ಬಿಗ್‌ಬಾಸ್ ಕನ್ನಡ ಸೀಸನ್ 10ರ ನೂರ ಹದಿನಾರು ದಿನಗಳ ಪ್ರಯಾಣ ಅನೇಕ ರೋಮಾಂಚಕ, ಕುತೂಹಲದ ಸಿಹಿ, ಕಹಿ ಗಳಿಗೆಗಳಿಗೆ ಸಾಕ್ಷಿಯಾಯಿತು. ಅಂಥವುಗಳಲ್ಲಿ ಕೆಲವನ್ನು ಇಲ್ಲಿ ಕಟ್ಟಿಕೊಡಲಾಗಿದೆ.
ಪ್ರತಿ ಶುಕ್ರವಾರದ ‘ಫನ್ ಫ್ರೈಡೆ’ ಸ್ಪರ್ಧಿಗಳಿಗೆ ತುಂಬ ಖುಷಿಕೊಡುತ್ತಿದ್ದ ಸಮಯ. ಮನೆಯಿಂದ ಹೊರಬಿದ್ದ ಸ್ಪರ್ಧಿಗಳೆಲ್ಲರೂ ಇದನ್ನು ಮೆಚ್ಚಿಕೊಂಡು ಮಾತಾಡಿದ್ದಾರೆ. ವಾರವಿಡೀ ಬಗೆಬಗೆಯ ಟಾಸ್ಕ್‌ಗಳಲ್ಲಿ ಜಿದ್ದಿಗೆ ಬಿದ್ದು ಆಡುತ್ತಿದ್ದ ಸ್ಪರ್ಧಿಗಳಿಗೆ ವಾರಾಂತ್ಯಕ್ಕೂ ಮುನ್ನ ರಿಲ್ಯಾಕ್ಸ್ ಭಾವ ಮೂಡುತ್ತಿದ್ದುದು ಫನ್ ಫ್ರೈಡೆಯಲ್ಲಿ. ಕಥೆ ಹೇಳುವ ಟಾಸ್ಕ್ ಇರಲಿ, ಲಗೋರಿ ಆಟವಿರಲಿ, ಮ್ಯೂಸಿಕಲ್ ಪಾಟ್ ಇರಲಿ, ಹಿಟ್ಟು ಪಾಸ್ ಮಾಡುವ ಮೋಜಿನ ಟಾಸ್ಕ್ ಇರಲಿ ಎಲ್ಲವೂ ಸ್ಪರ್ಧಿಗಳಿಗೂ ಉಲ್ಲಾಸ ನೀಡುತ್ತಿತ್ತು.
ಟಿಕೆಟ್ ಟು ಫಿನಾಲೆ: ಫಿನಾಲೆ ವಾರಕ್ಕೆ ನೇರ ಪ್ರವೇಶ ಪಡೆಯಲು ಬಿಗ್‌ಬಾಸ್ ಮನೆ ಸದಸ್ಯರಿಗೆ ಒಂದು ಅವಕಾಶ ನೀಡಿತ್ತು. ಈ ವಾರದಲ್ಲಿ ಹಲವು ಬಗೆಯ ಟಾಸ್ಕ್‌ಗಳನ್ನು ನೀಡಿ ಅವುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಲ್ಲಿ ಒಬ್ಬರು ನೇರ ಟಿಕೆಟ್ ಟು ಫಿನಾಲೆ ಪ್ರವೇಶ ಪಡೆಯುತ್ತಾರೆ ಎಂದು ಹೇಳಿದ್ದರು. ಈ ವಾರದಲ್ಲಿ ಪ್ರತಾಪ್ ಹಲವು ಟಾಸ್ಕ್‌ಗಳಲ್ಲಿ ಚೆನ್ನಾಗಿ ಆಡಿ ಗೆದ್ದು 420 ಅಂಕಗಳನ್ನು ಗಳಿಸಿದ್ದರು. 