ನವದೆಹಲಿ: 2023-24ರ ಹಣಕಾಸು ವರ್ಷ ಕೊನೆಗೊಳ್ಳಲು ಕೇವಲ 10 ದಿನಗಳು ಬಾಕಿ ಇವೆ. ಆದರೆ, ಮಾರ್ಚ್ 31, 2024 ರೊಳಗೆ ತೆರಿಗೆ ಉಳಿತಾಯ ಮಾಡಲು ಏನು ಮಾಡಬೇಕೆಂಬುದು ಈಗಲೂ ಅನೇಕರಿಗೆ ತಿಳಿದಿಲ್ಲ. ತೆರಿಗೆ ಉಳಿತಾಯವು ಅನೇಕರಿಗೆ ಒತ್ತಡ ಮೂಡಿಸುವ ಕೆಲಸವಾಗಿದೆ. ಆದರೆ ಅದು ಯಾರಿಗೂ ಒತ್ತಡದ ಕೆಲಸವಾಗಬೇಕಿಲ್ಲ. ತೆರಿಗೆ ಉಳಿತಾಯ ಸಾಧನಗಳಲ್ಲಿ ವ್ಯೂಹಾತ್ಮಕವಾಗಿ ಹೂಡಿಕೆ ಮಾಡುವ ಮೂಲಕ, ಒಬ್ಬರು ತಮ್ಮ ತೆರಿಗೆ ಬಾಧ್ಯತೆಯನ್ನು ಕಡಿಮೆ ಮಾಡುವುದಲ್ಲದೇ, ಸಾಕಷ್ಟು ಉಳಿತಾಯದೊಂದಿಗೆ ಸುರಕ್ಷಿತ ಆರ್ಥಿಕ ಭವಿಷ್ಯವನ್ನು ನಿರ್ಮಿಸಿಕೊಳ್ಳಬಹುದು.
ವಿವಿಧ ತೆರಿಗೆ ಉಳಿತಾಯದ ಮಾರ್ಗಗಳನ್ನು ಪರಿಶೀಲಿಸುವ ಮೊದಲು, ತೆರಿಗೆ ಉಳಿತಾಯ ಹೂಡಿಕೆಗಳ ಮಹತ್ವವನ್ನು ಮೊದಲು ಅರ್ಥಮಾಡಿಕೊಳ್ಳೋಣ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಮತ್ತು ಇತರ ವಿಭಾಗಗಳ ಅಡಿಯಲ್ಲಿ ತೆರಿಗೆಗಳನ್ನು ಉಳಿಸಲು ಸರ್ಕಾರವು ತೆರಿಗೆದಾರರಿಗೆ ವಿವಿಧ ಮಾರ್ಗಗಳನ್ನು ಒದಗಿಸಿದೆ. ಈ ಹೂಡಿಕೆಗಳು ನಿಮ್ಮ ತೆರಿಗೆಗೆ ಒಳಪಡುವ ಆದಾಯವನ್ನು ಕಡಿಮೆ ಮಾಡುವುದಲ್ಲದೇ ಸಂಪತ್ತಿನ ಸೃಷ್ಟಿಯ ಸಾಮರ್ಥ್ಯವನ್ನು ಸಹ ನೀಡುತ್ತವೆ.
ಏನಿದು ಸೆಕ್ಷನ್ 80ಸಿ?: ಸೆಕ್ಷನ್ 80 ಸಿ ಇದು ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ಗಳಲ್ಲಿ ಒಂದಾಗಿದೆ. ಇದು ತೆರಿಗೆದಾರರು ಠೇವಣಿ ಯೋಜನೆಗಳು ಮತ್ತು ವೆಚ್ಚಗಳಲ್ಲಿ ಹೂಡಿಕೆ ಮಾಡುವ ಮೂಲಕ ತಮ್ಮ ತೆರಿಗೆಗೆ ಒಳಪಡುವ ಆದಾಯದ ಮೇಲೆ ತೆರಿಗೆ ಕಡಿತ ಪಡೆಯಲು ಅನುವು ಮಾಡಿಕೊಡುತ್ತದೆ. ಪ್ರಸ್ತುತ ನಿಯಮಗಳ ಪ್ರಕಾರ, ಈ ನಿಬಂಧನೆಯ ಅಡಿ ಒಂದು ಹಣಕಾಸು ವರ್ಷದಲ್ಲಿ 1.5 ಲಕ್ಷ ರೂ.ಗಳವರೆಗೆ ತೆರಿಗೆ ಕಡಿತ ಪಡೆಯಬಹುದು. ಸೆಕ್ಷನ್ 80 ಸಿ ಅಡಿ ಎಲ್ಲ ಅರ್ಹ ಹೂಡಿಕೆಗಳು ಮತ್ತು ವೆಚ್ಚಗಳಿಗೆ 1.5 ಲಕ್ಷ ರೂ.ಗಳ ಮಿತಿ ಒಟ್ಟಾರೆಯಾಗಿ ಅನ್ವಯಿಸುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಪರಿಣಾಮಕಾರಿಯಾಗಿ ತೆರಿಗೆ ಉಳಿಸಲು ನಾವು ವಿವಿಧ ಬ್ಯಾಂಕಿಂಗ್ ಮತ್ತು ಹಣಕಾಸು ಯೋಜನೆಗಳನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ.
