ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಅದೃಷ್ಟ ಹೇಗೆ ಬೇಕಾದರೂ, ಎಲ್ಲಿ ಬೇಕಾದರೂ ಖುಲಾಯಿಸಬಹುದು. ಅದೃಷ್ಟ ದೇವತೆಯನ್ನು ಒಲಿಸಿಕೊಳ್ಳಲು ಇಲ್ಲಿ ಪಶ್ಚಿಮಕ್ಕೆ ತಲೆ ಮಾಡಿ ಮಲಗಬೇಕು ಅಂತೇನಿಲ್ಲ. ಕೆಲವೊಮ್ಮೆ ದಕ್ಷಿಣ ದಿಕ್ಕಿಗೆ ತಲೆ ಮಾಡಿ ಮಲಗಿದರೂ ಸಾಕು, ಅದೃಷ್ಟ ಪ್ರಾಪ್ತಿಯಾಗುತ್ತೆ. ಈ ಮಾತನ್ನು ನಿಜವಾಗಿಸಿರುವವರು ನಟಿ ಸಪ್ತಮಿ ಗೌಡ.
'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರದ ಮೂಲಕ ಕನ್ನಡ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿರುವ ಇವರು ಈಗ ಬೇಡಿಕೆಯ ನಟಿಯರಲ್ಲಿ ಒಬ್ಬರು. 'ಕಾಂತಾರ' ಅವರ ಸಿನಿ ಜರ್ನಿಗೆ ದೊಡ್ಡ ತಿರುವು ನೀಡಿತು. ಈ ಚಿತ್ರದ ಬಳಿಕ 'ಯುವ' ಚಿತ್ರದಲ್ಲಿಯೂ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ಯುವ ತಾರೆ, ಚಿತ್ರದ ಸಕ್ಸಸ್ ಕುರಿತು ಮಾತನಾಡಿದ್ದಾರೆ.
'ಯುವ' ಬಳಿಕ ಅಭಿಷೇಕ್ ಅಂಬರೀಶ್ ಅಭಿನಯದ 'ಕಾಳಿ' ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, ಕೆಲವು ಕಾರಣಗಳಿಂದ ಆ ಸಿನಿಮಾ ನಿಂತು ಹೋಗಿದೆ. ಹೀಗಿರುವಾಗ ಕನ್ನಡದಲ್ಲಿ ಸದ್ಯಕ್ಕೆ ಯಾವ ಚಿತ್ರದಲ್ಲಿಯೂ ನಟಿಸುತ್ತಿಲ್ಲ. ಪರಭಾಷೆಗಳಿಂದ ಬರುವ ಅವಕಾಶಗಳನ್ನು ಒಪ್ಪಿಕೊಂಡಿರುವುದಾಗಿ ಅವರು ಹೇಳಿದರು.
ಚಿತ್ರಕ್ಕಾಗಿ ಕುದುರೆ ಸವಾರಿ ಕಲಿಕೆ: ಬಾಲಿವುಡ್ನ 'ದಿ ವ್ಯಾಕ್ಸಿನ್ ವಾರ್'ನಲ್ಲಿ ನಟಿಸಿದ್ದೇನೆ. ಸದ್ಯ ಟಾಲಿವುಡ್ ನಟ ನಿತಿನ್ ಅಭಿನಯದ 'ತಮ್ಮುಡು' ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದೇನೆ. ಈಗಾಗಲೇ ಚಿತ್ರದ ಮುಹೂರ್ತವಾಗಿ, ಚಿತ್ರೀಕರಣವೂ ಪ್ರಾರಂಭವಾಗಿದೆ. ಇದೊಂದು ವಿಭಿನ್ನ ಪಾತ್ರ. ಹಾಗಾಗಿ ಚಿತ್ರಕ್ಕಾಗಿ ಕುದುರೆ ಸವಾರಿ ಕಲಿಯುತ್ತಿದ್ದೇನೆ. ಅಲ್ಲದೇ ಪಾತ್ರಕ್ಕೆ ತಕ್ಕಂತೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಕುದುರೆ ಸವಾರಿ ಕಲಿಕೆ ಇನ್ನೂ ಪೂರ್ತಿಯಾಗಿಲ್ಲ. ಆದರೆ, ಇಡೀ ಪ್ರಕ್ರಿಯೆಯನ್ನು ಬಹಳ ಎಂಜಾಯ್ ಮಾಡುತ್ತಿದ್ದೇನೆ ಎಂದರು.
ನನಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಆದರೆ, ಮನಸ್ಸಿಗೆ ಇಷ್ಟವಾಗುವ ಚಿತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತಿದ್ದೇನೆ. ನಾನು ಬರೀ ಪಾತ್ರಗಳನ್ನಷ್ಟೇ ನೋಡುವುದಿಲ್ಲ. ಇಡೀ ತಂಡ ಮತ್ತು ಕಥೆಯ ಬಗ್ಗೆಯೂ ಗಮನಹರಿಸುತ್ತೇನೆ. ಮೊದಲಿಗೆ ಮನೆಯವರ ಜೊತೆಗೆ ಕಥೆ ಕೇಳುತ್ತೇನೆ. ಆ ನಂತರ ಧನಂಜಯ್, ಸಂತೋಷ್ ಆನಂದರಾಮ್, ವಿಜಯ್ ಕಿರಗಂದೂರು ಮುಂತಾದವರ ಸಲಹೆ ಪಡೆಯುತ್ತಿದ್ದೇನೆ. ಆ ಬಳಿಕವೇ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಪ್ತಮಿ ಗೌಡ ವಿವರಿಸಿದರು.
