ಮುಂಬೈ: ಸೋಮವಾರದ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 638 ಪಾಯಿಂಟ್ಸ್ ಅಥವಾ ಶೇಕಡಾ 0.78ರಷ್ಟು ಕುಸಿದು 81,050ರಲ್ಲಿ ಕೊನೆಗೊಂಡಿದ್ದರೆ, ಎನ್ಎಸ್ಇ ನಿಫ್ಟಿ 50 218 ಪಾಯಿಂಟ್ಸ್ ಅಥವಾ ಶೇಕಡಾ 0.87ರಷ್ಟು ಕುಸಿದು 24,795ರಲ್ಲಿ ಕೊನೆಗೊಂಡಿದೆ. ದಿನದ ಆರಂಭದಲ್ಲಿ ಬೆಳಗ್ಗೆ ಕೆಲ ಷೇರುಗಳು ಏರಿಕೆಯೊಂದಿಗೆ ಆರಂಭವಾದರೂ ನಂತರದಲ್ಲಿ ಲಾಭ ಕಳೆದುಕೊಂಡು ಇಳಿಕೆಯತ್ತ ಸಾಗಿದವು.
ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಎನ್ಟಿಪಿಸಿ, ಆ್ಯಕ್ಸಿಸ್ ಬ್ಯಾಂಕ್ ಮತ್ತು ಲಾರ್ಸೆನ್ ಅಂಡ್ ಟೂಬ್ರೊ ಸೋಮವಾರ ಸೆನ್ಸೆಕ್ಸ್ ಇಳಿಕೆಯಾಗಲು ಕಾರಣವಾದ ಸೂಚ್ಯಂಕ ಹೆವಿವೇಯ್ಟ್‌ಗಳಾಗಿವೆ. ಈ ಪೈಕಿ ಎನ್ಟಿಪಿಸಿ ಶೇ 4ರಷ್ಟು ಕುಸಿದರೆ, ಅದಾನಿ ಪೋರ್ಟ್ಸ್ ಸೆನ್ಸೆಕ್ಸ್ನಲ್ಲಿ ಅತಿ ಹೆಚ್ಚು ನಷ್ಟ ಅನುಭವಿಸಿತು.
ವಲಯವಾರು ನೋಡುವುದಾದರೆ- ನಿಫ್ಟಿ ಐಟಿ ಹೊರತುಪಡಿಸಿ ಎಲ್ಲಾ ವಲಯಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸಿವೆ. ನಿಫ್ಟಿ ಐಟಿ ಇಂಟ್ರಾಡೇ ಶೇಕಡಾ 0.47ರಷ್ಟು ಏರಿಕೆಯಾಗಿದೆ, ನಿಫ್ಟಿ ಮೀಡಿಯಾ, ನಿಫ್ಟಿ ಮೆಟಲ್ (ಶೇಕಡಾ 2.44ರಷ್ಟು ಕುಸಿತ) ಕುಸಿದಿವೆ. ನ್ಯಾಷನಲ್ ಅಲ್ಯೂಮಿನಿಯಂ, ಎಪಿಎಲ್ ಅಪೊಲೊ ಟ್ಯೂಬ್ಸ್, ಹಿಂಡಾಲ್ಕೊ, ಎನ್ಎಂಡಿಸಿ, ಅದಾನಿ ಎಂಟರ್ ಪ್ರೈಸಸ್, ಹಿಂದೂಸ್ತಾನ್ ಜಿಂಕ್, ಹಿಂದೂಸ್ತಾನ್ ಕಾಪರ್, ಎಸ್ಎಐಎಲ್ ಮತ್ತು ವೆಲ್ ಸ್ಪನ್ ಕಾರ್ಪ್ನಂಥ ಲೋಹದ ಷೇರುಗಳು ಶೇಕಡಾ 3ರಿಂದ 6ರಷ್ಟು ಕುಸಿದವು.
ನಿಫ್ಟಿ ಪಿಎಸ್ ಯು ಬ್ಯಾಂಕ್, ಖಾಸಗಿ ಬ್ಯಾಂಕ್, ಹಣಕಾಸು ಸೇವೆಗಳು, ಗ್ರಾಹಕ ಬಾಳಿಕೆ ಬರುವ ವಸ್ತುಗಳು ಮತ್ತು ತೈಲ ಮತ್ತು ಅನಿಲದಂತಹ ಇತರ ವಲಯಗಳು ಸಹ ತಲಾ 1 ರಿಂದ 2 ಪ್ರತಿಶತದಷ್ಟು ಕುಸಿದವು.
ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ ಇದ್ದ ಸುಮಾರು 461 ಲಕ್ಷ ಕೋಟಿ ರೂ.ಗಳಿಂದ ಸುಮಾರು 452 ಲಕ್ಷ ಕೋಟಿ ರೂ.ಗೆ ಇಳಿದಿದೆ. ಇದರಿಂದಾಗಿ ಹೂಡಿಕೆದಾರರು ಒಂದೇ ದಿನದ ವಹಿವಾಟಿನಲ್ಲಿ ಸುಮಾರು 9 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ. ಕಳೆದ ಆರು ವಹಿವಾಟಿನ ದಿನಗಳಲ್ಲಿ ಹೂಡಿಕೆದಾರರು ಸುಮಾರು 25 ಲಕ್ಷ ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾರೆ.
ವಿದೇಶಿ ನಿಧಿಗಳಿಂದ ಮಾರಾಟದ ಒತ್ತಡ ಮತ್ತು ದೇಶೀಯ ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿಯಿಂದಾಗಿ ರೂಪಾಯಿ ಸೋಮವಾರ ಯುಎಸ್ ಡಾಲರ್ ವಿರುದ್ಧ 83.99ರಲ್ಲಿ ಸ್ಥಿರವಾಯಿತು. ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಯುಎಸ್ ಡಾಲರ್ ವಿರುದ್ಧ ರೂಪಾಯಿ 83.96ರಲ್ಲಿ ಪ್ರಾರಂಭವಾಯಿತು ಮತ್ತು ಇಂಟ್ರಾ-ಡೇ ಗರಿಷ್ಠ 83.95 ಮತ್ತು ಕನಿಷ್ಠ 83.99ಕ್ಕೆ ತಲುಪಿತ್ತು. ರೂಪಾಯಿ ಅಂತಿಮವಾಗಿ 83.99ರಲ್ಲಿ (ತಾತ್ಕಾಲಿಕ) ಕೊನೆಗೊಂಡಿತು. ಅಂದರೆ ಹಿಂದಿನ ಮುಕ್ತಾಯದ ಮಟ್ಟದಿಂದ ಯಾವುದೇ ಬದಲಾವಣೆ ಆಗಲಿಲ್ಲ.
ಇದನ್ನೂ ಓದಿ: ಆರ್ಬಿಐ ಹಣಕಾಸು ನೀತಿ ಸಮಿತಿ ಸಭೆ ಆರಂಭ: ಬಡ್ಡಿದರ ಯಥಾಸ್ಥಿತಿ ಸಾಧ್ಯತೆ - RBI MPC Meeting