ತೆರಿಗೆ ಉಳಿತಾಯ ಯೋಜನೆಗಳು:
1. ಸ್ಥಿರ ಠೇವಣಿಗಳಿಂದ ತೆರಿಗೆ ಉಳಿತಾಯ: ಬ್ಯಾಂಕುಗಳ ಸ್ಥಿರ ಠೇವಣಿಗಳು ತೆರಿಗೆ ಉಳಿಸಲು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿವೆ. ಇವು ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತ ಸೌಲಭ್ಯ ನೀಡುತ್ತವೆ. ವಿವಿಧ ಅವಧಿಗಳವರೆಗೆ ಸ್ಥಿರ ಠೇವಣಿ ಇಡಬಹುದು ಮತ್ತು ಅದಕ್ಕೆ ಅನುಗುಣವಾಗಿ ಬಡ್ಡಿದರಗಳನ್ನು ಪಡೆಯಬಹುದು. ತಮ್ಮ ಹೂಡಿಕೆಗಳ ಮೇಲೆ ಸುರಕ್ಷಿತ ಮತ್ತು ಖಾತರಿಯ ಆದಾಯ ಬಯಸುವವರಿಗೆ ಇದು ಸೂಕ್ತವಾಗಿದೆ. ಸ್ಥಿರ ಠೇವಣಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದದ್ದು ಇಲ್ಲಿದೆ:
- ಲಾಕ್-ಇನ್ ಅವಧಿ: ತೆರಿಗೆ ಉಳಿತಾಯ ಎಫ್ಡಿಗಳು 5 ವರ್ಷಗಳ ಲಾಕ್-ಇನ್ ಅವಧಿ ಹೊಂದಿರುತ್ತವೆ. ಅಂದರೆ ನಿಮ್ಮ ಹಣವನ್ನು ಕನಿಷ್ಠ ಇಷ್ಟು ಅವಧಿಗೆ ಹೂಡಿಕೆ ಮಾಡಬೇಕಾಗುತ್ತದೆ.
- ತೆರಿಗೆ ಪ್ರಯೋಜನ: ತೆರಿಗೆ ಉಳಿತಾಯ ಎಫ್ಡಿಗಳಲ್ಲಿನ ಹೂಡಿಕೆಗಳು ಸೆಕ್ಷನ್ 80 ಸಿ ಅಡಿ ತೆರಿಗೆ ಕಡಿತಕ್ಕೆ ಅರ್ಹವಾಗಿವೆ. ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂ. ತೆರಿಗೆ ವಿನಾಯಿತಿ ಪಡೆಯಬಹುದು.
- ಬಡ್ಡಿ ತೆರಿಗೆ: ತೆರಿಗೆ ಉಳಿತಾಯ ಎಫ್ಡಿಗಳ ಮೇಲೆ ಗಳಿಸಿದ ಬಡ್ಡಿಗೆ ನಿಮ್ಮ ಆದಾಯ ತೆರಿಗೆ ಸ್ಲ್ಯಾಬ್ ಪ್ರಕಾರ ತೆರಿಗೆ ವಿಧಿಸಲಾಗುತ್ತದೆ.
2. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್): ಪಿಪಿಎಫ್ ಇದು ಕೇಂದ್ರ ಸರ್ಕಾರದ ದೀರ್ಘಾವಧಿಯ ಉಳಿತಾಯ ಮತ್ತು ಹೂಡಿಕೆ ಯೋಜನೆಯಾಗಿದೆ ಮತ್ತು ಸಣ್ಣ ಉಳಿತಾಯ ಯೋಜನೆಗಳ ವರ್ಗಕ್ಕೆ ಸೇರುತ್ತದೆ. ಇದು ಸರ್ಕಾರದಿಂದ ಬೆಂಬಲಿತವಾಗಿರುವುದರಿಂದ, ತೆರಿಗೆದಾರರಿಗೆ ಲಭ್ಯವಿರುವ ಸುರಕ್ಷಿತ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ಪಿಪಿಎಫ್ ಸೆಕ್ಷನ್ 80 ಸಿ ಅಡಿ ತೆರಿಗೆ ಕಡಿತ ಪಡೆಯಲು ಇದು ಅವಕಾಶ ನೀಡುತ್ತದೆ.
ಇತರ ಅನೇಕ ತೆರಿಗೆ ಉಳಿತಾಯ ಹೂಡಿಕೆಗಳಿಗೆ ಹೋಲಿಸಿದರೆ ಪಿಪಿಎಫ್ 15 ವರ್ಷಗಳ ದೀರ್ಘ ಲಾಕ್-ಇನ್ ಅವಧಿ ಹೊಂದಿದೆ. ಇದು ಏಳನೇ ವರ್ಷದಿಂದ ಭಾಗಶಃ ಮೊತ್ತವನ್ನು ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಸಹ ನೀಡುತ್ತದೆ.
ಪ್ರಸ್ತುತ ಪಿಪಿಎಫ್ ಬಡ್ಡಿದರವು ಹಣಕಾಸು ವರ್ಷ 24 ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 7.1ರಷ್ಟಿದೆ. ಪಿಪಿಎಫ್ ಬಡ್ಡಿದರವನ್ನು ಭಾರತ ಸರ್ಕಾರ ನಿಯಂತ್ರಿಸುತ್ತದೆ ಮತ್ತು ಪ್ರತಿ ತ್ರೈಮಾಸಿಕಕ್ಕೊಮ್ಮೆ ಪರಿಷ್ಕರಿಸುತ್ತದೆ. ಪಿಪಿಎಫ್ ಮೇಲಿನ ಬಡ್ಡಿಯನ್ನು ಮಾಸಿಕವಾಗಿ ಲೆಕ್ಕಹಾಕಲಾಗುತ್ತದೆ, ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ ಮತ್ತು ಹಣಕಾಸು ವರ್ಷದ ಕೊನೆಯಲ್ಲಿ, ಅಂದರೆ ಮಾರ್ಚ್ 31 ರಂದು ಜಮೆ ಮಾಡಲಾಗುತ್ತದೆ. ವರ್ಷಕ್ಕೆ ಕನಿಷ್ಠ 500 ರೂ. ಹೂಡಿಕೆ ಮಾಡುವ ಮೂಲಕ ಖಾತೆಯನ್ನು ಸಕ್ರಿಯವಾಗಿಡಬಹುದು.