'ಕಾಂತಾರ ಅಧ್ಯಾಯ 1'ರಲ್ಲಿ ನಾನು ಇರುವುದಿಲ್ಲ. ಇದು ಹಿಂದಿನ ಕಥೆಯಾದ್ದರಿಂದ ಇಲ್ಲಿ ಲೀಲಾ ಪಾತ್ರವೂ ಇಲ್ಲ. ಇಲ್ಲಿ ಬೇರೆ ನಾಯಕಿ ಇರುತ್ತಾರೆ. 'ಕಾಂತಾರ' ಬಿಡುಗಡೆಯಾಗಿ ಎರಡು ವರ್ಷವಾದರೂ, ಜನ ಈಗಲೂ ಆ ಚಿತ್ರದ ಬಗ್ಗೆ ಮಾತನಾಡುತ್ತಾರೆ. ಎಲ್ಲರಿಗೂ ಪ್ರೀಕ್ವೆಲ್ ಬಗ್ಗೆ ಕುತೂಹಲವಿದೆ. ನನಗೂ ಸಹ ಚಿತ್ರದ ಬಗ್ಗೆ ಬಹಳ ಕುತೂಹಲವಿದೆ. ಏಕೆಂದರೆ ಅದು ನನ್ನ ಚಿತ್ರತಂಡ ಎಂದು ಹೇಳಿದರು.
'UPSCಗೆ ಪ್ರಯತ್ನ ಪಟ್ಟಿದ್ದರೆ ಪಾಸ್ ಆಗುತ್ತಿದ್ದೆನೇನೋ': ಕುಟುಂಬದ ಬಗ್ಗೆ ಕೇಳಲಾದ ಪ್ರಶ್ನೆಗೆ, ತಂದೆ ಎಸ್.ಕೆ.ಉಮೇಶ್ ಅವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದವರು. ತಂದೆಯಂತೆ ಪೊಲೀಸ್ ಇಲಾಖೆಗೆ ಸೇರಬೇಕೆಂಬ ಆಸೆ ಇತ್ತು. ನಾನು ಕ್ರೀಡೆ ಮತ್ತು ಓದು ಎರಡರಲ್ಲೂ ಮುಂದಿದ್ದೆ. UPSCಗೆ ಪ್ರಯತ್ನ ಪಟ್ಟಿದ್ದರೆ ಪಾಸ್ ಆಗುತ್ತಿದ್ದೆನೇನೋ. ಆದರೆ, ಅದಕ್ಕೆ ತುಂಬಾ ಫೋಕಸ್ ಬೇಕು. ಅದು ಸದ್ಯಕ್ಕೆ ಸಾಧ್ಯವಿಲ್ಲ. ನಾನು ನಟಿಯಾಗಿದ್ದೇ ಆಕಸ್ಮಿಕ. ಸೂರಿ ಸರ್ ಒಮ್ಮೆ ಅಪ್ಪನ ಹತ್ತಿರ 'ಪಾಪ್ಕಾರ್ನ್ ಮಂಕಿ ಟೈಗರ್' ಚಿತ್ರದ ಚರ್ಚೆ ಮಾಡುವುದಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ನನ್ನನ್ನು ನೋಡಿ, ಏಕೆ ನೀವು ಪಾತ್ರ ಮಾಡಬಾರದು ಎಂದು ಪ್ರಶ್ನಿಸಿದರು. ಆಗ ನಾನು ಅನಿರೀಕ್ಷಿತವಾಗಿ ಚಿತ್ರರಂಗಕ್ಕೆ ಬಂದೆ. ಅಂದುಕೊಂಡಂತೆ ಕನ್ನಡ ಸಿನಿಮಾ ಪ್ರೇಕ್ಷಕರು ನನ್ನನ್ನು ಒಪ್ಪಿಕೊಂಡಿದ್ದಾರೆ. ಇಲ್ಲೇ ಒಳ್ಳೊಳ್ಳೆ ಪಾತ್ರಗಳು ಹಾಗೂ ಸಿನಿಮಾಗಳನ್ನು ಮಾಡುವ ಆಸೆ ಇದೆ ಎಂದು ತಮ್ಮ ಭವಿಷ್ಯದ ಬಗ್ಗೆ ಹೇಳಿಕೊಂಡರು.
ಇದನ್ನೂ ಓದಿ: ಯುಪಿಎಸ್ಸಿ ಪರೀಕ್ಷೆ ಕಠಿಣವಲ್ಲ, ಬುದ್ಧಿವಂತಿಕೆ ಸಾಕು: 3ನೇ ಶ್ರೇಯಾಂಕಿತೆ ಅನನ್ಯಾ ರೆಡ್ಡಿ - Ananya Reddy