ಭಾನುವಾರ ರಾತ್ರಿ ಬಿಗ್ ಬಾಸ್ ಸೀಸನ್ 10ರ ವಿಜೇತರ ಹೆಸರು ಘೋಷಣೆ ಆಗಿದೆ. ಕಾರ್ತಿಕ್ ಮಹೇಶ್ ಗೆಲುವಿನ ನಗೆ ಬೀರಿದ್ದಾರೆ. ಐವತ್ತು ಲಕ್ಷ ರೂಪಾಯಿ, ಜೊತೆಗೆ ಒಂದು ಮಾರುತಿ ಬ್ರೀಝಾ ಕಾರನ್ನು ತಮ್ಮದಾಗಿಸಿಕೊಂಡಿದ್ದಾರೆ. ನಟನ ಬಿಗ್ ಬಾಸ್ ಪಯಣ ಹೀಗಿತ್ತು.
ಕಟ್ಟು- ಮಸ್ತು ಮೈಕಟ್ಟು, ಪುಟ್ಟ ಮಗುವಿನಂಥ ಮನಸ್ಸು, ಮಗುವಿನ ಹಠ, ಜಿದ್ದು, ಕಿರುಚಾಟ, ಯಾರನ್ನಾದರೂ ಥಟ್ಟನೆ ಹಚ್ಚಿಕೊಳ್ಳುವ, ಹಚ್ಚಿಕೊಂಡವರಿಂದ ಬಿಡಿಸಿಕೊಳ್ಳಲಾಗದೇ ಒದ್ದಾಡುವ, ಅಪ್ಪಟ ಭಾವುಕ ವ್ಯಕ್ತಿ. ಇದು ಬಿಗ್‌ಬಾಸ್ 10ರ ವಿಜೇತ ಕಾರ್ತಿಕ್ ಮಹೇಶ್ ಅವರ ವ್ಯಕ್ತಿತ್ವ. ಹಲವು ಧಾರಾವಾಹಿ, ನಾಯಕನಾಗಿ ನಟಿಸಿದ್ದ ಡೊಳ್ಳು ಎಂಬ ಸಿನಿಮಾಗೆ ಸಿಕ್ಕ ರಾಷ್ಟ್ರಪ್ರಶಸ್ತಿಯ ಮಾನ್ಯತೆ ಜೊತೆಗಿಟ್ಟುಕೊಂಡು ಬಿಗ್ ಬಾಸ್ ವೇದಿಕೆ ಏರಿದ್ದ ಕಾರ್ತಿಕ್ ಮನಸ್ಸಲ್ಲಿ, ಮುಂದೇನು? ಎಂಬ ಪ್ರಶ್ನೆ ಎದ್ದುನಿಂತಿತ್ತು. ಪ್ರೇಕ್ಷಕರ ವೋಟಿಂಗ್‌ನಲ್ಲಿ ಪಾಸ್ ಆಗದೇ ಹೋಲ್ಡ್ ಸೀಟ್‌ನಲ್ಲಿ ಕೂತಾಗಲೂ ಅವರ ಮನಸ್ಸಲ್ಲಿ ಇದ್ದಿದ್ದು ಒಂದೇ ಪ್ರಶ್ನೆ, 'ಮುಂದೇನು?'. ನಂತರ 'ಅಸಮರ್ಥ'ರ ಪಟ್ಟ ಹೊತ್ತು ಮನೆಯೊಳಗೆ ಹೊಕ್ಕ ಕ್ಷಣದಿಂದ ಪ್ರತಿದಿನವೂ ಅವರು 'ಮುಂದೇನು' ಎಂಬ ಪ್ರಶ್ನೆಯನ್ನು ಎದುರಿಸುತ್ತಲೇ ಬಂದಿದ್ದಾರೆ.