ಪಿಪಿಎಫ್ ಖಾತೆಯ ಮ್ಯಾಚುರಿಟಿಯ ನಂತರ ನೀವು ಬಯಸಿದರೆ ಅದನ್ನು ವಿಸ್ತರಿಸುವ ಆಯ್ಕೆ ನಿಮ್ಮ ಮುಂದಿದೆ. ಒಂದು ಬಾರಿಗೆ 5 ವರ್ಷದ ಅವಧಿಗೆ ಎಷ್ಟು ಬಾರಿ ಬೇಕಾದರೂ ಇದನ್ನು ವಿಸ್ತರಿಸಬಹುದು. ವಿಸ್ತೃತ ಅವಧಿ ಉದ್ದಕ್ಕೂ ನೀವು ಹೊಸದಾಗಿ ಹೂಡಿಕೆ ಮಾಡುವ ಅಗತ್ಯವಿರುವುದಿಲ್ಲ. ಕೆಲವು ಷರತ್ತುಗಳಿಗೆ ಒಳಪಟ್ಟು ನೀವು ಭಾಗಶಃ ಹೂಡಿಕೆಯನ್ನು ಹಿಂಪಡೆಯಬಹುದು. ಈ ಯೋಜನೆಯಲ್ಲಿ ಗಳಿಸಿದ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
3. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ): ಎನ್ಎಸ್ಸಿ ಇದು ಭಾರತೀಯ ನಿವಾಸಿಗಳಿಗೆ ರೂಪಿಸಲಾದ ಸರ್ಕಾರದ ಉಳಿತಾಯ ಯೋಜನೆಯಾಗಿದೆ. ಸರ್ಕಾರ ನಿಗದಿಪಡಿಸಿದ ಪೂರ್ವನಿರ್ಧರಿತ ಬಡ್ಡಿದರ ನೀಡುವುದರಿಂದ ಇದು ಸ್ಥಿರ-ಆದಾಯ ಹೂಡಿಕೆ ಆಯ್ಕೆಯಾಗಿದೆ. ಎನ್ಎಸ್ಸಿ ಆದಾಯ ತೆರಿಗೆ ಕಾಯ್ದೆ, 1961 ರ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತಗಳಿಗೆ ಅರ್ಹವಾಗಿದೆ. ಇದು 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ ಮತ್ತು ಖಾತರಿ ಆದಾಯವನ್ನು ಒದಗಿಸುತ್ತದೆ. ಹೀಗಾಗಿ, 5 ವರ್ಷಗಳ ಹೂಡಿಕೆ ಅವಧಿಯಲ್ಲಿ ಸುರಕ್ಷತೆ, ನಿರ್ದಿಷ್ಟ ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ಹುಡುಕುತ್ತಿರುವ ವ್ಯಕ್ತಿಗಳಿಗೆ ಇದು ಸೂಕ್ತ ಆಯ್ಕೆಯಾಗಿದೆ.
ಎನ್ಎಸ್ಸಿಯಿಂದ ಗಳಿಸಿದ ಬಡ್ಡಿ ಆದಾಯವು ಹೂಡಿಕೆದಾರರ ತೆರಿಗೆ ಶ್ರೇಣಿಯ ಆಧಾರದ ಮೇಲೆ ತೆರಿಗೆಗೆ ಒಳಪಟ್ಟಿರುತ್ತದೆ. ಆದಾಗ್ಯೂ, ಎನ್ಎಸ್ಸಿಯಲ್ಲಿ ಗಳಿಸಿದ ಬಡ್ಡಿಯನ್ನು ಪ್ರತಿ ಹಣಕಾಸು ವರ್ಷದಲ್ಲಿ ಹೂಡಿಕೆದಾರರಿಗೆ ಪಾವತಿಸಲಾಗುವುದಿಲ್ಲ.
ಎನ್ಎಸ್ಸಿಯಲ್ಲಿ ಹೂಡಿಕೆ ಮಾಡಬಹುದಾದ ಮೊತ್ತಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲವಾದರೂ, ವರ್ಷಕ್ಕೆ 1.5 ಲಕ್ಷ ರೂ.ವರೆಗಿನ ಹೂಡಿಕೆಗಳು ಮಾತ್ರ ಚಂದಾದಾರರಿಗೆ ಆದಾಯ ಕಾಯ್ದೆ ಕಾಯ್ದೆ 1961 ರ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ರಿಯಾಯಿತಿಗೆ ಅರ್ಹವಾಗಿರುತ್ತವೆ. ಇದಲ್ಲದೆ, ಪ್ರಮಾಣಪತ್ರಗಳ ಮೇಲೆ ಗಳಿಸಿದ ಬಡ್ಡಿಯನ್ನು ಆರಂಭಿಕ ಹೂಡಿಕೆಗೆ ಮತ್ತೆ ಸೇರಿಸಲಾಗುತ್ತದೆ ಮತ್ತು ತೆರಿಗೆ ವಿನಾಯಿತಿಗೆ ಅರ್ಹತೆ ಪಡೆಯುತ್ತದೆ. ಎನ್ಎಸ್ಸಿ ಮೇಲಿನ ಬಡ್ಡಿದರವು ಪ್ರಸ್ತುತ ಶೇಕಡಾ 7.7 ರಷ್ಟಿದೆ.
ಮೊದಲ ನಾಲ್ಕು ವರ್ಷಗಳವರೆಗೆ, ಎನ್ಎಸ್ಸಿಯಲ್ಲಿ ಗಳಿಸಿದ ಬಡ್ಡಿಯನ್ನು ಮರುಹೂಡಿಕೆ ಮಾಡಲಾಗುವುದರಿಂದ ಇದು ತೆರಿಗೆ ಕ್ರೆಡಿಟ್ಗೆ ಅರ್ಹವಾಗಿರುತ್ತದೆ. ಇದು ಒಟ್ಟಾರೆ ವಾರ್ಷಿಕ ಮಿತಿ 1.5 ಲಕ್ಷ ರೂ.ಗೆ ಒಳಪಟ್ಟಿರುತ್ತದೆ. ಆದಾಗ್ಯೂ, ಐದನೇ ವರ್ಷದಲ್ಲಿ ಗಳಿಸಿದ ಬಡ್ಡಿಯನ್ನು ಮರು ಹೂಡಿಕೆ ಮಾಡಲಾಗುವುದಿಲ್ಲ ಮತ್ತು ಹೀಗಾಗಿ ಇದಕ್ಕೆ ಹೂಡಿಕೆದಾರರಿಗೆ ಅನ್ವಯವಾಗುವ ಸ್ಲ್ಯಾಬ್ ದರದಲ್ಲಿ ತೆರಿಗೆ ವಿಧಿಸಲಾಗುತ್ತದೆ.
4. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್ಎಸ್): 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗಾಗಿ ವಿನ್ಯಾಸಗೊಳಿಸಲಾದ ಈ ಯೋಜನೆಯು ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ಗರಿಷ್ಠ 30 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು.
ಆದರೆ ಈ ಯೋಜನೆಯು ಹಿರಿಯ ನಾಗರಿಕರಿಗೆ ಮಾತ್ರ ಎಂಬುದು ಗಮನದಲ್ಲಿರಲಿ. ಆದಾಗ್ಯೂ, 55 ರಿಂದ 60 ವರ್ಷ ವಯಸ್ಸಿನ ನಿವೃತ್ತ ವ್ಯಕ್ತಿಗಳು ಸಹ ಇದರಲ್ಲಿ ಹೂಡಿಕೆ ಮಾಡಬಹುದು. ಆದರೆ ಅವರು ನಿವೃತ್ತಿ ಪ್ರಯೋಜನಗಳನ್ನು ಪಡೆದ ಒಂದು ತಿಂಗಳೊಳಗೆ ಹೂಡಿಕೆ ಮಾಡಬೇಕಾಗುತ್ತದೆ.
ಎಸ್ಸಿಎಸ್ಎಸ್ 5 ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿದೆ. ಮುಕ್ತಾಯದ ನಂತರ ಇದನ್ನು ಹೆಚ್ಚುವರಿ 3 ವರ್ಷಗಳವರೆಗೆ ವಿಸ್ತರಿಸಬಹುದು. ಎಸ್ಸಿಎಸ್ಎಸ್ ಮೇಲಿನ ಬಡ್ಡಿದರವನ್ನು ಸರ್ಕಾರ ನಿಗದಿಪಡಿಸುತ್ತದೆ ಮತ್ತು ಇದು ಬದಲಾವಣೆಗೆ ಒಳಪಟ್ಟಿರುತ್ತದೆ. ಇದರ ಬಡ್ಡಿದರಗಳು ಸಾಮಾನ್ಯವಾಗಿ ಸಾಮಾನ್ಯ ಎಫ್ಡಿಗಳಿಗಿಂತ ಹೆಚ್ಚಾಗಿರುತ್ತದೆ.
ಎಸ್ಸಿಎಸ್ಎಸ್ನಲ್ಲಿನ ಹೂಡಿಕೆಗಳು ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿವೆ. ಇದು ಒಟ್ಟಾರೆ ಮಿತಿ 1.5 ಲಕ್ಷ ರೂ.ಗೆ ಒಳಪಟ್ಟಿರುತ್ತದೆ. ಎಸ್ಸಿಎಸ್ಎಸ್ನಿಂದ ಬರುವ ಬಡ್ಡಿ ಆದಾಯವು ಒಂದು ಹಣಕಾಸು ವರ್ಷದಲ್ಲಿ 50,000 ರೂ. ಮೀರಿದರೆ ಅದು ಸಂಪೂರ್ಣವಾಗಿ ತೆರಿಗೆಗೆ ಒಳಪಡುತ್ತದೆ. ಎಸ್ಸಿಎಸ್ಎಸ್ ಮೇಲಿನ ಬಡ್ಡಿದರ ವರ್ಷಕ್ಕೆ ಶೇಕಡಾ 8.2 ರಷ್ಟಿದೆ.
5. ಸುಕನ್ಯಾ ಸಮೃದ್ಧಿ ಯೋಜನೆ (ಎಸ್ಎಸ್ವೈ): ಸುಕನ್ಯಾ ಸಮೃದ್ಧಿ ಯೋಜನೆ ಅತ್ಯುತ್ತಮ ತೆರಿಗೆ ಉಳಿತಾಯ ಹೂಡಿಕೆ ಯೋಜನೆಯಾಗಿದ್ದು, ಇದನ್ನು ವಿಶೇಷವಾಗಿ ಹೆಣ್ಣು ಮಗುವಿನ ಅನುಕೂಲಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಒಂದು ಕುಟುಂಬದಲ್ಲಿ ಹೆಣ್ಣು ಮಗುವಿಗೆ (10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಮತ್ತು ಗರಿಷ್ಠ 2 ಹೆಣ್ಣು ಮಕ್ಕಳಿಗೆ ಮಾತ್ರ ಖಾತೆಯನ್ನು ತೆರೆಯಬಹುದು. ಎಸ್ಎಸ್ವೈ ಖಾತೆದಾರರು ಒಂದು ಹಣಕಾಸು ವರ್ಷದಲ್ಲಿ ಕನಿಷ್ಠ 250 ರೂ ಮತ್ತು ಗರಿಷ್ಠ 1.5 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು.
ಈ ಯೋಜನೆಗೆ ಲಾಕ್-ಇನ್ ಅವಧಿ ಇರುತ್ತದೆ ಎಂಬುದು ಗಮನದಲ್ಲಿರಲಿ. ಸಾಮಾನ್ಯವಾಗಿ ಹೆಣ್ಣು ಮಗುವಿಗೆ 21 ವರ್ಷ ವಯಸ್ಸಾಗುವವರೆಗೆ ಅಥವಾ ಮದುವೆಯಾಗುವವರೆಗೆ, ಯಾವುದು ಮೊದಲೋ ಆ ಅವಧಿಯವರೆಗೆ ಯೋಜನೆ ಲಾಕ್ ಆಗಿರುತ್ತದೆ. ಹೆಣ್ಣು ಮಗುವಿಗೆ 18 ವರ್ಷ ತುಂಬಿದ ನಂತರ ಅಥವಾ 10 ನೇ ತರಗತಿ ತೇರ್ಗಡೆಯಾದ ನಂತರ ಶೈಕ್ಷಣಿಕ ಉದ್ದೇಶಗಳಿಗಾಗಿ ಮೊತ್ತವನ್ನು ಭಾಗಶಃ ಹಿಂಪಡೆಯಬಹುದು.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿ ಎಸ್ಎಸ್ವೈ ಖಾತೆಗೆ ಮಾಡಿದ ಹೂಡಿಕೆಗಳು ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತವೆ. ಇದರರ್ಥ ನಿಮ್ಮ ಮಗಳ ಎಸ್ಎಸ್ವೈ ಖಾತೆಯಲ್ಲಿ ನೀವು ಹೂಡಿಕೆ ಮಾಡುವ ಮೊತ್ತದಿಂದ ನಿಮ್ಮ ತೆರಿಗೆಗೆ ಒಳಪಡುವ ಆದಾಯವನ್ನು ಕಡಿಮೆ ಮಾಡಬಹುದು. ಈ ಯೋಜನೆಯಡಿ ಪ್ರತಿ ಹಣಕಾಸು ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ. ತೆರಿಗೆ ವಿನಾಯಿತಿ ಪಡೆಯಬಹುದು. ಎಸ್ಎಸ್ವೈ ಮೇಲಿನ ಬಡ್ಡಿದರ ವರ್ಷಕ್ಕೆ ಶೇಕಡಾ 8.2 ರಷ್ಟಿದೆ.
ಎಸ್ಎಸ್ವೈ ನಿಮಗೆ ತೆರಿಗೆಗಳನ್ನು ಉಳಿಸಲು ಸಹಾಯ ಮಾಡುವುದಲ್ಲದೇ, ತೆರಿಗೆ ಮುಕ್ತ ಆದಾಯವನ್ನು ಸಹ ನೀಡುತ್ತದೆ. ಎಸ್ಎಸ್ವೈ ಖಾತೆಯಲ್ಲಿ ಗಳಿಸಿದ ಬಡ್ಡಿ ಮತ್ತು ಮೆಚ್ಯೂರಿಟಿ ಮೊತ್ತ ಎರಡನ್ನೂ ಆದಾಯ ತೆರಿಗೆಯಿಂದ ಮುಕ್ತವಾಗಿಡಲಾಗಿದೆ.
6. ವಿಮೆ: ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳು ಗಮನಾರ್ಹ ತೆರಿಗೆ ಉಳಿತಾಯ ಪ್ರಯೋಜನಗಳನ್ನು ನೀಡುತ್ತವೆ. ಈ ಪಾಲಿಸಿಗಳು ನಿಮ್ಮ ತೆರಿಗೆಗೆ ಒಳಪಡುವ ಆದಾಯ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಪ್ರತಿಯಾಗಿ, ನಿಮ್ಮ ಒಟ್ಟಾರೆ ತೆರಿಗೆ ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ. ಭಾರತದಲ್ಲಿ ತೆರಿಗೆಗಳನ್ನು ಉಳಿಸಲು ಜೀವ ಮತ್ತು ಆರೋಗ್ಯ ವಿಮೆ ನಿಮಗೆ ಹೇಗೆ ಸಹಾಯ ಮಾಡುತ್ತದೆ
ಟರ್ಮ್ ಇನ್ಶೂರೆನ್ಸ್ ಮತ್ತು ಎಂಡೋಮೆಂಟ್ ಯೋಜನೆಗಳು ಸೇರಿದಂತೆ ಜೀವ ವಿಮಾ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತಗಳಿಗೆ ಅರ್ಹವಾಗಿವೆ. ಹೆಚ್ಚುವರಿಯಾಗಿ, ಜೀವ ವಿಮಾ ಪಾಲಿಸಿಯ ಮುಕ್ತಾಯದ ನಂತರ ಅಥವಾ ಪಾಲಿಸಿದಾರರ ಮರಣದ ಸಂದರ್ಭದಲ್ಲಿ ಪಡೆದ ಆದಾಯವು ಸಾಮಾನ್ಯವಾಗಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 (10 ಡಿ) ಅಡಿಯಲ್ಲಿ ತೆರಿಗೆ ಮುಕ್ತವಾಗಿರುತ್ತದೆ.
ಇದರರ್ಥ ಮೆಚ್ಯೂರಿಟಿ ಮೊತ್ತ ಅಥವಾ ಡೆತ್ ಬೆನಿಫಿಟ್ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿದೆ. ಇದಕ್ಕೆ ಅಪವಾದವೆಂದರೆ ಇತ್ತೀಚಿನ ಸಿಬಿಡಿಟಿ ಮಾರ್ಗಸೂಚಿಗಳ ಪ್ರಕಾರ, 01.04.2023 ರಂದು ಅಥವಾ ನಂತರ ಖರೀದಿಸಿದ ಪಾಲಿಸಿಗಳಿಗೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ಇರುವುದಿಲ್ಲ. ಒಂದು ಹಣಕಾಸು ವರ್ಷದಲ್ಲಿ ಪಾವತಿಸಿದ ಪ್ರೀಮಿಯಂ 5 ಲಕ್ಷ ರೂ.ಗಳನ್ನು ಮೀರಿದರೆ ಮೆಚ್ಯೂರಿಟಿ ಮೊತ್ತವು ತೆರಿಗೆಗೆ ಒಳಪಡುತ್ತದೆ.
ವೈಯಕ್ತಿಕ ಮತ್ತು ಕುಟುಂಬ ಆರೋಗ್ಯ ಯೋಜನೆಗಳು ಸೇರಿದಂತೆ ಆರೋಗ್ಯ ವಿಮಾ ಪಾಲಿಸಿಗಳಿಗೆ ಪಾವತಿಸಿದ ಪ್ರೀಮಿಯಂಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಡಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿವೆ.
ಭಾರತದಲ್ಲಿ ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳಿಗೆ ಸಂಬಂಧಿಸಿದ ಈ ತೆರಿಗೆ ಪ್ರಯೋಜನಗಳು ವ್ಯಕ್ತಿಗಳು ತಮ್ಮ ಆರ್ಥಿಕ ಯೋಗಕ್ಷೇಮ ಮತ್ತು ಆರೋಗ್ಯವನ್ನು ರಕ್ಷಿಸಲು ಪ್ರೋತ್ಸಾಹಿಸುವುದಲ್ಲದೆ ತೆರಿಗೆ ಉಳಿತಾಯಕ್ಕೆ ಮೌಲ್ಯಯುತ ಮಾರ್ಗವನ್ನು ಒದಗಿಸುತ್ತವೆ.
7. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) : ಇದು ಸ್ವಯಂಪ್ರೇರಿತ ತೆರಿಗೆ ಉಳಿತಾಯ ಹೂಡಿಕೆ ಆಯ್ಕೆಯಾಗಿದ್ದು, ನಿವೃತ್ತಿಯ ನಂತರದ ನಿಯಮಿತ ಆದಾಯದ ಮೂಲಕ ಆರ್ಥಿಕ ಭದ್ರತೆಯನ್ನು ನೀಡುತ್ತದೆ.
ಖಾಸಗಿ ಮತ್ತು ಸಾರ್ವಜನಿಕ ವಲಯದ ಉದ್ಯೋಗಿಗಳು ಸೇರಿದಂತೆ 18 ರಿಂದ 65 ವರ್ಷದೊಳಗಿನ ಎಲ್ಲಾ ಭಾರತೀಯ ನಾಗರಿಕರಿಗೆ ಎನ್ಪಿಎಸ್ ಮುಕ್ತವಾಗಿದೆ. ಇದು ಶ್ರೇಣಿ 1 ಮತ್ತು ಶ್ರೇಣಿ 2 ಎಂಬ ಎರಡು ರೀತಿಯ ಖಾತೆಗಳನ್ನು ನೀಡುತ್ತದೆ. ಶ್ರೇಣಿ 2 ಖಾತೆಯನ್ನು ತೆರೆಯಲು, ಗ್ರಾಹಕರು ಸಕ್ರಿಯ ಶ್ರೇಣಿ 1 ಖಾತೆಯನ್ನು ಹೊಂದಿರಬೇಕು. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿಸಿಡಿ (1) ಮತ್ತು ಸೆಕ್ಷನ್ 80 ಸಿಸಿಡಿ (2) ಅಡಿಯಲ್ಲಿ ಇದು ತೆರಿಗೆ ವಿನಾಯಿತಿ ನೀಡುತ್ತದೆ. ಗ್ರಾಹಕರು ತಮ್ಮ ಸಂಬಳದ (ಸಂಬಳ ಪಡೆಯುವ ವ್ಯಕ್ತಿಗಳಿಗೆ) ಅಥವಾ ಒಟ್ಟು ಆದಾಯದ (ಸ್ವಯಂ ಉದ್ಯೋಗಿಗಳಿಗೆ) ಶೇಕಡಾ 10 ವರೆಗೆ ಸೆಕ್ಷನ್ 80 ಸಿಸಿಡಿ (1) ಅಡಿಯಲ್ಲಿ ತೆರಿಗೆ ಕಡಿತ ಪಡೆಯಬಹುದು.
ಹೆಚ್ಚುವರಿಯಾಗಿ ಗ್ರಾಹಕರು ಸೆಕ್ಷನ್ 80 ಸಿಸಿಡಿ (1 ಬಿ) ಅಡಿಯಲ್ಲಿ 50,000 ರೂ.ಗಳವರೆಗೆ ಕಡಿತ ಪಡೆಯಬಹುದು. ಇದು ಸೆಕ್ಷನ್ 80 ಸಿ ಮಿತಿಗಿಂತ ಹೆಚ್ಚಾಗಿದೆ. ಇದಲ್ಲದೇ, ಕೇಂದ್ರ ಸರ್ಕಾರ ಅಥವಾ ಇತರ ಯಾವುದೇ ಉದ್ಯೋಗದಾತರಿಂದ ನೇಮಕಗೊಂಡ ಗ್ರಾಹಕರು ಸೆಕ್ಷನ್ 80 ಸಿಸಿಡಿ (2) ಅಡಿಯಲ್ಲಿ ತಮ್ಮ ಮೂಲ ವೇತನದ (ಜೊತೆಗೆ ತುಟ್ಟಿಭತ್ಯೆ) 14% (ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರ) ಮತ್ತು 10% (ಇತರ ಯಾವುದೇ ಉದ್ಯೋಗದಾತರಿಗೆ) ಹೆಚ್ಚುವರಿ ಕಡಿತವನ್ನು ಕೋರಬಹುದು.
