ದಿ.ಪುನೀತ್ ರಾಜ್ಕುಮಾರ್ ಜೊತೆ ಆಕಾಶ್, ಅರಸು ಮತ್ತು ಪ್ರಜ್ವಲ್ ದೇವರಾಜ್ ನಟನೆಯ ಮೆರವಣಿಗೆಯಂತಹ ಸೂಪರ್ ಹಿಟ್ ಸಿನಿಮಾಗಳ ನಿರ್ದೇಶಕ ಮಹೇಶ್ ಬಾಬು ಅವರ ಹೊಸ ಸಿನಿಮಾ ಘೋಷಣೆಯಾಗಿದೆ. ಚಿತ್ರತಂಡ ವಿಭಿನ್ನವಾಗಿ ಶೀರ್ಷಿಕೆ ಅನಾವರಣಗೊಳಿಸಿದೆ. ಪುದುಚೆರಿ ಸಮುದ್ರದ 82 ಅಡಿ ಆಳದಲ್ಲಿ ಸ್ಕೂಬಾ ಡೈವಿಂಗ್ ಮಾಡುವ ಮೂಲಕ ಚಿತ್ರತಂಡ ಟೈಟಲ್ ರಿವೀಲ್ ಮಾಡಿದೆ.
ಅಲ್ಲದೇ, ಇತ್ತೀಚೆಗೆ ಬೆಂಗಳೂರಿನ ಎಂಎಂಬಿ ಲೆಗಸಿಯಲ್ಲಿ ಚಿತ್ರದ ಶೀರ್ಷಿಕೆ ಬಿಡುಗಡೆ ಕಾರ್ಯಕ್ರಮ ನಡೆಯಿತು. ದುನಿಯಾ ವಿಜಯ್ ಅವರು ಮಹೇಶ್ ಬಾಬು ಅವರ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟರು.
ಮಹೇಶ್ ಬಾಬು ಅವರು ತಮ್ಮ ಪ್ರತೀ ಸಿನಿಮಾದಲ್ಲೂ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಾರೆ. ಈ ಸಿನಿಮಾ ಮೂಲಕ ಅವನು ಮತ್ತೆ ಶ್ರಾವಣಿ 2 ದಂತಹ ಧಾರಾವಾಹಿಗಳಲ್ಲಿ ನಟಿಸಿದ್ದ ಸ್ಮೈಲ್ ಗುರು ರಕ್ಷಿತ್ ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸುತ್ತಿದ್ದಾರೆ. ಇದು ನಾಯಕ ನಟನಾಗಿ ರಕ್ಷಿತ್ ಅವರಿಗೂ ಮೊದಲ ಹೆಜ್ಜೆ. ಮಹೇಶ್ ಬಾಬು ಹಾಗೂ ರಕ್ಷಿತ್ ಹೊಸ ಪಯಣಕ್ಕೆ 'ಅಮ್ಮು' ಎಂಬ ಶೀರ್ಷಿಕೆ ಇಡಲಾಗಿದೆ.
ದುನಿಯಾ ವಿಜಯ್ ಕುಮಾರ್ ಮಾತನಾಡಿ, ನಾನು ಮತ್ತು ಪ್ರೇಮ್ ಸಿನಿಮಾ ಆಳಕ್ಕೆ ಇಳಿದಿದ್ದೇವೆ. ನಮ್ಮ ಮಕ್ಕಳಿಗೆ ಒಳ್ಳೆಯದಾಗಲಿ. ನಮಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ನಿಮ್ಮೆಲ್ಲರ ಆಶೀರ್ವಾದ, ಎಲ್ಲಾ ಹೀರೋ ಅಭಿಮಾನಿಗಳ ಆಶೀರ್ವಾದ ಈ ಮಕ್ಕಳ ಮೇಲೆ ಇರಲಿ. ಇವರು ಮುಂದೆ ಇಂಡಸ್ಟ್ರಿಯನ್ನು ಬೇರೆ ರೂಪಕ್ಕೆ ತೆಗೆದುಕೊಂಡು ಹೋಗಲಿ. ತಪ್ಪು ಮಾಡಿದರೆ ತಿದ್ದಿ. ನಾವು ಸಿನಿಮಾಗಾಗಿ ಬಹಳಷ್ಟು ತ್ಯಾಗ ಮಾಡಿದ್ದೇವೆ. ಮಹೇಶ್ ಬಾಬು ತುಂಬಾ ಹಳೇ ನಿರ್ದೇಶಕರು. ಅದ್ಭುತ ವ್ಯಕ್ತಿತ್ವ. ಕಿಂಚಿತ್ತೂ ಅಹಂ ಇಲ್ಲ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು.
