ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಮತ್ತು ತಮಿಳುನಾಡಿನ ಲಾಭೇತರ ಸಂಸ್ಥೆಯಾಗಿರುವ ಐಸಿಟಿ ಅಕಾಡೆಮಿ ಜೊತೆಗೂಡಿ ತಮಿಳುನಾಡಿನ 48 ಸಾವಿರ ಅಭ್ಯರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿಗೆ ನೆರವಾಗಲು ಮುಂದಾಗಿದೆ. ಈ ಎರಡು ಸಂಸ್ಥೆಗಳು ಜಂಟಿಯಾಗಿ ಮೂರು ವರ್ಷಗಳ ಕಾಲ ವಿದ್ಯಾರ್ಥಿಗಳ ವಿವಿಧ ಕೌಶಲ್ಯ ಅಭಿವೃದ್ಧಿಗೆ ಸಹಾಯ ಮಾಡಲಿದೆ.
ಐಟಿ ತರಬೇತಿ, ಬ್ಯಾಂಕಿಂಗ್, ಹಣಕಾಸು ಸೇವೆ ಮತ್ತು ವಿಮೆ, ಚಿಲ್ಲರೆ, ಇ- ಕಾಮರ್ಸ್, ಲಾಜಿಸ್ಟಿಕ್, ಔಟ್ಪ್ರೊಸೆಸಿಂಗ್ ಪ್ರಕ್ರಿಯೆ ಜ್ಞಾನ ಮತ್ತು ಸಾಫ್ಟ್ ಸ್ಕಿಲ್ಗಳ ಕುರಿತು ತರಬೇತಿ ನೀಡಲಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಇನ್ಫೋಸಿಸ್, ಭಾರತದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಗೆ ಸಂಸ್ಥೆ, ಐಸಿಟಿ ಅಕಾಡೆಮಿ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಯೋಜನೆಗಾಗಿ ಸಂಸ್ಥೆ 33 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಶಿಕ್ಷಣವು ಉದ್ಯೋಗದ ಮಾರ್ಗಗಳನ್ನು ಸೃಷ್ಟಿಸಬೇಕು. ಐಸಿಟಿ ಅಕಾಡೆಮಿಯೊಂದಿಗಿನ ಸಹಯೋಗದ ಮೂಲಕ ಅಗತ್ಯವಾದ ತಾಂತ್ರಿಕ ಮತ್ತು ಸಾಫ್ಟ್ ಸ್ಕಿಲ್ಗಳನ್ನು ಹೊಂದಲು ಪ್ರೆರೇಪಿಸಲಾಗುವುದು. ಈ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿ ಅಭ್ಯಸಿಸುತ್ತಿರುವ ವಿಭಾಗಗಳಲ್ಲಿ ಉತ್ತಮ ಸಾಧನೆಗೈಯಲು ಮತ್ತು ಸುಸ್ಥಿರ ವೃತ್ತಿಜೀವನವನ್ನು ಸೃಷ್ಟಿಸಲು ಪ್ರೋತ್ಸಾಹಿಸುತ್ತದೆ. ಭಾರತದ 2 ಮತ್ತು 3ನೇ ಶ್ರೇಣಿಯಲ್ಲಿ ಇಂಜಿನಿಯರಿಂಗ್, ಕಲೆ ಮತ್ತು ವಿಜ್ಞಾನ ಪದವಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಉದ್ಯೋಗ ಪಡೆಯಲು ನೆರವಾಗುವಂತಹ ಅಗತ್ಯ, ಪ್ರಸ್ತುತ ಕೌಶಲ್ಯವನ್ನು ಈ ಯೋಜನೆ ಮೂಲಕ ಕಲಿಸಲಾಗುವುದು.
ಈ ಒಪ್ಪಂದದ ಅನುಸಾರ ಇನ್ಫೋಸಿಸ್ ಫೌಂಡೇಷನ್ ಭಾರತದಲ್ಲಿನ 450ಕ್ಕೂ ಹೆಚ್ಚಿನ ಕಾಲೇಜುಗಳಲ್ಲಿ ಯುವ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೇಂದ್ರ ಸ್ಥಾಪಿಸಲಿದೆ. ಇದು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿ ಸೇವಾ ಕೇಂದ್ರವಾಗಿ ಹೊರಹೊಮ್ಮಲಿದೆ.
ತರಬೇತಿ ಪಡೆದವರಿಗೆ ಉದ್ಯೋಗಾವಕಾಶ: ಈ ಯೋಜನೆಯಲ್ಲಿ ಕೋರ್ ಸ್ಕಿಲ್ಗಳಿಗೆ 80 ಗಂಟೆಗಳ ತರಬೇತಿ, ಸಾಫ್ಟ್ ಸ್ಕಿಲ್ಗಳಿಗೆ 20 ಗಂಟೆ ತರಬೇತಿ ನೀಡಲಾಗುವುದು. ಇದೇ ವೇಳೆ ಯುವ ಸಬಲೀಕರಣ ಶೃಂಗಸಭೆಗಳು ಮತ್ತು ಕೋಡಿಂಗ್ ಅಭ್ಯಾಸ ಸೇರಿದಂತೆ ಇತರ ಚಟುವಟಿಕೆಗಳನ್ನು ನಡೆಸಲಾಗುವುದು. ಹಾಗೇ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಉದ್ಯೋಗ ಸೌಲಭ್ಯ ಕಲ್ಪಿಸಲಾಗುವುದು ಎಂದಿದೆ.
ಈ ಯೋಜನೆಯ ಉಪಕ್ರಮವನ್ನು ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ ನಿಯಂತ್ರಿಸುತ್ತದೆ. ಇನ್ಫೋಸಿಸ್‌ನ ಪ್ರಮುಖ ಡಿಜಿಟಲ್ ಕಲಿಕಾ ವೇದಿಕೆ, ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಕೌಶಲ್ಯವನ್ನು ಹೆಚ್ಚು ಸುಲಭವಾಗಿಸಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀವು ಕೆಲಸ ಹುಡುಕುತ್ತಿದ್ದರೆ ಈ ಸಾಫ್ಟ್ ಸ್ಕಿಲ್ಸ್ ಅತ್ಯವಶ್ಯಕ