8. ಈಕ್ವಿಟಿ-ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ಗಳು (ಇಎಲ್ಎಸ್ಎಸ್): ಇಎಲ್ಎಸ್ಎಸ್ ಫಂಡ್ಗಳು ಮ್ಯೂಚುವಲ್ ಫಂಡ್ಗಳಾಗಿವೆ. ಅವು ಪ್ರಾಥಮಿಕವಾಗಿ ಈಕ್ವಿಟಿ ಅಥವಾ ಸ್ಟಾಕ್ಗಳಲ್ಲಿ ಹೂಡಿಕೆ ಮಾಡುತ್ತವೆ. ಹೂಡಿಕೆದಾರರಿಗೆ ಷೇರು ಮಾರುಕಟ್ಟೆಯಲ್ಲಿ ಭಾಗವಹಿಸುವ ಅವಕಾಶವನ್ನು ಒದಗಿಸಲು ಇಎಲ್ಎಸ್ಎಸ್ ಅನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ತೆರಿಗೆ ಉಳಿತಾಯ ಪ್ರಯೋಜನಗಳನ್ನು ಸಹ ಇದು ನೀಡುತ್ತದೆ. ಇಎಲ್ಎಸ್ಎಸ್ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ಕಡಿತ ನೀಡುತ್ತದೆ.
ಈ ಯೋಜನೆಯ ಲಾಕ್-ಇನ್ ಅವಧಿ ಮೂರು ವರ್ಷಗಳಅಗಿದ್ದು, ಇತರ ಅನೇಕ ತೆರಿಗೆ ಉಳಿತಾಯ ಸಾಧನಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಕಡಿಮೆಯಾಗಿದೆ. ಆದಾಗ್ಯೂ, ಇಎಲ್ಎಸ್ಎಸ್ನಿಂದ ವಾರ್ಷಿಕ 1 ಲಕ್ಷ ರೂ.ಗಿಂತ ಹೆಚ್ಚಿನ ದೀರ್ಘಕಾಲೀನ ಬಂಡವಾಳ ಲಾಭಗಳು ಶೇಕಡಾ 10ರಷ್ಟು ತೆರಿಗೆಗೆ ಒಳಪಟ್ಟಿರುತ್ತವೆ.
ಹೆಚ್ಚಿನ ಆದಾಯ ಬಯಸುವವರಿಗೆ ಇದು ಸೂಕ್ತ ಆಯ್ಕೆಯಾಗಿದೆ. ಇಎಲ್ಎಸ್ಎಸ್ ಫಂಡ್ಗಳು ಪ್ರಾಥಮಿಕವಾಗಿ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದರಿಂದ ಇವು ಐತಿಹಾಸಿಕವಾಗಿ ಸಾಂಪ್ರದಾಯಿಕ ಸ್ಥಿರ-ಆದಾಯದ ಹೂಡಿಕೆಗಳಿಗೆ ಹೋಲಿಸಿದರೆ ಹೆಚ್ಚಿನ ಆದಾಯ ನೀಡುವ ಸಾಮರ್ಥ್ಯ ಹೊಂದಿವೆ.
ಇಎಲ್ಎಸ್ಎಸ್ ಫಂಡ್ಗಳಿಂದ ಬರುವ ಆದಾಯವು ಮಾರುಕಟ್ಟೆ-ಸಂಬಂಧಿತವಾಗಿದೆ ಮತ್ತು ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ಗಮನಿಸುವುದು ಮುಖ್ಯ. ಇದರಲ್ಲಿ ಹೆಚ್ಚಿನ ಆದಾಯ ಬರುವ ಸಾಧ್ಯತೆಯಿದ್ದರೂ ನಷ್ಟವಾಗುವ ಅಪಾಯವೂ ಹೆಚ್ಚಾಗಿರುತ್ತದೆ.
9. ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್ಗಳು (ಯುಲಿಪ್ಗಳು): ಯುಲಿಪ್ಗಳು ವಿಮೆ ಮತ್ತು ಹೂಡಿಕೆ ಘಟಕಗಳನ್ನು ಒಂದೇ ಪಾಲಿಸಿಯಲ್ಲಿ ಸಂಯೋಜಿಸುವ ಹಣಕಾಸು ಉತ್ಪನ್ನಗಳಾಗಿವೆ. ಯುಲಿಪ್ನಲ್ಲಿ ನೀವು ಹೂಡಿಕೆ ಮಾಡುವ ಪ್ರೀಮಿಯಂನ ಒಂದು ಭಾಗವನ್ನು ಜೀವ ವಿಮಾ ರಕ್ಷಣೆಗಾಗಿ ಮೀಸಲಾಗಿಟ್ಟರೆ, ಪ್ರೀಮಿಯಂನ ಉಳಿದ ಭಾಗವನ್ನು ಹೂಡಿಕೆ ನಿಧಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಇದು ಪಾಲಿಸಿದಾರರು ಆಯ್ಕೆ ಮಾಡಿದಂತೆ ಈಕ್ವಿಟಿ, ಸಾಲ ಅಥವಾ ಎರಡರ ಸಂಯೋಜನೆಯನ್ನು ಒಳಗೊಂಡಿರಬಹುದು.
