ಹೈದರಾಬಾದ್: ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನಟಿ ರವೀನಾ ಟಂಡನ್ ಅವರೊಂದಿಗೆ ರಸ್ತೆ ಮೇಲೆ ಕೆಲವರು ಜಗಳವಾಡುತ್ತಿರುವ ವಿಡಿಯೋವೊಂದು ಭಾರೀ ವೈರಲ್ ಆಗಿದೆ. ಮುಂಬೈನ ರಿಜ್ವಿ ಕಾಲೇಜಿನ ಬಳಿ ನಟಿಯ ಕಾರು ಮಹಿಳೆಯರಿಗೆ ಡಿಕ್ಕಿ ಹೊಡೆದಿದ್ದಾಗಿ ಮತ್ತು ಅವರ ಕಾರು ಚಾಲಕ ಹಾಗೂ ನಟಿಯೊಂದಿಗೆ ಸ್ಥಳೀಯರ ಜಗಳಕ್ಕೆ ಬಿದ್ದಿರುವುದಾಗಿ ವಿಡಿಯೋವೊಂದು ಹರಿದಾಡಿತ್ತು. ಅಲ್ಲದೇ ಅವರ ವಿರುದ್ದ ದೂರು ಸಹ ದಾಖಲಾಗಿತ್ತು.
ಇದೀಗ ಘಟನೆಗೆ ಸಂಬಂಧಿಸಿದಂತರೆ ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ನಟಿ ರವೀನಾ ವಿರುದ್ದ ಕುಡಿದು ಅಜಾಗರೂಕತೆ ವಾಹನ ಚಲಾಯಿಸಿ, ಮೂವರಿಗೆ ಡಿಕ್ಕಿ ಹೊಡೆದಿರುವುದಾಗಿ ಸುಳ್ಳು ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರೋಷನ್ ಪ್ರತಿಕ್ರಿಯಿಸಿದ್ದು, ಇದೊಂದು ನಕಲಿ ದೂರು ಎಂದು ಹೇಳಿದ್ದಾರೆ. ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ದೂರುದಾರರು ರವೀನಾ ವಿರುದ್ದ ಸುಳ್ಳು ದೂರು ದಾಖಲಿಸಿದ್ದಾರೆ. ಘಟನಾ ಸ್ಥಳದಲ್ಲಿನ ಎಲ್ಲ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದಾಗ ಸತ್ಯಾಂಶ ಬಯಲಾಗಿದೆ. ವಾಸ್ತವಾಗಿ ನಟಿಯಿದ್ದ ಕಾರನ್ನು ಚಾಲಕ ರಿವರ್ಸ್ ತೆಗೆದುಕೊಳ್ಳುತ್ತಿದ್ದ. ಈ ವೇಳೆ ರಸ್ತೆ ದಾಟುತ್ತಿದ್ದ ದೂರುದಾರರು ಕಾರನ್ನು ತಡೆದು, ಕಾರು ರಿವರ್ಸ್ ತೆಗೆದುಕೊಳ್ಳುವಾಗ ಹಿಂದೆ ಜನರಿದ್ದಾರಾ ಇಲ್ಲ ಎಂದು ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಇಲ್ಲಿಂದ ಮಾತಿಗೆ ಮಾತು ಬೆಳೆದು ಚಾಲಕ ಮತ್ತು ದೂರುದಾರರ ನಡುವೆ ಗಲಾಟೆ ನಡೆದಿದೆ.
ಇದನ್ನು ಗಮನಿಸಿದ ನಟಿ ಕಾರಿನಿಂದ ಕೆಳಗಿಳಿದು ಏನಾಯಿತೆಂದು ವಿಚಾರಿಸಲು ತೆರಳಿದ ವೇಳೆ ಅಲ್ಲಿದ್ದ ಜನರು ನಟಿಯನ್ನೂ ಸುತ್ತುವರೆದು ಜಗಳವಾಡಿದ್ದಾರೆ. ಬಳಿಕ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಫ್ಯಾಮಿಲಿ ಡಿನ್ನರ್ ಡೇಟ್: ತಾರೆಯ ಬೇಬಿ ಬಂಪ್ ವಿಡಿಯೋ ವೈರಲ್ - Deepika padukone