತವೆ. ಹಾಗೇ ಪಾಪ್ ಕಾರ್ನ್, ಐಸ್ ಕ್ರೀಂ ಅಂತಾ ಸ್ನ್ಯಾಕ್ಸ್ ಮಾರುವವರಿಗೂ ಒಳ್ಳೆ ವ್ಯಾಪಾರ ಆಗುತ್ತದೆ ಅಂದರು.
ಕಳೆದ ಆರು ತಿಂಗಳಿನಿಂದ ಕನ್ನಡ ಸಿನಿಮಾಗಳಿಲ್ಲದೇ, ಬೇರೆ ಭಾಷೆಯ ಸಿನಿಮಾಗಳನ್ನು ಹಾಕುತ್ತಿದ್ದೇವೆ. ಹೀಗೆ ಆದ್ರೆ ನಮ್ಮಂಥ ಕಾರ್ಮಿಕರ ಜೀವನ ಬಹಳ ಕಷ್ಟ ಆಗುತ್ತದೆ. ನಮಗೆ ಸಿನಿಮಾ ಮುಖ್ಯ, ಈ ಕೆಲಸ ಬಿಟ್ಟರೆ ನಮಗೆ ಬೇರೆ ಗೊತ್ತಿಲ್ಲ. ಸ್ಟಾರ್ ನಟರು ವರ್ಷಕ್ಕೆ ಎರಡು ಅಥವಾ ಮೂರು ಸಿನಿಮಾ ಮಾಡಿದ್ರೆ ಮಾತ್ರ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಹಾಗೂ ನಮ್ಮಂಥ ಕಾರ್ಮಿಕರ ಜೀವನಕ್ಕೊಂದು ಆಧಾರ. ಇಲ್ಲವಾದ್ರೆ ಜೀವನ ಸಾಗಿಸೋದು ಕಷ್ಟ ಎಂದು ತಿಳಿಸಿದರು.
ಇದನ್ನೂ ಓದಿ: ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ತರುಣ್ ಸುಧೀರ್ - ಸೋನಾಲ್: ಫೋಟೋಗಳನ್ನು ನೋಡಿ - Tharun Sonal Haldi Ceremony
ನರ್ತಕಿ ಚಿತ್ರಮಂದಿರದ ಪಕ್ಕದಲ್ಲಿರೋ ಸಂತೋಷ್ ಥಿಯೇಟರ್ ಕಥೆ ಕೂಡಾ ಹಾಗೇ ಇದೆ. ಕಳೆದ 25 ವರ್ಷಗಳಿಂದ ಚಿತ್ರಮಂದಿರದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ರಾಜು ಹೇಳುವ ಹಾಗೇ, ಕಳೆದ ಮೂರು ತಿಂಗಳಿನಿಂದ ಸಂತೋಷ್ ಥಿಯೇಟರ್ ಮುಚ್ಚಿದ್ದೆವು. ಕಾರಣ ಸ್ಟಾರ್ ನಟರ ಸಿನಿಮಾಗಳ ಕೊರತೆ. ಭೀಮ ಬಿಡುಗಡೆ ಹಿನ್ನೆಲೆ ಚಿತ್ರಮಂದಿರ ತೆರೆದಿದ್ದೇವೆ. ಇಲ್ಲಾಂದ್ರೆ ಕಷ್ಟ ಆಗುತ್ತಿತ್ತು. ಲೈಟ್ ಬಿಲ್, ಕೆಲಸ ಮಾಡೋ ಕಾರ್ಮಿಕರಿಗೆ ಸಂಬಳ ಕೊಡಬೇಕಂದ್ರೆ ಸಿನಿಮಾಗಳು ಬರಬೇಕು. ನಮ್ಮ ಸ್ಟಾರ್ ನಟರು ವರ್ಷಕ್ಕೆ ಮೂರು ಅಥವಾ ನಾಲ್ಕು ಸಿನಿಮಾ ಮಾಡಿದಾಗ ನಮ್ಮಂಥ ಕಾರ್ಮಿಕರ ಹೊಟ್ಟೆ ತುಂಬುತ್ತದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಚಿತ್ರರಂಗದ ಪರಿಸ್ಥಿತಿ ಕಷ್ಟ ಆಗುತ್ತದೆ. ಹಾಗಾಗಿ ದೊಡ್ಡ ನಟರುಗಳು ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಿ ಎಂದು ವಿನಂತಿಸಿದರು.
ಇನ್ನೂ ಒಬ್ಬ ಸ್ಟಾರ್ ನಟನ ಸಿನಿಮಾ ಬಿಡುಗಡೆ ಆದಾಗ, ಚಿತ್ರಮಂದಿರದ ಪಕ್ಕದಲ್ಲಿರೋ ಪಾಪ್ ಕಾರ್ನ್, ಐಸ್ ಕ್ರೀಂ ಶಾಪ್, ಬೈಕ್ ಕಾರು ಪಾರ್ಕಿಂಗ್ನವರ ಹೊಟ್ಟೆ ತುಂಬುತ್ತದೆ. ಈ ಮಾತಿಗೆ ಪೂರಕವಾಗಿ ಸಂತೋಷ್ ಥಿಯೇಟರ್ನಲ್ಲಿ ಪಾರ್ಕಿಂಗ್ ಕೆಲಸ ಮಾಡುವ ಆನಂದ್ ಮಾತನಾಡಿ, ಸ್ಟಾರ್ ಸಿನಿಮಾಗಳು ಬಿಡುಗಡೆ ಆದಾಗ ನಮಗೆ ಕೆಲಸ ಸಿಗುತ್ತದೆ. ಕೆಲಸ ಇಲ್ಲ ಅಂದ್ರೆ ಯಜಮಾನ್ರು ಹೇಗೆ ಸಂಬಂಳ ಕೊಡ್ತಾರೆ?. ದಯವಿಟ್ಟು ನಮ್ಮ ಕನ್ನಡ ಸ್ಟಾರ್ಗಳು ವರ್ಷಕ್ಕೆ ಮೂರು ಸಿನಿಮಾಗಳನ್ನು ಮಾಡಬೇಕು. ಇಲ್ಲವಾದರೆ ನಮ್ಮಂಥ ಕಾರ್ಮಿಕರು ಜೀವನ ನಡೆಸೋದು ತುಂಬಾನೇ ಕಷ್ಟ ಆಗುತ್ತದೆ ಎಂದು ಅಳಲು ತೋಡಿಕೊಂಡರು.