ನವದೆಹಲಿ: ದೇಶದ ಪ್ರತಿಸ್ಪರ್ಧಿ ಬಿಲಿಯನೇರ್‌ಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಇದೇ ಮೊದಲ ಬಾರಿಗೆ ಜೊತೆಗೂಡಿ ಕೆಲಸ ಮಾಡಲು ಕೈಜೋಡಿಸಿದ್ದಾರೆ. ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಗೌತಮ್ ಅದಾನಿಯ ವಿದ್ಯುತ್ ಯೋಜನೆಯಲ್ಲಿ ಶೇ.26ರಷ್ಟು ಪಾಲನ್ನು ಖರೀದಿಸಿದೆ. ಮಧ್ಯಪ್ರದೇಶದಲ್ಲಿ 500 ಮೆಗಾವ್ಯಾಟ್ ವಿದ್ಯುತ್ ಸ್ಥಾವರಗಳಿಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ.
ಅದಾನಿ ಪವರ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಮಹಾನ್ ಎನರ್ಜೆನ್ ಲಿಮಿಟೆಡ್‌ನಲ್ಲಿ ರಿಲಯನ್ಸ್ 5 ಕೋಟಿ ಇಕ್ವಿಟಿ ಷೇರುಗಳನ್ನು ಪಡೆದುಕೊಂಡಿದೆ. 10 ರೂ. ಮುಖಬೆಲೆಯ 50 ಕೋಟಿ ರೂ. ಮೌಲ್ಯದ ಷೇರುಗಳು ಮತ್ತು 500 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯವನ್ನು ರಿಲಯನ್ಸ್ ಬಳಸಲಿದೆ ಎಂದು ಎರಡು ಸಂಸ್ಥೆಗಳು ಪ್ರತ್ಯೇಕವಾಗಿ ಸ್ಟಾಕ್ ಎಕ್ಸ್ಚೇಂಜ್ ಫೈಲಿಂಗ್ಸ್ನಲ್ಲಿ ತಿಳಿಸಿವೆ.
ಗುಜರಾತ್ ಮೂಲದ ಈ ಇಬ್ಬರು ಉದ್ಯಮಿಗಳನ್ನು ಮಾಧ್ಯಮಗಳು ಮತ್ತು ವಿಶ್ಲೇಷಕರು ಪರಸ್ಪರ ಪ್ರತಿಸ್ಪರ್ಧಿಗಳು ಎಂದು ವ್ಯಾಖ್ಯಾನಿಸುತ್ತಾರೆ. ಆದರೆ, ಅವರು ಏಷ್ಯಾದ ಸಂಪತ್ತಿನ ಏಣಿಯ ಅಗ್ರ ಎರಡು ಮೆಟ್ಟಿಲುಗಳನ್ನು ತಲುಪಲು ವರ್ಷಗಳ ಕಾಲ ಒಬ್ಬರಿಗೊಬ್ಬರು ತುದಿಗಾಲಿನಲ್ಲಿ ನಿಂತಿದ್ದಾರೆ. ತೈಲ ಮತ್ತು ಅನಿಲದಿಂದ ಚಿಲ್ಲರೆ ವ್ಯಾಪಾರ ಮತ್ತು ದೂರಸಂಪರ್ಕಕ್ಕೆ ಅಂಬಾನಿ ಆಸಕ್ತಿಗಳು ವ್ಯಾಪಿಸಿವೆ. ಅದಾನಿ ಬಂದರುಗಳಿಂದ ಹಿಡಿದು ವಿಮಾನ ನಿಲ್ದಾಣಗಳು, ಕಲ್ಲಿದ್ದಲು ಮತ್ತು ಗಣಿಗಾರಿಕೆಯ ಮೂಲಸೌಕರ್ಯಗಳ ಮೇಲೆ ಗಮನಹರಿಸಿದ್ದಾರೆ.
