ಬೆಂಗಳೂರು: ಸಿನಿಮಾ ಅರ್ಧಕ್ಕೆ ಸ್ಥಗಿತಗೊಳಿಸಿದ ನಿರ್ದೇಶಕನನ್ನು ಬೆದರಿಸಲು ಗುಂಡು ಹಾರಿಸಿದ ಆರೋಪದಡಿ ನಟ ತಾಂಡವ್ ರಾಮ್ ಅವರನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮುಗಿಲ್ ಪೇಟೆ ಸಿನಿಮಾ ಖ್ಯಾತಿಯ ನಿರ್ದೇಶಕ ಭರತ್ ಎಸ್ ನಾವುಂಡ ಅವರನ್ನು ಬೆದರಿಸಲು ಏರ್ ಫೈರ್ ಮಾಡಿದ್ದ ತಾಂಡವ್ ರಾಮ್ ಅವರನ್ನು ಹತ್ಯೆ ಯತ್ನದ ಆರೋಪದಡಿ ಬಂಧಿಸಲಾಗಿದೆ.
ಜೋಡಿಹಕ್ಕಿ, ಭೂಮಿಗೆ ಬಂದ ಭಗವಂತ ಮತ್ತಿತರೆ ಧಾರಾವಾಹಿ ಹಾಗೂ ಒಂದ್ ಕಥೆ ಹೇಳ್ಲಾ ಸಿನಿಮಾದಲ್ಲಿ ನಟಿಸಿರುವ ತಾಂಡವ್ ರಾಮ್ ನಟನೆಯಲ್ಲಿ ಸಿನಿಮಾವೊಂದನ್ನು ಭರತ್ ನಾವುಂಡ ನಿರ್ದೇಶಿಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಸಿನಿಮಾದ ಕೆಲಸಗಳು ಅರ್ಧಕ್ಕೆ ನಿಂತಿದ್ದವು. ಸಿನಿಮಾ ವಿಚಾರವಾಗಿ ಮಾತನಾಡಲು ಚಂದ್ರಾ ಲೇಔಟ್ನಲ್ಲಿರುವ ಭರತ್ ಅವರ ಕಚೇರಿಗೆ ಸೋಮವಾರ ತಾಂಡವ್ ರಾಮ್ ಬಂದಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಸಿಟ್ಟಿಗೆದ್ದ ತಾಂಡವ್ ರಾಮ್ ತಮ್ಮ ಬಳಿ ಇದ್ದ ಪರವಾನಗಿ ಹೊಂದಿರುವ ಪಿಸ್ತೂಲ್‌ನಿಂದ ಏರ್ ಫೈರ್ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇದು ಉದ್ದೇಶಪೂರ್ವಕ ನಡೆದ ಘಟನೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಆರೋಪಿಯನ್ನು ಬಂಧಿಸಿದ್ದೇವೆ ಮತ್ತು ಆ ವೆಪನ್ ಜಪ್ತಿ ಮಾಡಿದ್ದೇವೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದ್ದಾರೆ.
ನಿರ್ದೇಶಕ ಭರತ್ ನಾವುಂಡ ಈ ಬಗ್ಗೆ ಚಂದ್ರಾಲೇಔಟ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಾಂಡವ್ ರಾಮ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಹತ್ಯೆ ಯತ್ನ ಪ್ರಕರಣದಡಿ ತಾಂಡವ್ ರಾಮ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಣ್ಬೀರ್, ಅಲ್ಲು ಅರ್ಜುನ್ - ಪತ್ನಿ ಪಾತ್ರದಲ್ಲಿ ರಶ್ಮಿಕಾ: ಮಂದಣ್ಣ ಎದುರು ತಲೆಬಾಗಿದ ಆ್ಯಕ್ಷನ್ ಸ್ಟಾರ್ಸ್
ಏನಿದು ಪ್ರಕರಣ? ಎರಡು ವರ್ಷಗಳಿಂದ 'ದೇವನಾಂಪ್ರಿಯ' ಎಂಬ ಶೀರ್ಷಿಕೆಯ ಸಿನಿಮಾವನ್ನು ಭರತ್ ನಾವುಂಡ ನಿರ್ದೇಶಿಸುತ್ತಿದ್ದರು. ಈ ಚಿತ್ರಕ್ಕೆ ತಾಂಡವ್ ರಾಮ್ ನಾಯಕ ನಟ. ಸಿನಿಮಾಗೆ ನಿರ್ಮಾಪಕರು ಸಿಗದಿದ್ದಾಗ ತಾಂಡವ್ ರಾಮ್ ಹಂತ ಹಂತವಾಗಿ 6 ಲಕ್ಷ ರೂ. ಹೂಡಿಕೆ ಮಾಡಿದ್ದರು. ಬಳಿಕ ಹಾಸನ ಮೂಲದ ಕುಮಾರಸ್ವಾಮಿ ಎಂಬುವವರು ಹಣ ಹೂಡಿಕೆ ಮಾಡಲಾರಂಭಿಸಿದ್ದರು. ಇಷ್ಟಾಗಿಯೂ ಸಿನಿಮಾ ಚಿತ್ರೀಕರಣ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಸಿನಿಮಾ ಪೂರ್ಣಗೊಳಿಸದ ಹಿನ್ನೆಲೆ ತಾವು ಹೂಡಿದ್ದ 6 ಲಕ್ಷ ರೂ. ಬಂಡವಾಳವನ್ನು ತಾಂಡವ್ ರಾಮ್ ವಾಪಸ್ ಕೇಳಿದ್ದರು.
ಇದನ್ನೂ ಓದಿ: 'ಟೈಗರ್ ಶ್ರಾಫ್ ಕಾಣುವುದಕ್ಕಿಂತಲೂ ಹೆಚ್ಚು ಅದ್ಭುತ': 'ಬಾಘಿ 4' ನಿರ್ದೇಶಕ ಹರ್ಷ ಹೇಳಿದ್ದಿಷ್ಟು
ಇದೇ ವಿಚಾರವಾಗಿ ಸೋಮವಾರ ಸಂಜೆ 6:30ರ ಸುಮಾರಿಗೆ ಭರತ್ ನಾವುಂಡ ಅವರ ಕಚೇರಿಯಲ್ಲಿ ಮೂವರೂ ಮಾತುಕತೆಗೆ ಕುಳಿತಿದ್ದರು. ರಾತ್ರಿ 8 ಗಂಟೆ ಸಮಯಕ್ಕೆ ಹಣಕಾಸಿನ ವಿಚಾರವಾಗಿ ಮಾತಿಗೆ ಮಾತು ಬೆಳೆದಾಗ ನಿರ್ದೇಶಕನನ್ನು ಬೆದರಿಸಲು ತಾಂಡವ್ ರಾಮ್ ಗುಂಡು ಹಾರಿಸಿದ್ದರು. ನಂತರ ಚಂದ್ರಾಲೇಔಟ್ ಠಾಣೆಗೆ ಭರತ್ ನಾವುಂಡ ದೂರು ನೀಡಿದ್ದರು. ಅದರನ್ವಯ ಹತ್ಯೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ತಾಂಡವ್ ರಾಮ್ ಅವರನ್ನು ಬಂಧಿಸಿದ್ದಾರೆ.