ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಕನ್ನಡ ಚಿತ್ರರಂಗದ ಕೀರ್ತಿ. ಪ್ರಸ್ತುತ 'ಭೈರತಿ ರಣಗಲ್' ಚಿತ್ರದ ಜಪ ಮಾಡುತ್ತಿರುವ ಸೆಂಚುರಿ ಸ್ಟಾರ್ ಬ್ಯುಸಿಯೆಸ್ಟ್ ಸ್ಟಾರ್ ಅನ್ನೋದು ನಿಮಗೆ ತಿಳಿದೇ ಇದೆ. 62ರ ಹರೆಯದಲ್ಲೂ ಕ್ರಿಯಾಶೀಲರಾಗಿ ಸಿನಿಮಾವೆಂಬ ಗ್ಲ್ಯಾಮರ್ ದುನಿಯಾದಲ್ಲಿ ಡಿಮ್ಯಾಂಡ್ ಕಡಿಮೆ ಮಾಡಿಕೊಳ್ಳದ ದೊಡ್ಮನೆ ದೊರೆ ಸ್ಯಾಂಡಲ್ವುಡ್ ಸ್ಟಾರ್ಸ್ಗೆ ಮಾತ್ರವಲ್ಲ, ಸೌತ್ ಸೂಪರ್ ಸ್ಟಾರ್ಗಳಿಗೂ ಇಷ್ಟ ಆಗುವ ನಟ. ಈ ಕಾರಣಕ್ಕೆ ತಲೈವಾ ರಜನಿಕಾಂತ್ ಮುಖ್ಯಭೂಮಿಕೆಯ ಜೈಲರ್ ಸಿನಿಮಾ ಬಿಡುಗಡೆ ಆದ ಬಳಿಕ ತೆಲುಗು, ತಮಿಳು, ಮಲಯಾಳಂ ಪ್ರೇಕ್ಷಕರು ಮಾತ್ರವಲ್ಲ, ಅಲ್ಲಿನ ಸ್ಟಾರ್ಸ್ ಕೂಡಾ ಸೆಂಚುರಿ ಸ್ಟಾರ್ ನಮ್ಮ ಸಿನಿಮಾದ ಭಾಗವಾಗಬೇಕೆಂದುಕೊಳ್ಳುತ್ತಿದ್ದಾರೆ.
ಈ ನಿಟ್ಟಿನಲ್ಲಿ ಪರಭಾಷೆಯ ಸ್ಟಾರ್ ನಟರ ಸಿನಿಮಾಗಳಲ್ಲಿ ಶಿವರಾಜ್ಕುಮಾರ್ ಅವರಿಗೆ ಒಂದು ಪವರ್ಫುಲ್ ಪಾತ್ರ ಕೊಡಲು ನಿರ್ದೇಶಕರುಗಳು ಮನಸ್ಸು ಮಾಡುತ್ತಿದ್ದಾರೆ. ಇದು ಸಿನಿಮಾ ವ್ಯಾಪಾರ ದೃಷ್ಟಿಯಿಂದ ಆಗಿದ್ರೂ ಕೂಡಾ, ಶಿವಣ್ಣನಿಗೆ ಪರಭಾಷೆಗಳಲ್ಲೂ ಅಭಿಮಾನಿಗಳಿದ್ದಾರೆ ಅನ್ನೋ ವಿಷಯವನ್ನು ಸೈಡಿಗಿಡುವಂತಿಲ್ಲ. ಅದಕ್ಕೆ ಸಾಕ್ಷಿ'ವೇದ' ಸಿನಿಮಾದ ಪಾತ್ರ ಹಾಗೂ ಜೈಲರ್ ಚಿತ್ರದ ನರಸಿಂಹನ ಪಾತ್ರವನ್ನು ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿ ಪ್ರೇಮಿಗಳು ಅಪ್ಪಿಕೊಂಡದ್ದು.