ಅದಾನಿ 2030 ರ ವೇಳೆಗೆ ವಿಶ್ವದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕರಾಗಲು ಬಯಸುತ್ತಿದ್ದಾರೆ. ಆದರೆ, ರಿಲಯನ್ಸ್ ಕಂಪನಿಯು ಗುಜರಾತ್‌ನ ಜಾಮ್‌ನಗರದಲ್ಲಿ ಸೌರ ಫಲಕಗಳು, ಬ್ಯಾಟರಿಗಳು, ಹಸಿರು ಹೈಡ್ರೋಜನ್ ಮತ್ತು ಇಂಧನಕ್ಕೆ ಸಂಬಂಧಿಸಿ ನಾಲ್ಕು ಗಿಗಾ ಕಾರ್ಖಾನೆಗಳನ್ನು ನಿರ್ಮಿಸುತ್ತಿದೆ. ಮತ್ತೊಂದೆಡೆ, ಅದಾನಿ ಕೂಡ ಸೌರ ಮಾಡ್ಯೂಲ್‌ಗಳು, ವಿಂಡ್ ಟರ್ಬೈನ್‌ಗಳು ಮತ್ತು ಹೈಡ್ರೋಜನ್ ಎಲೆಕ್ಟ್ರೋಲೈಜರ್‌ಗಳನ್ನು ತಯಾರಿಸಲು ಮೂರು ಗಿಗಾ ಕಾರ್ಖಾನೆಗಳನ್ನು ನಿರ್ಮಿಸುತ್ತಿದ್ದಾರೆ.
ಇದೇ ಅದಾನಿ ಪವರ್ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಮಹಾನ್ ಎನರ್ಜೆನ್ ಲಿಮಿಟೆಡ್ ಅಡಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನೊಂದಿಗೆ 500 ಮೆಗಾವ್ಯಾಟ್ಗಾಗಿ 20 ವರ್ಷಗಳ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದ ಮಾಡಿಕೊಂಡಿದೆ. 2005 ರ ವಿದ್ಯುತ್ ನಿಯಮಗಳ ಅಡಿ ನೀತಿ ರೂಪಿಸಲಾಗಿದೆ ಎಂದು ಅದಾನಿ ಪವರ್ ತನ್ನ ಫೈಲಿಂಗ್‌ನಲ್ಲಿ ತಿಳಿಸಿದೆ. ಈ ನೀತಿಯ ಪ್ರಯೋಜನವನ್ನು ಪಡೆಯಲು ವಿದ್ಯುತ್ ಸ್ಥಾವರದ ಒಟ್ಟು ಸಾಮರ್ಥ್ಯಕ್ಕೆ ಅನುಗುಣವಾಗಿ ಕ್ಯಾಪ್ಟಿವ್ ಯುನಿಟ್‌ನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶೇ.26ರಷ್ಟು ಮಾಲೀಕತ್ವದ ಪಾಲನ್ನು ಹೊಂದಿರಬೇಕು. ಅದಕ್ಕೆ ಅನುಗುಣವಾಗಿ ಮಹಾನ್ ಎನರ್ಜೆನ್ ಲಿಮಿಟೆಡ್‌ನ 5 ಕೋಟಿ ಇಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡುತ್ತದೆ ಎಂದು ಹೇಳಿದೆ.
ಈ ಸಂಬಂಧವಾಗಿ, ಅದಾನಿ ಪವರ್ ಲಿಮಿಟೆಡ್, ಮಹಾನ್ ಎನರ್ಜೆನ್ ಲಿಮಿಟೆಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 2024ರ ಮಾರ್ಚ್ 27ರಂದು ರಾತ್ರಿ 7:00 ಗಂಟೆಗೆ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ವಹಿವಾಟಿನ ಮುಕ್ತಾಯವು ಅಗತ್ಯ ಅನುಮೋದನೆಗಳ ಸ್ವೀಕೃತಿ ಸೇರಿದಂತೆ ಸಾಂಪ್ರದಾಯಿಕ ಮುಕ್ತಾಯದ ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಅದಾನಿ ಪವರ್ ಮಾಹಿತಿ ಇದೆ. ಮತ್ತೊಂದೆಡೆ, ರಿಲಯನ್ಸ್ ಇದೇ ರೀತಿಯ ಮಾಹಿತಿಯನ್ನು ತನ್ನ ಫೈಲಿಂಗ್‌ನಲ್ಲಿ ಬಹಿರಂಗಪಡಿಸಿದೆ.
ಇದನ್ನೂ ಓದಿ: ₹3 ಸಾವಿರ ಕೋಟಿ ನೀಡಿ ಒಡಿಶಾದ ಗೋಪಾಲ್ಪುರ ಬಂದರು ಪಾಲು ಖರೀದಿಸಿದ ಅದಾನಿ ಪೋರ್ಟ್ಸ್