ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಭಾರತೀಯ ಷೇರು ಮಾರುಕಟ್ಟೆಗಳು ದೃಢವಾದ ಏರಿಕೆಯನ್ನು ಕಂಡಿದ್ದು, ಕಳೆದ ವಾರದಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿವೆ. ಉನ್ನತ ರೇಟಿಂಗ್ ಏಜೆನ್ಸಿಗಳ ಪ್ರಕಾರ, ಮುಂದಿನ 12 ತಿಂಗಳಲ್ಲಿ ಭಾರತದ ಷೇರು ಮಾರುಕಟ್ಟೆಗಳು ದಾಖಲೆಯ ಹೊಸ ಎತ್ತರಕ್ಕೇರಲಿವೆ.
ದೇಶದಲ್ಲಿ ಹಣದುಬ್ಬರದ ಪ್ರಮಾಣ ಕಡಿಮೆಯಾಗುತ್ತಿರುವ ಮಧ್ಯೆ ಭಾರತೀಯ ಮುಂಚೂಣಿ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 77,145 ಮತ್ತು 23,490ಕ್ಕೆ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿವೆ.
ಏತನ್ಮಧ್ಯೆ ಷೇರು ಮಾರುಕಟ್ಟೆಗಳಿಗೆ ಹೊಸದಾಗಿ ಜಾಗತಿಕ ಹೂಡಿಕೆಗಳು ಹರಿದು ಬರುತ್ತಿದ್ದು, ಬರುವ ದಿನಗಳಲ್ಲಿ ಇದರ ಪ್ರಮಾಣ ಇನ್ನೂ ಹೆಚ್ಚಾಗಲಿದೆ. ಇದಲ್ಲದೆ, ಷೇರು ಮಾರುಕಟ್ಟೆಗಳು ಚಿಲ್ಲರೆ ಹೂಡಿಕೆದಾರರಿಗೆ ನೆಚ್ಚಿನ ಹೂಡಿಕೆ ತಾಣವಾಗಿ ಹೊರಹೊಮ್ಮಿವೆ.
"ಮುಂದಿನ 12 ತಿಂಗಳಲ್ಲಿ ಬಿಎಸ್ಇ ಸೆನ್ಸೆಕ್ಸ್ ಶೇ 14ರಷ್ಟು ಏರಿಕೆಯಾಗಿ 82,000ಕ್ಕೆ ತಲುಪಿ ಹೊಸ ದಾಖಲೆ ಬರೆಯಬಹುದು." ಎಂದು ಜಾಗತಿಕ ರೇಟಿಂಗ್ ಏಜೆನ್ಸಿ ಮೂಡೀಸ್ ನಿರೀಕ್ಷೆ ಮಾಡಿದೆ.
ಎನ್ಡಿಎ ಸರ್ಕಾರ ಮರಳಿ ಅಧಿಕಾರಕ್ಕೆ ಬಂದಿರುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರದ ನೀತಿಗಳು ಹೇಗಿರಲಿವೆ ಎಂಬುದನ್ನು ಊಹಿಸಲು ಸಾಧ್ಯವಾಗಲಿದೆ. ಇದರಿಂದ ಮುಂಬರುವ ಐದು ವರ್ಷಗಳಲ್ಲಿ ಬೆಳವಣಿಗೆ ಮತ್ತು ಈಕ್ವಿಟಿ ಆದಾಯವು ಹೇಗಿರಲಿದೆ ಎಂಬುದರ ಬಗ್ಗೆಯೂ ತಿಳಿಯಬಹುದಾಗಿದೆ ಎಂದು ಮೂಡೀಸ್ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.
ಮೂಡೀಸ್ ಪ್ರಕಾರ, ಭಾರತದ ಷೇರು ಮಾರುಕಟ್ಟೆ ಹೊಸ ಎತ್ತರದತ್ತ ಸಾಗುತ್ತಿದೆ ಮತ್ತು ಯಾವೆಲ್ಲ ಅಂಶಗಳು ಮಾರುಕಟ್ಟೆಯನ್ನು ಭೌತಿಕವಾಗಿ ಎತ್ತರಕ್ಕೆ ಕೊಂಡೊಯ್ಯಲಿವೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
"ನಮ್ಮ ದೃಷ್ಟಿಯಲ್ಲಿ, ಹೊಸ ಸರ್ಕಾರದ ರಚನೆಯ ನಂತರ ಕೆಲ ನೀತಿಗಳು ಬದಲಾಗಬಹುದು ಮತ್ತು ಈ ನೀತಿಗಳು ಗಳಿಕೆಯ ಚಕ್ರವನ್ನು ವಿಸ್ತರಿಸಲಿವೆ ಮತ್ತು ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಕಂಡು ಬರಬಹುದು" ಎಂದು ಅದು ಒತ್ತಿಹೇಳಿದೆ.
ಭಾರತವು ಹಾಂಗ್ ಕಾಂಗ್ ಅನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಅತಿದೊಡ್ಡ ಜಾಗತಿಕ ಈಕ್ವಿಟಿ ಮಾರುಕಟ್ಟೆಯಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ದೇಶದ ಮಾರುಕಟ್ಟೆ ಬಂಡವಾಳೀಕರಣವು ಶೇಕಡಾ 10ರಷ್ಟು ಏರಿಕೆಯಾಗಿ 5.2 ಟ್ರಿಲಿಯನ್ ಡಾಲರ್ ತಲುಪಿದೆ. ಹೋಲಿಕೆಯಲ್ಲಿ, ಹಾಂಗ್ ಕಾಂಗ್ ನ ಈಕ್ವಿಟಿ ಮಾರುಕಟ್ಟೆ ಕ್ಯಾಪ್ 5.17 ಟ್ರಿಲಿಯನ್ ಡಾಲರ್ ಆಗಿದ್ದು, ಈ ವರ್ಷದ ಗರಿಷ್ಠ 5.47 ಟ್ರಿಲಿಯನ್ ಡಾಲರ್ ನಿಂದ ಶೇಕಡಾ 5.4 ರಷ್ಟು ಕಡಿಮೆಯಾಗಿದೆ. ಪ್ರಸ್ತುತ, ಭಾರತವು ಚೀನಾದ ನಂತರ ಎರಡನೇ ಅತಿದೊಡ್ಡ ಉದಯೋನ್ಮುಖ ಮಾರುಕಟ್ಟೆಯಾಗಿದೆ.