ಹೈದರಾಬಾದ್: ಡಿಜಿಟಲ್ ಯುಗದಲ್ಲಿ ಹಳೆಕಾಲದ ಉದ್ಯಮಗಳಿಂದ ಏನು ಪ್ರಯೋಜನ ಎಂದು ಆಕರ್ಷಕ ವೇತನಗಳಿಗಾಗಿ ನಗರಗಳಿಗೆ ಯುವಜನತೆ ವಲಸೆ ಹೋಗುತ್ತಾರೆ. ಆದರೆ, ಯಾದಗಿರಿ ಭುವನಗಿರಿ ಜಿಲ್ಲೆಯ ಪಿಪಲಪಹಡ್ನ ಪಂತಂಗಿ ಗ್ರಾಮದ ಈ ಮೂವರು ಮಹಾತ್ವಕಾಂಕ್ಷಿ ಯುವಕರು ಸಾಂಪ್ರದಾಯಿಕ ಪದ್ದತಿಯ ಮೂಲಕವೇ ಲಕ್ಷ ಲಕ್ಷ ದುಡಿಯುತ್ತಿದ್ದಾರೆ.
ತಮ್ಮ ಬೇರು ಮರೆತು ಉದ್ಯೋಗ ಅರಸಿ ನಗರಗಳಿಗೆ ವಲಸೆ ಹೋಗದೇ ಸ್ವಂತ ಊರಿನಲ್ಲಿಯೇ ಉದ್ಯಮ ಮಾಡಿ ಯಶಸ್ಸು ಕಂಡಿದ್ದಾರೆ. ಅವರೇ ಪ್ರವೀಣ್, ರಂಗಯ್ಯ ಮತ್ತು ಚೆಕುರಿ ಬಾಬು. ಪದವಿ ಬಳಿಕ ಮುಂಬೈನಲ್ಲಿ ಕೆಲಸ ಮಾಡಿದ ಇವರಲ್ಲಿ ಕಾರ್ಪೊರೇಟ್ ಉದ್ಯೋಗ ತೊರೆದು ಸ್ವಯಂ ಉದ್ಯೋಗಿಗಳಾಗಬೇಕು ಎಂಬ ಕನಸು ಚಿಗುರೊಡೆಯಿತು.
ಇದಕ್ಕಾಗಿ ಈ ತ್ರಿವಳಿಗಳು ತಮ್ಮೂರಿಗೆ ಬಂದು ಸಾಂಪ್ರದಾಯಿಕ ಪದ್ಧತಿಯಿಂದ ಎಣ್ಣೆ ತಯಾರಿಸುವ ಎತ್ತುಗಳಿಂದ ಚಾಲಿತವಾಗುವ ವುಡನ್ ಕೋಲ್ಡ್ ಪ್ರೆಷರ್ ಅಂದರೆ, ಎಣ್ಣೆ ಗಾಣವನ್ನು ಆರಂಭಿಸಿದರು. ಇದಕ್ಕೂ ಮುನ್ನ ಅವರು ಪಲಮುರು ಜಿಲ್ಲೆಯಲ್ಲಿ ಜಕ್ಲಪಲ್ಲಿ ಅವರ ಮಾರ್ಗದರ್ಶನದ ಮೂಲಕ ಎಣ್ಣೆಗಾಣದಲ್ಲಿ ನೈಪುಣ್ಯತೆ ಪಡೆದರು. ಬಳಿಕ ತಮ್ಮೂರಿಗೆ ಮರಳಿದ ಅವರು ಕೊಯ್ಯಲಗುಡೆಂನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಜಾಗವನ್ನು ಬಾಡಿಗೆ ಪಡೆದರು. ತಾವು ಕೂಡಿಟ್ಟ ಉಳಿತಾಯದ ಜೊತೆಗೆ ಸಂಬಂಧಿಗಳ ಸಹಾಯದಿಂದ ಎಣ್ಣೆ ಗಾಣದ ಮನೆ ನಿರ್ಮಿಸಿದರು.
ಎತ್ತುಗಳ ಸಹಾಯದಿಂದ ಗಾಣದಲ್ಲಿ ಕಡಲೆಬೀಜ, ತೆಂಗಿನ ಎಣ್ಣೆ, ಎಳ್ಳೆ ಮತ್ತು ಹರಳೆಣ್ಣೆಯನ್ನು ಉತ್ಪಾದಿಸಲು ಆರಂಭಿಸಿದರು. ನಿತ್ಯ 30 ಲೀಟರ್ ಎಣ್ಣೆಯನ್ನು ಉತ್ಪಾದಿಸಿ, ಒಂದೊಂದೇ ಹೆಜ್ಜೆ ಇಡಲು ಆರಂಭಿಸಿದರು. ಅಲ್ಲದೇ ಅವರ ಉದ್ದಿಮೆ ಚೇತರಿಕೆ ಕಂಡು ಮಾಸಿಕ ಒಂದು ಲಕ್ಷ ಆದಾಯವೂ ಬರಲಾರಂಭಿಸಿತು. ಸಾಂಪ್ರದಾಯಿಕ ಎಣ್ಣೆಗಳು ಆರೋಗ್ಯ ಪ್ರಯೋಜನವನ್ನು ಹೊಂದಿವೆ. ನೈಸರ್ಗಿಕ ಉತ್ಪಾದನಾ ಪ್ರಕ್ರಿಯೆ ಸಮೃದ್ಧ ಪೋಷಕಾಂಶದ ಅಂಶವನ್ನು ಹೊಂದಿರುವುದರಿಂದ ಇದರ ಬೇಡಿಕೆಯೂ ಹೆಚ್ಚಾಗುತ್ತಾ ಸಾಗಿತು.
