ಕನ್ನಡ ಚಿತ್ರರಂಗದ ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ನಟಿಸಿರುವ ಅನಿರುದ್ಧ್ ಜತ್ಕರ್ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಇವರ ಮುಂದಿನ ಸಿನಿಮಾ 'CHEF ಚಿದಂಬರ'. ಟೀಸರ್ ಹಾಗೂ ಪೋಸ್ಟರ್ನಿಂದ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
5 ವರ್ಷಗಳ ನಂತರ ಅನಿರುದ್ಧ್ ಸಿನಿಮಾ ತೆರೆಗೆ: ಸಿನಿಮಾದಲ್ಲಿ ಅನಿರುದ್ಧ್ ಬಾಣಸಿಗನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರಕ್ಕಾಗಿ ಟ್ರೈನಿಂಗ್ ಪಡೆದು ನಟಿಸಿರುವುದು ವಿಶೇಷ. ಐದು ವರ್ಷಗಳ ನಂತರ ಅನಿರುದ್ಧ್ ಅಭಿನಯಿಸಿರುವ ಚಿತ್ರ ತೆರೆ ಕಾಣುತ್ತಿದೆ. ಹೀಗಾಗಿ ಅವರ ಅಭಿಮಾನಿಗಳು ಚಿತ್ರ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಚಿತ್ರಕ್ಕೆ ರಾಘು ಸಿನಿಮಾ ಖ್ಯಾತಿಯ ಎಂ.ಆನಂದರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದು, ಸಂಭಾಷಣೆ ಗಣೇಶ್ ಪರಶುರಾಮ್ ಅವರದ್ದು. ಉದಯಲೀಲ ಛಾಯಾಗ್ರಹಣ ನಿರ್ವಹಿಸಿದ್ದರೆ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನವಿದೆ. ವಿಜೇತ್ ಚಂದ್ರ ಸಂಕಲನದ ಕೆಲಸ ಮಾಡಿದ್ದಾರೆ. ವಿಕ್ರಾಂತ್ ರೋಣ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗು ಮಾಧುರಿ ಪರಶುರಾಮ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಇತ್ತೀಚೆಗೆ ಟೈಟಲ್ ಟ್ರ್ಯಾಕ್ ಎ2 ಮ್ಯೂಸಿಕ್ ಮೂಲಕ ಬಿಡುಗಡೆ ಆಗಿತ್ತು. ಚೊಚ್ಚಲ ಗೀತೆಯನ್ನು ಶ್ರೀಗಣೇಶ್ ಪರಶುರಾಮ್ ಬರೆದಿದ್ದಾರೆ. ರಿತ್ವಿಕ್ ಮುರಳೀಧರ್ ಸಂಗೀತ ನೀಡಿರುವ ಈ ಹಾಡು ಅನಿರುದ್ಧ್ ಜತ್ಕರ್ ಕಂಠಸಿರಿಯಲ್ಲಿ ಮೂಡಿಬಂದಿದೆ. ಚಿತ್ರದ ಶೀರ್ಷಿಕೆ ಗೀತೆಯ ಮೊದಲ ಭಾಗ ರ್‍ಯಾಪ್ ಶೈಲಿಯಲ್ಲಿದ್ದು, ರೋಹಿತ್ ಹಾಡಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಸಾಮಾಜಿಕ ಕಳಕಳಿಯ 'ವಿಕಾಸ ಪರ್ವ' - Vikasa Parva
ಅನಿರುದ್ಧ್‌ಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್.ಶ್ರೀಧರ್, ಶಿವಮಣಿ ಸೇರಿದಂತೆ ಮುಂತಾದವರು ತಾರಾಬಳಗದಲ್ಲಿದ್ದಾರೆ. ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸಿದ್ದಾರೆ. 'CHEF ಚಿದಂಬರ' ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಚಿತ್ರ. ಮೊದಲ ಪೋಸ್ಟರ್ನಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾದ ಟೈಟಲ್ ಟ್ರ್ಯಾಕ್ ತನಕ ಎಲ್ಲವೂ ಕುತೂಹಲ ಹೆಚ್ಚಿಸಿದ್ದು, ಜೂನ್ 14ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಅನಿರುದ್ಧ್ ಈ ಹಿಂದೆ ಧಾರವಾಹಿಯೊಂದರಲ್ಲಿ ಕಾಣಿಸಿಕೊಂಡು, ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಮುಂದಿನ ತಿಂಗಳು ಬಿಡುಗಡೆ ಆಗಲಿರುವ ಈ ಚಿತ್ರ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮೋದಿ ಉದ್ಘಾಟಿಸಿದ ಅಟಲ್ ಸೇತುವೆ ಹೊಗಳಿದ ರಶ್ಮಿಕಾ ಮಂದಣ್ಣಗೆ ಚೇತನ್ ಅಹಿಂಸಾ ಟಾಂಗ್ - Rashmika Mandanna