ಮುಂಬೈ: ಈ ವರ್ಷದ ಜೂನ್ನಲ್ಲಿ ಬಡ್ಡಿ ದರ ಕಡಿತದ ನಿರೀಕ್ಷೆಯ ನಡುವೆ ಹೂಡಿಕೆದಾರರು ಮೂಲಭೂತ ಅಂಶಗಳತ್ತ ಒಲವು ತೋರಿದ್ದರಿಂದ, ಸಕಾರಾತ್ಮಕ ಜಾಗತಿಕ ಸೂಚನೆಗಳಿಂದ ಉತ್ತೇಜಿಸಲ್ಪಟ್ಟ ದೇಶೀಯ ಮಾರುಕಟ್ಟೆ ಮಾನದಂಡಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ-50 ಫೆಬ್ರವರಿ 15ರ ಗುರುವಾರ ಸತತ ಮೂರನೇ ವಹಿವಾಟಿನ ದಿನದಲ್ಲಿ ಏರಿಕೆ ಕಂಡವು.
ಸೆನ್ಸೆಕ್ಸ್ ದಿನದ ಬಹುಪಾಲು ಅವಧಿಯಲ್ಲಿ ಕುಸಿತದಲ್ಲಿಯೇ ವಹಿವಾಟು ನಡೆಸಿತು. ಆದರೆ ನಂತರ ಖರೀದಿಯ ಲಾಭದೊಂದಿಗೆ ಕೊನೆಗೊಂಡಿತು. ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 228 ಪಾಯಿಂಟ್ ಅಥವಾ ಶೇಕಡಾ 0.32 ರಷ್ಟು ಏರಿಕೆ ಕಂಡು 72,050.38 ಕ್ಕೆ ತಲುಪಿದ್ದರೆ, ನಿಫ್ಟಿ-50 71 ಪಾಯಿಂಟ್ ಅಥವಾ ಶೇಕಡಾ 0.32 ರಷ್ಟು ಏರಿಕೆ ಕಂಡು 21,910.75 ಕ್ಕೆ ತಲುಪಿದೆ.
ಎಚ್ಡಿಎಫ್ಸಿ ಬ್ಯಾಂಕ್ ಷೇರುಗಳು ಸೂಚ್ಯಂಕ ಏರಿಕೆಗೆ ಹೆಚ್ಚಿನ ಕೊಡುಗೆ ನೀಡಿದವು. ಮಹೀಂದ್ರಾ ಮತ್ತು ಮಹೀಂದ್ರಾ, ಎಸ್ಬಿಐ ಮತ್ತು ಎನ್ಟಿಪಿಸಿ ಷೇರುಗಳು ಕೂಡ ಏರಿಕೆಯಾದವು. ಮಧ್ಯಮ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಮಾನದಂಡಗಳನ್ನು ಮೀರಿಸಿದವು. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇಕಡಾ 0.93 ರಷ್ಟು ಏರಿಕೆ ಕಂಡರೆ, ಸ್ಮಾಲ್ಕ್ಯಾಪ್ ಸೂಚ್ಯಂಕವು ಶೇಕಡಾ 1.24 ರಷ್ಟು ಏರಿಕೆಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ ಸುಜುಕಿ, ಎಸ್ಬಿಐ, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಆಟೋ, ಎಚ್ಸಿಎಲ್ ಟೆಕ್, ಬ್ಯಾಂಕ್ ಆಫ್ ಬರೋಡಾ, ಕೋಲ್ ಇಂಡಿಯಾ, ಒಎನ್ಜಿಸಿ, ಟಿವಿಎಸ್ ಮೋಟಾರ್ ಕಂಪನಿ ಮತ್ತು ಜೊಮಾಟೊ ಸೇರಿದಂತೆ 300 ಕ್ಕೂ ಹೆಚ್ಚು ಷೇರುಗಳು ಬಿಎಸ್ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.
ಬಿಎಸ್ಇ-ಲಿಸ್ಟೆಡ್ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ ಸುಮಾರು 384.7 ಲಕ್ಷ ಕೋಟಿ ರೂ.ಗಳಿಂದ ಸುಮಾರು 387.3 ಲಕ್ಷ ಕೋಟಿ ರೂ.ಗೆ ಏರಿದೆ. ಇದು ಹೂಡಿಕೆದಾರರನ್ನು ಒಂದೇ ದಿನದ ವಹಿವಾಟಿನಲ್ಲಿ ಸುಮಾರು 2.6 ಲಕ್ಷ ಕೋಟಿ ರೂ.ಗಳಷ್ಟು ಶ್ರೀಮಂತರನ್ನಾಗಿ ಮಾಡಿದೆ.
ನಿಫ್ಟಿ-50ಯಲ್ಲಿ ಸುಮಾರು 26 ಷೇರುಗಳು ಏರಿಕೆಗೊಂಡರೆ, ಉಳಿದ 24 ಷೇರುಗಳು ಕುಸಿದವು. ಮಹೀಂದ್ರಾ ಅಂಡ್ ಮಹೀಂದ್ರಾ (ಶೇ 6.81), ಪವರ್ ಗ್ರಿಡ್ (ಶೇ 4.57) ಮತ್ತು ಬಿಪಿಸಿಎಲ್ (ಶೇ 4.38) ಷೇರುಗಳು ನಿಫ್ಟಿಯಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ. ಆಕ್ಸಿಸ್ ಬ್ಯಾಂಕ್ (ಶೇ 2.01), ಅಪೊಲೊ ಹಾಸ್ಪಿಟಲ್ಸ್ ಎಂಟರ್ ಪ್ರೈಸಸ್ (ಶೇ 1.84) ಮತ್ತು ಐಟಿಸಿ (ಶೇ 1.65) ಷೇರುಗಳು ನಿಫ್ಟಿಯಲ್ಲಿ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.
ಇದನ್ನೂ ಓದಿ: 2028ಕ್ಕೆ $100 ಬಿಲಿಯನ್ ತಲುಪಲಿದೆ ಭಾರತದ ಆಹಾರ ಸೇವಾ ಮಾರುಕಟ್ಟೆ