ನಿರ್ದೇಶಕ ಮಹೇಶ್ ಬಾಬು ಮಾತನಾಡಿ, ವಜ್ರೇಶ್ವರಿ ಕಂಬೈನ್ಸ್ ಮೂಲಕ ನನ್ನನ್ನು ನಿರ್ದೇಶಕರಾಗಿ ಪರಿಚಯಿಸಿದವರು ಪಾರ್ವತಮ್ಮ, ರಾಜ್ಕುಮಾರ್ ಸರ್ ಹಾಗೂ ಅವರ ಕುಟುಂಬ. ಶಿವಣ್ಣ, ರಾಘಣ್ಣ ಎಲ್ಲದಕ್ಕಿಂತ ಹೆಚ್ಚಿನದಾಗಿ ಅಪ್ಪು ಸರ್. ಅನುರಾಗ್, ಮಿಥುನ್ ಹಾಗೂ ಬಚ್ಚನ್ ಚೇತು ಸಿನಿಮಾ ಮಾಡಬೇಕೆಂದರು. ಈ ಚಿತ್ರ ಆಗಲು ಮುಖ್ಯ ಕಾರಣ ರಕ್ಷಿತ್. ಅವರು ಕಥೆ ಮಾಡಿ ನನ್ನ ಬಳಿ ಹೇಳಿದರು. ಕಥೆ ಕೇಳಿ ನನಗೆ ಸ್ಟ್ರೈಕ್ ಆಯ್ತು. ರಕ್ಷಿತ್ಗೆ ಒಂದು ದೊಡ್ಡ ಚಪ್ಪಾಳೆ. ಇನ್ನೂ ಈ ಚಿತ್ರಕ್ಕೆ ಫ್ಯಾಷನೇಟ್ ನಿರ್ಮಾಪಕರು ಸಿಕ್ಕಿದ್ದಾರೆ. ವರ್ಕ್ ಶಾಪ್ ಮಾಡಿದೆ. ಜೆರುಶಾ, ಅಮೃತಾ ಇಬ್ಬರೂ ಚೆನ್ನಾಗಿ ಅಭಿನಯಿಸುತ್ತಾರೆ. ರಕ್ಷಿತ್ ಒಳ್ಳೆ ನಟ. ಒಂದೊಳ್ಳೆ ತಂಡ ನನಗೆ ಸಿಕ್ಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸುದೀಪ್ ಶಿಷ್ಯ ಆಶು ಈಗ 'ಟಾಮಿ' ಸಿನಿಮಾ ಹೀರೋ: ಕುತೂಹಲ ಹೆಚ್ಚಿಸಿದ ಪೋಸ್ಟರ್ - Tommy movie
ನಟ ಸ್ಮೈಲ್ ಗುರು ರಕ್ಷಿತ್ ಮಾತನಾಡಿ, ಈ ಸಮಯದಲ್ಲಿ ನಾನು ಇಬ್ಬರನ್ನೂ ನೆನಪು ಮಾಡಿಕೊಳ್ಳುತ್ತೇನೆ. ಸಂಕಲನಕಾರ ಮಹೇಶ್ ಅವರು ಮತ್ತು ಮೀಡಿಯಾದವರು. ನಾನು ಬ್ಯಾಗ್ರೌಂಡ್ ಡ್ಯಾನ್ಸರ್ ಆಗಿ ನನ್ನ ಕರಿಯರ್ ಶುರು ಮಾಡಿದೆ. ಮನೆಗೆ ಬಂದು ಶಾರ್ಟ್ ಹುಡುಕುತ್ತಿದೆ. ನಾನು ಕಾಣಿಸುತ್ತಿರಲಿಲ್ಲ. ಆಗ ರಿಯಾಲಿಟಿ ಶೋ ಟ್ರೈ ಮಾಡಿದೆ. ಆಗಲೂ ಆಗಲಿಲ್ಲ. ಆ ಹಠದಲ್ಲಿ ಶುರು ಮಾಡಿದ್ದು ಸ್ಮೈಲ್ ಗುರು ಶಾರ್ಟ್ ಸಿನಿಮಾ. ಮಹೇಶ್ ಅವರು ಆಗ ಸಾಥ್ ಕೊಟ್ಟರು. ಕಲರ್ಸ್ ಕನ್ನಡದಿಂದ ನನ್ನ ಕರಿಯರ್ ಶುರುವಾಯ್ತು. ನಾನು ಸಿನಿಮಾ ಮಾಡುತ್ತೇನೆ ಎಂದು ಅಂದೇ ಅಂದುಕೊಂಡಿದ್ದೆ. ಆ ಕನಸೀಗ ನೆರವೇರುತ್ತಿದೆ ಎಂದರು.
ಅಮ್ಮು ಸಿನಿಮಾದಲ್ಲಿ ಸ್ಮೈಲ್ ಗುರು ರಕ್ಷಿತ್ ಅವರಿಗೆ ಜೋಡಿಯಾಗಿ ಟಗರು ಪಲ್ಯ ಖ್ಯಾತಿಯ ಅಮೃತಾ ಪ್ರೇಮ್ ಹಾಗೂ ವೀರಮದಕರಿ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದ ಜೆರುಶಾ ಸಾಥ್ ಕೊಡುತ್ತಿದ್ದಾರೆ. ಎಂಎಂಎಂ ಪಿಕ್ಚರ್ಸ್ ಹಾಗೂ ಎ ಕ್ಲಾಸ್ ಸಿನಿ ಫಿಲ್ಮಂಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ನಿರ್ಮಾಣ ಸಂಸ್ಥೆಯಡಿ ಅನುರಾಗ್ ಆರ್ ಹಾಗೂ ಮಿಥುನ್ ಕೆ.ಎಸ್ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸತ್ಯ ಅವರು ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಸತೀಶ್ ಚಂದ್ರಯ್ಯ ಅವರ ಸಂಕಲನ ಈ ಚಿತ್ರಕ್ಕಿರಲಿದೆ. ನಾಯಕ ಸ್ಮೈಲ್ ಗುರು ರಕ್ಷಿತ್ ಕಥೆ ಬರೆದಿದ್ದು, ವಿಜಯ್ ಈಶ್ವರ್ ಸಂಭಾಷಣೆ ಒದಗಿಸಲಿದ್ದಾರೆ.