ಆ ಪ್ರಶ್ನೆಗೆ ಉತ್ತರ ಹುಡುಕುತ್ತಲೇ ತಮ್ಮ ಜಿದ್ದಿನ ಆಟ, ಸ್ನೇಹದ ನಡತೆ, ಆಟ ಎಂದು ಬಂದರೆ ಸ್ನೇಹಿತರನ್ನೂ ಎದುರುಹಾಕಿಕೊಳ್ಳುವ ನಿಷ್ಪಕ್ಷಪಾತಗುಣದಿಂದ ಅವರು ಗಮನಸೆಳೆದಿದ್ದಾರೆ. ಒಂದು ಹಂತದಲ್ಲಂತೂ ಬಿಗ್ ಬಾಸ್ ಮನೆ ಎಂದರೆ ವಿನಯ್ ವರ್ಸಸ್ ಕಾರ್ತಿಕ್ ಎಂಬ ಮಟ್ಟಿಗೆ ಹೋಗಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಏರಿಳಿತ, ಮನರಂಜನೆ, ನೋವು, ದುಃಖ ಎಲ್ಲ ಭಾವಗಳೂ ತುಂಬಿರುವ ಕಾರ್ತಿಕ್ ಮಹೇಶ್ ಅವರ ಬಿಗ್ ಬಾಸ್ ಪಯಣ ಹೀಗಿದೆ.
ನಾಯಕತ್ವದ ಗುಣ: ಬಿಗ್ ಬಾಸ್ ಜರ್ನಿ ಉದ್ದಕ್ಕೂ ಕಾರ್ತಿಕ್ ಮಹೇಶ್ ಅವರಲ್ಲಿ ಎದ್ದು ಕಾಣಿಸಿದ್ದು ನಾಯಕತ್ವದ ಗುಣ. ಈ ಸೀಸನ್‌ನಲ್ಲಿ ಎರಡು ಬಾರಿ ಮನೆಯ ಕ್ಯಾಪ್ಟನ್ ಆಗಿದ್ದರು. ಕ್ಯಾಪ್ಟನ್ ಆಗಿದ್ದಾಗಲಷ್ಟೇ ಅಲ್ಲ, ಗೇಮ್ ಆಡುವಾಗ, ಮನೆಯ ಉಳಿದ ಚಟುವಟಿಕೆಗಳಲ್ಲಿ ಅವರಲ್ಲಿನ ಮುಂದಾಳತ್ವದ ಗುಣ ಎದ್ದು ಕಾಣಿಸುತ್ತಿತ್ತು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರ ಮಾತನ್ನೂ ಕೇಳಿಸಿಕೊಂಡು, ಎಲ್ಲರನ್ನೂ ಖುಷಿಖುಷಿಯಾಗಿಟ್ಟ ಕ್ಯಾಪ್ಟನ್ ಅವರು.
ನಾಲ್ಕನೇ ವಾರದಲ್ಲಿ ಉಗ್ರಂ ತಂಡದ ಮುಂದಾಳು ಆಗಿ ತನಿಷಾ ನೇತೃತ್ವದ ಭಜರಂಗಿ ತಂಡವನ್ನು ಹಿಂದಿಕ್ಕಿ ಗೆಲುವಿನ ದಡ ಮುಟ್ಟಿಸಿದ್ದು, ಇದೇ ಕಾರ್ತಿಕ್. ಏಳನೇ ವಾರದಲ್ಲಿ ಪ್ರತಾಪ್, ನಮ್ರತಾ, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಅವರಿಂದ ಸಾಕಷ್ಟು ಸ್ಪರ್ಧೆ ಎದುರಿಸಿಯೂ ನಾಯಕನ ಪಟ್ಟ ತಮ್ಮದಾಗಿಸಿಕೊಂಡಿದ್ದರು. ಎಂಟನೇ ವಾರವೂ ಅವರು ನಾಯಕನಾಗಿ ಆಯ್ಕೆ ಆಗುವ ಮೂಲಕ ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದರು.
