ಭುವನೇಶ್ವರ: ಒಡಿಶಾದ ದೇವಾಲಯವೊಂದಕ್ಕೆ ಭೇಟಿ ನೀಡಿದ ವೇಳೆ ಅಲ್ಲಿನ ನಿಯಮಗಳನ್ನು ಉಲ್ಲಂಘಿಸಿ, ದೇವಳದ ಆವರಣದಲ್ಲಿ ಫೋಟೋ ತೆಗೆಸಿಕೊಳ್ಳುವ ಮೂಲಕ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇದೀಗ ವಿವಾದಕ್ಕೀಡಾಗಿದ್ದಾರೆ.
ಒಡಿಶಾದ ಲಿಂಗರಾಜು ದೇವಸ್ಥಾನಕ್ಕೆ ನಟಿ ಶಿಲ್ಪಾ ಶೆಟ್ಟಿ ಭೇಟಿ ನೀಡಿದ್ದರು. ಈ ದೇವಳದ ಆವರಣದಲ್ಲಿ ಫೋಟೋಗಳ ತೆಗೆಯದಂತೆ ಆಡಳಿತ ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ. ಆದರೆ, ಶಿಲ್ಪಾ ಶೆಟ್ಟಿ ಅವರು ದೇವಾಲಯದ ಒಳಗೆ ಫೋಟೋ ಹಾಗೂ ವಿಡಿಯೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲೇ ವಿವಾದ ಹುಟ್ಟಿಕೊಂಡಿದೆ. ಜೊತೆಗೆ ದೇವಸ್ಥಾನದ ಭದ್ರತೆ ಮತ್ತು ನೀತಿಯ ಬಗ್ಗೆ ಪ್ರಶ್ನೆಗಳು ಎದ್ದಿವೆ.
ದೇವಸ್ಥಾನದೊಳಗೆ ಕ್ಯಾಮರಾ ಬಂದಿದ್ದು ಹೇಗೆ?: ಶಿಲ್ಪಾ ಶೆಟ್ಟಿ ಅವರ ಫೋಟೋ ತೆಗೆದಿದ್ದು ಯಾರು? ಸೆಲೆಬ್ರಿಟಿಗಳು ಹಾಗೂ ಸಾಮಾನ್ಯ ಭಕ್ತರಿಗೆ ನಿಯಮಗಳು ವಿಭಿನ್ನವಾಗಿವೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಸ್ಥಳೀಯ ಭಕ್ತರು ಈ ಘಟನೆಯನ್ನು ಖಂಡಿಸಿ ದೇವಾಲಯದ ಆಡಳಿತವನ್ನು ಟೀಕಿಸಿದ್ದಾರೆ.
ದೇವಸ್ಥಾನದ ಒಳಗಿರುವ ಫೋಟೋವನ್ನು ಶಿಲ್ಪಾ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೊಂದು ವಿಡಿಯೋದಲ್ಲಿ ಶಿಲ್ಪಾ ಶೆಟ್ಟಿ ಅವರು ದೇವಸ್ಥಾನದ ಇತಿಹಾಸದ ಬಗ್ಗೆ ಸೇವಕರ ಅಧೀಕ್ಷನೊಂದಿಗೆ ಮಾತನಾಡುತ್ತಿದ್ದಾರೆ. ಆ ವ್ಯಕ್ತಿಯನ್ನು ದೇವಸ್ಥಾನದ ಸೇವಕರ ಅಧೀಕ್ಷಕ ರಾಜಕಿಶೋರ್ ದಾಸ್ ಎಂದು ಗುರುತಿಸಲಾಗಿದೆ. ಆದರೆ, ದೇವಸ್ಥಾನದ ಆಡಳಿತ ಮಂಡಳಿಯ ಅನುಮತಿಯಿಲ್ಲದೇ ಚಿತ್ರ ಹಾಗೂ ವಿಡಿಯೋ ತೆಗೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಿರುವ ಸ್ಥಳದಲ್ಲಿ ಶಿಲ್ಪಾ ಶಿಟ್ಟಿ ಹೇಗೆ ಚಿತ್ರ ಹಾಗೂ ವಿಡಿಯೋ ತೆಗೆದರು ಎಂಬ ಪ್ರಶ್ನೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಫೋಟೋ ತೆಯಲು ಸಹಾಯ ಮಾಡಿರುವ ವ್ಯಕ್ತಿಯ ನಡೆಯೂ ವಿವಾದಕ್ಕೊಳಗಾಗಿದೆ.
ಮಾಹಿತಿ ಪ್ರಕಾರ ನಟಿ ಶಿಲ್ಪಾ ಶೆಟ್ಟಿ ಅವರು ಸೋಮವಾರ ಭುವನೇಶ್ವರದಲ್ಲಿ ಆಭರಣ ಶೋರೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಸಂಜೆ ಪ್ರಸಿದ್ಧ ಲಿಂಗರಾಜು ದೇವಸ್ಥಾನಕ್ಕೆ ಭೇಟಿ ನೀಡಿದರು. ಈ ವೇಳೆ ಶಿಲ್ಪಾ ಶೆಟ್ಟಿ, ದೇವಳದ ಒಳಗೆ ಫೋಟೋಗಳನ್ನು ಹಾಗೂ ವಿಡಿಯೋಗಳನ್ನು ತೆಗೆದಿದ್ದಾರೆ. ನಂತರ ಅವರು ಮುಂಬೈಗೆ ಮರಳಿದ್ದಾರೆ .
ಇದನ್ನೂ ಓದಿ: ಕಿಚ್ಚನ ಬಿಗ್ ಬಾಸ್ನಲ್ಲಿ ದರ್ಶನ್ ಸಿನಿಮಾ ಚರ್ಚೆ: ಕಣ್ಣೀರ ಕಡಲಲ್ಲಿ ಮನೆಮಂದಿ, ಕಾರಣ?