ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಕನ್ನಡ ಸೀಸನ್ 11'ರ ಐದನೇ ವಾರ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಹಾಗಾಗಿ ಪ್ರತಿದಿನದ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶ ಕಾಣುತ್ತಿವೆ. ಸ್ಪರ್ಧಿಗಳು ಕಣ್ಣೀರಿಡುವ ಕ್ಷಣಗಳು ಕಂಡುಬರುತ್ತಿದ್ದು, ನೋಡುಗರ ಮನ ಮರುಗಿದೆ. ಇದೀಗ ಐಶ್ವರ್ಯಾ ಅವರ ಸರದಿ.
ದೀಪಾವಳಿ ಹಬ್ಬದ ಪ್ರಯುಕ್ತ ಈ ವಾರ ಬಿಗ್ ಬಾಸ್ ಸ್ಪರ್ಧಿಗಳಿಗೆ ಸರ್ಪೈಸ್ ಮೇಲೆ ಸರ್ಪೈಸ್ ನೀಡುತ್ತಿದ್ದಾರೆ. ತಿಂಡಿ ತಿನಿಸು, ವಾರಾಂತ್ಯಕ್ಕೆ ಹಾಕಲು ಉಡುಗೆ ಜೊತೆಗೆ ಮನೆಯಿಂದ ಬಂದ ಪತ್ರಗಳನ್ನು ಸಹ ನೀಡುತ್ತಿದೆ. ಕುಟುಂಬಸ್ಥರ ಪತ್ರ ಅಷ್ಟು ಸುಲಭಕ್ಕೆ ಸಿಗುತ್ತಿಲ್ಲ. ಶ್ರಮ ಪಡಬೇಕಿದೆ. ಇಲ್ಲಿ ಭಾವನೆಗಳನ್ನು ವ್ಯಕ್ತಪಡಿಸದಿರುವುದೇ ಟಾಸ್ಕ್. ಗೆದ್ದವರಿಗೆ ಮನೆಯವರ ಪತ್ರ ಸಿಗುತ್ತದೆ.
ಅದರಂತೆ, ಸ್ಪರ್ಧಿಗಳು ಒಬ್ಬರಾದ ಬಳಿಕ ಒಬ್ಬರಂತೆ ಗೆದ್ದು ತಮ್ಮ ಕುಟುಂಬದಿಂದ ಬಂದ ಪತ್ರಗಳನ್ನು ಪಡೆಯುತ್ತಿದ್ದಾರೆ. ಆದ್ರೆ ಐಶ್ವರ್ಯಾ ಅವರಿಗೆ ಪತ್ರ ಬರೆಯೋರೇ ಇಲ್ಲ. ಇದು ಮನೆಯ ಇತರೆ ಸ್ಪರ್ಧಿಗಳ ಜೊತೆಗೆ, ವೀಕ್ಷಕರಿಗೂ ಬೇಸರ ತಂದಿದೆ. ''ಫ್ಯಾಮಿಲಿಯ ಪತ್ರವನ್ನು ಎಲ್ಲರೂ ಓದುತ್ತಿದ್ದಾಗ. ಫ್ಯಾಮಿಲಿನೇ ಇಲ್ಲದ ಐರ್ಶ್ವರ್ಯಾಗೆ ಬಿಗ್‍ಬಾಸ್‍ನ ಲೆಟರ್''. ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಶೀರ್ಷಿಕೆಯಡಿ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಕುತೂಹಲ ವ್ಯಕ್ತಪಡಿಸಿದ್ದಾರೆ.
ಐಶ್ವರ್ಯಾ ಅವರಿಗೆ ಯಾವುದೇ ಸಂದೇಶ ಬಂದಿಲ್ಲ ಎಂಬುದನ್ನು ಶಿಶಿರ್ ಅವರು ಎಲ್ಲರ ಸಮ್ಮುಖದಲ್ಲಿ ತಿಳಿಸುತ್ತಾರೆ. ಇತರರ ಭಾವನಾತ್ಮಕ ಕ್ಷಣಗಳನ್ನು ಕಂಡು ಭಾವುಕರಾಗಿದ್ದ ಐಶ್ವರ್ಯಾ ಮತ್ತಷ್ಟು ಕುಸಿಯುತ್ತಾರೆ. ಕಣ್ಣೀರಿಟ್ಟ ಅವರನ್ನು ಮನೆಮಂದಿ ಸಮಾಧಾನಪಡಿಸಲು ಪ್ರಯತ್ನಿಸುತ್ತಾರೆ. ಮೂರ್ನಾಲ್ಕು ಸಾಲುಗಳಾರದೂ ಬರಬಾರದೇ ಎಂದುಕೊಳ್ಳುತ್ತಾರೆ. ಆಗ ಒಂದು ಪತ್ರ ಬರುತ್ತದೆ. ಆದ್ರದು ಖಾಲಿ ಪತ್ರವಾಗಿರುತ್ತದೆ. ಕಣ್ಣೀರು ಮುಂದುವರಿಯುತ್ತದೆ.
