ಕೇಂದ್ರ ಸರ್ಕಾರ ಯೋಜನೆಗಳಲ್ಲಿ "ಸುಕನ್ಯಾ ಸಮೃದ್ಧಿ ಯೋಜನೆ" ಹೆಚ್ಚು ಜನಪ್ರಿಯತೆ ಗಳಿಸಿದೆ. ಹೆಣ್ಣುಮಕ್ಕಳನ್ನು ಆರ್ಥಿಕ ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಯೋಜನೆ ಇದಾಗಿದೆ. ಆದರೆ ಇತ್ತೀಚೆಗೆ ಕೇಂದ್ರವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅಕ್ಟೋಬರ್ 1 ರಿಂದ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಹಾಗಾದರೆ ಯಾವ ನಿಯಮಗಳು ಬದಲಾಗಿವೆ ಎಂಬುದನ್ನು ಈ ವರದಿಯಲ್ಲಿ ನೋಡೋಣ.
2015 ರಲ್ಲಿ ಕೇಂದ್ರ ಸರ್ಕಾರವು ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿತು. ಇದನ್ನು "ಬೇಟಿ ಬಚಾವೋ, ಬೇಟಿ ಪಡಾವೋ" ಉಪಕ್ರಮದ ಭಾಗವಾಗಿ ಪರಿಚಯಿಸಲಾಗಿತ್ತು. ಹೆಣ್ಣುಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆಗೆ ಆಗುವ ಖರ್ಚನ್ನು ಒದಗಿಸುವ ಉದ್ದೇಶದಿಂದ ಪೋಷಕರನ್ನು ಹೂಡಿಕೆ ಮಾಡಲು ಪ್ರೋತ್ಸಾಹಿಸುವುದು ಈ ಯೋಜನೆಯ ಗುರಿ.
ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೆಚ್ಚಿನ ಬಡ್ಡಿ ದರ ಶೇ.8.20 ರಷ್ಟು ಈ ಯೋಜನೆಗೆ ಇದೆ. ಹತ್ತು ವರ್ಷದೊಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಅಕೌಂಟ್ ತೆರೆಯಬೇಕು. ಸತತ 15 ವರ್ಷಗಳು ವಾರ್ಷಿಕ ಕನಿಷ್ಠ 250 ರೂ. ನಿಂದ ಗರಿಷ್ಠ 1.50 ಲಕ್ಷ ರೂ ವರೆಗೆ ಇನ್ವೆಸ್ಟ್ ಮಾಡಬಹುದು. ಇದರಲ್ಲಿ ತೆರಿಗೆ ಪ್ರಯೋಜನಗಳೂ ಇವೆ.
ಬದಲಾದ ನಿಯಮಗಳೇನು?: ರಾಷ್ಟ್ರೀಯ ಉಳಿತಾಯ ಯೋಜನೆಗಳ ಅಡಿ ಸುಕನ್ಯಾ ಸಮೃದ್ಧಿ ಮತ್ತು ಪಿಪಿಎಫ್‌ನಂತಹ ಸರಿಯಾದ ಕ್ರಮದಲ್ಲಿ ತೆರೆಯಲಾದ ಖಾತೆಗಳನ್ನು ಕ್ರಮಬದ್ಧಗೊಳಿಸಲು ಹಣಕಾಸು ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ಪರಿಚಯಿಸಿದೆ. ಖಾತೆ ತೆರೆಯುವಿಕೆಯಲ್ಲಿನ ದೋಷಗಳನ್ನು ಸರಿಪಡಿಸುವ ಗುರಿ ಹೊಂದಿದೆ. ಈ ಮಾರ್ಗಸೂಚಿಗಳಲ್ಲಿನ ಪ್ರಮುಖ ಅಪ್‌ಡೇಟ್‌ಗಳಲ್ಲಿ ಒಂದು ಗ್ರ್ಯಾಂಡ್ ಪೆರೆಂಟ್ಸ್ ತೆರೆದಿರುವ ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಸಂಬಂಧಿಸಿದೆ.
