ಬಾಲಿವುಡ್ ದಂತಕಥೆ ರಾಜ್ ಕಪೂರ್ ಅವರ 100ನೇ ಜನ್ಮದಿನೋತ್ಸವಕ್ಕೆ ಚಿತ್ರರಂಗ ಸಜ್ಜಾಗುತ್ತಿದೆ. ಡಿಸೆಂಬರ್ 13ರಿಂದ 15ರವರೆಗೆ ಈ ಆಚರಣೆ ನಡೆಯಲಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಕಪೂರ್ ಕುಟುಂಬ ಆಹ್ವಾನಿಸಿದೆ. ಸೆಲೆಬ್ರಿಟಿಗಳು ಈ ಭೇಟಿಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಕಪೂರ್ ಕುಟುಂಬ ಪ್ರಧಾನಿ ಮೋದಿ ವಿಶೇಷ ಉಡುಗೊರೆ ನೀಡಿತು. ಪ್ರಧಾನಿ ಕರೀನಾರ ಮಕ್ಕಳಿಗೆ ಆಟೋಗ್ರಾಫ್ ನೀಡಿರುವುದನ್ನು ಫೋಟೋಗಳಲ್ಲಿ ನೋಡಬಹುದು.
ಕರೀನಾ ಕಪೂರ್ ಅವರು ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಕೆಲವು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.
''ನಮ್ಮ ಅಜ್ಜ, ಲೆಜೆಂಡ್ ರಾಜ್ ಕಪೂರ್ ಅವರ ಅಸಾಧಾರಣ ಜೀವನ ಮತ್ತು ಪರಂಪರೆಯನ್ನು ಸ್ಮರಿಸುವ ಕ್ಷಣಗಳಿಗೆ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ್ದು, ಇದೊಂದು ಗೌರವದ ಕ್ಷಣ. ಈ ವಿಶೇಷ ಕ್ಷಣಕ್ಕಾಗಿ ಪ್ರಧಾನಿಗೆ ಧನ್ಯವಾದಗಳು. ಈ ಮೈಲಿಗಲ್ಲನ್ನು ಆಚರಿಸುವಲ್ಲಿ ನಿಮ್ಮ ಬೆಂಬಲ ಮಹತ್ತರವಾದದ್ದು. ದಾದಾಜಿಯವರ ಕಲಾತ್ಮಕತೆ, ದೂರದೃಷ್ಟಿ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯ 100 ಅದ್ಭುತ ವರ್ಷಗಳನ್ನು ನಾವು ಆಚರಿಸುತ್ತಿದ್ದೇವೆ. ಅವರ ಪರಂಪರೆಯ ಗೌರವಿಸುವ ಕ್ಷಣವಾಗಿದ್ದು, ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಲಿದೆ. ಅವರ ಐಕಾನಿಕ್ ಸಿನಿಮಾಗಳನ್ನು ಪ್ರದರ್ಶಿಸಲು ನಾವು ಹೆಮ್ಮೆಪಡುತ್ತೇವೆ. 'ರಾಜ್ ಕಪೂರ್ 100 ಫಿಲ್ಮ್ ಫೆಸ್ಟಿವಲ್' ಮೂಲಕ ಭಾರತೀಯ ಚಿತ್ರರಂಗದ ಮೇಲೆ ಅವರು ಬೀರಿದ ಪ್ರಭಾವವನ್ನು ನೆನಪಿಸಿಕೊಳ್ಳಲಿದ್ದೇವೆ. ಡಿಸೆಂಬರ್ 13-15, 2024, 10 ಚಿತ್ರಗಳು, 40 ನಗರಗಳು, 135 ಚಿತ್ರಮಂದಿರಗಳು'' ಎಂದು ಬರೆದುಕೊಂಡಿದ್ದಾರೆ.
