ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ನಟಿ ಹಾಗೂ ರೂಪದರ್ಶಿ ಪೂನಂ ಪಾಂಡೆ ಮೃತಪಟ್ಟಿರೋದಾಗಿ ಅವರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಅಕೌಂಟ್ ತಿಳಿಸಿತ್ತು. ಆದ್ರೆ ನಟಿ ಜೀವಂತವಾಗಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಅವರು ಹೀಗೆ ಮಾಡಿದ್ದರು ಅನ್ನೋದು ಇಂದು ಗೊತ್ತಾಗಿದೆ.
ಅದಾಗ್ಯೂ, 'ಫೇಕ್ ಡೆತ್ ನ್ಯೂಸ್' ಸಾಕಷ್ಟು ಟೀಕೆಗೊಳಗಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳು ಸೇರಿದಂತೆ ಸೆಲೆಬ್ರಿಟಿಗಳು ನಟಿಗೆ ಛೀಮಾರಿ ಹಾಕಿದ್ದಾರೆ. ವ್ಯಾಪಕ ಖಂಡನೆ ನಡುವೆ, ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪೂನಂ ಪರವಾಗಿ ಮಾತನಾಡಿದ್ದಾರೆ.
ನಿನ್ನೆ ನಟಿಯ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯಿಂದ ಶೇರ್ ಮಾಡಲಾಗಿದ್ದ ಪೋಸ್ಟ್ನಲ್ಲಿ, ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ಮೃತಪಟ್ಟಿರೋದಾಗಿ ತಿಳಿಸಲಾಗಿತ್ತು. ಇಂದು ಸ್ವತಃ ಪೂನಂ ಪಾಂಡೆ ಮಾತನಾಡಿರುವ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದರಲ್ಲಿ, 'ನಕಲಿ ಸಾವಿನ ಸುದ್ದಿ' ಗಳಿಸಿದ ಗಮನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. 'ಸುಳ್ಳು ಸುದ್ದಿ'ಯು ಗರ್ಭಕಂಠದ ಕ್ಯಾನ್ಸರ್ ಮೇಲೆ ಬೆಳಕು ಚೆಲ್ಲುವ ಒಂದು ಪ್ರಯತ್ನ ಎಂದೂ ಸ್ಪಷ್ಟಪಡಿಸಿದ್ದಾರೆ.
ಅದೇನೇ ಇದ್ದರೂ, ಅಭಿಮಾನಿಗಳು, ನಟಿಯ ಮಾಜಿ ಸಹೋದ್ಯೋಗಿಗಳು ಸೇರಿದಂತೆ ಮನರಂಜನಾ ಉದ್ಯಮದ ಖ್ಯಾತನಾಮರು ಅಸಮಾಧಾನ ಹೊರಹಾಕಿದ್ದಾರೆ. 'ಸಂವೇದನಾಶೀಲವಲ್ಲದ' ಸಂಗತಿ ಎಂದು ಉಲ್ಲೇಖಿಸುತ್ತಿದ್ದಾರೆ.
ಡಿಸೈನರ್ ಸೈಶಾ ಶಿಂಧೆ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆಯ ಪರಿಸ್ಥಿತಿ ಬಗ್ಗೆ ಮಾತನಾಡಿದ್ದಾರೆ. ಸ್ವೀಕಾರಾರ್ಹವಲ್ಲದ ಪಬ್ಲಿಸಿಟಿ ಸ್ಟಂಟ್ ಎಂದು ಟೀಕಿಸಿದ್ದಾರೆ. ನಟಿ-ಮಾಡೆಲ್ ಶ್ರೀಜಿತಾ ಅವರು ಅನೇಕರ ಭಾವನೆಗಳನ್ನು ಎತ್ತಿಹಿಡಿದು, ಪೂನಂ ಅವರ ನಡೆಯನ್ನು ಖಂಡಿಸಿದರು. ಗಮನ ಸೆಳೆಯಲು ನಟಿ ಆಯ್ದುಕೊಂಡ ರೀತಿ ಸೂಕ್ತವಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: 'I am alive': ನಾನು ಜೀವಂತವಾಗಿದ್ದೇನೆಂದು ಹೇಳಿಕೊಂಡ ನಟಿ ಪೂನಂ ಪಾಂಡೆ
ಆದ್ರೆ, ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಗರ್ಭಕಂಠದ ಕ್ಯಾನ್ಸರ್ ಕುರಿತು ಚರ್ಚೆಯನ್ನು ಹುಟ್ಟುಹಾಕಲು, ಜಾಗೃತಿ ಮೂಡಿಸಲು ಪೂನಂ ಪಾಂಡೆ ಅವರ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ. ಜಾಗೃತಿ ಮೂಡಿಸಲು ನಟಿ ಆಯ್ದುಕೊಂಡ ರೀತಿಗೆ ವಿವಾದ ಎದ್ದಿರೋದನ್ನು ನಿರ್ದೇಶಕರು ಒಪ್ಪಿಕೊಂಡರಾದರೂ, ನಟಿಯ ಉದ್ದೇಶಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಇದನ್ನೂ ಓದಿ: ಗರ್ಭಕಂಠದ ಕ್ಯಾನ್ಸರ್‌ನಿಂದ ನಟಿ ಪೂನಂ ಪಾಂಡೆ ನಿಧನ
ಗಾಯಕ ರಾಹುಲ್ ವೈದ್ಯ ಅವರು ಮಾರ್ಕೆಟಿಂಗ್ ತಂತ್ರಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಪೂನಂ ಅವರ ಪ್ರಚಾರದ ಸ್ಟಂಟ್ ಯೋಗ್ಯವಲ್ಲ ಎಂದು ತಿಳಿಸಿದ್ದಾರೆ. ಜವಾನ್ ನಟಿ ರಿಧಿ ಡೋಗ್ರಾ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಸಿದ್ಧಾಂತ್ ಕಪೂರ್, ಶಾರ್ದುಲ್ ಪಂಡಿತ್, ಅಲಿಗೋನಿ, ರಾಕಿ ಸಾವಂತ್ ಸೇರಿದಂತೆ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ನಟಿಯ ನಡೆಯನ್ನು ಖಂಡಿಸಲಾಗುತ್ತಿದೆ.