ಡಾಲಿ ಧನಂಜಯ್ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರ 'ಉತ್ತರಕಾಂಡ'. ಚಿತ್ರದ ಮುಹೂರ್ತದಿಂದಲೂ ಟೈಟಲ್ನಿಂದಲೇ ಟಾಕ್ ಆಗುತ್ತಿರುವ ಉತ್ತರಕಾಂಡ ಚಿತ್ರದಿಂದ ಮೋಹಕ ತಾರೆ ರಮ್ಯಾ ಹೊರನಡೆದಿರುವುದು ಗೊತ್ತಿರುವ ವಿಚಾರ. ಈ ಮಧ್ಯೆ ಈ ಚಿತ್ರದ ನಾಯಕಿ ಯಾರಾಗ್ತಾರೆ ಎಂಬ ಕುತೂಹಲ ಸಿನಿ ಪ್ರೇಮಿಗಳಲ್ಲಿತ್ತು. ಈಗ ಅದಕ್ಕೆ ಉತ್ತರ ಸಿಕ್ಕಿದೆ.
![Uttarakaanda](https://etvbharatimages.akamaized.net/etvbharat/prod-images/17-04-2024/kn-bng-05-dhananjaya-uttarakaanda-cinemge-sikkalu-nayaki-7204735_16042024190208_1604f_1713274328_211.jpg)
ಚೈತ್ರಾ ಆಚಾರ್ ಅಧಿಕೃತವಾಗಿ ಉತ್ತರಕಾಂಡ ಚಿತ್ರ ತಂಡಕ್ಕೆ ಸೇರ್ಪಡೆ ಆಗಿದ್ದಾರೆ. ಲಚ್ಚಿ ಎಂಬ ಒಂದು ಮುಖ್ಯ ಪಾತ್ರಕ್ಕಾಗಿ ಚೈತ್ರಾ ಬಣ್ಣ ಹಚ್ಚಲಿದ್ದಾರೆ. ಉತ್ತರಕಾಂಡ ಚಿತ್ರದ ಭಾಗವಾಗುತ್ತಿರುವುದಕ್ಕೆ ಸಹಜವಾಗಿಯೇ ಚೈತ್ರಾ ಖುಷಿಯಾಗಿದ್ದಾರೆ. ಸಂಭ್ರಮದ ಅಲೆಯಲ್ಲಿದ್ದಾರೆ. ಇದಕ್ಕೆ ಕಾರಣ ಚಿತ್ರದ ಸ್ಟಾರ್ ಕಾಸ್ಟ್. ಡೈರೆಕ್ಟರ್ ಮತ್ತು ದೊಡ್ಡ ನಿರ್ಮಾಣ ಸಂಸ್ಥೆ ಅನ್ನುವುದು ಒಂದು ಕಾರಣವಾದರೆ, ಮೊದಲಿಂದಲೂ ಚೈತ್ರಾ ಆಚಾರ್ ತಮ್ಮನ್ನು ತಾವು ಸವಾಲಿನ ಪಾತ್ರಕ್ಕೆ ಒಡ್ಡಿಕೊಂಡಿರುವ ನಟಿಯಾಗಿದ್ದಾರೆ. ಮರ ಸುತ್ತುವ ಪಾತ್ರಕ್ಕೆ ಮಣೆ ಹಾಕಿದವರಲ್ಲ ಚೈತ್ರಾ. ಉತ್ತರಕಾಂಡದಲ್ಲಿ ಚೈತ್ರಾಗೆ ಸವಾಲಿನ ಪಾತ್ರವೇ ಸಿಕ್ಕಿದೆ. ಇದಕ್ಕೆ ಸಾಕ್ಷಿ ರಿಲೀಸ್ ಆದ ಫಸ್ಟ್ ಲುಕ್. ಹೀಗಾಗಿಯೇ, ಚೈತ್ರಾ ಆಚಾರ್ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ.