ಯುಲಿಪ್ಗಳಲ್ಲಿ ಪಾವತಿಸಿದ ಪ್ರೀಮಿಯಂಗಳು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಸಿ ಅಡಿಯಲ್ಲಿ ವರ್ಷಕ್ಕೆ 1.5 ಲಕ್ಷ ರೂ.ಗಳವರೆಗೆ ತೆರಿಗೆ ಕಡಿತಕ್ಕೆ ಅರ್ಹವಾಗಿವೆ ಮತ್ತು ಮೆಚ್ಯೂರಿಟಿ ಅಥವಾ ಡೆತ್ ಬೆನಿಫಿಟ್ ಸಾಮಾನ್ಯವಾಗಿ ತೆರಿಗೆ ಮುಕ್ತವಾಗಿರುತ್ತದೆ. ಆದಾಗ್ಯೂ, ಇತ್ತೀಚಿನ ಸಿಬಿಡಿಟಿ ಮಾರ್ಗಸೂಚಿಗಳ ಪ್ರಕಾರ, 01.02.2021 ರಂದು ಅಥವಾ ನಂತರ ಖರೀದಿಸಿದ ಯುಲಿಪ್ಗಳಿಗೆ, ಡೆತ್ ಬೆನಿಫಿಟ್ಗಳನ್ನು ಹೊರತುಪಡಿಸಿ, ಒಂದು ಹಣಕಾಸು ವರ್ಷದಲ್ಲಿ ಪಾವತಿಸಿದ ಪ್ರೀಮಿಯಂ 2.5 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಮುಕ್ತಾಯದ ರಿಟರ್ನ್ ಗೆ ತೆರಿಗೆ ವಿಧಿಸಲಾಗುತ್ತದೆ.
10. ಸಾಲಗಳು: ಕೆಲವು ರೀತಿಯ ಸಾಲಗಳನ್ನು ತೆಗೆದುಕೊಳ್ಳುವುದರಿಂದ ಆದಾಯ ತೆರಿಗೆ ಕಾಯ್ದೆಯ ನಿರ್ದಿಷ್ಟ ವಿಭಾಗಗಳ ಅಡಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
ಗೃಹ ಸಾಲದ ಮೇಲೆ ಪಾವತಿಸಿದ ಬಡ್ಡಿಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24 (ಬಿ) ಅಡಿ ಗರಿಷ್ಠ 2 ಲಕ್ಷ ರೂ.ಗಳವರೆಗೆ (ಷರತ್ತುಗಳಿಗೆ ಒಳಪಟ್ಟು) ತೆರಿಗೆ ಕಡಿತಕ್ಕೆ ಅರ್ಹವಾಗಿದೆ ಮತ್ತು ಗೃಹ ಸಾಲದ ಮೇಲೆ ಮರುಪಾವತಿ ಮಾಡಿದ ಅಸಲು ಮೊತ್ತವು ಸೆಕ್ಷನ್ 80 ಸಿ ಅಡಿಯಲ್ಲಿ ಪ್ರತಿ ಹಣಕಾಸು ವರ್ಷಕ್ಕೆ ಗರಿಷ್ಠ 1.5 ಲಕ್ಷ ರೂ.ಗಳವರೆಗೆ ಕಡಿತಕ್ಕೆ ಅರ್ಹವಾಗಿದೆ. ಇದು ಸೆಕ್ಷನ್ 80 ಸಿ ಅಡಿಯಲ್ಲಿ ಒಟ್ಟಾರೆ ಕಡಿತ ಮಿತಿಯ ಭಾಗವಾಗಿದೆ. ಇದು ಇತರ ಅರ್ಹ ಹೂಡಿಕೆಗಳು ಮತ್ತು ವೆಚ್ಚಗಳನ್ನು ಒಳಗೊಂಡಿದೆ.
01.04.2016 ಮತ್ತು 31.03.2017 ರ ನಡುವೆ ಸಾಲ ಮಂಜೂರಾಗಿದ್ದರೆ ಮತ್ತು ಇತರ ಷರತ್ತುಗಳನ್ನು ಪೂರೈಸಿದರೆ ಸಾಲದ ಮೇಲೆ ಪಾವತಿಸಿದ ಬಡ್ಡಿಗೆ 80 ಇಇ ಅಡಿಯಲ್ಲಿ 80 ಇಇ ಅಡಿಯಲ್ಲಿ ರೂ. 50,000ದವರೆಗೆ ಹೆಚ್ಚುವರಿ ತೆರಿಗೆ ಕಡಿತ ಲಭ್ಯವಿದೆ. ಅಲ್ಲದೆ, 01.04.2019 ಮತ್ತು 31.03.2022 ರ ನಡುವೆ ಸಾಲ ಮಂಜೂರಾಗಿದ್ದರೆ ಮತ್ತು ಇತರ ಷರತ್ತುಗಳನ್ನು ಪೂರೈಸಿದರೆ ಸಾಲದ ಮೇಲೆ ಪಾವತಿಸಿದ ಬಡ್ಡಿಗೆ 1,50,000 ರೂ.ಗಳವರೆಗೆ ತೆರಿಗೆ ಕಡಿತ (80ಇಇ ಅಡಿಯಲ್ಲಿ ಅರ್ಹರಲ್ಲದ ತೆರಿಗೆದಾರರಿಗೆ) ಲಭ್ಯವಿದೆ.
ಶೈಕ್ಷಣಿಕ ಸಾಲ: ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲದ ಮೇಲೆ ಪಾವತಿಸಿದ ಬಡ್ಡಿಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಇ ಅಡಿಯಲ್ಲಿ ಪೂರ್ಣ ಕಡಿತಕ್ಕೆ ಅರ್ಹವಾಗಿದೆ. ಈ ಕಡಿತಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ ಮತ್ತು ಇದನ್ನು ಗರಿಷ್ಠ 8 ವರ್ಷಗಳವರೆಗೆ ಅಥವಾ ಬಡ್ಡಿಯನ್ನು ಸಂಪೂರ್ಣವಾಗಿ ಮರುಪಾವತಿಸುವವರೆಗೆ ಕ್ಲೈಮ್ ಮಾಡಬಹುದು.
ಇದನ್ನೂ ಓದಿ : ಡಿಜಿಸಿಎ ಬೇಸಿಗೆ ವೇಳಾಪಟ್ಟಿ: ವಾರಕ್ಕೆ 24,275 ದೇಶೀಯ ವಿಮಾನ ಸಂಚಾರ