ಕನ್ನಡ ಚಿತ್ರರಂಗದಲ್ಲಿ ನಾನಾ ರೀತಿಯ ಪ್ರಯೋಗಗಳು ನಡೆಯುತ್ತಿವೆ. ಅದ್ಧೂರಿ ಮೇಕಿಂಗ್ ಹಾಗೂ ಕಮರ್ಷಿಯಲ್ ಚಿತ್ರಗಳ ನಡುವೆ ಮಕ್ಕಳ ಸಿನಿಮಾ ಸಂಖ್ಯೆ ಕಡಿಮೆಯಾಗಿವೆ. ಆದರೀಗ ಚಂದನವನದಲ್ಲಿ ಮಕ್ಕಳ ಚಿತ್ರವೊಂದು ಸೈಲೆಂಟ್ ಆಗಿ ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗುತ್ತಿದೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ನಿರ್ದೇಶಕಿಯ ಆಗಮನ ಆಗಲಿದೆ. ಅವರೇ ಗೌರಿ ಶ್ರೀನಿವಾಸ್. ಇವರ ನಿರ್ದೇಶನದಲ್ಲಿ ರೂಪುಗೊಂಡಿರುವ ಸಿನಿಮಾದ ಶೀರ್ಷಿಕೆ 'ಜರ್ನಿ ಆಫ್ ಬೆಳ್ಳಿ'.
ಈವರೆಗೂ ನಾನಾ ಕಥಾಹಂದರಗಳ ಒಂದಿಷ್ಟು ಮಕ್ಕಳ ಸಿನಿಮಾಗಳು ಕನ್ನಡದಲ್ಲಿ ತೆರೆಕಂಡಿವೆ. ಅದರಲ್ಲಿ ಚಿನ್ನಾರಿಮುತ್ತದಂಥಾ ಚಿತ್ರ ಸಾರ್ವಕಾಲಿಕ ದಾಖಲೆ ಬರೆದಿದೆ. ಇದೀಗ ಚಿತ್ರೀಕರಣವನ್ನೆಲ್ಲ ಸಂಪೂರ್ಣವಾಗಿ ಮುಗಿಸಿಕೊಂಡಿರುವ ಜರ್ನಿ ಆಫ್ ಬೆಳ್ಳಿ ಚಿತ್ರ ಕೂಡಾ ಅಂಥಾದ್ದೊಂದು ಛಾಪು ಮೂಡಿಸುವ ಲಕ್ಷಣಗಳು ದಟ್ಟವಾಗಿವೆ. ಇದು ಓರ್ವ ಪುಟ್ಟ ಹುಡುಗಿಯ ಸುತ್ತ ಕದಲುವ ಕಥಾನಕವನ್ನೊಳಗೊಂಡ ಚಿತ್ರ. ಪುಟ್ಟ ಹುಡುಗಿ, ಆರ್ಮಿ ಫ್ಯಾಮಿಲಿಯ ಭೂಮಿಕೆಯಲ್ಲಿ ನಡೆಯುವ ಅಪರೂಪದ ಕಥೆಯೊಂದು 'ಜರ್ನಿ ಆಫ್ ಬೆಳ್ಳಿ'ಯ ಜೀವಾಳವಂತೆ.