ಫನ್ ಫ್ರೈಡೇ: ಮನೆಯೊಳಗಿನ ಕೆಲಸಗಳು, ಟಾಸ್ಕ್‌ಗಳನ್ನು ಹೊರತುಪಡಿಸಿ ಜಿಯೋ ಸಿನಿಮಾ ಫನ್‌ಫ್ರೈಡೇ ಟಾಸ್ಕ್‌ಗಳಲ್ಲಿಯೂ ಕಾರ್ತಿಕ್ ಅವರ ಕಾಂಪಿಟೇಷನ್ ಗಮನಾರ್ಹವಾಗಿಯೇ ಇತ್ತು . ಚಂಡ ಮಾರುತ ಟಾಸ್ಕ್‌ನಲ್ಲಿ ಸಂಗೀತಾ ಜೊತೆಗೂಡಿ ಅವರು ಆಡಿದ ಆಟಕ್ಕೆ ಗೆಲುವಿನ ಪ್ರತಿಫಲ ದೊರೆತಿತ್ತು. ಬ್ರೇಕ್ ದ ಬಲೂನ್ ಟಾಸ್ಕ್‌ನಲ್ಲಿಯೂ ಈ ಜೋಡಿ ಮೋಡಿ ಮಾಡಿ ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ವಿರುದ್ಧ ಎರಡನೇ ಹಂತದಲ್ಲಿ ಗೆಲುವು ಸಾಧಿಸಿತ್ತು.
ಕಾರ್ತಿಕ್ - ಸಂಗೀತಾ - ತನಿಷಾ ಸ್ನೇಹ: ಅಸಮರ್ಥರ ತಂಡದಲ್ಲಿ ಒಂದಾಗಿ ಮನೆಯೊಳಗೆ ಪ್ರವೇಶಿಸಿದ ಕಾರ್ತಿಕ್, ಸಂಗೀತಾ ಮತ್ತು ತನಿಷಾ ಬಹುಬೇಗನೇ ಆಪ್ತ ಸ್ನೇಹಿತರಾದರು. ಅದರಲ್ಲಿಯೂ ಸಂಗೀತಾ ಮತ್ತು ಕಾರ್ತಿಕ್ ಅವರ ಸಂಬಂಧಕ್ಕೆ ಕೆಲ ಬಾರಿ ರೊಮ್ಯಾಂಟಿಕ್ ಆ್ಯಂಗಲ್ ಕೂಡ ದಕ್ಕಿತ್ತು. ಆದರೆ ಆರಂಭದಲ್ಲಿಯೇ, ಲವ್ ಗಿವ್ ಎಲ್ಲ ಬೇಡ. ಫ್ರೆಂಡ್ ಆಗಿರೋಣ ಎಂದು ಸಂಗೀತಾ ಸ್ಪಷ್ಟವಾಗಿ ಹೇಳಿದ್ದರು. ಅದಕ್ಕೆ ಕಾರ್ತಿಕ್ ಕೂಡ ಒಪ್ಪಿದ್ದರು. ಈ ಮೂವರ ಫ್ರೆಂಡ್‌ಶಿಪ್ ಬಿಗ್‌ಬಾಸ್ ಮನೆಯಲ್ಲಿ ಸಾಕಷ್ಟು ದೂರ ಸಾಗಿತ್ತು.
ಒಮ್ಮೆ ಸಂಗೀತಾ ಜೈಲಿಗೆ ಹೋದಾಗ ಕಾರ್ತಿಕ್ ನೇರವಾಗಿಯೇ, ನಾವು ಮೊದಲ ದಿನದಿಂದಲೂ ಒಬ್ಬರಿಗೊಬ್ಬರು ನಿಂತಿದ್ದೇವೆ. ಮುಂದೆಯೂ ನಿಲ್ಲುತ್ತೇವೆ ಎಂದೇ ಹೇಳಿದ್ದರು. ಜೈಲು ಅವಧಿ ಮುಗಿದಾಗ, ಸಂಗೀತಾರನ್ನು ಹೆಗಲ ಮೇಲೆ ಹೊತ್ತು ಮನೆಯೊಳಗೆ ತಂದ ಸನ್ನಿವೇಶ ಅವರಿಬ್ಬರ ಸ್ನೇಹ - ಸಂಬಂಧದ ಬಗ್ಗೆ ಬಹಳಷ್ಟನ್ನು ಹೇಳುವಂತಿತ್ತು. ಹಲವು ಬಾರಿ ಕಾರ್ತಿಕ್, ತಮ್ಮ ಸ್ನೇಹಿತರಾದ ಸಂಗೀತಾ ಮತ್ತು ತನಿಷಾ ಪರ ನಿಂತಿದ್ದಾರೆ. ಅವರೊಟ್ಟಿಗೆ ಸೇರಿ ಆಡಿದ್ದಾರೆ. ಮನೆಯ ಉಳಿದ ಸಮಯದಲ್ಲಿಯೂ ಅವರ ನೋವುಗಳಿಗೆ ಜೊತೆಯಾಗಿದ್ದಾರೆ. ಕಣ್ಣೀರು ಒರೆಸಿದ್ದಾರೆ. ಹಾಗೆಯೇ ತಮ್ಮ ನೋವು ನಲಿವುಗಳನ್ನೂ ಅವರೊಟ್ಟಿಗೆ ಹಂಚಿಕೊಂಡಿದ್ದಾರೆ.
