ಬೆಂಗಳೂರು : ಕಾನೂನು ಬಾಹಿರವಾಗಿ ಬಾಲಕಿಯನ್ನ ದತ್ತು ಪಡೆದ ಪ್ರಕರಣದ ಆರೋಪಿ, ಸೋನು ಗೌಡಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಸೋನು ಗೌಡಗೆ ಏಪ್ರಿಲ್ 8ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರು ಆದೇಶಿಸಿದ್ದಾರೆ.
ಕಾನೂನು ಬಾಹಿರವಾಗಿ ಬಾಲಕಿ ದತ್ತು ಪಡೆದ ಪ್ರಕರಣದಲ್ಲಿ ಸೋನು ಗೌಡ ಅವರನ್ನ ಬ್ಯಾಡರಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದರು. ಆರೋಪಿಯನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನಾಲ್ಕು ದಿನಗಳ ಕಾಲ ವಶಕ್ಕೆ ಪಡೆದಿದ್ದರು. ಬಳಿಕ ಭಾನುವಾರ ರಾಯಚೂರಿನ ಮಸ್ಕಿ ತಾಲೂಕಿಗೆ ಸ್ಥಳ ಮಹಜರಿಗೆ ಆರೋಪಿಯನ್ನು ಕರೆದೊಯ್ಯಲಾಗಿತ್ತು. ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆ ಇಂದು ಆರೋಪಿಯನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ನಟಿ ಹೇಳಿದ್ದೇನು?: ಬಿಗ್ ಬಾಸ್ ಒಟಿಟಿ ಸ್ಪರ್ಧಿಯಾಗಿದ್ದ ಸೋನು ಶ್ರೀನಿವಾಸ್ಗೌಡ ಅವರ ವಿರುದ್ಧ ಬಾಲ ನ್ಯಾಯ ಕಾಯ್ದೆ, ಹಿಂದೂ ದತ್ತು ಕಾಯ್ದೆ ಉಲ್ಲಂಘನೆಯಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಬಂಧನ ಮಾಡಿದ್ದರು. ಈ ಹಿಂದೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸೋನು ಶ್ರೀನಿವಾಸ್ ಗೌಡ, ಕಾನೂನಾತ್ಮಕ ತನಿಖೆ ನಡೆಯುತ್ತಿದೆ. ಒಂದು ಹುಡುಗಿಯನ್ನ ರಕ್ಷಣೆ ಮಾಡಬೇಕು ಎಂಬ ಕಾರಣದಿಂದ ನಾನು ಕರೆದುಕೊಂಡು ಬಂದಿದ್ದೆ ಮತ್ತು ಆ ಬಾಲಕಿ ಸುರಕ್ಷಿತವಾಗಿದ್ದಾಳೆ ಎಂದಿದ್ದರು.
ನಡೆದಿದ್ದೇನು?: ಕಳೆದ ಮಾರ್ಚ್ 2ರಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಸೋನುಗೌಡ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ರಾಯಚೂರು ಮೂಲದ ಹೆಣ್ಣು ಮಗುವೊಂದನ್ನ ಪೋಷಕರ ಸಮ್ಮುಖದಲ್ಲಿ ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು. ಆದರೆ ಹಿಂದೂ ದತ್ತು ಕಾಯ್ದೆ ಅನ್ವಯ ದತ್ತು ಪಡೆಯುವ ವ್ಯಕ್ತಿ ಮತ್ತು ದತ್ತು ಪಡೆಯಲ್ಪಡುವ ಮಗುವಿನ ನಡುವೆ ಕನಿಷ್ಠ 25 ವರ್ಷ ಅಂತರವಿರಬೇಕು. ದತ್ತು ಪಡೆಯುವ ವ್ಯಕ್ತಿ ತನ್ನ ಅರ್ಹತೆಯ ಕುರಿತು ಕೇಂದ್ರ ಹಾಗೂ ರಾಜ್ಯ ದತ್ತು ಪ್ರಾಧಿಕಾರಕ್ಕೆ ಮಾಹಿತಿ ನೀಡಿ, ಅವರ ಸಮ್ಮುಖದಲ್ಲಿ ದತ್ತು ಸ್ವೀಕರಿಸಬೇಕು.
ಅಲ್ಲದೇ, ಮಗುವಿನ ಪೋಷಕರು ಹಾಗೂ ಮಗುವಿಗೆ ವಿವಿಧ ಸೌಕರ್ಯಗಳನ್ನು ನೀಡಿರುವುದಾಗಿ ಸೋನು ಗೌಡ ಹೇಳಿಕೊಂಡಿರುವುದು, ಮೇಲ್ನೋಟಕ್ಕೆ ಇದು ಮಾರಾಟ ಪ್ರಕ್ರಿಯೆಯಂತೆ ತೋರುತ್ತಿದೆ. ಮತ್ತು ಮಗುವಿನ ಆತ್ಮಾಭಿಮಾನಕ್ಕೆ ಧಕ್ಕೆ ತರುವಂತದ್ದಾಗಿರುತ್ತದೆ. ಮೇಲ್ನೋಟಕ್ಕೆ ಮಗು 1 ಅಥವಾ 2ನೇ ತರಗತಿಯ ಶಿಕ್ಷಣಕ್ಕೆ ಅರ್ಹವಾಗಿರುವಂತೆ ತೋರುತ್ತಿದ್ದು, ಮಾರ್ಚ್ ತಿಂಗಳಿನಲ್ಲಿ ಶಾಲೆಗೆ ಕಳುಹಿಸಿರುವುದಿಲ್ಲ. ಆದ್ದರಿಂದ ಸೋನು ಗೌಡ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿತ್ತು. ಸದ್ಯ ಈ ಆರೋಪದಡಿ ಸೋನು ಗೌಡ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ಮಗುವನ್ನ ತಮ್ಮ ವಶಕ್ಕೆ ಪಡೆದುಕೊಂಡು ಸರ್ಕಾರಿ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಿದ್ದಾರೆ.
ಓದಿ: ಸೋನು ಶ್ರೀನಿವಾಸ್ ಗೌಡ ದತ್ತು ಕಾಯ್ದೆ ಉಲ್ಲಂಘನೆ ಪ್ರಕರಣ; ರಾಯಚೂರಿನಲ್ಲಿ ಸ್ಥಳ ಮಹಜರು - Sonu Shrinivas Gowda