ಬಾಲಿವುಡ್‌ನ ಮತ್ತೋರ್ವ ನಟಿ ಆಲಿಯಾ ಭಟ್ ಸಹ ಫೋಟೋಗಳನ್ನು ಹಂಚಿಕೊಂಡಿದ್ದಾರೆ. "ಆರ್ಟ್ ಈಸ್ ಟೈಮ್ಲೆಸ್. ಕೆಲವೊಮ್ಮೆ ಮುಂದಿನ ಹೆಜ್ಜೆಯಿಡಲು ನಾವು ಹಿಂತಿರುಗಿ ನೋಡಬೇಕು ಮತ್ತು ಅದರಿಂದ ಕಲಿಯಬೇಕು. ರಾಜ್ ಕಪೂರ್ ಅವರ ಪ್ರಭಾವವು ನಿಜವಾಗಿಯೂ ಜಾಗತಿಕ ಮಟ್ಟದಲ್ಲಿತ್ತು. ಅವರು ತಮ್ಮ ಸಿನಿಮಾಗಳು, ಅವರು ಹೇಳಿದ ಕಥೆಗಳಿಂದ ಪ್ರಪಂಚದಾದ್ಯಂತ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ರಾಜ್ ಕಪೂರ್ ಜೀವನವನ್ನು ಸ್ಮರಿಸುವ ಕಾರ್ಯಕ್ರಮಕ್ಕೆ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿರುವುದು ಅತ್ಯಂತ ಗೌರವದ ವಿಷಯ. ಅವರ ಕಥೆಗಳನ್ನು ಕೇಳುವುದರ ಮೂಲಕ ಬಹಳ ಕಲಿತಿದ್ದೇನೆ. ಅವರ ಪರಂಪರೆಯು ಸ್ಫೂರ್ತಿ ನೀಡುವುದನ್ನು ಮುಂದುವರಿಸಿದೆ. ಡಿಸೆಂಬರ್ 13 ರಿಂದ 15ರವರೆಗೆ ದೇಶದಾದ್ಯಂತ 10 ನಗರಗಳು, 40 ಚಿತ್ರಮಂದಿರಗಳು, 135 ಸ್ಕ್ರೀನ್ಗಳಲ್ಲಿ 'ರಾಜ್ ಕಪೂರ್ 100 ಫಿಲ್ಮ್ ಫೆಸ್ಟಿವಲ್' ಮೂಲಕ ಅವರ ಕಲಾತ್ಮಕ ವರ್ಷಗಳನ್ನು ಆಚರಿಸಲು ನಾವು ರೋಮಾಂಚನಗೊಂಡಿದ್ದೇವೆ" ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: 'ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ' ಎಂದ 'U I' ಸೆನ್ಸಾರ್ನಲ್ಲಿ ಪಾಸ್: ಪರೀಕ್ಷೆಗೆ ಸಜ್ಜಾದ ಬುದ್ಧಿವಂತ, ಕಿಚ್ಚ
ಫೋಟೋಗಳಲ್ಲಿ, ರಣ್ಬೀರ್ ಕಪೂರ್ ಮತ್ತು ಅರ್ಮಾನ್ ಜೈನ್ ಪ್ರಧಾನಿಗೆ ವಿಶೇಷ ಉಡುಗೊರೆ ನೀಡುತ್ತಿರುವುದನ್ನು ಕಾಣಬಹುದು. ಆದ್ರೆ, ಉಡುಗೊರೆ ಏನೆಂಬುದು ತಿಳಿದು ಬಂದಿಲ್ಲ.
'ಆವಾರಾ', 'ಸಂಗಮ್', 'ಶ್ರೀ' '420' ಮತ್ತು 'ಮೇರಾ ನಾಮ್ ಜೋಕರ್'ನಂತಹ ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ರಾಜ್ ಕಪೂರ್ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿದಾಗಿ ಪ್ರತಿಷ್ಟಿತ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ' ಮತ್ತು 'ಪದ್ಮಭೂಷಣ' ಗೌರವಗಳಿಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: Watch: ದೇಸಿ ಗರ್ಲ್ ಸಾಂಗ್ಗೆ ಐಶ್ವರ್ಯಾ ಅಭಿಷೇಕ್ ಡ್ಯಾನ್ಸ್, ಬ್ಯೂಟಿಫುಲ್ ವಿಡಿಯೋ ವೈರಲ್