ಮುಂಬೈ: ಭಾರತದ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ 50 ಮಂಗಳವಾರದ ವಹಿವಾಟಿನಲ್ಲಿ ಇಳಿಕೆಯೊಂದಿಗೆ ಕೊನೆಗೊಂಡಿವೆ. ಎರಡೂ ಸೂಚ್ಯಂಕ ಮಂಗಳವಾರ ಶೇಕಡಾ 1 ಕ್ಕಿಂತ ಹೆಚ್ಚು ಕುಸಿದಿವೆ. ಬಿಎಸ್ಇ ಸೆನ್ಸೆಕ್ಸ್ 931 ಪಾಯಿಂಟ್ ಅಥವಾ ಶೇಕಡಾ 1.15 ರಷ್ಟು ಕುಸಿದು 80,220.72 ರಲ್ಲಿ ಕೊನೆಗೊಂಡರೆ, ನಿಫ್ಟಿ 50 309 ಪಾಯಿಂಟ್ ಅಥವಾ ಶೇಕಡಾ 1.25 ರಷ್ಟು ಕುಸಿದು 24,472.10 ರಲ್ಲಿ ಕೊನೆಗೊಂಡಿತು.
ಮಧ್ಯಮ ಮತ್ತು ಸಣ್ಣ ಕ್ಯಾಪ್ ವಿಭಾಗಗಳು ಇನ್ನೂ ಹೆಚ್ಚು ನಷ್ಟ ಅನುಭವಿಸಿದವು. ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕ ಶೇಕಡಾ 2.52 ರಷ್ಟು ನಷ್ಟದೊಂದಿಗೆ ಕೊನೆಗೊಂಡರೆ, ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇಕಡಾ 3.81 ರಷ್ಟು ಕುಸಿದಿದೆ.
ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ ಇದ್ದ ಸುಮಾರು 453.7 ಲಕ್ಷ ಕೋಟಿ ರೂ.ಗಳಿಂದ ಸುಮಾರು 444.7 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಇದರಿಂದ ಹೂಡಿಕೆದಾರರು ಒಂದೇ ದಿನದಲ್ಲಿ ಸುಮಾರು 9 ಲಕ್ಷ ಕೋಟಿ ರೂ.ಗಳಷ್ಟು ನಷ್ಟಕ್ಕೀಡಾಗಿದ್ದಾರೆ.
ನಿಫ್ಟಿ 50 ಸೂಚ್ಯಂಕದಲ್ಲಿ ಐಸಿಐಸಿಐ ಬ್ಯಾಂಕ್ (ಶೇಕಡಾ 0.74), ನೆಸ್ಲೆ (ಶೇಕಡಾ 0.10) ಮತ್ತು ಇನ್ಫೋಸಿಸ್ (ಶೇಕಡಾ 0.04) ಮಾತ್ರ ಏರಿಕೆಯೊಂದಿಗೆ ಕೊನೆಗೊಂಡವು.
ವಲಯ ಸೂಚ್ಯಂಕಗಳಲ್ಲಿ, ನಿಫ್ಟಿ ಪಿಎಸ್ಯು ಬ್ಯಾಂಕ್ (ಶೇಕಡಾ 4.18 ರಷ್ಟು ಕುಸಿತ), ರಿಯಾಲ್ಟಿ (ಶೇಕಡಾ 3.38 ರಷ್ಟು ಕುಸಿತ) ಮತ್ತು ಲೋಹ (ಶೇಕಡಾ 3 ರಷ್ಟು ಕುಸಿತ) ಕುಸಿದವು.
ಮಂಗಳವಾರ ಡಾಲರ್ ಎದುರು ರೂಪಾಯಿ ಮೌಲ್ಯ ಸ್ಥಿರ: ನಕಾರಾತ್ಮಕ ದೇಶೀಯ ಈಕ್ವಿಟಿ ಮಾರುಕಟ್ಟೆಗಳು ಮತ್ತು ವಿದೇಶಿ ನಿಧಿಗಳ ಅಡೆತಡೆಯಿಲ್ಲದ ಹೊರಹರಿವನ್ನು ಅನುಸರಿಸಿ ರೂಪಾಯಿ ಮಂಗಳವಾರ (ಅಕ್ಟೋಬರ್ 22, 2024) ಸತತ ಎರಡನೇ ದಿನದಂದು ಯುಎಸ್ ಡಾಲರ್ ವಿರುದ್ಧ 84.07 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು.
ಇಂಟರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ, ಭಾರತೀಯ ರೂಪಾಯಿ ಡಾಲರ್ ವಿರುದ್ಧ 84.07 ರಲ್ಲಿ ಪ್ರಾರಂಭವಾಯಿತು ಮತ್ತು ವಹಿವಾಟಿನಲ್ಲಿ 84.06 ಮತ್ತು 84.08 ರ ನಡುವೆ ಚಲಿಸಿತು. ರೂಪಾಯಿ ಅಂತಿಮವಾಗಿ ಡಾಲರ್ ವಿರುದ್ಧ ಹಿಂದಿನ ದಿನದ ಮುಕ್ತಾಯದ ಮಟ್ಟವಾದ 84.07 (ತಾತ್ಕಾಲಿಕ) ರಲ್ಲಿ ಸ್ಥಿರವಾಯಿತು.
ಇದನ್ನೂ ಓದಿ : ಭಾರತದ ಅಭಿವೃದ್ಧಿ ಅಬಾಧಿತ, ಶೇ 7.2ರ ದರದಲ್ಲಿ ಜಿಡಿಪಿ ಬೆಳವಣಿಗೆ: ಆರ್ಬಿಐ