ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್ ಎಂದೆನಿಸಿಕೊಂಡಿದ್ದ ಬಿಗ್ ಬಾಸ್ ತಾರಾ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ತಮ್ಮ ವೈವಾಹಿಕ ಜೀವನದಿಂದ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನ ಕೋರಿ ಇಬ್ಬರೂ ಜೂನ್ 6ರಂದು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಪರಸ್ಪರ ಒಪ್ಪಿಗೆಯ ಮೇರೆಗೆ ನ್ಯಾಯಾಲಯ ವಿಚ್ಛೇದನ ಆದೇಶ ಹೊರಡಿಸಿದೆ.
ವಿಚ್ಚೇದನ ಪಡೆದ ಬಳಿಕ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಕೈ ಹಿಡಿದುಕೊಂಡೇ ನ್ಯಾಯಾಲಯದಿಂದ ಹೊರಬಂದರು. ಬಳಿಕ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಹೀಗೆ ಅನಿಸಿಕೆ ಹಂಚಿಕೊಂಡಿದ್ದಾರೆ.
'ಈ ದಿನ, ಚಂದನ್ ಶೆಟ್ಟಿ ಮತ್ತು ನಾನು, ನಮ್ಮ ದಾಂಪತ್ಯ ಜೀವನವನ್ನು ಕಾನೂನುಬದ್ಧವಾಗಿ ಪರಸ್ಪರ ಒಪ್ಪಿಗೆಯಿಂದ ಕೊನೆಗೊಳಿಸಿದ್ದೇವೆ. ನಮ್ಮ ನಿರ್ಧಾರವನ್ನು ಮತ್ತು ನಮ್ಮ ಜೀವನದ ಖಾಸಗಿತನವನ್ನು ಗೌರವಿಸಲು ಕೋರುತ್ತೇವೆ. ಪ್ರತಿ ಸಂದರ್ಭದಲ್ಲೂ ನಮ್ಮೊಂದಿಗೆ ನಿಂತ ಮಾಧ್ಯಮ ಮಿತ್ರರು, ನಮ್ಮ ಸ್ನೇಹಿತರು ಮತ್ತು ಅಭಿಮಾನಿಗಳಿಂದ ನಾವು ಎಂದಿನಂತೆ ಬೆಂಬಲ ಕೋರುತ್ತೇವೆ. ನಾವು ನಮ್ಮ ಪ್ರತ್ಯೇಕ ಮಾರ್ಗ ಅನುಸರಿಸಿದರೂ, ಪರಸ್ಪರ ಒಬ್ಬರನೊಬ್ಬರು ಗೌರವಿಸುತ್ತೇವೆ. ಸೂಕ್ಷ್ಮ ಪರಿಗಣನೆಗಾಗಿ ಎಲ್ಲರಿಗೂ ಧನ್ಯವಾದಗಳು' ಎಂದು ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಚಂದನ್ ಶೆಟ್ಟಿ ಕೂಡಾ ಈ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ತಿಳಿಸಿದ್ದಾರೆ.
ಬಿಗ್ ಬಾಸ್ ಸೀಸನ್ 5ರ ಮನೆಯಲ್ಲಿ ಪರಿಚಯವಾಗಿದ್ದ ಈ ಜೋಡಿ ನಿಜ ಜೀವನದಲ್ಲಿ ಮದುವೆಯಾಗಲು ನಿರ್ಧರಿಸಿದ್ದರು. ಅದರಂತೆ, 2019ರಲ್ಲಿ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ್ದರು. 2020ರಲ್ಲಿ ಮದುವೆ ಆಗಿದ್ದರು. ಇದಾದ ಬಳಿಕ ಖಾಸಗಿ ವಾಹಿನಿ ರಿಯಾಲಿಟಿ ಶೋ 'ರಾಜ-ರಾಣಿ' ಸೇರಿದಂತೆ ಹಲವು ಶೋಗಳಲ್ಲಿ ಭಾಗಿಯಾಗಿದ್ದರು. ನಂತರ ಚಂದನ್ ಶೆಟ್ಟಿ ಮ್ಯೂಸಿಕ್ನಲ್ಲಿ ಬ್ಯುಸಿಯಾದರೆ, ನಿವೇದಿತಾ ಗೌಡ ರೀಲ್ಸ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪ್ರಖ್ಯಾತಿ ಹೊಂದಿದ್ದರು. ಇದೀಗ ಮದುವೆಯಾಗಿ ನಾಲ್ಕು ವರ್ಷಗಳ ನಂತರ ಇಬ್ಬರೂ ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದಾರೆ.