ಮುಂಬೈ (ಮಹಾರಾಷ್ಟ್ರ): ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದು, 'ನಾರಿಶಕ್ತಿ' ಬೆಳೆಯುತ್ತಿದೆ. ಸ್ವಾವಲಂಬನೆಯತ್ತ ಸಾಗುತ್ತಿರುವ ಮಹಿಳೆಯರು ಉದ್ಯೋಗ ಕ್ಷೇತ್ರದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ದೇಶದಲ್ಲಿ 69.2 ಕೋಟಿ ಮಹಿಳೆಯರು (ಶೇಕಡಾ 37 ರಷ್ಟು) ಉದ್ಯೋಗದಲ್ಲಿ ಸಕ್ರಿಯರಾಗಿದ್ದಾರೆ ಎಂಬ ಅಂಶ ವರದಿಯಲ್ಲಿ ತಿಳಿದುಬಂದಿದೆ.
ಟ್ಯಾಲೆಂಟ್ ಸೊಲ್ಯೂಶನ್ ಪ್ರೊವೈಡರ್ ಕೆರಿಯರ್ನೆಟ್ಸ್ 'ದಿ ಸ್ಟೇಟ್ ಆಫ್ ವುಮೆನ್ಸ್ ಎಂಪ್ಲಾಯ್ಮೆಂಟ್ ಇನ್ ಇಂಡಿಯಾ' ಎಂಬ ಅಧ್ಯಯನ ನಡೆಸಿದ್ದು, ದೇಶದಲ್ಲಿ ಮಹಿಳಾ ಉದ್ಯೋಗಿಗಳ ಜನಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಂಡುಕೊಂಡಿದೆ. ಒಟ್ಟು ಮಹಿಳಾ ಜನಸಂಖ್ಯೆಯಲ್ಲಿ ಸುಮಾರು 37 ಪ್ರತಿಶತದಷ್ಟು ಜನರು ಒಂದಿಲ್ಲೊಂದು ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ವರದಿ ಗುರುತಿಸಿದೆ.
ವೃತ್ತಿಪರ ಕೆಲಸಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. 2022ಕ್ಕೆ ಹೋಲಿಸಿದರೆ, 2023 ರಲ್ಲಿ ಇದು 2 ರಿಂದ 5 ಪ್ರತಿಶತದಷ್ಟು ಗಮನಾರ್ಹ ಏರಿಕೆ ಕಂಡಿದೆ. ಕಳೆದ ವರ್ಷ ಶೇಕಡಾ 40 ರಷ್ಟು ಹೊಸ ಮಹಿಳಾ ಪ್ರತಿಭೆಗಳನ್ನು ಕಾಲೇಜುಗಳು ಹುಟ್ಟುಹಾಕಿವೆ ಎಂಬುದು ವರದಿಯಲ್ಲಿನ ವಿಶೇಷ ಅಂಶ.
1 ರಿಂದ 3 ವರ್ಷ, 3 ರಿಂದ 7 ವರ್ಷಗಳ ಅನುಭವ ಹೊಂದಿರುವ ಮಹಿಳಾ ಉದ್ಯೋಗಿಗಳು ವಿವಿಧ ಕ್ಷೇತ್ರಗಳಲ್ಲಿ ನೇಮಕವಾದ ಒಟ್ಟು ಪ್ರಮಾಣದಲ್ಲಿ ಶೇಕಡಾ 20-25 ರಷ್ಟು ಪ್ರತಿಶತದಷ್ಟಿದ್ದಾರೆ ಎಂದು ವರದಿ ಬಹಿರಂಗ ಮಾಡಿದೆ.
ಎಲ್ಲಿ ಹೆಚ್ಚು, ಕಡಿಮೆ ಮಹಿಳಾ ವರ್ಕರ್ಸ್: ಮಹಿಳಾ ಉದ್ಯೋಗಿಗಳು ಅತಿಹೆಚ್ಚಾಗಿ ಸಕ್ರಿಯವಾಗಿರುವುದು ದೇಶದಲ್ಲಿಯೇ ಹೈದರಾಬಾದ್ ಮೊದಲ ಸ್ಥಾನದಲ್ಲಿದೆ. ಪುಣೆ ಮತ್ತು ಚೆನ್ನೈ ನಗರಗಳು ನಂತರದ ಸ್ಥಾನದಲ್ಲಿವೆ. ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಇದರ ಅನುಪಾತ ಹಿಂದಿಗಿಂತಲೂ ಶೇಕಡಾ 2 ರಷ್ಟು ಇಳಿಕೆ ಕಂಡಿದ್ದು, ಬಿಟ್ಟರೆ ಉಳಿದ ರಾಜ್ಯಗಳಲ್ಲಿ ಏರಿಕೆ ಗತಿಯಲ್ಲಿದೆ. ನೂತನ ಟೆಕ್ ಸಿಟಿಯಾಗಿ ಬೆಳೆಯುತ್ತಿರುವ ಹೈದರಾಬಾದ್ನಲ್ಲಿ ಶೇಕಡಾ 34 ರಷ್ಟು ಮಹಿಳಾ ನೇಮಕಾತಿಗಳು ದಾಖಲಾಗುತ್ತಿದ್ದರೆ, ಪುಣೆಯಲ್ಲಿ ಶೇಕಡಾ 33, ಚೆನ್ನೈನಲ್ಲಿ ಶೇಕಡಾ 29 ರಷ್ಟು ನೇಮಕಾತಿಯಿದೆ.
ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರಗಳಲ್ಲಿ ಮಹಿಳಾ ಉದ್ಯೋಗಿಗಳು ಹೆಚ್ಚುತ್ತಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳು ವಿದೇಶಗಳಲ್ಲಿನ ಶಾಖೆಗಳಿಗೂ ಆಯ್ಕೆಯಾಗುತ್ತಿದ್ದಾರೆ ಎಂದು ವರದಿ ಹೇಳಿದೆ. ವಿಶೇಷವೆಂದರೆ ವೇತನದ ಅಂತರ ಕೂಡ ಭಾರೀ ಪ್ರಮಾಣದಲ್ಲಿ ಇಳಿಕೆ ಕಂಡಿದೆ ಎಂದು ಹೇಳಿದೆ. ಕಳೆದ ವರ್ಷಕ್ಕಿಂತ ಶೇಕಡಾ 20 ರಿಂದ 30 ರಷ್ಟು ಅಂತರ ಕಡಿಮೆಯಾಗಿದೆ. ಇದು ಸಮಾನ ವೇತನ ಪಾಲಿಸಿಯತ್ತ ಹೊರಳುತ್ತಿರುವ ಮುನ್ಸೂಚನೆಯಾಗಿದೆ ಎಂದಿದೆ.
ಇದನ್ನೂ ಓದಿ: 'ರಾಜಕೀಯ ಸ್ಟಾರ್ಟ್ಅಪ್ನಲ್ಲಿ ಪ್ರತಿ ಬಾರಿ ಫೇಲ್': ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