ನವದೆಹಲಿ : 2024-25ರ ಋತುವಿನಲ್ಲಿ ಅಂತಿಮ ಕಬ್ಬಿನ ಬಿತ್ತನೆ ಮತ್ತು ಉತ್ಪಾದನೆ ಮೌಲ್ಯಮಾಪನ ಮಾಡಿದ ನಂತರವೇ ಭಾರತವು ಸಕ್ಕರೆ ರಫ್ತಿಗೆ ಅವಕಾಶ ನೀಡಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಬ್ರೆಜಿಲ್ ನಂತರ ವಿಶ್ವದ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿರುವ ಭಾರತದಲ್ಲಿ ಮುಂದಿನ ಋತುವಿನಲ್ಲಿ 30 ದಶಲಕ್ಷ ಟನ್ ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆಯಿದೆ.
ಸೆಪ್ಟೆಂಬರ್ ಗೆ ಕೊನೆಗೊಳ್ಳುವ ಪ್ರಸಕ್ತ 2023-24ರ ಋತುವಿನಲ್ಲಿ, ಇಲ್ಲಿಯವರೆಗೆ ಸಕ್ಕರೆ ಉತ್ಪಾದನೆ 31.5 ಮಿಲಿಯನ್ ಟನ್ಗಳನ್ನು ತಲುಪಿದೆ. ತಮಿಳುನಾಡು ಮತ್ತು ಕರ್ನಾಟಕದ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಪೂರ್ಣಗೊಳಿಸಿದ್ದು, ಸಕ್ಕರೆಯ ಅಂತಿಮ ಉತ್ಪಾದನೆ ಪ್ರಮಾಣ 31.8 ಮಿಲಿಯನ್ ಟನ್ಗಳನ್ನು ತಲುಪುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಭಾರತ 32.8 ಮಿಲಿಯನ್ ಟನ್ ಸಕ್ಕರೆ ಉತ್ಪಾದಿಸಿತ್ತು.
ಕರ್ನಾಟಕದಲ್ಲಿ ಕಡಿಮೆ ಬಿತ್ತನೆಯಿಂದಾಗಿ 2024-25ರ ಋತುವಿನಲ್ಲಿ ಸಕ್ಕರೆ ಉತ್ಪಾದನೆ 30 ಮಿಲಿಯನ್ ಟನ್ಗಳಿಗಿಂತಲೂ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
"1 ಮಿಲಿಯನ್ ಟನ್ ಸಕ್ಕರೆ ರಫ್ತಿಗೆ ಅವಕಾಶ ನೀಡಬೇಕು ಎಂದು ಉದ್ಯಮ ಒತ್ತಾಯಿಸಿದೆ. ಮುಂದಿನ ವರ್ಷ ನಾವು ಕಡಿಮೆ ಸಕ್ಕರೆ ಉತ್ಪಾದನೆಯನ್ನು ನಿರೀಕ್ಷಿಸುತ್ತಿರುವುದರಿಂದ ಮತ್ತು ಎಥೆನಾಲ್ ಉತ್ಪಾದನೆಗೆ ದಾಸ್ತಾನು ಅಗತ್ಯವಾಗಿರುವುದರಿಂದ, ದೇಶೀಯ ಬಳಕೆಗೆ ಮತ್ತು ಎಥೆನಾಲ್ಗೆ ಲಭ್ಯವಿರುವಷ್ಟು ಸ್ಟಾಕ್ ಇರುವಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯತೆಯಾಗಿದೆ" ಎಂದು ಮೂಲಗಳು ತಿಳಿಸಿವೆ. ಹೆಚ್ಚುವರಿ ದಾಸ್ತಾನು ಲಭ್ಯವಿದ್ದರೆ ರಫ್ತಿಗೆ ಅವಕಾಶ ನೀಡಬಹುದು ಎಂದು ಹೇಳಲಾಗಿದೆ.
ಪ್ರಸ್ತುತ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ವಿಧಿಸಲಾಗಿದೆ. ಮಾನ್ಸೂನ್ ಸಂಪೂರ್ಣವಾಗಿ ವ್ಯಾಪಿಸಿದ ನಂತರ ಮತ್ತು ಅಂತಿಮ ಕಬ್ಬು ಬಿತ್ತನೆಯ ಅಂಕಿ ಅಂಶಗಳು ಲಭ್ಯವಾದ ನಂತರ ಜುಲೈ ಬಳಿಕ ಸಕ್ಕರೆ ಉತ್ಪಾದನಾ ಪರಿಸ್ಥಿತಿಯನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಮೂಲಗಳು ತಿಳಿಸಿವೆ. ಭಾರತವು ಮುಖ್ಯವಾಗಿ ನೆರೆಯ ದೇಶಗಳಾದ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮಧ್ಯಪ್ರಾಚ್ಯಕ್ಕೆ ಸಕ್ಕರೆ ರಫ್ತು ಮಾಡುತ್ತದೆ.
ಕಳೆದ ವರ್ಷ ಎಲ್ ನಿನೊ ಮಾರುತದಿಂದಾಗಿ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ 2023-24 (ನವೆಂಬರ್-ಅಕ್ಟೋಬರ್)ರ ಎಥೆನಾಲ್ ಪೂರೈಕೆ ವರ್ಷದಲ್ಲಿ ಎಥೆನಾಲ್ ಉತ್ಪಾದನೆಗಾಗಿ ಕಬ್ಬಿನ ರಸ ಅಥವಾ ಸಕ್ಕರೆ ಸಿರಪ್ ಅನ್ನು ಬಳಸದಂತೆ ಕೇಂದ್ರವು ಡಿಸೆಂಬರ್ 7 ರಂದು ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳಿಗೆ ನಿರ್ದೇಶನ ನೀಡಿತ್ತು.
ಇದನ್ನೂ ಓದಿ : ಬಗೆಹರಿದ ಭಾರತ್ ಪೇ, ಫೋನ್ ಪೇ ಟ್ರೇಡ್ಮಾರ್ಕ್ ವಿವಾದ: 5 ವರ್ಷಗಳ ಹೋರಾಟ ಅಂತ್ಯ - BharatPe PhonePe legal dispute