ಬೆಂಗಳೂರು: ಮಲಯಾಳಂ ಸಿನಿಮಾ ಇಂಡಸ್ಟ್ರಿಯ ನ್ಯಾ. ಹೇಮ ಸಮಿತಿಯ ವರದಿ ಬೆನ್ನಲ್ಲೇ ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚನೆ ಆಗಬೇಕೆಂಬ ಬೇಡಿಕೆ ವ್ಯಕ್ತವವಾಗಿದೆ. ಕೆಲ ದಿನಗಳ ಹಿಂದೆ ನಿರ್ದೇಶಕಿ ಕವಿತಾ ಲಂಕೇಶ್, ನಟ ಚೇತನ್, ನಟಿಯರಾದ ಶ್ರುತಿ ಹರಿಹರನ್, ನೀತು ಸೇರಿದಂತೆ ಕೆಲವರು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ಮಾಡಿಕೊಂಡಿದ್ದರು. 'ಫೈರ್' ಹೆಸರಿನಲ್ಲಿ ಕಮಿಟಿ ರಚನೆ ವಿಚಾರವಾಗಿ ಸೋಮವಾರ(ಸೆ.16) ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಧ್ಯಕ್ಷ ಎನ್. ಎಮ್ ಸುರೇಶ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ನೇತೃತ್ವದಲ್ಲಿ ಒಂದು ಮಹತ್ವದ ಸಭೆ ನಡೆಸಲಾಯ್ತು.
ಈ ಸಭೆಯಲ್ಲಿ ನಿರ್ದೇಶಕಿ ಕವಿತಾ ಲಂಕೇಶ್, ನಟಿ ನೀತು ಶೆಟ್ಟಿ , ಭಾವನಾ ರಾಮಣ್ಣ, ಸಂಜನಾ ಗಲ್ರಾನಿ, ನಟಿ ತಾರಾ ಅನುರಾಧ, ಅನಿತಾ ಭಟ್, ಅಶ್ವಿನಿ ಗೌಡ , ವಾಣಿಶ್ರೀ, ಸಿಂಧು ಲೋಕನಾಥ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ನಿರ್ಮಾಪಕರ ಸಂಘದ ಉಮೇಶ್ ಬಣಕಾರ್, ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದ್, ಉಪಾಧ್ಯಕ್ಷರಾದ ಪ್ರಮೀಳಾ ಜೋಷಾಯ್ ಸೇರಿದಂದೆ 20ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.
ಸುಮಾರು ಒಂದು ಗಂಟೆಗೂ ಹೆಚ್ಚು ಹೊತ್ತು ನಡೆದ ಈ ಸಭೆಯಲ್ಲಿ ಪರ ವಿರೋಧ ಚರ್ಚೆಗಳ ಬಳಿಕ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾಧ್ಯಮಗಳೊಂದಿಗೆ ಮಾತನಾಡಿ, ಕನ್ನಡ ಚಿತ್ರರಂಗದಲ್ಲಿ ಈ ರೀತಿಯ ಕಮಿಟಿ ಇಲ್ಲ. ಹೀಗಾಗಿ ಸಮಿತಿ ರಚನೆಯ ಅವಶ್ಯಕತೆ ಇದೆ. ಆದ್ರೆ 'ಫೈರ್' ಹೆಸರಿನ ಕಮಿಟಿ ಮಾಡುವ ಬಗ್ಗೆ ಪರ ವಿರೋಧದ ಮಾತುಗಳು ಬಂದಿವೆ. ಹೀಗಾಗಿ ಮುಂದಿನ 15 ದಿನಗಳಲ್ಲಿ ಫಿಲ್ಮ್ ಚೇಂಬರ್ ಹಾಗೂ ಫೈರ್ ಕಮಿಟಿಯವರು ಚರ್ಚೆ ಮಾಡಿ ತಿಳಿಸಲು ಸೂಚಿಸಲಾಗಿದೆ. ಆದ್ರೆ ಹೇಮಾ ಕಮಿಟಿ ಬದಲು ಪಾಶ್ ಕಮಿಟಿ ರಚನೆ ಮಾಡುವ ನಿರ್ಧಾರ ಆಗಿದೆ. ಈ ಪಾಶ್ ಕಮಿಟಿ ಮಾಡುವ ವಿಚಾರ ಸರ್ಕಾರದ ಗೆಜೆಟ್ನಲ್ಲಿದೆ. ಆ ಕಾರಣಕ್ಕೆ ಪಾಶ್ ಕಮಿಟಿ ರಚನೆ ಆಗಲಿದೆ ಎಂದು ತಿಳಿಸಿದರು.
