ಹೈದರಾಬಾದ್: ತ್ವರಿತ ಸಾಲವನ್ನು ತೆಗೆದುಕೊಳ್ಳುವ ಮೊದಲು ನೀವು ಈ ವಿಷಯಗಳನ್ನು ತಿಳಿದುಕೊಳ್ಳಲೇಬೇಕು. ಅದು ಅಗತ್ಯವೂ ಹೌದು. ಒಂದು ಕಾಲದಲ್ಲಿ, ಸಾಲ ಪಡೆಯಲು ಬ್ಯಾಂಕ್‌ಗಳನ್ನು ಸುತ್ತಬೇಕಾಗಿತ್ತು. ಆದರೆ ಈಗ ಅಷ್ಟೊಂದು ಕಷ್ಟಪಡಬೇಕಿಲ್ಲ. ಸಾಲ ಪಡೆಯುವುದು ಈಗ ತುಂಬಾ ಸುಲಭ. ಯಾವುದೇ ದಾಖಲೆ ನೀಡದೇ ಅದು ಒಂದೇ ಕ್ಲಿಕ್ನಲ್ಲಿ ನಿಮಗೆ ಬೇಕಾದಷ್ಟು ಸಾಲ ಪಡೆದುಕೊಳ್ಳಬಹುದು.
ತ್ವರಿತ ಸಾಲಗಳು ಸುಲಭವಾಗಿ ಲಭ್ಯವಾಗುವುದರಿಂದ, ಈ ರೀತಿಯ ಸಾಲಗಳ ಜನಪ್ರಿಯತೆ ಹೆಚ್ಚುತ್ತಿದೆ. ಅಂದಹಾಗೆ ನೀವೇನಾದರೂ ಇಂತಹ ತ್ವರಿತ ಸಾಲಗಳಿಗಾಗಿ ಪ್ರಯತ್ನಿಸುತ್ತಿದ್ದೀರಾ? ಆದರೆ ಮೊದಲು ನೀವು ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳಲೇಬೇಕು.
ಸಾಲ ಪಡೆಯಲು ಸರಿಯಾದ ನಿಯಮ ಅನುಸರಿಸಿ: ಆನ್‌ಲೈನ್ ಈಗ ತ್ವರಿತ ಸಾಲ ನೀಡುವ ಸಾಕಷ್ಟು ಆ್ಯಪ್ಗಳಿವೆ. ಇವುಗಳಲ್ಲಿ ಹೆಚ್ಚಿನವು ನಕಲಿ ಕಂಪನಿಗಳು ಅಥವಾ ಮೋಸ ಎಸಗುವ ಕಂಪನಿಗಳಾಗಿರುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ವೆಬ್‌ಸೈಟ್‌ಗಳಲ್ಲಿ ಸಾಲಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ಓದಿ. ಗ್ರಾಹಕರ ವಿಮರ್ಶೆಗಳು ಮತ್ತು ರೇಟಿಂಗ್‌ಗಳನ್ನು ಸಹ ನೋಡಿ. ಆಗ ನಿಮಗೆ ಒಂದು ತೀರ್ಮಾನಕ್ಕೆ ಬರಲು ಅಲ್ಪ- ಸ್ವಲ್ಪವಾದರೂ ಗೊತ್ತಾಗಬಹುದು. ಅಷ್ಟೇ ಅಲ್ಲ ಆ ಆ್ಯಪ್ ಸರಿಯಾದ ವೇದಿಕೆಯೋ ಅಲ್ಲವೋ ಎಂಬುದೂ ತಿಳಿಯುತ್ತದೆ. ಪಾರದರ್ಶಕ ನೀತಿಗಳು, ಸುರಕ್ಷಿತ ಆನ್‌ಲೈನ್ ವಹಿವಾಟುಗಳು ಮತ್ತು ನ್ಯಾಯಯುತ ಸಾಲ ನೀಡುವ ಅಭ್ಯಾಸಗಳನ್ನು ಹೊಂದಿರುವ ಕಂಪನಿಗಳನ್ನೇ ಸಾಲ ಪಡೆಯಲು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಆಗ ಮಾತ್ರ ನೀವು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ನೆಮ್ಮದಿಯಿಂದ ಇರುತ್ತೀರಿ ಮತ್ತು ಇರಬಹುದು.
ಬಡ್ಡಿದರಗಳ ಬಗ್ಗೆ ಇರಲಿ ಎಚ್ಚರ: ಸಾಲವನ್ನು ತೆಗೆದುಕೊಳ್ಳುವಾಗ ಬಡ್ಡಿದರಗಳ ಬಗ್ಗೆ ಖಂಡಿತವಾಗಿಯೂ ಯೋಚಿಸಬೇಕು. ಸಾಮಾನ್ಯ ಸಾಲಗಳಿಗೆ ಹೋಲಿಸಿದರೆ, ತ್ವರಿತ ಸಾಲಗಳ(ಇನ್ಸ್ಟಂಟ್ ಲೋನ್) ಬಡ್ಡಿ ದರಗಳು ತುಂಬಾ ಹೆಚ್ಚಿರುತ್ತದೆ. ಇದಲ್ಲದೇ, ವಿಳಂಬ ಪಾವತಿ ಶುಲ್ಕ, ಪೂರ್ವಪಾವತಿ ಶುಲ್ಕ ಮತ್ತು ಸಂಸ್ಕರಣಾ ಶುಲ್ಕವನ್ನು ಸಹ ವಿಧಿಸಲಾಗುತ್ತದೆ. ಆದ್ದರಿಂದ, ನೀವು ಕಡಿಮೆ ಬಡ್ಡಿದರದೊಂದಿಗೆ ಸಾಲ ನೀಡುವ ಕಂಪನಿಗಳನ್ನು ಆಯ್ಕೆ ಮಾಡಬೇಕು.
ಪಾವತಿ ಅವಧಿ ವಿಸ್ತರಿಸಬಹುದು: ಆರ್ಥಿಕ ಸಂಕಷ್ಟಗಳು ಯಾವಾಗ, ಹೇಗೆ ಬರುತ್ತವೆ ಎಂದು ಯಾರೂ ಊಹಿಸಿರಲಾರರು ಮತ್ತು ಅದನ್ನು ಹೇಳಲಾಗದು. ಆದ್ದರಿಂದ ಸಾಲವನ್ನು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡಲು ಒಮ್ಮೊಮ್ಮೆ ಸಾಧ್ಯವಾಗದೇ ಇರಬಹುದು. ಅಂತಹ ಸಂದರ್ಭಗಳಲ್ಲಿ ಆಯಾ ಸಾಲ ಕಂಪನಿಯು ಪಾವತಿ ಅವಧಿಯನ್ನು ವಿಸ್ತರಿಸುತ್ತದೆಯೇ? ಅಥವಾ? ಅದನ್ನು ಮುಂಚಿತವಾಗಿ ಪರಿಶೀಲಿಸಬೇಕು. ಆಗ ಮಾತ್ರ ನೀವು ವಿಳಂಬ ಶುಲ್ಕ ಮತ್ತು ಸಾಲ ವಂಚನೆಯ ಮುದ್ರೆಯಿಂದ ಪಾರಾಗಬಹುದು.
ಕಸ್ಟಮರ್ ಕೇರ್ ವ್ಯವಸ್ಥೆ ಇದೆಯೇ ಪರಿಶೀಲಿಸಿ: ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದಂತೆ ನೀವು ಸಾಲ ಪಡೆಯಲು ಉದ್ದೇಶಿಸಿರುವ ಕಂಪನಿ ಅಥವಾ ಸಂಸ್ಥೆ ಗ್ರಾಹಕರ ಸಮಸ್ಯೆ ಆಲಿಸಲು ಕಸ್ಟಮರ್ ಕೇರ್ ವ್ಯವಸ್ಥೆ ಇಟ್ಟುಕೊಂಡಿದೆಯಾ ಎಂಬ ಬಗ್ಗೆ ಪರಿಶೀಲಿಸಿ. ಸಾಲವನ್ನು ತೆಗೆದುಕೊಳ್ಳುವಾಗ, ಅದನ್ನು ತೆಗೆದುಕೊಂಡ ನಂತರ ಹಲವಾರು ಸಮಸ್ಯೆಗಳಿವೆ. ಕಾಲಕಾಲಕ್ಕೆ ಅವುಗಳನ್ನು ಪರಿಹರಿಸಲು ಸರಿಯಾದ ಗ್ರಾಹಕ ಸೇವಾ ವ್ಯವಸ್ಥೆ ಇರಬೇಕು. ಅದರಲ್ಲಿ ಚಾಟ್, ಫೋನ್ ಕರೆಗಳು, ಇ-ಮೇಲ್‌ಗಳಂತಹ ಬಹು ವಿಧಾನಗಳ ಮೂಲಕ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸುವ ವ್ಯವಸ್ಥೆ ಇರುವ ಆ್ಯಪ್ ಅಥವಾ ಹಣಕಾಸು ಸಂಸ್ಥೆಯನ್ನೇ ಆಯ್ಕೆ ಮಾಡಿ.
ಅಗತ್ಯ ಇದ್ದರೆ ಮಾತ್ರ ಸಾಲ ತೆಗೆದುಕೊಳ್ಳಿ: ತುರ್ತು ಸಂದರ್ಭಗಳಲ್ಲಿ ಮಾತ್ರ ಸಾಲ ಪಡೆಯಬೇಕು. ಅದೂ ಕೂಡ ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಪಡೆಯಿರಿ. ನೀವು ತುಂಬಾ ಸುಲಭವಾಗಿ ಸಾಲ ಪಡೆಯುತ್ತಿದ್ದರೆ, ಅವಶ್ಯಕತೆಗೆ ಮೀರಿ ಸಾಲ ತೆಗೆದುಕೊಂಡರೆ ನಂತರ ಆರ್ಥಿಕ ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದ, ತ್ವರಿತ ಸಾಲವನ್ನು ತೆಗೆದುಕೊಳ್ಳುವ ಮೊದಲು, ನಿಮ್ಮ ಮಾಸಿಕ ಆದಾಯ ಮತ್ತು ವೆಚ್ಚಗಳನ್ನು ಒಮ್ಮೆ ಪರಿಶೀಲಿಸುವುದು ಸೂಕ್ತ. ಪೂರ್ವಾಪರ ಯೋಚಿಸಿದ ಬಳಿಕ ನಾನು ತ್ವರಿತ ಸಾಲಗಳನ್ನು ತೆಗೆದುಕೊಳ್ಳಬೇಕೇ? ಅಥವಾ ಬೇಡವೇ? ಎಂದು ನಿರ್ಧರಿಸಿ
ಇದನ್ನು ಓದಿ: ಐಎಂಇಇಸಿ ಕಾರಿಡಾರ್: ಭೌಗೋಳಿಕ, ರಾಜಕೀಯ ಮತ್ತು ಆರ್ಥಿಕ ಪರಿಣಾಮಗಳು