ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್ಕುಮಾರ್ ತಮ್ಮ 61ನೇ ವಯಸ್ಸಿನಲ್ಲೂ ಚಿತ್ರರಂಗದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ಯುವ ನಟರೂ ನಾಚುವಂತೆ ಬ್ಯಾಕ್ ಟು ಬ್ಯಾಕ್ ಸಿನಿಮಾ ಮೂಲಕ ಅಭಿಮಾನಿಗಳನ್ನು ರಂಜಿಸೋ ಕೆಲಸ ಮುಂದುವರಿಸಿದ್ದಾರೆ. ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಜೊತೆಗಿನ 'ಕರಟಕ ದಮನಕ' ಸದ್ದು ಮಾಡುತ್ತಿರೋ ಈ ಹೊತ್ತಿನಲ್ಲಿ, ಹ್ಯಾಟ್ರಿಕ್ ಹೀರೋ ಶಿವಣ್ಣನ ಮತ್ತೊಂದು ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ.
'ಭೈರತಿ ರಣಗಲ್', ಶಿವ ರಾಜ್ಕುಮಾರ್ ನಟನೆಯ ಬಹನಿರೀಕ್ಷಿತ ಚಿತ್ರಗಳಲ್ಲೊಂದು. ಈ ಚಿತ್ರದ ಬಗ್ಗೆ ಚಿತ್ರತಂಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ. ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡೋ ಮೂಲಕ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದೆ. ಸಿನಿಮಾ ಸ್ವಾತಂತ್ರ್ಯ ದಿನಾಚರಣೆ ಸಂದರ್ಭ ತೆರೆಗಪ್ಪಳಿಸಲಿದೆ. 2024ರ ಆಗಸ್ಟ್ 15ಕ್ಕೆ ಚಿತ್ರ ತೆರೆಕಾಣಲಿದೆ ಎಂದು ಶಿವರಾಜ್ಕುಮಾರ್ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಿಳಿಸಿದ್ದಾರೆ. ಚಿತ್ರತಂಡ ಸಹ ಇದೇ ಪೋಸ್ಟ್ ಶೇರ್ ಮಾಡಿ ಅಧಿಕೃತ ಘೋಷಣೆ ಮಾಡಿದೆ. ಶಿವಣ್ಣನ ರಗಡ್ ಅವತಾರ ಕಣ್ತುಂಬಿಕೊಳ್ಳಲು ಸಿನಿಪ್ರಿಯರು ಕಾತರರಾಗಿದ್ದಾರೆ.
'ಮಫ್ತಿ' ಖ್ಯಾತಿಯ ನರ್ತನ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರವನ್ನು ಗೀತಾ ಶಿವ ರಾಜ್ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದು ಮಫ್ತಿ ಚಿತ್ರದ ಪ್ರೀಕ್ವೆಲ್ ಆಗಿರುವುದರಿಂದ, ಸಿನಿಮಾ ಸುತ್ತ ಸಾಕಷ್ಟು ನಿರೀಕ್ಷೆಗಳಿವೆ. ಅಲ್ಲದೇ ಶಿವ ರಾಜ್ಕುಮಾರ್ ಸಿನಿಮಾ ಅಂದ್ರೆ ಸುಮ್ನೇನಾ? ನಿರೀಕ್ಷೆ, ಕುತೂಹಲ, ಉತ್ಸಾಹ ಎಲ್ಲವೂ ಎರಡು ಪಟ್ಟು ಹೆಚ್ಚೇ ಇರುತ್ತದೆ. ಈ ಹಾದಿಯಲ್ಲಿ 'ಭೈರತಿ ರಣಗಲ್' ಸಖತ್ ಸದ್ದು ಮಾಡುತ್ತಿದೆ.
ಇದನ್ನೂ ಓದಿ: ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾಗೆ 'ವಿಶ್ವ ಸುಂದರಿ' ಕಿರೀಟ, ಕನ್ನಡತಿ ಸಿನಿ ಶೆಟ್ಟಿಗೆ ನಿರಾಸೆ
ಆಗಸ್ಟ್ 15 ಸ್ವಾತಂತ್ರ್ಯ ದಿನ. ಸರ್ಕಾರಿ ರಜೆಯನ್ನು ಸದುಪಯೋಗಪಡಿಸಿಕೊಳ್ಳುವ ಯೋಚನೆಯಲ್ಲಿ ಚಿತ್ರತಂಡವಿದೆ. ಭಾರತೀಯ ಚಿತ್ರರಂಗದ ಕೆಲ ಬಹುನಿರೀಕ್ಷಿತ ಸಿನಿಮಾಗಳು ಕೂಡ ಆಗಸ್ಟ್ನಲ್ಲೇ ತೆರೆಕಾಣಲು ಸಜ್ಜಾಗಿವೆ. ಈ ಸಾಲಿನಲ್ಲಿ ಪುಷ್ಪ 2 ಮತ್ತು ಸಿಂಗಮ್ ಎಗೈನ್ ಕೂಡಾ ಇದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಮತ್ತು ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ: ದಿ ರೂಲ್' ಕೂಡ ಆಗಸ್ಟ್ 15ಕ್ಕೆ ತೆರೆಗಪ್ಪಳಿಸಲಿದೆ. ಅಜಯ್ ದೇವ್ಗನ್, ಅಕ್ಷಯ್ ಕುಮಾರ್, ರಣ್ವೀರ್ ಸಿಂಗ್, ಕರೀನಾ ಕಪೂರ್ ಖಾನ್, ದೀಪಿಕಾ ಪಡುಕೋಣೆ ಸೇರಿದಂತೆ ಸೂಪರ್ ಸ್ಟಾರ್ಸ್ ನಟನೆಯ ಸಿಂಗಮ್ ಎಗೈನ್ ಕೂಡಾ ಆಗಸ್ಟ್ 15ರಂದೇ ಚಿತ್ರಮಂದಿರ ಪ್ರವೇಶಿಸಲಿದೆ.
ಇದನ್ನೂ ಓದಿ: ಆಸ್ಕರ್ ಪ್ರಶಸ್ತಿ ಸಮಾರಂಭ: ಲೈವ್ ವೀಕ್ಷಣೆಯ ಸಮಯ ಯಾವುದು?