ಫಸ್ಟ್ ರ್ಯಾಂಕ್ ರಾಜು ಹಾಗೂ ರಾಜು ಕನ್ನಡ ಮೀಡಿಯಂ ಸಿನಿಮಾಗಳ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಐಡೆಂಟಿಟಿ ಹೊಂದಿರುವ ನಟ ಗುರುನಂದನ್. 2019ರ 'ಮಿಸ್ಸಿಂಗ್ ಬಾಯ್' ನಂತರ ಗುರುನಂದನ್ ಎಲ್ಲೋಗಿಬಿಟ್ರಪ್ಪಾ ಎಂದು ಸಿನಿಪ್ರಿಯರು ಪ್ರಶ್ನಿಸುತ್ತಿದ್ದರು. ಅಭಿಮಾನಿಗಳ ಗೊಂದಲದ ನಡುವೆ ರಾಜು ಜೇಮ್ಸ್ ಬಾಂಡ್, ಫಾರೆಸ್ಟ್ ಮತ್ತು ಹ್ಯಾಪಿ ಎಂಡಿಂಗ್ ಎಂಬ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈ ಮಧ್ಯೆ 'ಸ್ಟ್ಯಾಂಡ್ ಅಪ್ ಕಾಮಿಡಿಯನ್' ಎಂಬ ಸಿನಿಮಾ ಕೂಡಾ ಶುರುವಾಗಿದೆ.
ಹೌದು, ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ಪ್ರಮುಖ ಪಾತ್ರ ವಹಿಸುತ್ತಿರುವ ಮುಂದಿನ ಬಹುನಿರೀಕ್ಷಿತ ಚಿತ್ರ 'ಸ್ಟ್ಯಾಂಡಪ್ ಕಾಮಿಡಿಯನ್'. ಇತ್ತೀಚೆಗಷ್ಟೇ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸಮಾರಂಭ ನೆರವೇರಿದೆ. ಕಾರ್ಯಕ್ರಮಕ್ಕೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗಿಯಾಗುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
'ಸ್ಟ್ಯಾಂಡಪ್ ಕಾಮಿಡಿಯನ್' ಸಿನಿಮಾಗೆ ಕ್ಲಾಪ್ ಮಾಡುವ ಮೂಲಕ ಅಶ್ವಿನಿ ಪುನೀತ್ ರಾಜ್ಕುಮಾರ್, ಗುರುನಂದನ್ ಮತ್ತು ಸಂಪೂರ್ಣ ಚಿತ್ರತಂಡಕ್ಕೆ ತಮ್ಮ ಬೆಂಬಲ ಕೊಟ್ಟಿದ್ದಾರೆ. ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಸುಮಂತ್ ಗೌಡ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. 'ಸ್ಟ್ಯಾಂಡಪ್ ಕಾಮಿಡಿಯನ್' ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.
ಗುರುನಂದನ್ ಅವರು ತಮ್ಮ ಬ್ಯಾನರ್ 'ಮಂಡಿ ಮನೆ ಟಾಕೀಸ್' ಅಡಿಯಲ್ಲಿ ಈ ಚಿತ್ರ ನಿರ್ಮಿಸಲಿದ್ದಾರೆ. ಈ ಕೌಟುಂಬಿಕ, ಮನರಂಜನಾ ಸಿನಿಮಾಗಾಗಿ ಗುರುನಂದನ್ ವಿವಿಧ ಸ್ಟ್ಯಾಂಡ್-ಅಪ್ ಕಾಮಿಡಿಯನ್ಗಳಿಂದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದವರಿಂದ ಸ್ಫೂರ್ತಿ ಪಡೆದಿದ್ದಾರೆ.
ಹರಿಕಥೆ ಅಲ್ಲ ಗಿರಿಕಥೆ ನಾಯಕಿ ತಪಸ್ವಿನಿ ಪೂಣಚ್ಚ ಗುರುನಂದನ್ ಜೊತೆ ಸ್ಕ್ರೀನ್ ಹಂಚಿಕೊಳ್ಳಲಿದ್ದಾರೆ. ಇವರ ಜೊತೆ ತಬಲ ನಾಣಿ, ಧರ್ಮಣ್ಣ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಶರತ್ ಚಕ್ರವರ್ತಿ ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ ಗುರುನಂದನ್ ಅವರ ಫಸ್ಟ್ ರ್ಯಾಂಕ್ ರಾಜು ಚಿತ್ರದಲ್ಲಿ ಕೆಲಸ ಮಾಡಿದ್ದ ಕಿರಣ್ ರವೀಂದ್ರ ಅವರ ಸಂಗೀತ ಈ ಚಿತ್ರಕ್ಕಿದೆ. ಭೀಮ ಚಿತ್ರದ ಬಳಿಕ ಶಿವಸೇನಾ ಅವರು ಈ ಚಿತ್ರದಲ್ಲಿ ತಮ್ಮ ಕ್ಯಾಮರಾ ಕೈಚಳಕ ತೋರಿಸಲಿದ್ದಾರೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 45 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್ ನಡೆಸಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಮುಹೂರ್ತ ದಿನದಿಂದಲೇ ಚಿತ್ರದ ಶೂಟಿಂಗ್ ಶುರುವಾಗಿದೆ.