360 ಅಂಕಗಳನ್ನು ಗಳಿಸಿದ ಸಂಗೀತಾ ಎರಡನೇ ಸ್ಥಾನದಲ್ಲಿದ್ದರು. ನಮ್ರತಾ ಮೂರನೇ ಸ್ಥಾನದಲ್ಲಿದ್ದರು. ಬಿಗ್‌ಬಾಸ್ ಅತಿ ಹೆಚ್ಚು ಅಂಕ ಗಳಿಸಿದ ಮೂರು ಸ್ಪರ್ಧಿಗಳಲ್ಲಿ ಯಾರು ಟಿಕೆಟ್ ಟು ಫಿನಾಲೆಗೆ ಪ್ರವೇಶ ಪಡೆಯಲು ಹೆಚ್ಚು ಅರ್ಹರು ಎಂಬುದನ್ನು ಮನೆ ಸದಸ್ಯರು ಬಹುಮತದ ಆಧಾರದಲ್ಲಿ ನಿರ್ಧರಿಸಬೇಕಾಗಿತ್ತು. ಇದರಲ್ಲಿ ಮೂರು ಮತಗಳನ್ನು ಪಡೆದು ಸಂಗೀತಾ ಶೃಂಗೇರಿ ನೇರವಾಗಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದರು. ಅನಿರೀಕ್ಷಿತವಾಗಿ ತಮಗೆ ಒದಗಿಬಂದ ಈ ಅವಕಾಶವನ್ನು ಸಂಗೀತಾ ಸಂಭ್ರಮಿಸಿದ್ದೊಂದು ಅವಿಸ್ಮರಣೀಯ ಗಳಿಗೆಯಾಗಿತ್ತು.
ಕುಟುಂಬ ಸದಸ್ಯರ ಆಗಮನ: ಈ ಸೀಸನ್ ಅತಿ ಭಾವುಕ ವಾರ ಎಂದರೆ ಸ್ಪರ್ಧಿಗಳ ಕುಟುಂಬದವರು ಮನೆಯೊಳಗೆ ಬಂದಿದ್ದು. ಬಿಗ್‌ಬಾಸ್ ಮನೆಯವರಿಗೆ ಇಡೀ ವಾರ ಪಾಸ್-ಪ್ಲೇ ಟಾಸ್ಕ್ ಕೊಡುತ್ತಿದ್ದರು. ಪಾಸ್ ಎಂದಾಗ ಎಲ್ಲ ಸದಸ್ಯರೂ ನಿಶ್ಚಲವಾಗಬೇಕಾಗಿತ್ತು. ಹಾಗೆಯೇ ಪ್ಲೇ ಎಂದಾಗ ಚಲಿಸಬಹುದಿತ್ತು. ಒಬ್ಬೊಬ್ಬ ಮನೆಯ ಸದಸ್ಯ ಮನೆಯೊಳಗೆ ಬಂದಾಗಲೂ ಅವರ ಉತ್ಸಾಹ ಉಕ್ಕೇರುತ್ತಿತ್ತು. ಆದರೆ ಅಷ್ಟರೊಳಗೆ ಬಿಗ್‌ಬಾಸ್ ಅವರಿಗೆ ಪಾಸ್ ಹೇಳಿಬಿಟ್ಟಿರುತ್ತಿದ್ದರು. ಆಗ ತಮ್ಮ ಮನೆಯ ಸದಸ್ಯರು ಬಂದಿದ್ದರೂ ಅವರ ಮಾತಿಗೆ ಪ್ರತಿಕ್ರಿಯಿಸದೆ ನಿಶ್ಚಲರಾಗಿ ನಿಂತಿರಬೇಕಿತ್ತು. ಈ ನಿಲ್ಲು, ಚಲಿಸುವ ಆಟ ವಾರವಿಡೀ ಮುಂದುವರಿದು ಭರಪೂರ ಮನರಂಜನೆ ಒದಗಿಸಿತು.