ಈ ಸಭೆಯ ಬಳಿಕ ಫೈರ್ ಕಮಿಟಿಯ ಅಧ್ಯಕ್ಷೆ ಕವಿತಾ ಲಂಕೇಶ್ ಮಾತನಾಡಿ, ''ಈ ಸಭೆಯ ನಿರ್ಧಾರದಿಂದ ಅಸಮಾಧಾನವಾಗಿದೆ. ನಮಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ. ಮಹಿಳೆಯರಿಗೆ ಸಿನಿಮಾ ರಂಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಆದ್ರೆ ಆ ಕಾಲದಲ್ಲಿ ಯಾವ ನಟಿಯರೂ ತಮಗಾದ ಸಮಸ್ಯೆಯನ್ನ ಹೇಳಿಕೊಂಡಿರಲಿಲ್ಲ. ಈಗ ನಟಿಯರು ಮುಂದೆ ಬರುತ್ತಿದ್ದಾರೆ. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಅವರು ಯಾರಿಗೂ ತಿಳಿಯದಂತೆ (ನಟಿಯರ ಹೆಸರು ಬಹಿರಂಗಪಡಿಸದೇ) ಸರ್ವೇ ಮಾಡುತ್ತೇವೆ ಎಂದು ಹೇಳಿದ್ದಾರೆ. ಇದು ಒಳ್ಳೆಯ ವಿಚಾರ''.
''ಆದ್ರೆ ಕೆಲ ನಿರ್ಮಾಪಕರು ಇಂದಿನ ಸಭೆಯಲ್ಲಿ ಯಾವುದೇ ರೀತಿಯ ಶೋಷಣೆ ಆಗ್ತಿಲ್ಲ ಅಂತಾ ಹೇಳುತ್ತಿದ್ದಾರೆ. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕಮಿಟಿ ರಚನೆ ಆಗಲೇಬೇಕು. ಇಂದಿನ ಸಭೆಯಲ್ಲಿ ಸರಿಯಾಗಿ ಚರ್ಚೆ ಮಾಡಲು ಆಗಲಿಲ್ಲ. ಸಭೆಯಲ್ಲಿ ಕೆಲ ನಿರ್ಮಾಪಕರು ಮಹಿಳೆಯರಿಗೆ ಒಳ್ಳೆ ಸಂಭಾವನೆ ಹಾಗೂ ಸೂಕ್ತ ಸೌಲಭ್ಯ ನೀಡುತ್ತಿದ್ದೇವೆ ಅಂತಾರೆ. ಆದ್ರೆ ಮಹಿಳೆಯರಿಗಾದ ಸಮಸ್ಯೆಗಳನ್ನು ನಿರ್ಮಾಪಕರ ಹತ್ತಿರ ಚರ್ಚೆ ಮಾಡೋದಕ್ಕೆ ಆಗುತ್ತಾ ಹೇಳಿ. ಅಲ್ಲದೇ, ಮಹಿಳೆಯರಿಲ್ಲದೇ ಸಿನಿಮಾ ಮಾಡುತ್ತೇನೆ ಅಂತಿದ್ದಾರೆ, ಇಲ್ಲೂ ಮಹಿಳೆಯರನ್ನು ಹತ್ತಿಕ್ಕುವ ಕೆಲಸ ಆಗುತ್ತಿದೆ. ಇದು ಸರಿಯಲ್ಲ. ಕಮಿಟಿ ಮಾಡುವುದರಿಂದ ಮುಂದೆ ಬರುವ ಎಲ್ಲಾ ನಟಿಯರಿಗೆ ಸುರಕ್ಷತೆ ಸಿಗುತ್ತದೆ. ಆದ್ರೆ ಕಮಿಟಿ ಬೇಡ ಅಂದ್ರೆ ಹೇಗೆ? ಈಗಾಗ್ಲೇ ಫೈರ್ ಕಮಿಟಿಯಿಂದ ದೂರು ನೀಡುವುದರ ಬಗ್ಗೆ ಹೆಲ್ಪ್ ಲೈನ್ ಮಾಡುತ್ತಿದ್ದೇವೆ. ನಮ್ಮ ಫೈರ್ ಕಮಿಟಿಗೆ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ಇದು ಸರ್ಕಾರದಿಂದ ರಚನೆ ಆದಾಗ ಕಾನೂನು ರೀತಿಯಲ್ಲಿ ಹೋರಾಟ ಮಾಡುಬಹುದು'' ಎಂದು ತಿಳಿಸಿದರು.
