ನವದೆಹಲಿ: ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ 'ಪುಷ್ಪಾ 2: ದಿ ರೂಲ್' ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಎಲ್ಲ ದಾಖಲೆಗಳನ್ನು ಪುಡಿಗಟ್ಟುತ್ತಾ ಭರ್ಜರಿಯಾಗಿ ಮುಂದೆ ಸಾಗುತ್ತಿದೆ. ಚಿತ್ರ ತೆರೆಕಂಡ ನಾಲ್ಕೇ ದಿನದಲ್ಲಿ 800 ಕೋಟಿ ರೂಪಾಯಿ ಬಾಚಿದೆ. ಅದ್ಭುತ ಯಶಸ್ಸಿನ ಅಲೆಯಲ್ಲಿರುವ 'ಪುಷ್ಪಾರಾಜ್'ಗೆ ಬಾಲಿವುಡ್ ಮೆಗಾಸ್ಟಾರ್ನಿಂದ ಬಹುಪರಾಕ್ ಸಿಕ್ಕಿದೆ.
ಬಾಲಿವುಡ್ ಬಾದ್ಶಾ ಅಮಿತಾಭ್ ಬಚ್ಚನ್ ಅವರು ಪುಷ್ಪಾ ಮತ್ತು ಅಲ್ಲು ಅರ್ಜುನ್ ಅವರನ್ನು ಹೊಗಳಿದ್ದಾರೆ. ನಮ್ಮಂತಹ ನಟರಿಗೆ ಅಲ್ಲು ಸ್ಫೂರ್ತಿಯಾಗಿದ್ದಾರೆ. ನಾನು ಅವರ ಅಪ್ಪಟ ಅಭಿಮಾನಿ ಎಂದೆಲ್ಲಾ ಬಣ್ಣಿಸಿದ್ದಾರೆ.
ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ, ಅಲ್ಲು ಅರ್ಜುನ್ಗೆ ಹಿಂದಿ ಸಿನಿಮಾದ ನಾಯಕರಲ್ಲಿ ನಿಮಗೆ ಸ್ಫೂರ್ತಿ ಯಾರು ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಅವರು ಅಮಿತಾಭ್ ಬಚ್ಚನ್ ಎಂದು ಉತ್ತರಿಸಿದ್ದರು. ಈ ವಿಡಿಯೋವನ್ನು ಬಚ್ಚನ್ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
#AlluArjun ji .. so humbled by your gracious words .. you give me more than I deserve .. we are all such huge fans of your work and talent .. may you continue to inspire us all .. my prayers and wishes for your continued success ! https://t.co/ZFhgfS6keL
— Amitabh Bachchan (@SrBachchan) December 9, 2024
'ನಿಮ್ಮ ಮಾತುಗಳು ನನ್ನಲ್ಲಿ ವಿನಮ್ರತೆ ಮೂಡಿಸಿದೆ. ನೀವು ನನ್ನ ಅರ್ಹತೆಗಿಂತ ಹೆಚ್ಚಿನದ್ದನ್ನು ಹೇಳಿದ್ದೀರಿ. ನಾವೆಲ್ಲರೂ ನಿಮ್ಮ ಕೆಲಸ ಮತ್ತು ಪ್ರತಿಭೆಗೆ ಅಭಿಮಾನಿಗಳು. ನೀವು ನಮಗೆಲ್ಲರಿಗೂ ಸ್ಫೂರ್ತಿ ನೀಡಿದ್ದೀರಿ. ನಿಮಗೆ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.
ಬಚ್ಚನ್ ಬಗ್ಗೆ ಅಲ್ಲು ಹೇಳಿದ್ದೇನು?: ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅಲ್ಲು ಅರ್ಜುನ್ಗೆ ನಿರೂಪಕರು ಬಾಲಿವುಡ್ನಲ್ಲಿ ನಿಮ್ಮ ಮೇಲೆ ಪ್ರಭಾವ ಬೀರುವ ನಾಯಕ ಯಾರು ಎಂದಾಗ, ಅಮಿತಾಭ್ ಬಚ್ಚನ್ ಎಂದು ಹೇಳಿದ್ದರು.
"ಅಮಿತಾಭ್ ಅವರು ನನಗೆ ಹೆಚ್ಚು ಸ್ಫೂರ್ತಿಯಾಗಿದ್ದಾರೆ. ಮೆಗಾಸ್ಟಾರ್ ಅಮಿತಾಭ್ರನ್ನು ಆರಾಧಿಸುತ್ತೇನೆ. ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದವನು. ನನ್ನ ವೃತ್ತಿಜೀವನದ ಮೇಲೆ ಅವರು ಹೆಚ್ಚಿನ ಪ್ರಭಾವ ಬೀರಿದ್ದಾರೆ. ನಾನು ಅಮಿತಾಭ್ ಅವರ ಕಟ್ಟಾ ಅಭಿಮಾನಿ. ಈ ಹಿರಿ ವಯಸ್ಸಿನಲ್ಲೂ ಅವರು ಆಕರ್ಷಕವಾಗಿ ನಟಿಸುತ್ತಾರೆ. ಇದು ನನಗೆ ಅಚ್ಚರಿ ಮೂಡಿಸುತ್ತದೆ. 60-80 ವರ್ಷದಲ್ಲೂ ನಾನು ಅವರಷ್ಟೇ ಸುಂದರವಾಗಿ ನಟಿಸಬೇಕು ಎಂದು ಬಯಸುವೆ ಎಂದಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪುಷ್ಪಾ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
ಇದನ್ನೂ ಓದಿ: ಗಲ್ಲಾಪೆಟ್ಟಿಯಲ್ಲಿ ಪುಷ್ಪಾ ಖದರ್: ಎರಡೇ ದಿನದಲ್ಲಿ 400 ಕೋಟಿ ಗಳಿಕೆ