ಸದ್ಯ ಭೈರತಿ ರಣಗಲ್ ಸಹ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲಿ ತೆರೆಕಾಣಲು ಸಿದ್ಧವಾಗಿದೆ. ಜೊತೆಗೆ, ಹ್ಯಾಟ್ರಿಕ್ ಹೀರೋ ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ಸ್ ಸಿನಿಮಾಗಳಲ್ಲಿ ಭಾಗವಾಗುತ್ತಿದ್ದಾರೆ. ತಮಿಳು ನಟ ವಿಜಯ್ ಕೊನೆ ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಅಭಿನಯಿಸಲಿದ್ದಾರೆ. ಈ ಮಾತನ್ನು ಸ್ವತಃ ಭೈರತಿ ರಣಗಲ್ ಚಿತ್ರದ ಪ್ರಮೋಷನ್ ಸಂದರ್ಭ ಸೆಂಚುರಿ ಸ್ಟಾರ್ ಹೇಳಿಕೊಂಡಿದ್ದಾರೆ.
''ನಾನು ವಿಜಯ್ ಅವರ ಕೊನೆಯ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈಗಾಗಲೇ ಮಾತುಕತೆ ನಡೆದಿದೆ. ನನ್ನ ಸಿನಿಮಾಗಳ ಕಾಲ್ ಶೀಟ್ ನೋಡಿಕೊಂಡು ಶೂಟಿಂಗ್ಗೆ ಹೋಗುತ್ತೇನೆ'' ಎಂದು ತಿಳಿಸಿದ್ದಾರೆ. ಕನ್ನಡದ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಹೌಸ್ ಬರೋಬ್ಬರಿ 500 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.
ಈ ಸಿನಿಮಾ ಜೊತೆಗೆ ಪ್ಯಾನ್ ವರ್ಲ್ಡ್ ಸ್ಟಾರ್ ರಾಮ್ ಚರಣ್ ತೇಜ್ ಅಭಿನಯದ 'ಪ್ರೊಡಕ್ಷನ್ ನಂ 16' ಸಿನಿಮಾದಲ್ಲಿ ಸೆಂಚುರಿ ಸ್ಟಾರ್ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. ಈ ಸಿನಿಮಾದ ಮಾತುಕತೆ ತಮಿಳು ನಟ ಧನುಷ್ ಜೊತೆಗಿನ ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಸಂದರ್ಭದಲ್ಲಿ 'ಪ್ರೊಡಕ್ಷನ್ ನಂ 16' ಚಿತ್ರತಂಡದೊಂದಿಗೆ ಆಗಿದೆಯೆಂದು ಶಿವಣ್ಣನ ಆಪ್ತರೊಬ್ಬರು ತಿಳಿಸಿದ್ದಾರೆ.
ಇದರ ಜೊತೆಗೆ ಮತ್ತೋರ್ವ ತೆಲುಗು ಸೂಪರ್ ಸ್ಟಾರ್ ವಿಷ್ಣು ಮಂಚು ಅಭಿನಯದ ಪ್ಯಾನ್ ಇಂಡಿಯಾ 'ಕಣ್ಣಪ್ಪ' ಚಿತ್ರದಲ್ಲಿ ಶಿವರಾಜ್ಕುಮಾರ್ ಅವರು ಅಭಿಮಾನಿಗಳ ಮನದಲ್ಲಿ ಉಳಿಯುವಂತಹ ಪಾತ್ರ ನಿರ್ವಹಿಸಿದ್ದಾರಂತೆ. ಈ ಹಿಂದೆ ಸಿನಿ ಪಂಡಿತರು ಈ ವಿಷಯವನ್ನು ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದರು.
ಇದರ ಮಧ್ಯೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ಲೂಸಿಫರ್ ಪಾರ್ಟ್ 2 ಸಿನಿಮಾದಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ. ಈ ವಿಚಾರವನ್ನು ಒಮ್ಮೆ ಶಿವರಾಜ್ಕುಮಾರ್ ಚೆನ್ನೈ ಏರ್ಪೋರ್ಟ್ ನಲ್ಲಿ ಮಾಧ್ಯಮದವರಿಗೆ ತಿಳಿಸಿದ್ದರು.