ಗಾಳಿಪಟ ಸಿನಿಮಾ ಖ್ಯಾತಿಯ ನೀತು ಮಾತನಾಡಿ, ಪಾಶ್ ಕಮಿಟಿ ಆಗಬೇಕು ಅನ್ನೋದು ಸರ್ಕಾರದ ಗೆಜೆಟ್ ಅಲ್ಲೇ ಇದೆ. ಆದ್ರೆ ಇಂದಿನ ಸಭೆಗೆ ಹೊಸ ಕಮಿಟಿ ವಿಚಾರವಾಗಿ ಚರ್ಚೆ ಮಾಡಲು ಬಂದೆವು. ನಿರ್ಮಾಪಕ, ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ ಗೋವಿಂದು ಅವರು ನೀವು ಮಾತನಾಡಬೇಡಿ ಅಂದ್ರು. ಅವರು ನನ್ನನ್ನು ಹತ್ತಿಕ್ಕುವ ಕೆಲಸ ಮಾಡಿದ್ರು. ನಾನು ಓಪನ್ ಆಗಿ ಮಾತನಾಡುತ್ತೇನೆ. ನಮ್ಮ ಸಿನಿಮಾ ಇಂಡಸ್ಟ್ರಿಯಲ್ಲೂ ಸಮಸ್ಯೆಗಳಿವೆ. ಚಿಕ್ಕ ಚಿಕ್ಕ ವಿಷಯಗಳಿಗೆ ನಿರ್ಮಾಪಕರು ಹಾಗೂ ನಿರ್ದೇಶಕರು ಕೆಟ್ಟದಾಗಿ ಮಾತನಾಡಿರೋ ಉದಾಹರಣೆಗಳಿವೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ರು.
ಇದನ್ನೂ ಓದಿ: ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಕೋ, ಬೇಡವೋ? ಚರ್ಚೆಗೆ ಫಿಲ್ಮ್ ಚೇಂಬರ್ನಲ್ಲಿ ಮಹತ್ವದ ಸಭೆ - Committee in Sandalwood
ನಾನು ಸಿನಿಮಾಗಳನ್ನು ಮಾಡುವಾಗ ಕೆಲ ಬಾರಿ ಸಮಸ್ಯೆಗಳನ್ನು ಎದುರಿಸಿದ್ದೇನೆ. ಒಮ್ಮೆ ಸಿನಿಮಾ ವಿಚಾರವಾಗಿ ಫಿಲ್ಮ್ ಚೇಂಬರ್ ನಲ್ಲಿ ದೂರು ನೀಡುವುದಕ್ಕೆ ಅಂತಾ ಬಂದಾಗ ಆಗ ಫಿಲ್ಮ್ ಚೇಂಬರ್ನಲ್ಲಿ ನನಗೆ ಸರಿಯಾಗಿ ನ್ಯಾಯ ಸಿಗಲಿಲ್ಲ. ಇಂಥ ಸಂದರ್ಭದಲ್ಲಿ ನಾನು ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದ ನಟಿ, ಫೈರ್ ಹೆಸರಲ್ಲಿ ಕಮಿಟಿ ಆದಾಗ ಅನ್ಯಾಯ ಆದವರಿಗೆ ನ್ಯಾಯ ಸಿಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ 'ಫೈರ್' ಹೆಸರಿನಲ್ಲಿ ಹೊಸ ಕಮಿಟಿ ರಚೆನೆ ಆಗಬೇಕೋ ಬೇಡವೋ ಎಂಬ ಬಗ್ಗೆ ಪರ ವಿರೋಧ ಚರ್ಚೆ ಆಗುತ್ತಿದೆ. ಮುಂದಿನ 15 ದಿನಗಳಲ್ಲಿ ಈ ಫೈರ್ ಕಮಿಟಿ ರಚನೆ ಆಗುತ್ತಾ ಅಥವಾ ಪಾಶ್ ಕಮಿಟಿ ಮಾತ್ರ ಜಾರಿಗೆ ಬರುತ್ತಾ ಎಂಬುದನ್ನು ಕಾದು ನೋಡಬೇಕಿದೆ.