ಸಮನ್ವಿ ಪಾಟೀಲ್ ಈ ಚಿತ್ರದ ಪ್ರಧಾನ ಪಾತ್ರ ನಿರ್ವಹಿಸಿದ್ದಾಳೆ. ಮಕ್ಕಳಲ್ಲಿ ಹೊಸ ಆಲೋಚನೆ ತುಂಬಬಲ್ಲ, ಎಳೇ ಮನಸ್ಸುಗಳ ಭಾವಲೋಕದಲ್ಲಿ ಸಮ್ಮೋಹಕವಾದ ಛಾಪುಮೂಡಿಸಬಲ್ಲ ಈ ಸಿನಿಮಾ ಎಲ್ಲ ವಯೋಮಾನದವರಿಗೂ ಹಿಡಿಸುವಂತಿದೆ ಎಂಬುದು ಚಿತ್ರತಂಡದ ಭರವಸೆ. ಇದುವರೆಗೂ ಹೆಮ್ಮೆಯ ಸೈನಿಕರ ಜೀವನಗಾಥೆಯ ನಾನಾ ಮಗ್ಗುಲುಗಳನ್ನು ಸಿನಿಮಾ ಚೌಕಟ್ಟಿಗೆ ಒಗ್ಗಿಸಲಾಗಿದೆ. ಆದರೆ, ಪುಟ್ಟ ಮಗುವೊಂದರ ಕಣ್ಣುಗಳಲ್ಲಿ ಕದಲೋ ಕಥೆ ಕನ್ನಡದ ಮಟ್ಟಿಗೆ ಇದೇ ಮೋದಲೇನೋ. ಅಂಥದ್ದೊಂದು ಹೊಸತನದ ಕಥೆಯೊಂದಿಗೆ ಗೌರಿ ಶ್ರೀನಿವಾಸ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ ತುಳು ಭಾಷೆಯಲ್ಲಿ ಕಾರ್ನಿಕೊದ ಕಲ್ಲುರ್ಟಿ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಮಹೇಂದ್ರ ಕುಮಾರ್ ಜರ್ನಿ ಆಫ್ ಬೆಳ್ಳಿ ಮೂಲಕ ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ತಲುಪಿದ ಕಂಗನಾ ರಣಾವತ್: 'ಪುಣ್ಯವಿದ್ದವರಿಗೆ ಶ್ರೀರಾಮನ ದರ್ಶನ ಸಾಧ್ಯ'ವೆಂದ ನಟಿ
ಜೀ ಕನ್ನಡ ವಾಹಿನಿಯ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ ವೃತ್ತಿ ಜೀವನ ಆರಂಭಿಸಿದ್ದ ಗೌರಿ ಶ್ರೀನಿವಾಸ್ ಆ ನಂತರ ಹಲವಾರು ದಿಕ್ಕುಗಳಲ್ಲಿ ಕಾರ್ಯನಿರ್ವಹಿಸುತ್ತಾ ತಮ್ಮದೇ ಲಿಚಿ ಫಿಲಂಸ್ ಕಂಪನಿ ಕಟ್ಟಿದವರು. ಅದಾದ ಬಳಿಕ ಒಂದಷ್ಟು ಸಾಕ್ಷ್ಯಚಿತ್ರಗಳು, ಜಾಹೀರಾತುಗಳನ್ನು ಸೃಷ್ಟಿಸುವ ಮೂಲಕ ಅನುಭವ ಜಗತ್ತನ್ನು ವಿಸ್ತರಿಸಿಕೊಂಡವರು. ಇವರೇ ನಿರ್ಮಾಣ ಮಾಡಿದ್ದ ಮಧ್ಯಪ್ರದೇಶದ ಹ್ಯಾಂಡ್ಲೂಮ್ ಉದ್ಯಮದ ಕುರಿತಾದ 'the woven motifs of chanderi' ಎಂಬ ಸಾಕ್ಷ್ಯಚಿತ್ರಕ್ಕೆ ಇತ್ತೀಚೆಗಷ್ಟೇ ಪ್ರಶಸ್ತಿ ಲಭಿಸಿದೆ. ಇಷ್ಟೆಲ್ಲ ಅನುಭವ ಪಡೆದುಕೊಂಡ ನಂತರ ಅವರು ಚೆಂದದ್ದೊಂದು ಕಥೆ ಸಿದ್ಧಪಡಿಸಿಕೊಂಡು ನಿರ್ದೇಶನ ಮಾಡಿದ್ದಾರೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳನ್ನು ಮುಕ್ತಾಯಗೊಳಿಸುತ್ತಿರುವ ಈ ಮಕ್ಕಳ ಚಿತ್ರ ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಿ ಪ್ರೇಕ್ಷಕರ ಮುಂದೆ ಬರಲಿದೆ.
ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ಸೃಷ್ಟಿಕರ್ತ ಅರೆಸ್ಟ್: ದೆಹಲಿ ಪೊಲೀಸರು