ಇದನ್ನೂ ಓದಿ: ಕೊನೆಗೂ 'ಉತ್ತರಕಾಂಡ' ಚಿತ್ರದ ಶೂಟಿಂಗ್ ಆರಂಭ - Uttarakanda Movie
ಇನ್ಶುರೆನ್ಸ್ ಏಜೆಂಟ್ ರತ್ನಾಕರನ ಬದುಕಿನ ಮೂಲಕ, ಸಂಬಂಧಗಳಿಗೆ ಹೊಸ ಅರ್ಥ ಹುಡುಕುವ ಪ್ರಯತ್ನವನ್ನು 'ರತ್ನನ್ ಪ್ರಪಂಚ' ಚಿತ್ರದ ಮೂಲಕ ಮಾಡಿದ್ದ ರೋಹಿತ್ ಪದಕಿ, ತಮ್ಮ ಕನಸಿನ 'ಉತ್ತರಕಾಂಡ'ದ ಚಿತ್ರೀಕರಣ ಆರಂಭಿಸಿದ್ದಾರೆ. ಹೆಚ್ಚು ಕಡಿಮೆ ಎರಡು ವರ್ಷಗಳಿಂದ ಬಯಲು ಸೀಮೆಯ ಸಂಸ್ಕೃತಿಯ ಸಂಶೋಧನೆ ಹಾಗೂ ಅನ್ವೇಷಣೆ ಮಾಡಿ ತಮ್ಮ ತಂಡದೊಂದಿಗೆ ಅಖಾಡಕ್ಕೆ ಧುಮುಕಿದ್ದಾರೆ.
ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಕಾರ್ತಿಕ್ ಗೌಡ ಮತ್ತು ಯೋಗಿ ಜಿ.ರಾಜ್ ಉತ್ತರಕಾಂಡ ಚಿತ್ರವು ಕೆ.ಆರ್.ಜಿ.ಯ ಹೆಮ್ಮೆಯ ಕಾಣಿಕೆಯಾಗಲಿದೆ ಎಂದು ಹೇಳಿರುವ ಹಿನ್ನೆಲೆಯಲ್ಲಿ ರೋಹಿತ್ ಪದಕಿ ಅವರ ಮೇಲಿನ ಜವಾಬ್ಧಾರಿ ಇನ್ನೂ ಹೆಚ್ಚಾಗಿದೆ. ಡಾಲಿ ಧನಂಜಯ್ ಜೊತೆ ಕರುನಾಡ ಚಕ್ರವರ್ತಿ ಕೂಡ ಚಿತ್ರದಲ್ಲಿದ್ದಾರೆ ಅನ್ನುವ ವಿಚಾರ ನಿಮಗೆ ಈಗಾಗಲೇ ಗೊತ್ತಿದೆ.
ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಅವರ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕ ಅಮಿತ್ ತ್ರಿವೇದಿ ಉತ್ತರಕಾಂಡಕ್ಕೆ ಸಂಗೀತ ಸಂಯೋಜನೆ ಮಾಡುತ್ತಿರುವುದು ಚಿತ್ರದ ವಿಶೇಷತೆಯಲ್ಲೊಂದು. ಅದ್ವೈತ ಗುರುಮೂರ್ತಿ ಕ್ಯಾಮೆರಾದಲ್ಲಿ ಚಿತ್ರವು ಸೆರೆಯಾಗಲಿದೆ. ಸದ್ಯಕ್ಕೆ ಶೂಟಿಂಗ್ ಆರಂಭವಾಗಿದ್ದು, ಚೈತ್ರಾ ಆಚಾರ್ ಚಿತ್ರೀಕರಣದಲ್ಲಿ ಭಾಗಿಯಾಗಿರುವುದು ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ.
ಇದನ್ನೂ ಓದಿ: ಆಧ್ಮಾತ್ಮಿಕ ನಗರಿ ಕಾಶಿಯಲ್ಲಿ ರಣ್‌ವೀರ್, ಕೃತಿ ಸನೋನ್, ಮನೀಶ್ ಮಲ್ಹೋತ್ರಾ ಸಂಚಾರ - Kriti Sanoan