ಅಂದರೆ, ಈ ಹಿಂದೆ ಅಜ್ಜ, ಅಜ್ಜಿ ಮತ್ತಿತರರು ಕೂಡ ಹೆಣ್ಣುಮಕ್ಕಳ ಆರ್ಥಿಕ ಭದ್ರತೆಗಾಗಿ ಇಂತಹ ಖಾತೆಗಳನ್ನು ತೆರೆದಿದ್ದರು. ಆದರೆ ಅವರು ಕಾನೂನು ಪ್ರಕಾರ ಪೋಷಕರಲ್ಲ. ಕಾನೂನುಬದ್ಧವಾಗಿ ಹೆಣ್ಣುಮಕ್ಕಳ ಪಾಲಕರು ಅಥವಾ ಪೋಷಕರು ತೆರೆಯದ ಸುಕನ್ಯಾ ಸಮೃದ್ಧಿ ಖಾತೆಗಳನ್ನು ಈಗ ಹೊಸ ಮಾರ್ಗಸೂಚಿಗಳ ಪ್ರಕಾರ, ಕಡ್ಡಾಯವಾಗಿ ಪಾಲಕರಿಗೆ ವರ್ಗಾಯಿಸಬೇಕಾಗಿದೆ. ಇಲ್ಲವಾದಲ್ಲಿ ಗ್ರ್ಯಾಂಡ್ ಪೆರೆಂಟ್ಸ್ ಹೆಸರಿನಲ್ಲಿರುವ ಸುಕನ್ಯಾ ಸಮೃದ್ಧಿ ಖಾತೆಗಳನ್ನು ಮುಚ್ಚುವ ಸಾಧ್ಯತೆ ಇದೆ. ಒಂದು ವೇಳೆ ಪೋಷಕರಿಲ್ಲದ ಹೆಣ್ಣುಮಕ್ಕಳಿಗೆ ಗ್ರ್ಯಾಂಡ್ ಪೆರೆಂಟ್ಸ್ ಪಾಲಕರಾಗಲು ಸರ್ಕಾರದಿಂದ ಪ್ರಮಾಣಪತ್ರ ಪಡೆಯಬೇಕು.
ಖಾತೆ ಮುಚ್ಚಲು ಮತ್ತು ವರ್ಗಾವಣೆಗೆ ಅಗತ್ಯವಿರುವ ದಾಖಲೆಗಳು:
- ಎಸ್ಎಸ್ವೈ ಅಕೌಂಟ್ ಬುಕ್
- ಬಾಲಕಿಯ ಜನನ ಪ್ರಮಾಣಪತ್ರ
- ಹೊಸ ಪಾಲಕರ ಅಥವಾ ಪೋಷಕರ ಐಡಿ ಪುರಾವೆ
- ವರ್ಗಾವಣೆ ಅರ್ಜಿ ನಮೂನೆ
ಖಾತೆ ವರ್ಗಾವಣೆ ಪ್ರಕ್ರಿಯೆ:
- ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಅಂಚೆ ಕಚೇರಿ ಅಥವಾ ಖಾತೆ ತೆರೆದಿರುವ ಬ್ಯಾಂಕಿಗೆ ಹೋಗಬೇಕು.
- ಹೊಸ ಮಾರ್ಗಸೂಚಿಗಳ ಪ್ರಕಾರ, ಖಾತೆಯನ್ನು ಪೋಷಕರಿಗೆ ವರ್ಗಾಯಿಸುವ ಅಗತ್ಯದ ಬಗ್ಗೆ ಅಧಿಕಾರಿಗಳಿಗೆ ತಿಳಿಸಬೇಕು.
- ಬ್ಯಾಂಕ್ ಅಥವಾ ಅಂಚೆ ಕಚೇರಿ ಅವರು ಒದಗಿಸಿದ ವರ್ಗಾವಣೆ ಅರ್ಜಿಯನ್ನು ಭರ್ತಿ ಮಾಡಬೇಕು.
- ಸದ್ಯ ಇರುವ ಖಾತೆದಾರರು (ಅಜ್ಜ, ಅಜ್ಜಿ, ಇತರ ), ಹೊಸ ಪೋಷಕರು (ಪಾಲಕರು) ಇಬ್ಬರೂ ಈ ನಮೂನೆಗೆ ಸಹಿ ಮಾಡಬೇಕು.
- ಫಾರ್ಮ್ ಮತ್ತು ಪೂರಕ ದಾಖಲೆಗಳನ್ನು ಸಲ್ಲಿಸಿದ ನಂತರ, ಬ್ಯಾಂಕ್ ಅಥವಾ ಅಂಚೆ ಕಚೇರಿ ಸಿಬ್ಬಂದಿ ನಿಮ್ಮ ಮನವಿಯನ್ನು ಪರಿಶೀಲಿಸುತ್ತಾರೆ ಮತ್ತು ದೃಢೀಕರಣ ಪ್ರಕ್ರಿಯೆ ಆರಂಭಿಸುತ್ತಾರೆ.
- ದೃಢೀಕರಣ ಪೂರ್ಣಗೊಂಡ ನಂತರ ಖಾತೆಯ ದಾಖಲೆಗಳನ್ನು ಹೊಸ ಪೋಷಕರ ಮಾಹಿತಿಯಂತೆ ನವೀಕರಿಸಲಾಗುತ್ತದೆ.