ಹೈದರಾಬಾದ್ (ತೆಲಂಗಾಣ): ಹೈದರಾಬಾದ್‌ನ ಮಾದಾಪುರ ಪ್ರದೇಶದಲ್ಲಿರುವ ತಮ್ಮ 'ಎನ್-ಕನ್ವೆನ್ಷನ್ ಸೆಂಟರ್' ಅನ್ನು ತೆರವುಗೊಳಿಸಿರುವುದರ ಕುರಿತು ಟಾಲಿವುಡ್ನ ಖ್ಯಾತ ನಟ ನಾಗಾರ್ಜುನ ಅಕ್ಕಿನೇನಿ ಪ್ರತಿಕ್ರಿಯಿಸಿದ್ದಾರೆ. ತುಮ್ಮಿಡಿಕುಂಟಾ ಕೆರೆಯ ಫುಲ್ ಟ್ಯಾಂಕ್ ಲೆವೆಲ್ (ಎಫ್‌ಟಿಎಲ್) ವ್ಯಾಪ್ತಿಯಲ್ಲಿ ಭೂಮಿ ಒತ್ತುವರಿ ಮಾಡಿಕೊಂಡು ಈ ಕಟ್ಟಡ ನಿರ್ಮಿಸಲಾಗಿದೆ ಎಂಬ ಆರೋಪಗಳಿವೆ. ಹೊಸ ರಾಜ್ಯ ಸರ್ಕಾರದ ಘಟಕವಾಗಿರೋ 'ಹೈದರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಮತ್ತು ಅಸೆಟ್ಸ್ ಮಾನಿಟರಿಂಗ್ ಆಂಡ್ ಪ್ರೊಟೆಕ್ಷನ್' (HYDRA) ಈ 'ಎನ್-ಕನ್ವೆನ್ಷನ್ ಸೆಂಟರ್' ಅನ್ನು ನೆಲಸಮ ಮಾಡಿದೆ.
ಇಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಜನಪ್ರಿಯ ನಟ ನಾಗಾರ್ಜುನ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ನ್ಯಾಯಾಲಯದಿಂದ ತಡೆಯಾಜ್ಞೆ ಇದ್ದರೂ ಸಹ ಎನ್-ಕನ್ವೆನ್ಷನ್ ಸೆಂಟರ್ ಅನ್ನು ಧ್ವಂಸಗೊಳಿಸಲಾಗಿದೆ ಎಂಬುದನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಹೇಳಿಕೆಯಲ್ಲಿ, ''ತಡೆಯಾಜ್ಞೆಗಳಿದ್ದರೂ, ನ್ಯಾಯಾಲಯದಲ್ಲಿ ಪ್ರಕರಣ ಮುಂದುವರಿದಿದ್ದರೂ ಅದಕ್ಕೆ ವಿರುದ್ಧವಾಗಿ ಎನ್ ಕನ್ವೆನ್ಷನ್ ಸೆಂಟರ್ ಅನ್ನು ಕಾನೂನುಬಾಹಿರ ರೀತಿಯಲ್ಲಿ ಕೆಡವಿರುವುದು ನೋವಾಗಿದೆ. ನನ್ನ ಪ್ರತಿಷ್ಠೆಯನ್ನು ರಕ್ಷಿಸಲು ಮತ್ತು ನಾವು ಕಾನೂನು ಉಲ್ಲಂಘಿಸಿ ಯಾವುದೇ ಕೆಲಸ ಮಾಡಿಲ್ಲ ಎಂಬುದನ್ನು ತಿಳಿಸಿಲು ಈ ಹೇಳಿಕೆ ನೀಡುವುದು ಸೂಕ್ತವೆನಿಸಿತು. ಇದು ಪಟ್ಟಾ ಭೂಮಿಯಾಗಿದೆ. ಒಂದು ಇಂಚು ಭೂಮಿಯನ್ನೂ ಅತಿಕ್ರಮಿಸಿಲ್ಲ ಅಥವಾ ಒತ್ತುವರಿ ಮಾಡಿಕೊಂಡಿಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಖಾಸಗಿ ಆಸ್ತಿ ನಿರ್ಮಾಣದ ಸುತ್ತಲಿರುವ ಆರೋಪಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನುಬಾಹಿರ ಕಟ್ಟಡ ಉರುಳಿಸುವಿಕೆಯ ನೋಟಿಸ್ ವಿರುದ್ಧ ನೀಡಲಾದ ಹಿಂದಿನ ತಡೆಯಾಜ್ಞೆಯನ್ನು ಉಲ್ಲೇಖಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿ, "ಇಂದು ತಪ್ಪು ಮಾಹಿತಿ ಆಧಾರದ ಮೇಲೆ ಕಟ್ಟಡ ಧ್ವಂಸಗೊಳಿಸಲಾಗಿದೆ. ಇಂದು ಬೆಳಗ್ಗೆ ಕಟ್ಟಡ ನೆಲಸಮ ಮಾಡುವ ಮೊದಲು ಯಾವುದೇ ನೋಟಿಸ್ ನೀಡಲಾಗಿಲ್ಲ. ನಾನು ಕಾನೂನು ಪಾಲಿಸುವ ನಾಗರಿಕ. ನ್ಯಾಯಾಲಯಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ನನ್ನ ವಿರುದ್ಧ ನಿರ್ಧಾರ ಕೈಗೊಂಡಿದ್ದಾರೆ. ನಾನೇ ಕಟ್ಟಡ ಉರುಳಿಸುತ್ತಿದ್ದೆ" ಎಂದು ಅವರು ಬರೆದುಕೊಂಡಿದ್ದಾರೆ.
