ಚೆನ್ನೈ(ತಮಿಳುನಾಡು): ಹಿರಿಯ ತಮಿಳು ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಚಿಕಿತ್ಸೆಗಾಗಿ ಸೋಮವಾರ ತಡರಾತ್ರಿ ಚೆನ್ನೈನ ಅಯರ್ವಿಳಕ್ಕು ಪ್ರದೇಶದ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
76 ವರ್ಷದ ನಟ ಸದ್ಯ ಎರಡು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಜ್ಞಾನವೇಲ್ ರಾಜಾ ಅವರ ವೇಟ್ಟೈಯಾನ್ ಸಿನಿಮಾ ಅಕ್ಟೋಬರ್ 10 ರಂದು ಬಿಡುಗಡೆಗೆ ತಯಾರಾಗಿದೆ. ಇನ್ನು ನಿರ್ದೇಶ ಲೋಕೇಶ್ ಕನಕರಾಜ್ ಅವರ ಕೂಲಿ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ವೇಳೆ ಹಠಾತ್ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದೆ ಎಂದೂ ವರದಿಯಾಗಿದೆ.
ಇನ್ನೊಂದೆಡೆ ಈಗಾಗಲೇ ನಿಗದಿಯಾಗಿರುವ ಹೃದಯ ಸಂಬಂಧಿ ಪರೀಕ್ಷೆಗಾಗಿ ರಜನಿಕಾಂತ್ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರಜನಿಕಾಂತ್ ಅವರಿಗೆ ಹೃದಯ ಸಂಬಂಧಿ ಸಮಸ್ಯೆ ಇರುವ ಕಾರಣ ಹೃದ್ರೋಗ ತಜ್ಞರ ಅಪಾಯಿಂಟ್ಮೆಂಟ್ ಇದ್ದು, ಅಕ್ಟೋಬರ್ 1 ರಂದು (ಇಂದು) ಬೆಳಗ್ಗೆ ಪ್ರಮುಖ ಪರೀಕ್ಷೆಗೆ ಒಳಗಾಗಲಿದ್ದಾರೆ. ವೈದ್ಯಕೀಯ ಪರೀಕ್ಷೆ ಮುಗಿಸಿ ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ ಎನ್ನಲಾಗಿದೆ.
ಆದರೆ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ಅಪೋಲೋ ಆಸ್ಪತ್ರೆ ಅಥವಾ ರಜನಿಕಾಂತ್ ಅವರ ಕುಟುಂಬದವರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಇಂದು ಬೆಳಗ್ಗೆ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯಿಂದ ಪತ್ರಿಕಾ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ. ರಜನಿಕಾಂತ್ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಹಬ್ಬುತ್ತಿದ್ದಂತೆ ಅಭಿಮಾನಿಗಳು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: 'ಅವಾರ್ಡ್ ಕೊಡುತ್ತೇವೆಂದು ಕರೆಸಿ, ಕೊಡಲಿಲ್ಲ': ಐಫಾ ಬಗ್ಗೆ ನಿರ್ದೇಶಕ ಹೇಮಂತ್ ಅಸಮಾಧಾನ - Hemanth Rao IIFA Experience