ಎಣ್ಣೆ ತಯಾರಿಸಿದ ಬಳಿಕ ಉತ್ಪನ್ನಗಳ ತ್ಯಾಜ್ಯಗಳಿಂದಲೂ ಹೆಚ್ಚುವರಿ ಆದಾಯವನ್ನು ಈ ಮೂವರು ಸಂಪಾದಿಸಲು ಶುರು ಮಾಡಿದರು. ಇವರ ಈ ಎಣ್ಣೆಯ ಸುವಾಸನೆ ಮತ್ತು ರುಚಿ, ನೈಸರ್ಗಿಕ ಅಂಶಗಳಿಗೆ ಗ್ರಾಹಕರಿಂದ ಮೆಚ್ಚುಗೆ ಕೂಡ ವ್ಯಕ್ತವಾಯಿತು. ಸರ್ಕಾರದ ರಿಯಾಯಿತಿ ಪ್ರಯೋಜನ ಪಡೆದು ತಮ್ಮ ಉದ್ದಿಮೆಯ ಕಾರ್ಯಾಚರಣೆ ವಿಸ್ತರಿಸಿ, ಉತ್ಪಾದನೆ ಹೆಚ್ಚಿಸಿದರು. ಇದರ ಫಲವಾಗಿ ಅವರು ಗಡಿದಾಟಿ ಮಾರುಕಟ್ಟೆಯಲ್ಲಿ ವಿಶಾಲ ವ್ಯಾಪ್ತಿಯಲ್ಲಿ ಗ್ರಾಹಕರನ್ನು ತಲುಪುವ ಮೂಲಕ ಪ್ರಖ್ಯಾತಿ ಕೂಡಾ ಪಡೆದರು
ಕೇವಲ ಉದ್ಯಮಿಗಳಲ್ಲ: ಪ್ರವೀಣ್, ರಂಗಯ್ಯ ಮತ್ತು ಚೆಕುರಿ ಬಾಬು ಕೇವಲ ಉದ್ಯಮಿಗಳು ಆಗಿಲ್ಲ. ಅವರು ಗ್ರಾಮಗಳಲ್ಲಿನ ಸ್ವ ಉದ್ಯೋಗಿಗಳಿಗೆ ಸಲಹೆ ನೀಡುವ ಮೂಲಕ ಪ್ರತಿಯೊಬ್ಬರು ಉದ್ಯೋಗ ಹೊಂದುವಂತೆ ಪ್ರೋತ್ಸಾಹಿಸುತ್ತಿದ್ದಾರೆ. ಬೇರೆ ನಗರಗಳಿಗೆ ಉದ್ಯೋಗ ಅರಸುವ ಬದಲು ಗ್ರಾಮದಲ್ಲಿಯೇ ಇರುವ ಉದ್ಯೋಗಾವಕಾಶ ಹುಡುಕುವಂತೆ ಯುವಕರಿಗೆ ಪ್ರೇರೇಪಿಸುತ್ತಿದ್ದಾರೆ.
ಆಧುನಿಕ ಕಾಲದಲ್ಲಿನ ಸಾಂಪ್ರದಾಯಿಕ ಅಭ್ಯಾಸಗಳು ಮತ್ತು ಸುಸ್ಥಿರತೆ ಸಾಮರ್ಥ್ಯವು ಅವರ ಯಶಸ್ಸಿಗೂ ಕಾರಣವಾಗಿದೆ. ಸ್ಥಳೀಯ ಸಂಪ್ರದಾಯವನ್ನು ಕಾಪಾಡುವ ಮೂಲಕ ಆರ್ಥಿಕ ಬೆಳವಣಿಗೆ ಕಂಡಿದ್ದಾರೆ. ಈ ತ್ರಿವಳಿಗಳ ಸಮರ್ಪಣೆ, ಅವಿಷ್ಕಾರವೂ ಸ್ಥಳೀಯ ಉದ್ಯಮದ ಮೇಲೆ ವೈಯಕ್ತಿಕ ಮತ್ತು ಸಾಮುದಾಯಿಕವಾಗಿ ಸಕಾರಾತ್ಮಕ ಪರಿಣಾಮವನ್ನು ಬೀರಿದೆ.
ಇದನ್ನೂ ಓದಿ: ಮುಂದಿನ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ 7ರಷ್ಟು ಬೆಳವಣಿಗೆ: ಹಣಕಾಸು ಇಲಾಖೆ