ಕೋಟ್‌ದ್ವಾರ: ಉತ್ತರಾಖಂಡದ ಐದು ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಮತದಾನ ನಡೆಯುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಮತದಾನ ಮಾಡಲು ಉತ್ತರಾಖಂಡದ ಮತಗಟ್ಟೆಗೆ ಆಗಮಿಸುತ್ತಿದ್ದಾರೆ.
ಬಾಲಿವುಡ್ ನಟಿ ಹಾಗೂ ರೂಪದರ್ಶಿ ಊರ್ವಶಿ ರೌಟೇಲಾ ಕೂಡ ಕೋಟ್‌ದ್ವಾರದಲ್ಲಿ ಇಂದು ಬೆಳಗ್ಗೆ ಮತ ಚಲಾಯಿಸಿದರು. ಬಳಿಕ ಊರ್ವಶಿ ರೌಟೇಲಾ ಮುಂಬೈಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಊರ್ವಶಿ ರೌಟೇಲಾ ಮಾತನಾಡಿ, "ನಾನು ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿದ್ದೇನೆ. ಇಂದು ಎಲ್ಲರೂ ತಮ್ಮ ಮನೆಯಿಂದ ಹೊರಗೆ ಬಂದು ಮತದಾನ ಮಾಡಬೇಕೆಂದು" ಕರೆ ನೀಡಿದರು.
ಅಲ್ಲದೇ ತಾವು ಮೂಲತಃ ಉತ್ತರಾಖಂಡದವರು ಎಂದಿರುವ ಊರ್ವಶಿ, "ಉತ್ತರಾಖಂಡವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವವರಿಗೆ ಮಾತ್ರ ಮತ ನೀಡಿ" ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ. ಉತ್ತರಾಖಂಡದ ಅಡಿಪಾಯವು ಅದರ ಸಂಸ್ಕೃತಿಯ ಮೇಲೆ ನಿಂತಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಉತ್ತರಾಖಂಡ ಅಭಿವೃದ್ಧಿಯಾಗಬೇಕು. ಇಲ್ಲಿನ ಸಂಸ್ಕೃತಿಯನ್ನು ಉತ್ತೇಜಿಸಬೇಕು. ಇಲ್ಲಿನ ಜನತೆ ಉದ್ಯೋಗಕ್ಕಾಗಿ ಹೊರ ಹೋಗುವ ಅಗತ್ಯವಿಲ್ಲ" ಎಂದರು.
ಊರ್ವಶಿ ರೌಟೇಲಾ ಅವರಲ್ಲದೇ, ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಕೂಡ ಹರಿದ್ವಾರದಲ್ಲಿ ಮತ ಚಲಾಯಿಸಿದ್ದಾರೆ. ಬಿಜೆಪಿಯ ಅನಿಲ್ ಬಲುನಿ ಮತ್ತು ಗರ್ವಾಲ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಗೋಡಿಯಾಲ್ ಅವರು ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು. ಬೆಳಗ್ಗೆ 9 ಗಂಟೆಯವರೆಗೆ ಉತ್ತರಾಖಂಡದ ಎಲ್ಲ ಐದು ಲೋಕಸಭಾ ಕ್ಷೇತ್ರಗಳಲ್ಲಿ 10.54 ರಷ್ಟು ಮತದಾನವಾಗಿದೆ.
ಇನ್ನು ತಮಿಳುನಾಡಿನಲ್ಲೂ ಮತದಾನ ನಡೆಯುತ್ತಿದ್ದು ನಟಿ ತ್ರಿಶಾ ಕೃಷ್ಣನ್ ಚೆನ್ನೈನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.