ಇದನ್ನೂ ಓದಿ: ತಂದೆ ತಾಯಿಯಾಗುತ್ತಿರುವ ಖುಷಿಯಲ್ಲಿ ವಸಿಷ್ಠ ಸಿಂಹ - ಹರಿಪ್ರಿಯಾ: ಬೇಬಿಬಂಪ್ ಫೋಟೋ ಶೇರ್
ಆ ಸಂದರ್ಭದಲ್ಲಿ ಸ್ವತಃ ಬಿಗ್ ಬಾಸ್ ಮಾತನಾಡಿ, ''ಪ್ರೀತಿಯ ಐಶ್ವರ್ಯಾ, ನನ್ನದೊಂದು ಪತ್ರ. ನನ್ನ ಮನೆಗೆ ಆಗಮಿಸಿದ ಕ್ಷಣದಿಂದ ನೀವು ನನ್ನ ಕುಟುಂಬದವರಾಗಿದ್ದೀರಿ. ನಾನಿರುವೆ ನಿಮ್ಮೊಂದಿಗೆ. ಈ ಮನೆಯ ಸದಸ್ಯರಿದ್ದಾರೆ ನಿಮ್ಮೊಂದಿಗೆ. ಇಂತಿ ನಿಮ್ಮ ಬಿಗ್ ಬಾಸ್'' ಎಂದು ತಿಳಿಸಿದ್ದಾರೆ. ಇಡೀ ಮನೆಯೇ ಭಾವುಕವಾದ ಕ್ಷಣವಿದು. ಪರಸ್ಪರರ ನೋವಿಗೆ ಸ್ಪಂದಿಸಿ ಮಾನವೀಯತೆ ಮೆರೆದಂತೆ, ಇತರರ ನೋವಿಗೆ ಸ್ಪಂದಿಸಿ ಹೆಗಲು ಕೊಟ್ಟಂತೆ ತೋರುತ್ತಿದೆ. ಸಂಪೂರ್ಣ ಸಂಚಿಕೆ ಇಂದು ರಾತ್ರಿ 9:30ಕ್ಕೆ ಪ್ರಸಾರ ಆಗಲಿದೆ.
ಇದನ್ನೂ ಓದಿ: ಧನರಾಜ್ಗೆ ಇದೆಂಥಾ ಸಂಕಟ: ಇತರರಿಗೆ ಕಾಗದ ಸಂದೇಶವಾದ್ರೆ, ಮೋಕ್ಷಿತಾಗೆ ವಿಡಿಯೋ ಮೆಸೇಜ್; ಬಿಗ್ ಬಾಸ್ನಲ್ಲಿ ಕಣ್ಣೀರಧಾರೆ
ಪ್ರೋಮೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದಾರೆ. ''ಎಷ್ಟು ಚೆಂದ ಐಶ್ವರ್ಯ, ನಿಮ್ಮ ಜೊತೆ ಅಪ್ಪ ಅಮ್ಮ ಇಲ್ಲದಿರಬಹುದು, ಆದರೆ ಇಡೀ ಕರ್ನಾಟಕ ನಿಮ್ಮನ್ನು ಮಗಳ ರೀತಿ ನೋಡುತ್ತಿದೆ, ಒಳ್ಳೆಯದಾಗಲಿ'' ಎಂದು ಬರೆದುಕೊಂಡಿದ್ದಾರೆ. ''ಯಾರೂ ಇಲ್ಲದವರ ಹಿಂದೆ ಎಂದೆಂದಿಗೂ ದೇವರು ಇರುತ್ತಾನೆ'' ಎಂದು ಮತ್ತೋರ್ವರು ತಿಳಿಸಿದ್ದಾರೆ. ಒಟ್ಟಾರೆ, ಐಶ್ವರ್ಯಾ ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.