ಇದನ್ನೂ ಓದಿ: ದೊಡ್ಮನೆ ಶಕ್ತಿ ಪಾರ್ವತಮ್ಮ ಹಾದಿಯಲ್ಲಿ ಸೊಸೆ ಗೀತಾ ಶಿವರಾಜ್ಕುಮಾರ್: ಸಿನಿಮಾ ಫೈನಲ್ ಮಾಡೋದು ಇವರೇ
ಹೀಗೆ ಹೆಸರಾಂತ ನಟ ಶಿವರಾಜ್ಕುಮಾರ್ ಕೈಯಲ್ಲಿ ಕನ್ನಡದ ಜೊತೆಗೆ ಪರಭಾಷೆಯ ಸ್ಟಾರ್ ನಟರ ಸಿನಿಮಾಗಳು ಸೇರಿದಂತೆ ಬರೋಬ್ಬರಿ 10ಕ್ಕೂ ಹೆಚ್ಚು ಪ್ರಾಜೆಕ್ಟ್ಗಳಿವೆ. ಆದ್ರೆ ಆರೋಗ್ಯ ದೃಷ್ಟಿಯಿಂದ ಭೈರತಿ ರಣಗಲ್ ಬಿಡುಗಡೆಯಾದ ಒಂದು ವಾರಕ್ಕೆ ಶಿವಣ್ಣ ಅಮೆರಿಕ ಫ್ಲೈಟ್ ಹತ್ತಲಿದ್ದಾರೆ. ಅಲ್ಲಿ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದು ಹೊಸ ವರ್ಷದ ಸಂದರ್ಭ ಬೆಂಗಳೂರಿಗೆ ಮರಳಲಿದ್ದಾರೆ. ಅವರೇ ಹೇಳಿಕೊಂಡಂತೆ, ಶಸ್ತ್ರಚಿಕಿತ್ಸೆಗೆ ಒಳಗಾಗಿ ನಾಲ್ಕೈದು ತಿಂಗಳ ಕಾಲ ವಿಶ್ರಾಂತಿ ಬೇಕು. ಅಲ್ಲಿಗೆ ಅವರು ಒಪ್ಪಿಕೊಂಡಿರುವ ಸಿನಿಮಾ ಶೂಟಿಂಗ್ ಡೇಟ್ಸ್ ಕೂಡಾ ಮುಂದಕ್ಕೆ ಹೋಗಲಿವೆ.
ಇದನ್ನೂ ಓದಿ: 'ಅವನಲ್ಲ ಅವಳು': ಲಿಂಗ ಬದಲಿಸಿಕೊಂಡ ಸಿನಿ ಸೆಲೆಬ್ರಿಟಿಗಳಿವರು; ಒಮ್ಮೆ ನೋಡಿಬಿಡಿ
ಒಟ್ಟಾರೆ ಬಹುಭಾಷಾ ನಟರ ಸ್ನೇಹ ಹಾಗೂ ನಿರ್ದೇಶಕ - ನಿರ್ಮಾಪಕರ ಪ್ರೀತಿ, ಬಾಂಧವ್ಯ ಮತ್ತು ಅಭಿಮಾನಿಗಳ ಅಭಿಮಾನಕ್ಕೆ ಬೆಲೆಕೊಟ್ಟು ಕೆಲ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕೆಲ ಪಾತ್ರಗಳು ಕರುನಾಡ ಚಕ್ರವರ್ತಿಯನ್ನೇ ಡಿಮ್ಯಾಂಡ್ ಮಾಡ್ತಿರೋದ್ರಿಂದ ಅವುಗಳನ್ನೂ ಒಪ್ಪಿಕೊಳ್ಳಬೇಕಿದೆ. 62ರಲ್ಲೂ ಹ್ಯಾಟ್ರಿಕ್ ಹೀರೋಗಿರುವ ಡಿಮ್ಯಾಂಡ್ ಯುವಕರಿಗೆ ಸ್ಫೂರ್ತಿಯಾಗಿದೆ.