ಆದರೆ, ಸಂಗೀತಾ ಜೊತೆಗಿನ ಈ ಸ್ನೇಹ ಒಂದು ಹಂತದ ನಂತರ ಸಡಿಲಗೊಳ್ಳುತ್ತಾ ಬಂದಿತು. ಸಂಗೀತಾ ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರಬರಲೆಂದು ವಿನಯ್ ಅವರಿದ್ದ ತಂಡದಲ್ಲಿ ಆಡಲು ನಿರ್ಧರಿಸಿದಾಗ ಆ ಸಂಬಂಧ ಇನ್ನಷ್ಟು ಸಡಿಲಾಗಿದ್ದು ನಿಜ. ಅಂಥ ಒಂದು ಸಂದರ್ಭದಲ್ಲಿ ಸಂಗೀತಾ ಎಸೆದ ಚಾಲೆಂಜ್ ಅನ್ನು ಸವಾಲಾಗಿ ಸ್ವೀಕರಿಸಿದ ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ತಮ್ಮ ತಲೆ ಬೋಳಿಸಿಕೊಂಡಿದ್ದರು. ನಂತರ ನಾಮಿನೇಷನ್‌ನಲ್ಲಿ, ಮನೆಯೊಳಗಿನ ಚಟುವಟಿಕೆಗಳ ಸಂದರ್ಭದಲ್ಲಿ ಸಂಗೀತಾ ಮತ್ತು ಕಾರ್ತಿಕ್ ನಡುವಿನ ಗ್ಯಾಪ್ ಹೆಚ್ಚುತ್ತಲೇ ಹೋಯಿತು. ಒಂದು ಹಂತದಲ್ಲಿ ಈ ಸ್ನೇಹವನ್ನು ಬೇರ್ಪಡಿಸುವುದು ಸಾಧ್ಯವೇ ಇಲ್ಲ ಎಂಬಂತೆ ಕಾಣಿಸುತ್ತಿದ್ದ ಈ ಜೋಡಿ, ಪರಸ್ಪರ ಕಿತ್ತಾಡಿ ಹೆಜ್ಜೆ ಹೆಜ್ಜೆಗೂ ಜಗಳವಾಡುವ ಎದುರಾಳಿಗಳಾಗಿ ಬದಲಾದರು.