ಬಿಗ್‌ಬಾಸ್ ಪ್ರಾಥಮಿಕ ಶಾಲೆ: ರಕ್ಕಸರು-ಗಂಧರ್ವರ ಟಾಸ್ಕ್ ಇರುವ ವಾರದಲ್ಲಿ ಮನೆಯಲ್ಲಿ ಉಂಟಾಗಿದ್ದ ತಾಪ ಕಡಿಮೆ ಮಾಡುವಂತೆ ಮುಂದಿನ ವಾರ ಬಿಗ್‌ಬಾಸ್ ಮನೆಯಲ್ಲಿ ಪ್ರಾಥಮಿಕ ಶಾಲೆ ತೆರೆಯಲಾಗಿತ್ತು. ಬಿಗ್‌ಬಾಸ್ ಮನೆಯ ಸದಸ್ಯರಲ್ಲಿ ಕೆಲವರು ವಿದ್ಯಾರ್ಥಿಗಳಾಗಿದ್ದರೆ, ಇನ್ನು ಕೆಲವರು ಶಿಕ್ಷಕರಾಗಿದ್ದರು. ವ್ಯಕ್ತಿತ್ವ ವಿಕಸನ, ಇತಿಹಾಸ, ಕನ್ನಡ, ಗಣಿತ, ಪಿಟಿ ತರಗತಿಗಳು ನಡೆದವು. ತುಂಟ ವಿದ್ಯಾರ್ಥಿಗಳ ಕಾಟದಲ್ಲಿ ಶಿಕ್ಷಕರು ಬಸವಳಿದರು. ಸಿಟ್ಟಿಗೆದ್ದು ಶಿಕ್ಷಿಸಿದರು. ಜೊತೆ ಸೇರಿ ಡಾನ್ಸ್ ಮಾಡಿದರು. ತಮ್ಮ ನೆಚ್ಚಿನ ವಿದ್ಯಾರ್ಥಿಗಳಿಗೆ ಸ್ಟಾರ್ ನೀಡಿದರು. ವಿದ್ಯಾರ್ಥಿಗಳು ತಾವು ಇಷ್ಟಪಡದ ಶಿಕ್ಷಕರ ವಿರುದ್ಧ ದೂರು ನೀಡಿದರು. ಈ ಟಾಸ್ಕ್ ಬಿಗ್‌ಬಾಸ್ ಮನೆಯೊಳಗಿನ ಸದಸ್ಯರು ಒಂದು ವಾರದ ಮಟ್ಟಿಗೆ ತಮ್ಮೊಳಗೆ ಅಡಗಿದ್ದ ಮಗು ಮನಸ್ಸನ್ನು ಅನಾವರಣಗೊಳಿಸಿತು.
ರಕ್ಕಸರು vs ಗಂಧರ್ವರು: ಈ ಸಲದ ಬಿಗ್‌ಬಾಸ್ ಕನ್ನಡ ಮನೆ ಅತಿ ಹೆಚ್ಚು ಹೀಟ್ ಅನುಭವಿಸಿದ್ದು ರಕ್ಕಸರು-ಗಂಧರ್ವರ ಟಾಸ್ಕ್‌ನಲ್ಲಿ. ಟಾಸ್ಕ್ ಎಂಬುದು ಎದುರಾಳಿಗಳನ್ನು ಕೆರಳಿಸುವ ಅವಕಾಶವಾಗಿ ಬದಲಾಗಿ, ಅದಕ್ಕೆ ಸೇಡು ತೀರಿಸಿಕೊಳ್ಳಲು ಮತ್ತೊಂದು ತಂಡ ಪ್ರಯತ್ನಿಸುವತ್ತ ಹೋಗಿ, ಅದು ಅತಿರೇಕಕ್ಕೆ ತಿರುಗಿ ಸಂಗೀತಾ ಮತ್ತು ಪ್ರತಾಪ್ ಅವರ ಕಣ್ಣಿಗೆ ಗಾಯವಾಗಿ ಆಸ್ಪತ್ರೆ ಸೇರುವಂತಾಗಿಯಿತು. ಇದೇ ವಾರದಲ್ಲಿ ವಿನಯ್ ಮತ್ತು ಕಾರ್ತಿಕ್ ನಡುವೆ ಗಲಾಟೆಯಾಗಿ, ಕಾರ್ತಿಕ್ ನೆಲಕ್ಕೆಸೆದ ಚಪ್ಪಲಿ ಸಿಡಿದು ವಿನಯ್‌ಗೆ ತಗುಲಿತ್ತು. ಇದೇ ವಾರದಲ್ಲಿ ಹಲವು ಅಟ್ಟಹಾಸ, ಇನ್ನು ಕೆಲವರಿಗೆ ಪ್ರಾಣಸಂಕಟವಾಯಿತು.
