ಟಾಲಿವುಡ್ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಸೌತ್ ಸ್ಟಾರ್ ಡೈರೆಕ್ಟರ್ ಅಟ್ಲೀ ಕಾಂಬಿನೇಶನ್‌ನಲ್ಲಿ ಸಿನಿಮಾವೊಂದು ಮೂಡಿಬರಲಿದೆ ಎಂಬ ವದಂತಿಗಳು ಕೆಲ ತಿಂಗಳುಗಳಿಂದಲೂ ಇದೆ. ಈ ಚಿತ್ರಕ್ಕೆ ದಕ್ಷಿಣದ ಖ್ಯಾತ ಗಾಯಕ ಅನಿರುದ್ಧ್ ರವಿಚಂದ್ರನ್ ಸಂಗೀತ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಗಳಾಗಿದ್ದವು. 2024ರ ಬಹುನಿರೀಕ್ಷಿತ 'ಪುಷ್ಪ-2' ನಂತರ ಈ ಪ್ರಾಜೆಕ್ಟ್ ಟೇಕಾಫ್ ಆಗಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಹಾಗಾಗಿ ಈ ಸ್ಟಾರ್ ಕಾಂಬೋದ ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂದು ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಆದ್ರೀಗ ಹೊಸ ವಿಚಾರ ಬೆಳಕಿಗೆ ಬಂದಿದೆ.
ಅಲ್ಲು ಅಟ್ಲೀ ಕಾಂಬೋದಲ್ಲಿ ಸಿನಿಮಾ ಬರಲ್ಲ ಎಂದು ಕೆಲ ವರದಿಗಳು ತಿಳಿಸಿವೆ. ಜವಾನ್ ಮೂಲಕ ಭರ್ಜರಿ ಯಶ ಕಂಡಿರುವ ನಿರ್ದೇಶಕ ಅಟ್ಲೀ ಈ ಪ್ರೊಜೆಕ್ಟ್ನಿಂದ ಭಾರೀ ಮೊತ್ತದ ಸಂಭಾವನೆಯನ್ನು ನಿರೀಕ್ಷಿಸಿದ್ದರು. ತಮ್ಮ ನಿರ್ದೇಶನಕ್ಕೆ 80 ಕೋಟಿ ರೂಪಾಯಿ ಸಂಭಾವನೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ ನಿರ್ಮಾಣ ತಂಡ ಅಷ್ಟು ಹಣ ಕೊಡಲು ಸಿದ್ಧವಿಲ್ಲ. ಹಾಗಾಗಿ ಯೋಜನೆಯ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಇದೇ ಕಥೆಯನ್ನು ಅಟ್ಲೀ ಮತ್ತೋರ್ವ ನಾಯಕನಿಗೆ ಹೇಳಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಅಧಿಕೃತ ಮಾಹಿತಿ ನಿರೀಕ್ಷಿಸಲಾಗಿದೆ.
ಕಳೆದ ವರ್ಷ, ಅಟ್ಲೀ ಮತ್ತು ಬಾಲಿವುಡ್ ಸ್ಟಾರ್ ಹೀರೋ ಶಾರುಖ್ ಖಾನ್ ಕಾಂಬಿನೇಶನ್ನ 'ಜವಾನ್' ತೆರೆಕಂಡಿತ್ತು. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತ್ತು. 1,000+ ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಚಿತ್ರತಂಡ ಎಲ್ಲರ ಹುಬ್ಬೇರಿಸಿತ್ತು. ಈ ಸಿನಿಮಾ ಮೂಲಕ ಸೌತ್ ಇಂಡಸ್ಟ್ರಿಯಲ್ಲಿ ಅಟ್ಲೀ ಕ್ರೇಜ್ ಹೆಚ್ಚಾಗಿದೆ. ಸೌತ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಜವಾನ್ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅತಿಥಿ ಪಾತ್ರ ನಿರ್ವಹಿಸಿದ್ದರು. ಈ ಸಿನಿಮಾದ ಯಶಸ್ಸಿನ ನಂತರ ಅಟ್ಲೀ ಸಿನಿಮಾಗಳ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಜೊತೆ ಬಿಗ್ ಪ್ರೊಜೆಕ್ಟ್ ಮಾಡುತ್ತಾರೆ ಎಂದೇ ಬಹುತೇಕರು ನಂಬಿದ್ದರು. ಆದ್ರೀಗ ಇವರಿಬ್ಬರ ಕಾಂಬಿನೇಶನ್‌ನಲ್ಲಿ ಈ ಸಿನಿಮಾ ಬರೋದು ಸಂದೇಹ ಎಂಬ ವದಂತಿಗಳಿವೆ.
ಇದನ್ನೂ ಓದಿ: ಸೆಲೆಬ್ರಿಟಿಗಳ ಅವಾಂತರಗಳ 'ದರ್ಶನ': ಈ ವಾರ ಸದ್ದು ಮಾಡಿದ ವಿವಾದಗಳಿವು - Celebrities Controversies
ಪುಷ್ಪ-2 ಮುಂದೂಡಿಕೆ?: ಅಲ್ಲು ಅರ್ಜುನ್ ಮುಖ್ಯಭೂಮಿಕೆಯ 2024ರ ಬಹುನಿರೀಕ್ಷಿತ ಚಿತ್ರ ಪುಷ್ಪ-2 ಮುಂದೂಡಿಕೆಯಾಗೋ ಸಾಧ್ಯತೆ ಇದೆ. ಚಿತ್ರವನ್ನು ಆಗಸ್ಟ್ 15ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ನಿಗದಿತ ಸಮಯಕ್ಕೆ ಚಿತ್ರೀಕರಣ ಮುಗಿಸುವ ಸಾಧ್ಯತೆ ಇಲ್ಲದ ಕಾರಣ ನಿರ್ಮಾಪಕರು ಚಿತ್ರವನ್ನು ಮುಂದೂಡುವ ಯೋಚನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಅಧಿಕೃತ ಘೋಷಣೆ ಇನ್ನಷ್ಟೇ ಬರಬೇಕಿದೆ. ಆಗಸ್ಟ್ 15ರಂದೇ ತೆರೆಕಾಣಲು ಸಜ್ಜಾಗಿದ್ದ ಬಾಲಿವುಡ್ನ ಬಹುನಿರೀಕ್ಷಿತ ಸಿಂಗಂ ಎಗೈನ್ ಕೂಡ ಮುಂದೂಡಿಕೆಯಾಗಿದ್ದು, ದೀಪಾವಳಿಗೆ ತೆರೆಕಾಣಲಿದೆ.
ಇದನ್ನೂ ಓದಿ: 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಸ್ಟೂಡೆಂಟ್ ಪಾರ್ಟಿ ಸಾಂಗ್ ಬಿಡುಗಡೆ - Students Party Song