Pained by the unlawful manner of demolition carried out in respect of N Convention, contrary to existing stay orders and Court cases.
— Nagarjuna Akkineni (@iamnagarjuna) August 24, 2024
I thought it fit to issue this statement to place on record certain facts for protecting my reputation and to indicate that we have not done any…
ಇದನ್ನೂ ಓದಿ: ಶಸ್ತ್ರಚಿಕಿತ್ಸೆಗೊಳಗಾದ ಸೂಪರ್ ಸ್ಟಾರ್ ರವಿತೇಜ: 6 ವಾರ ಬೆಡ್ ರೆಸ್ಟ್ಗೆ ವೈದ್ಯರ ಸಲಹೆ - Ravi Teja Injury
ಮಾತು ಮುಂದುವರಿಸಿದ ನಟ, "ನಮ್ಮಿಂದ ಭೂಮಿ ಅತಿಕ್ರಮಣ ಆಗಿದೆ ಎಂದು ಯಾವುದೇ ತಪ್ಪು ಅಭಿಪ್ರಾಯಗಳಿದ್ದರೆ, ಅದನ್ನು ಸರಿಪಡಿಸುವ ಉದ್ದೇಶದಿಂದ ನಾನು ಈ ಟ್ವೀಟ್ ಮಾಡುತ್ತಿದ್ದೇನೆ. ಅಧಿಕಾರಿಗಳ ಈ ತಪ್ಪು ಕ್ರಮಗಳಿಗೆ ಸಂಬಂಧಿಸಿದಂತೆ ನಾವು ನ್ಯಾಯಾಲಯದಿಂದ ಸೂಕ್ತ ಪರಿಹಾರವನ್ನು ಪಡೆಯುತ್ತೇವೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ವಿಹಾನ್, ಅಂಕಿತಾ ಅಮರ್ ಅಭಿನಯಕ್ಕೆ ಪ್ರಶಸ್ತಿ ಸಿಗಲಿದೆ': ರಕ್ಷಿತ್ ಶೆಟ್ಟಿ ಭವಿಷ್ಯ - Rakshit Shetty
ನ್ಯಾಷನಲ್ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆ್ಯಕ್ಟ್ ಅಡಿ, ಜುಲೈ 12, 2024ರಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು'ಹೈದರಾಬಾದ್ ಡಿಸಾಸ್ಟರ್ ರೆಸ್ಪಾನ್ಸ್ ಮತ್ತು ಅಸೆಟ್ಸ್ ಮಾನಿಟರಿಂಗ್ ಆಂಡ್ ಪ್ರೊಟೆಕ್ಷನ್' (HYDRA) ಅನ್ನು ಪರಿಚಯಿಸಿದರು. ನೈಸರ್ಗಿಕ ವಿಕೋಪ ನಿರ್ವಹಣೆ, ಸರ್ಕಾರಿ ಆಸ್ತಿಗಳನ್ನು ರಕ್ಷಿಸುವುದು, ಕೆರೆಗಳು ಮತ್ತು ಕೊಳಗಳ ಅತಿಕ್ರಮಣವನ್ನು ತಡೆಯುವುದು ಮತ್ತು ಅಕ್ರಮ ನಿರ್ಮಾಣಗಳನ್ನು ತಡೆಯುವುದು ಇದರ ಉದ್ದೇಶವಾಗಿದೆ.