ಡ್ರೋನ್ ಪ್ರತಾಪ್ ತಂತ್ರಗಾರಿಕೆ: ಡ್ರೋನ್ ಪ್ರತಾಪ್ ಅವರ ತಂತ್ರಗಾರಿಕೆ ಹಲವು ಬಾರಿ ಮನೆಯೊಳಗೆ ಯಶಸ್ವಿಯಾಗಿ ಪ್ರಯೋಗ ಕಂಡಿದೆ. ಅವರು ನಾಯಕರಾದಾಗ, ನಮ್ರತಾ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗುವ ಹಂತದಲ್ಲಿ ವಿಶೇಷವಾಗಿ ಪ್ರತಾಪ್ ತಂತ್ರಗಾರಿಕೆ ಗಮನಸೆಳೆದಿತ್ತು. ಹಾಗೆಯೇ ಟಿಕೆಟ್ ಟು ಫಿನಾಲೆ ಟಾಸ್ಕ್‌ಗಳಲ್ಲಯೂ ಕೂಡ ಪ್ರತಾಪ್ ತಮ್ಮ ತಂತ್ರದಿಂದಲೇ ಅತಿ ಹೆಚ್ಚು ಅಂಕ ಗಳಿಸಿದ್ದರು.
ಸಂಗೀತಾ-ವಿನಯ್ ಹಣಾಹಣಿ: ಬಿಗ್‌ಬಾಸ್ ಮನೆಯೊಳಗೆ ಆರಂಭದಿಂದಲೂ ಮಾತಿನ ಚಕಮಕಿ ನಡೆದಿತ್ತು. ಅದು ಹಲವು ಸಲ ಅತಿರೇಕಕ್ಕೂ ಹೋಗಿತ್ತು. ಹಳ್ಳಿ ಟಾಸ್ಕ್‌ನಲ್ಲಂತೂ ಸಂಗೀತಾ ವಿನಯ್ ಮುಖಾಮುಖಿ ಜೋರಾಗಿಯೇ ನಡೆದಿತ್ತು. ಮಾತಿಗೆ ಮಾತು, ಜಗಳಕ್ಕೆ ಜಗಳ ಇಡೀ ಮನೆಯನ್ನು ಪ್ರಕ್ಷುಬ್ದತೆಗೆ ದೂಡಿತ್ತು. ಅದನ್ನು ಹೊರತುಪಡಿಸಿಯೂ ಎಲಿಮಿನೇಷನ್ ಸಂದರ್ಭದಲ್ಲಿ ಗೇಮ್‌ಗಳ ಸಂದರ್ಭದಲ್ಲಿ ವಿನಯ್ ಮತ್ತು ಸಂಗೀತ ನಡುವೆ ಜಗಳ ನಡೆಯುತ್ತಲೇ ಇತ್ತು.
