ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರ ಸಿನಿಮಾಗಳ ಜೊತೆ ಜೊತೆಗೆ ನವ ಪ್ರತಿಭೆಗಳ ಚಿತ್ರಗಳೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತೆರೆ ಕಾಣುತ್ತಿವೆ. ಹೊಸಬರ ಸಿನಿಮಾ ಮೇಕಿಂಗ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಶಾರ್ಟ್ ಫಿಲ್ಮ್, ವೆಬ್ ಸೀರಿಸ್ ಮೊದಲಾದವುಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಆಧುನಿಕ ತಂತ್ರಜ್ಞಾನ ಇರುವ ಸ್ಟುಡಿಯೋಗಳ ಅವಶ್ಯಕತೆ ಇದೆ. ಹೀಗಾಗಿ ನಿರ್ಮಾಪಕ ಕಮರ್, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸುಸಜ್ಜಿತ ಸೌಲಭ್ಯ ಹೊಂದಿರುವ 'ರೆಡ್ ರಾಕ್' ಎಂಬ ಸ್ಟುಡಿಯೋವನ್ನು ಇತ್ತೀಚೆಗೆ ಲೋಕಾರ್ಪಣೆಗೊಳಿಸಿದ್ದಾರೆ.
'ರೆಡ್ ರಾಕ್ ಸ್ಟುಡಿಯೋ' ಉದ್ಘಾಟಿಸಿದ ಪ್ರಿಯಾಂಕಾ ಉಪೇಂದ್ರ: ಬೆಂಗಳೂರಿನ ನಾಗರಬಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಸುಸಜ್ಜಿತ ಆಧುನಿಕ ಶೈಲಿಯಲ್ಲಿ 'ಕಮರ್ ಫಿಲಂ ಫ್ಯಾಕ್ಟರಿ' ಸಂಸ್ಥೆಯ ಸಹಯೋಗದಲ್ಲಿ ನಿರ್ಮಾಣವಾಗಿರುವ 'ರೆಡ್ ರಾಕ್ ಸ್ಟುಡಿಯೋ'ವನ್ನು ಪ್ರಿಯಾಂಕಾ ಉಪೇಂದ್ರ ಉದ್ಘಾಟಿಸಿದರು. ನಿರ್ಮಾಪಕ ಯೋಗಿ ದ್ವಾರಕೀಶ್ ಸೇರಿದಂತೆ ಚಿತ್ರರಂಗದ ಗಣ್ಯರು ಹಾಜರಿದ್ದರು.
ಸ್ಟುಡಿಯೋ ಉದ್ಘಾಟಿಸಿ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, "ಇಂದಿನ ದಿನಗಳಲ್ಲಿ ಸಿನಿಮಾಗಳಿಗೆ ಕಂಟೆಂಟ್ ಮತ್ತು ಕ್ವಾಲಿಟಿ ತುಂಬಾನೇ ಮುಖ್ಯ. ಇತ್ತೀಚೆಗೆ ಬರುತ್ತಿರುವ ಸಾಕಷ್ಟು ಹೊಸ ಸಿನಿಮಾ ಮೇಕರ್ಸ್ ಹೊಸದಾಗಿ ಯೋಚಿಸುತ್ತಿದ್ದಾರೆ. ವಿಭಿನ್ನ ರೀತಿಯ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅಂಥವರಿಗೆ ಕೈಗೆಟಕುವ ದರದಲ್ಲಿ ತಂತ್ರಜ್ಞಾನ ಲಭ್ಯತೆಯಿದ್ದರೆ ಗುಣಮಟ್ಟದ ಸಿನಿಮಾ ಮಾಡಬಹುದು. ಅದರಂತೆ, ರೆಡ್ ರಾಕ್ ಸ್ಟುಡಿಯೋದಲ್ಲಿ ಇಂದಿನ ಸಿನಿಮಾ ಮೇಕರ್ಸ್ಗೆ ಬೇಕಾದ ಎಲ್ಲಾ ಸೌಲಭ್ಯಗಳಿದ್ದು, ಇದರಿಂದ ಚಿತ್ರರಂಗಕ್ಕೆ ಒಳ್ಳೆಯದಾಗಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು ರೇವ್ ಪಾರ್ಟಿ ಕೇಸ್: ತೆಲುಗು ನಟಿಯ ಬೆಂಬಲಕ್ಕೆ ನಿಂತ ಟಾಲಿವುಡ್ ಸೂಪರ್ ಸ್ಟಾರ್ - Vishnu Manchu On Rave Party
ನೂತನ ರೆಡ್ ರಾಕ್ ಸ್ಟುಡಿಯೋದಲ್ಲಿ ಸಿನಿಮಾ ಮತ್ತು ದೃಶ್ಯ ಮಾಧ್ಯಮಗಳಿಗೆ ಬೇಕಾದ ಎಡಿಟಿಂಗ್, ಡಬ್ಬಿಂಗ್, ಡಿ.ಐ, ವಿಎಫ್ಎಕ್ಸ್, ಗ್ರೀನ್ ಮ್ಯಾಟ್ ಶೂಟ್, ಪೋಟೋ ಶೂಟ್, 5.1 ಮತ್ತು 7.1 ಸೌಂಡ್ ಸಿಸ್ಟಂ, ಅಟ್ಮೋಸ್ ಹೀಗೆ ಎಲ್ಲಾ ರೀತಿಯ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳಿದ್ದು, ಕೈಗೆಟಕುವ ದರದಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಒಂದೇ ಸೂರಿನಡಿ ಬೆಂಗಳೂರಿನಲ್ಲೇ ಮಾಡಬಹುದು.
ಕಮರ್ ಫಿಲಂ ಫ್ಯಾಕ್ಟರಿಯ ಕಮರ್, ಹಿರಿಯ ನಿರ್ದೇಶಕ ಬುಕ್ಕಾಪಟ್ಟಣ ವಾಸು, ಕೃಷ್ಣ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಿಯಾಂಕಾ ಉಪೇಂದ್ರ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿದ್ದು, ಸದ್ಯ ಕೆಲ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿಯ ಮುಂದಿನ ಚಿತ್ರಗಳ ಮೇಲೆ ಸಿನಿಪ್ರಿಯರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಮತ್ತೊಂದೆಡೆ, ಇವರ ಪತಿ ಉಪೇಂದ್ರ 'ಯು ಐ' ಸಿನಿಮಾ ಸಲುವಾಗಿ ಸುದ್ದಿಯಲ್ಲಿದ್ದಾರೆ.