ಹೈದರಾಬಾದ್: ನೀವು ಚಿಕ್ಕದಾಗಿ ಚೊಕ್ಕದಾಗಿ ಉಳಿತಾಯ ಮಾಡಿ ಮುಂದಿನ ಜೀವನಕ್ಕೆ ಇಡಿಗಂಟು ಮಾಡಬೇಕು ಎಂದು ಬಯಸುತ್ತಿದ್ದೀರಾ? ಯಾವುದೇ ಅಪಾಯವಿಲ್ಲದೆಯೇ ಸ್ಥಿರವಾದ ಆದಾಯ ಬೇಕು ಎಂಬ ನಿರೀಕ್ಷೆಯಲ್ಲಿದ್ದೀರಾ? ಇಂತಹ ಯೋಜನೆಗಳ ಬಗ್ಗೆ ತಿಳಿಯವ ಬಯಕೆ ಹೊಂದಿರುವಿರಾ? ಹಾಗಾದರೆ ಅದಕ್ಕೆಲ್ಲ ಪರಿಹಾರ ಇದೆ. ಆದರೆ ಅದಕ್ಕೂ ಮೊದಲು ನೀವು ಖಂಡಿತವಾಗಿಯೂ ಸಣ್ಣ ಉಳಿತಾಯ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಅತ್ಯಗತ್ಯವಾಗಿದೆ. ಪ್ರಸ್ತುತ ಅನೇಕ ಸರ್ಕಾರಿ ಉಳಿತಾಯ ಯೋಜನೆಗಳು ಲಭ್ಯವಿದೆ. ಇವು ಸರ್ಕಾರದ ಯೋಜನೆಗಳಾಗಿರುವುದರಿಂದ ಗ್ಯಾರಂಟಿ ರಿಟರ್ನ್ಸ್ ಬರಲಿದೆ.
1. ಪೋಸ್ಟ್ ಆಫೀಸ್ ಉಳಿತಾಯ ಖಾತೆ : ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ 500ರೂಗಳಿಂದ ಆರಂಭವಾಗುತ್ತದೆ. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಖಾತೆಯಲ್ಲಿ ಕನಿಷ್ಠ 500 ರೂ.ಗಳನ್ನು ಉಳಿಸಿಕೊಳ್ಳಲು ವಿಫಲವಾದರೆ ಖಾತೆಯ ಬ್ಯಾಲೆನ್ಸ್ ಶೂನ್ಯವನ್ನು ತಲುಪಿದರೆ ಖಾತೆಯನ್ನು ಮುಚ್ಚಲಾಗುತ್ತದೆ. ಇದರಲ್ಲಿ ಹೂಡಿಕೆ ಮಾಡಿದರೆ ವಾರ್ಷಿಕ ಶೇ.4 ಬಡ್ಡಿದರ ಸಿಗುತ್ತದೆ.
2. ರಾಷ್ಟ್ರೀಯ ಉಳಿತಾಯ ಸಮಯದ ಠೇವಣಿ : ಕನಿಷ್ಠ 1000ರೂ. ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ಇದರಲ್ಲಿ ಗರಿಷ್ಠ ಮಿತಿ ಎಂಬುದೇ ಇಲ್ಲ. ಬಡ್ಡಿಯು ಒಂದು ವರ್ಷದ ಅವಧಿಯ ಠೇವಣಿಯ ಮೇಲೆ ಶೇಕಡಾ 6.9, ಎರಡು ವರ್ಷಗಳ ಅವಧಿಯ ಮೇಲೆ ಶೇಕಡಾ 7, ಮೂರು ವರ್ಷಗಳ ಅವಧಿಯ ಮೇಲೆ ಶೇಕಡಾ 7.10 ಮತ್ತು ಐದು ವರ್ಷಗಳ ಅವಧಿಯ ಠೇವಣಿಯ ಮೇಲೆ ಶೇಕಡಾ 7.50.ರಷ್ಟು ಬಡ್ಡಿಯನ್ನು ನಿಯಮಿತವಾಗಿ ನೀಡಲಾಗುತ್ತದೆ.
3. ಐದು ವರ್ಷಗಳ RD ಯೋಜನೆ: ಈ ಯೋಜನೆಯಲ್ಲಿ ಹೂಡಿಕೆ ಮಾಡಲು, ನೀವು ಕನಿಷ್ಠ 100 ರೂ. ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಈ ಯೋಜನೆಯಲ್ಲಿ ಪ್ರಸ್ತುತ 6.7 ಶೇಕಡಾ ಬಡ್ಡಿ ದರವಿದೆ.
4. ಹಿರಿಯ ನಾಗರಿಕರ ಉಳಿತಾಯ ಯೋಜನೆ : ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ನೀವೇನಾದರೂ ಖಾತೆ ತೆರೆಯಲು ಬಯಸಿದರೆ, ಕನಿಷ್ಠ 1000 ರೂ. ಠೇವಣಿಯೊಂದಿಗೆ ಆರಂಭಿಸಬೇಕಾಗುತ್ತದೆ. ಗರಿಷ್ಠ 30 ಲಕ್ಷ ರೂ.ಗಳನ್ನು ನೀವು ಈ ಖಾತೆಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯ ಬಡ್ಡಿ ದರವು ಶೇಕಡಾ 8.20 ರಷ್ಟಿದೆ.