ನಮ್ರತಾ ಕಮ್‌ಬ್ಯಾಕ್: ಆರಂಭದ ದಿನಗಳಲ್ಲಿ ವಿನಯ್ ಗುಂಪಿನಲ್ಲಿ ಸೇರಿಕೊಂಡು ತಮ್ಮ ಸ್ವಂತ ಅಸ್ತಿತ್ವವನ್ನೇ ಕಾಣಿಸಲಾಗದೆ ಒದ್ದಾಡುತ್ತಿದ್ದ ನಮ್ರತಾ ನಂತರದ ದಿನಗಳಲ್ಲಿ ಅದರಲ್ಲಿಯೂ ಮನೆಯಿಂದ ಹೊರಗೆ ಬರುವ ಹಿಂದಿನ ಕೆಲವು ವಾರಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದರು. ಅವರು ಸದಾಕಾಲ ದ್ವೇಷಿಸುತ್ತಿದ್ದ ಸಂಗೀತಾ ಜೊತೆಗೆ ಸ್ನೇಹ ಬೆಳೆಸಿಕೊಂಡು ಆಪ್ತರಾದರು. ಆಗ ನಮ್ರತಾ ಅವರ ಸ್ವಂತ ವ್ಯಕ್ತಿತ್ವ, ಶಕ್ತಿ ಎಲ್ಲವೂ ಕಾಣಿಸಿಕೊಂಡಿದ್ದು ಆ ವಾರಗಳಲ್ಲಿಯೇ.
ಡ್ರೋನ್ ಪ್ರತಾಪ್‌ಗೆ ತುಕಾಲಿ ಸಂತೋಷ್ ಪ್ರೋತ್ಸಾಹ: ತುಕಾಲಿ ಸಂತೋಷ್ ಬಿಗ್‌ಬಾಸ್ ಮನೆಯಲ್ಲಿ ಅತಿಹೆಚ್ಚು ಎಂಟರ್ಟೈನ್ಮೆಂಟ್ ನೀಡಿದ ಸದಸ್ಯ. ಪ್ರತಾಪ್ ಅವರಿಗೆ ಒಂದು ಕಾಲಕ್ಕೆ ಅವರ ಹಾಸ್ಯ ನೋವನ್ನುಂಟು ಮಾಡಿತ್ತು. ನಂತರದ ದಿನಗಳಲ್ಲಿ ತುಕಾಲಿ ಅವರೇ ಪ್ರತಾಪ್ ಬೆಂಬಲ ನೀಡಿದ್ದರು
ಹಬ್ಬದ ಸಂಭ್ರಮ: ಸಂಕ್ರಾಂತಿಯ ಸಂದರ್ಭದಲ್ಲಿ ಮನೆ ಹಬ್ಬದ ಸಂಭ್ರಮದಲ್ಲಿ ಮುಳುಗಿತ್ತು. ವಾರಾಂತ್ಯದಲ್ಲಿ ಎಲಿಮಿನೇಷನ್ ಸಂದರ್ಭದಲ್ಲಿ ವರ್ತೂರು ಮತ್ತು ತುಕಾಲಿ ಸಂತೋಷ್ ಅವರು ಎಲಿಮಿನೇಷನ್ ಸೀಟ್‌ನಲ್ಲಿ ಕೂತಿದ್ದರು. ಆ ಸಂದರ್ಭ ಅವರ ನಡುವಿನ ಸ್ನೇಹಸಂಬಂಧವನ್ನೂ ಕರ್ನಾಟಕಕ್ಕೆ ಪರಿಚಯಿಸಿತ್ತು. ಕೊನೆಗೆ ಸುದೀಪ್, ಆ ವಾರದ ಎಲಿಮಿನೇಷನ್ ಅನ್ನು ಹೋಲ್ಡ್‌ನಲ್ಲಿ ಇರಿಸಿ ವರ್ತೂರು ಮತ್ತು ತುಕಾಲಿ ಸಂತೋಷ್ ಇಬ್ಬರನ್ನೂ ಮನೆಯೊಳಗೆ ಉಳಿಸಿದ್ದರು. ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ತುನಿಷಾ ಮನೆಯಿಂದ ಹೊರಗೆ ಬಂದಿದ್ದರು.
ಇದನ್ನೂ ಓದಿ: ವರ್ತೂರ್ ಜೈಲುವಾಸ ಪ್ರಸ್ತಾಪಿಸಿದ ಸುದೀಪ್; ಭಾವುಕರಾದ ಡ್ರೋಣ್ ಪ್ರತಾಪ್ ಪೋಷಕರು