ನವದೆಹಲಿ: ರಾಷ್ಟ್ರದ ನಿರ್ಮಾಣವು ಮೂಲಭೂತವಾಗಿ ಕಾನೂನಿನ ನಿಯಮದಿಂದ ನಿಯಂತ್ರಿಸಲ್ಪಡುವ ಉತ್ತಮ ಆಡಳಿತದ ಅಡಿಪಾಯದ ಮೇಲೆ ಅವಲಂಬಿತವಾಗಿದೆ ಎಂದು ಸಂಸತ್ ಸದಸ್ಯ ಮತ್ತು ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ತಿಳಿಸಿದರು.
'ಜಿ 20 ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಯಲ್ಲಿ ವಕೀಲರು ಮತ್ತು ಕಾನೂನು ವೃತ್ತಿಯ ಪಾತ್ರ' ಕುರಿತ ಜಿ 20 ಸಮಾವೇಶದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅಭಿಷೇಕ್ ಮನು ಸಿಂಘ್ವಿ, "ಜಿ 20ಯಂಥ ಉಪಕ್ರಮಗಳು ಕೆಲ ಅಗತ್ಯ ಸಿದ್ಧಾಂತಗಳನ್ನು ಆಧರಿಸಿವೆ. ಸ್ಪಷ್ಟ ಸಾಮೂಹಿಕ ಕ್ರಿಯೆ, ಸಾರ್ವತ್ರಿಕ ದೃಷ್ಟಿಕೋನ, ಜಾಗತಿಕ ನಾಗರಿಕತೆ, ಬಹುರಾಷ್ಟ್ರೀಯ ಸಹಕಾರ, ಸಿನರ್ಜಿ ಮತ್ತು ಸಹಯೋಗಗಳು ಇದರಲ್ಲಿ ಸೇರಿವೆ" ಎಂದು ಹೇಳಿದರು.
"ನೀತಿ ನಿರೂಪಕರು, ಕೈಗಾರಿಕಾ ನಾಯಕರು ಮತ್ತು ನಾಗರಿಕ ಸಮಾಜದೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಜಾಗತಿಕ ನಿಯಮಗಳನ್ನು ಸಕ್ರಿಯವಾಗಿ ರೂಪಿಸಲು ವಿಶೇಷವಾಗಿ ಯುವ ವಕೀಲರಿಗೆ ಅವಕಾಶವಿದೆ" ಎಂದು ಅವರು ಹೇಳಿದರು.
"ಕಾನೂನು ಸಮುದಾಯವು ಭಾರತದ ರಾಷ್ಟ್ರೀಯ ಆಂದೋಲನವಾಗಿದ್ದ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿತ್ತು. ಮಹಾತ್ಮ ಗಾಂಧಿಯವರಿಂದ ಹಿಡಿದು ಅಂಬೇಡ್ಕರ್, ನೆಹರೂ, ಸರ್ದಾರ್ ಪಟೇಲ್ ಮತ್ತು ಇತರ ಎಲ್ಲ ಮುಖಂಡರೂ ಕಾನೂನು ಕ್ಷೇತ್ರದೊಂದಿಗೆ ಇಟ್ಟುಕೊಂಡಿದ್ದ ನಿಕಟ ಸಂಪರ್ಕ ನಮಗೆಲ್ಲರಿಗೂ ತಿಳಿದಿದೆ. ಆದರೆ ಜಿ 20 ದೇಶಗಳಲ್ಲಿ ಮತ್ತು ಲಿಂಕನ್‌ನಿಂದ ಮಂಡೇಲಾವರೆಗೆ ಕಾನೂನುಬದ್ಧವಾಗಿ ತರಬೇತಿ ಪಡೆದ ವ್ಯಕ್ತಿಗಳು ನೀಡಿದ ಕೊಡುಗೆಗಳ ಬಗ್ಗೆ ಯಾರಿಗೂ ಹೆಚ್ಚು ತಿಳಿದಿಲ್ಲ" ಎಂದು ಅವರು ನುಡಿದರು.
"ಈ ವ್ಯಕ್ತಿಗಳ ಕೊಡುಗೆಗಳು ನ್ಯಾಯಾಲಯದಾಚೆಗೂ ವಿಸ್ತರಿಸಿವೆ. ಅವರು ಭವಿಷ್ಯದ ಪೀಳಿಗೆಗಾಗಿ ತಮ್ಮ ತಮ್ಮ ರಾಷ್ಟ್ರಗಳನ್ನು ರೂಪಿಸಿದರು. ಕಾನೂನು ವೃತ್ತಿಯು ಕೈಗಾರಿಕೀಕರಣ ಮತ್ತು ಆರ್ಥಿಕ ಬೆಳವಣಿಗೆಯ ಹೃದಯಭಾಗದಲ್ಲಿದೆ ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ" ಎಂದು ಸಿಂಘ್ವಿ ವಿವರಿಸಿದರು.
"ಯುವ ವಕೀಲರು ಹೊಸ ಸಮನ್ವಯದ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು. ಇದು ಕೃತಕ ಬುದ್ಧಿಮತ್ತೆ ಮಾತ್ರವಲ್ಲದೆ ಡೇಟಾ ಗೌಪ್ಯತೆ, ಡೇಟಾ ಸುರಕ್ಷತೆ, ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳಲ್ಲಿ ಪಕ್ಷಪಾತವನ್ನು ತಗ್ಗಿಸುವಂತಹ ವಿಷಯಗಳಿಗೆ ಅನ್ವಯಿಸುತ್ತದೆ. ಇಲ್ಲಿ ಜಿ 20 ವಕೀಲರು ತಟಸ್ಥ ಮೂರನೇ ಪಕ್ಷಗಳಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಬೇಕು. ಪರಿಣಾಮಕಾರಿ ನಿಯಮಗಳನ್ನು ಸುಗಮಗೊಳಿಸಬೇಕು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಸಂಘರ್ಷಗಳನ್ನು ಪರಿಹರಿಸಲು ಒಂದು ಮಾದರಿ ಅಥವಾ ಕಾರ್ಯವಿಧಾನವನ್ನು ರಚಿಸಬೇಕು" ಎಂದು ಹಿರಿಯ ವಕೀಲ ಸಿಂಘ್ವಿ ತಿಳಿಸಿದರು.
ಒ.ಪಿ.ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ಸ್ಥಾಪಕ ಉಪಕುಲಪತಿ ಹಾಗೂ ಜಿಂದಾಲ್ ಗ್ಲೋಬಲ್ ಲಾ ಸ್ಕೂಲ್ ಡೀನ್ ಡಾ.ಸಿ.ರಾಜ್ ಕುಮಾರ್ ಮಾತನಾಡಿ, ಜಿ20 ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಯಲ್ಲಿ ವಕೀಲರು ಮತ್ತು ಕಾನೂನು ವೃತ್ತಿಯ ಪಾತ್ರ ಈ ಸಮಾವೇಶದ ಮುಖ್ಯ ವಿಷಯವಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕದಲ್ಲಿದ್ದಾರೆ 27 ಬಿಲಿಯನೇರ್‌ಗಳು: ಬೀಜಿಂಗ್ ಮೀರಿಸಿ ಆರ್ಥಿಕ ಹಬ್ ಆಗಿ ಬೆಳೆದ ಮುಂಬೈ - Hurun Global Rich List