5. ಮಾಸಿಕ ಆದಾಯ ಯೋಜನೆ: ಈ ಯೋಜನೆಯಲ್ಲಿ ಹೂಡಿಕೆದಾರರು ಮಾಸಿಕ ಆದಾಯವನ್ನು ಪಡೆಯಬಹುದು. ಒಂದೇ ಖಾತೆಯಡಿ ಕನಿಷ್ಠ 1000ರೂ ಹಾಗೂ ಗರಿಷ್ಠ 9 ಲಕ್ಷರೂ ಹಾಗೂ ಜಂಟಿ ಖಾತೆಯಡಿ ಗರಿಷ್ಠ 15 ಲಕ್ಷ ರೂಗಳನ್ನು ಹೂಡಿಕೆ ಮಾಡಬಹುದು. ಖಾತೆ ತೆರೆದಾಗಿನಿಂದ ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಆದಾಯ ಬರುತ್ತದೆ. ಇದರ ಬಡ್ಡಿ ದರ ಶೇ.7.40ರಷ್ಟನ್ನು ನಿಗದಿ ಮಾಡಲಾಗಿದೆ.
6. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC): ಈ ಯೋಜನೆಗೆ ಸೇರಲು ಬಯಸುವವರು ಕನಿಷ್ಠ 1000ರೂಪಾಯಿ ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ಗರಿಷ್ಠ ಹೂಡಿಕೆಯು ಯಾವುದೇ ಮೊತ್ತವಾಗಿರಬಹುದು. ವಾರ್ಷಿಕ ಬಡ್ಡಿ ದರ ಶೇ.7.70ರಷ್ಟಿದೆ.
7. ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್): ಒಂದು ವರ್ಷದಲ್ಲಿ ಕನಿಷ್ಠ ಮೊತ್ತ 500ರೂ. ಮತ್ತು ಗರಿಷ್ಠ 1,50,000 ರೂ. ಇದ್ದು ಇದನ್ನು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಬಹುದು. ಪ್ರಸ್ತುತ ಈ ಯೋಜನೆಯಲ್ಲಿ ಶೇಕಡಾ 7.71ರಷ್ಟು ಬಡ್ಡಿ ದರವನ್ನು ನೀಡಲಾಗುತ್ತಿದೆ.
8. ಕಿಸಾನ್ ವಿಕಾಸ್ ಪತ್ರ: ಈ ಕಿಸಾನ್ ವಿಕಾಸ್ ಪತ್ರ ಯೋಜನೆಯಲ್ಲಿ, ಕನಿಷ್ಠ 1000ರೂಪಾಯಿ ಠೇವಣಿಯೊಂದಿಗೆ ಖಾತೆಯನ್ನು ತೆರೆಯಬಹುದು. ನೀವು ಯಾವುದೇ ಮೊತ್ತವನ್ನು ಹೂಡಿಕೆ ಮಾಡಬಹುದು. ಬಡ್ಡಿ ದರ 7.50 ಪ್ರತಿಶತದಷ್ಟಿದೆ.
9. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ : ಈ ಯೋಜನೆಯಲ್ಲಿ ಹೂಡಿಕೆ ಮಾಡಲು ನೀವು ಕನಿಷ್ಠ 1000 ರೂ.ದೊಂದಿಗೆ ಖಾತೆಯನ್ನು ತೆರೆಯಬೇಕು. ಒಂದು ಖಾತೆಯಲ್ಲಿ ಗರಿಷ್ಠ ರೂ.2 ಲಕ್ಷ ಹೂಡಿಕೆ ಮಾಡಬಹುದು. 3 ತಿಂಗಳ ಅವಧಿಯೊಂದಿಗೆ ಯಾವುದೇ ಸಂಖ್ಯೆಯ ಖಾತೆಗಳನ್ನು ತೆರೆಯಬಹುದು. ವಾರ್ಷಿಕ ಬಡ್ಡಿ ದರ ಶೇ.7.50ರಷ್ಟಿದೆ.
10. ಸುಕನ್ಯಾ ಸಮೃದ್ಧಿ ಯೋಜನೆ : ಕೇಂದ್ರ ಸರ್ಕಾರವು ವಿಶೇಷವಾಗಿ ಹೆಣ್ಣು ಮಕ್ಕಳಿಗಾಗಿ ಈ ಸುಕನ್ಯಾ ಸಮೃದ್ಧಿ ಯೋಜನೆ ಯೋಜನೆಯನ್ನು ತಂದಿದೆ. 8.20 ರಷ್ಟು ಬಡ್ಡಿದರ ನೀಡಲಾಗುತ್ತಿದೆ. ನೀವು ಕನಿಷ್ಠ 250 ರೂ.ಗಳಲ್ಲಿ ಖಾತೆಯನ್ನು ತೆರೆಯಬಹುದು. ಗರಿಷ್ಠ ಹೂಡಿಕೆ 1.50 ಲಕ್ಷ ರೂಪಾಯಿ ಆಗಿದೆ.