ಗೊಂಬೆಯ ತಲೆಮೇಲಿನ ಮಡಕೆ ಒಡೆಯುವ ಸಂದರ್ಭದಲ್ಲಿ ಕಾರ್ತಿಕ್, ಸಂಗೀತಾ ಚಿತ್ರ ಇರುವ ಮಡಕೆಯನ್ನು ಪುಡಿಗಟ್ಟಿ, ''ಸಂಗೀತಾ ಅವರಲ್ಲಿ ನನ್ನನ್ನು ಕಳೆದರೆ ನಾನು ಝೀರೋ ಎಂಬುದು ಕೆಲವರ ವಾದ. ಅದು ಸುಳ್ಳೆಂದು ನಾನು ಪ್ರೂವ್ ಮಾಡಿ ತೋರಿಸುತ್ತೇನೆ'' ಎಂದು ಹೇಳಿದ್ದರು. ಆದರೆ ಅದಾದ ನಂತರ ಕಾರ್ತಿಕ್ ಅವರ ಗ್ರಾಫ್ ನಿಧಾನಕ್ಕೆ ಇಳಿಯುತ್ತಲೇ ಬಂತು. ತನಿಷಾ ಅವರನ್ನು ನಾಮಿನೇಟ್ ಮಾಡುವುದರ ಮೂಲಕ ಅವರ ಸ್ನೇಹದಲ್ಲಿಯೂ ಒಡಕು ಬಂದಿತು. ಅವರ ಮೆಚ್ಚಿನ ಅಕ್ಕ ಸಿರಿ ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಹೋದರು. ನಮ್ರತಾ ಜೊತೆಗಿನ ಅವರ ಸಂಬಂಧ ಬೇರೆಯದೇ ಆಯಾಮ ಪಡೆದುಕೊಳ್ಳುವ ಸೂಚನೆ ಸಿಕ್ಕಿತ್ತು. ಈ ಎಲ್ಲದರಿಂದ ಕಾರ್ತಿಕ್ ಮಾನಸಿಕವಾಗಿ ಕುಗ್ಗಿದ್ದು ಸುಳ್ಳಲ್ಲ. ಮನೆಯೊಳಗೆ ಒಬ್ಬಂಟಿಯಾದರು ಕೂಡ.
ವಿನಯ್ ಅವರಿಗೆ ಎದುರಾಳಿ: ಕಾರ್ತಿಕ್ ಅವರ ಬಿಗ್ ಬಾಸ್ ಜರ್ನಿಯಲ್ಲಿ ವಿನಯ್ ಗೌಡ ಅವರ ಪಾಲು ದೊಡ್ಡದಿದೆ. ಬಿಗ್ ಬಾಸ್ ಶೋಗಿಂತಲೂ ಮೊದಲಿನಿಂದ, ಅಂದರೆ ಕಳೆದ ಹತ್ತು ವರ್ಷಗಳಿಂದ ವಿನಯ್ ಮತ್ತು ಕಾರ್ತಿಕ್ ಸ್ನೇಹಿತರು. ಮೊದಲ ಬಾರಿಗೆ ಬಿಗ್ ಬಾಸ್ ಮನೆಯಲ್ಲಿ ಭೇಟಿಯಾದಾಗ ವಿನಯ್, 'ಫಿನಾಲೆ ದಿನ ಸುದೀಪ್ ಅವರ ಒಂದು ಕೈಯಲ್ಲಿ ನಿನ್ನ ಕೈ ಇದ್ದರೆ, ಇನ್ನೊಂದು ಕೈಯಲ್ಲಿ ನನ್ನ ಕೈ ಇರಬೇಕು' ಎಂದು ಕಾರ್ತಿಕ್ ಅವರ ಹೆಗಲು ತಟ್ಟಿದ್ದರು. ಹಾಗೆಂದು ಅವರು ಎಂದಿಗೂ ಹೆಗಲೆಣೆಯಾಗಿ ಆಡಿಲ್ಲ. ಸದಾ ಎದುರಾಳಿಗಳಾಗಿ ಒಬ್ಬರಿಗೊಬ್ಬರು ಕೌಂಟರ್ ಕೊಟ್ಟುಕೊಂಡೇ ಆಡಿದರು. ಅದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿದ್ದೂ ಇದೆ.
ಹಳ್ಳಿ ಟಾಸ್ಕ್ ಆಗುವಾಗ ವಿನಯ್ ಮತ್ತು ಕಾರ್ತಿಕ್ ನಡುವೆ ಜಗಳ ತಾರಕಕ್ಕೇರಿತ್ತು. ಸಂಗೀತಾ ಮತ್ತು ವಿನಯ್ ನಡುವಿನ ಜಗಳ ನಿಲ್ಲಿಸುವಲ್ಲಿಯೂ ಕಾರ್ತಿಕ್ ಮುಖ್ಯಪಾತ್ರ ವಹಿಸಿದ್ದರು. ನಂತರ ರಾಕ್ಷಸರು ಗಂಧರ್ವರು ಟಾಸ್ಕ್‌ನಲ್ಲಿ ಇದು ಇನ್ನೊಂದು ಹಂತಕ್ಕೆ ಹೋಗಿತ್ತು. ವಿನಯ್ ರಾಕ್ಷಸನಾದಾಗ, ಕಾರ್ತಿಕ್ ಮುಖಕ್ಕೆ ಹಿಟ್ಟು ಎರೆಚಿದ್ದು ಕಾರ್ತಿಕ್ ಸಹನೆಯನ್ನು ಕೆಣಕಿತ್ತು. ಅವರು ಕೋಪದಲ್ಲಿ ನೆಲಕ್ಕೆಸೆದ ಚಪ್ಪಲಿ ವಿನಯ್ ಮೇಲೆ ಹೋಗಿ ಬಿದ್ದಿತ್ತು. ಇದು ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿತ್ತು. ಇಷ್ಟೆಲ್ಲ ಆದರೂ ವಿನಯ್ ಜೊತೆಗಿನ ಕಾರ್ತಿಕ್ ಸ್ನೇಹಕ್ಕೆ ಕುಂದು ಬಂದಿಲ್ಲ. ಕೊನೆಯ ದಿನಗಳಲ್ಲಿ, ನಿಮ್ಮ ಜೊತೆಗೆ ಫಿನಾಲೆಯಲ್ಲಿ ಇರುವ ಇನ್ನೊಬ್ಬ ಸ್ಪರ್ಧಿ ಯಾರಾಗಿರಬೇಕು? ಎಂಬ ಬಿಗ್ ಬಾಸ್ ಪ್ರಶ್ನೆಗೆ ಕಾರ್ತಿಕ್ ಆರಿಸಿಕೊಂಡಿದ್ದು ವಿನಯ್ ಅವರ ಹೆಸರನ್ನೇ.
ಕಾರ್ತಿಕ್ ನಮ್ರತಾ ತಮಾಷೆಯ ಫ್ಲರ್ಟ್: ಕೆಲ ವಾರಗಳ ಹಿಂದೆ ಕಾರ್ತಿಕ್ ನಮ್ರತಾ ನಡುವೆ ತಮಾಷೆಯ ಮಾತುಕತೆಗಳು ನಡೆಯುತ್ತಿದ್ದವು. ಕಾರ್ತಿಕ್ - ನಮ್ರತಾ ಜೊತೆಗೆ ಡೇಟಿಂಗ್ ಹೋಗುವ ಟ್ರ್ಯಾಕ್ ಬಹಳ ವಾರಗಳಿಂದಲೂ ನಡೆಯುತ್ತಲೇ ಬಂದಿತ್ತು. ಹಲವು ಬಾರಿ ಕಾರ್ತಿಕ್ ತಮಾಷೆಗಾಗಿ, ನಮ್ರತಾ ಜೊತೆ ಫ್ಲರ್ಟ್ ಮಾಡುತ್ತಿರುವಂತೆಯೇ ನಡೆದುಕೊಳ್ಳುತ್ತಿದ್ದರು. ಅದನ್ನು ನಮ್ರತಾ ಕೂಡ ಅಷ್ಟೇ ಹೆಲ್ದಿಯಾಗಿ ತೆಗೆದುಕೊಂಡು ಪ್ರ್ಯಾಂಕ್ ಮಾಡುತ್ತಿದ್ದರು. ಕಾರ್ತೀಕ್ ಕೈ ಹಿಡಿದುಕೊಂಡಾಗ ನನಗೇನೋ ಕಂಫರ್ಟ್ ಫೀಲ್ ಆಗುತ್ತದೆ. ನನಗೆ ಎಂದೂ ಅವರ ಟಚ್ ಬ್ಯಾಡ್ ಎನಿಸಿಲ್ಲ ಎಂದು ನಮ್ರತಾ ಹಲವು ಬಾರಿ ಹೇಳಿದ್ದರು.
ಇದನ್ನೂ ಓದಿ: 'ಬಿಗ್ ಬಾಸ್ ಬದುಕಿನ ಪಾಠ ಕಲಿಸಿದೆ': ಸಂಗೀತಾ ಶೃಂಗೇರಿ ಅನುಭವದ ಮಾತು
ಆದರೆ ಈ ಎಲ್ಲದಕ್ಕೂ ತಿರುವು ಬಂದಿದ್ದು, ಈ ಸೀಸನ್‌ನ ಹಳೇ ಸ್ಪರ್ಧಿಗಳು ಮತ್ತೆ ಮನೆಯೊಳಗೆ ಬಂದಾಗ. ಒಂದೆಡೆ ಸ್ನೇಹಿತ್, ಮನೆಯೊಳಗೆ ಬಂದು ನಮ್ರತಾಳನ್ನು ನಿರ್ಲಕ್ಷಿಸಿದ್ದರು. ನಿಮ್ಮ ಕಾರ್ತಿಕ್ ನಡೆ ಹೊರಗಡೆ ಅಗ್ಲಿಯಾಗಿ ಕಾಣಿಸುತ್ತಿವೆ ಎಂದು ಪದೇ ಪದೆ ಹೇಳಿದ್ದರು. ಕಾರ್ತಿಕ್ಗೆ ಕೂಡ, ನಿಮ್ಮೊಳಗೊಬ್ಬ ಜಂಟಲ್‌ಮ್ಯಾನ್ ನೋಡಿದ್ದೀನಿ. ಹಾಗೇ ಇರಿ ಎಂದಿದ್ದರು. ಸಿರಿ, ಕಾರ್ತಿಕ್ ಅವರನ್ನು ಪಕ್ಕಕ್ಕೆ ಕರೆದು 'ನಮ್ರತಾ ಜೊತೆಗೆ ಹಾಗೆ ನಡೆದುಕೊಳ್ಳುವುದನ್ನು ಬಿಡು' ಎಂದು ಬುದ್ಧಿ ಹೇಳಿದ್ದರು. ಹೊರಗಿನಿಂದ ನಮ್ಮನ್ನು ನೋಡುವವರಿಗೆ ಇದು ಅಗ್ಲಿಯಾಗಿ ಕಾಣಿಸುತ್ತಿದೆಯೆನೋ ಎಂದು ಸ್ಪರ್ಧಿಗಳಿಗೆ ಅನಿಸಿತು. ಈ ವಿಚಾರ ಕಾರ್ತಿಕ್ - ನಮ್ರತಾರನ್ನು ಸಾಕಷ್ಟು ಕುಗ್ಗಿಸಿತು ಕೂಡ.
ಅಮ್ಮನ ನೋಡಿದ ಭಾವುಕ ಕ್ಷಣ: ಸದಾ ಸ್ಟ್ರಾಂಗ್ ಆಗಿಯೇ ಕಾಣಿಸುತ್ತಿದ್ದ ಕಾರ್ತಿಕ್, ಭಾವುಕನಾಗಿ ಕಣ್ಣೀರಿಟ್ಟಿದ್ದು ಅವರ ಅಮ್ಮ ಮನೆಯೊಳಗೆ ಕಾಲಿಟ್ಟಾಗ. 81ನೇ ದಿನ ಕಾರ್ತಿಕ್ ಅವರ ಅಮ್ಮ ಮನೆಯೊಳಗೆ ಬಂದಿದ್ದರು. ಆದರೆ ಆಗ ಬಿಗ್ ಬಾಸ್ ಇಡೀ ಮನೆಯವರಿಗೆ 'ಪಾಸ್' ಕೊಟ್ಟಿತ್ತು. ಅದರ ಪ್ರಕಾರ ಕಾರ್ತಿಕ್ ಕೂಡ ಅಲ್ಲಾಡುವಂತಿರಲಿಲ್ಲ. ಅಮ್ಮ ಬಂದು ಅವರ ಜೊತೆಗೆ ಮಾತಾಡಿಸುವಾಗ ಉತ್ತರಿಸಲಾಗದೇ, ಭಾವುಕತೆ ತಡೆದುಕೊಳ್ಳಲೂ ಆಗದೇ ಕಂಪಿಸುತ್ತಿದ್ದರು ಕಾರ್ತಿಕ್. ಕಣ್ಣೀರು ಸುರಿಸಿದ್ದರು. ಅಮ್ಮ, ಕಾರ್ತಿಕ್ ಅವರನ್ನು ತಬ್ಬಿಕೊಂಡು, ಮುತ್ತಿಟ್ಟು, ಅವರಿಗಾಗಿ ಬೋರ್ಡ್ ಮೇಲೆ ಮೆಸೇಜ್ ಬರೆದು ಮುಖ್ಯದ್ವಾರದಿಂದ ಹೊರಗೆ ಹೋದಾಗಲೂ ಕಾರ್ತಿಕ್ ನಿಶ್ಚಲವಾಗಿಯೇ ನಿಂತೇ ಇದ್ದರು. ಹೀಗೆ ಬಂದು ಹಾಗೆ ಮರೆಯಾಗಿ ಹೋದ ಅಮ್ಮನ ನೆನೆದು ಕಾರ್ತಿಕ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಗಟ್ಟಿ ವ್ಯಕ್ತಿತ್ವದ ಅವರೊಳಗಿನ ಮಗು ಮನಸ್ಸು ಅಂದು ಎಲ್ಲರ ಹೃದಯವನ್ನು ಕರಗಿಸಿತ್ತು. ಅದಾದ ಕೆಲ ಹೊತ್ತಿನ ನಂತರ ಕಾರ್ತಿಕ್ ಅವರ ಅಮ್ಮ ಮತ್ತೆ ಮನೆಯೊಳಗೆ ಬಂದು, ಮನೆಯ ಸದಸ್ಯರ ಜೊತೆಗೆಲ್ಲ ಸಂವಾದ ನಡೆಸಿ ಹೋದರು.
ಇದನ್ನೂ ಓದಿ: ''ಕಾರ್ತಿಕ್-ಸಂಗೀತಾ ನಟ ನಟಿ, ವಿನಯ್ ವಿಲನ್, ವರ್ತೂರ್ ನ್ಯಾಯ ಕೊಡಿಸುವವ'': ತುಕಾಲಿ ಸಂತೋಷ್
ಇಂಥ ಹತ್ತು ಹಲವು ಸನ್ನಿವೇಶಗಳು ಕಾರ್ತಿಕ್ ಅವರ ಬಿಗ್ ಬಾಸ್ ಜರ್ನಿಯಲ್ಲಿವೆ. ಅತ್ಯಂತ ಏರಿಳಿತದ ಹಾದಿಯಲ್ಲಿದ್ದ ಕಾರ್ತಿಕ್ ಕೊನೆಯ ದಿನಗಳಲ್ಲಿ ಕುಗ್ಗಿದ್ದರು. ಹಿಂದಿನ ಕಾರ್ತಿಕ್ ಇವರೇನಾ ಎನ್ನುವಷ್ಟು ತಣ್ಣಗಾಗಿದ್ದರು. ಕೊನೆಯ ದಿನಗಳಲ್ಲಿ ಮತ್ತೆ ಮೇಲೆದ್ದು ಬರಲು ಶತಪ್ರಯತ್ನ ನಡೆಸಿದರಾದರೂ ಪೂರ್ಣ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ. ಆದರೆ, ಬಿಗ್ ಬಾಸ್ ಕನ್ನಡದ ಈ ಸೀಸನ್ ಕಾರ್ತಿಕ್ ಮಹೇಶ್ ಅವರಿಲ್ಲದೇ ಇಷ್ಟು ಎಂಟರ್‌ಟೈನಿಂಗ್ ಆಗಿರುತ್ತಿರಲಿಲ್ಲ ಎಂಬುದಂತೂ ಸತ್ಯ.