ನವದೆಹಲಿ: ಭಾರತದ ಚಿಲ್ಲರೆ ಹಣದುಬ್ಬರವು ಫೆಬ್ರವರಿಯಲ್ಲಿ ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ಶೇ 5.09ಕ್ಕೆ ಇಳಿದಿದ್ದು ಕುಟುಂಬಗಳಿಗೆ ಸ್ವಲ್ಪ ನೆಮ್ಮದಿ ತಂದಿದೆ ಎಂದು ಮಂಗಳವಾರ ಬಿಡುಗಡೆಯಾದ ಅಧಿಕೃತ ಅಂಕಿ- ಅಂಶಗಳು ತಿಳಿಸಿವೆ. ಜನವರಿಯಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡಾ 5.1 ರಷ್ಟಿತ್ತು. ಫೆಬ್ರವರಿಯಲ್ಲಿ ಅಡುಗೆ ಎಣ್ಣೆ ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದ್ದು, ಇದು ಶೇಕಡಾ 11.67 ರಷ್ಟು ಕಡಿಮೆಯಾಗಿದೆ. ಸಾಂಬಾರು ಪದಾರ್ಥಗಳ ಬೆಲೆ ಏರಿಕೆಯು ಜನವರಿಯಲ್ಲಿ ಶೇ 16.36 ರಷ್ಟಿದ್ದರೆ, ಫೆಬ್ರವರಿಯಲ್ಲಿ ಇದು ಶೇಕಡಾ 13.28ಕ್ಕೆ ಇಳಿದಿದೆ.
ಆದಾಗ್ಯೂ ಜನವರಿಯಲ್ಲಿ ತರಕಾರಿ ಬೆಲೆಗಳು ಶೇಕಡಾ 31.38 ರಷ್ಟು ಏರಿಕೆಯಾಗಿದೆ ಎಂದು ಅಂಕಿ - ಅಂಶಗಳು ತೋರಿಸಿವೆ. ಬೇಳೆಕಾಳುಗಳ ಬೆಲೆಗಳು ಶೇಕಡಾ 20.47ರಷ್ಟು ಏರಿಕೆಯಾಗಿದ್ದರೆ, ಏಕದಳ ಧಾನ್ಯಗಳ ಬೆಲೆಗಳು ಶೇಕಡಾ 7.83ರಷ್ಟು ಏರಿಕೆಯಾಗಿವೆ.
ಗ್ರಾಹಕ ಬೆಲೆ ಹಣದುಬ್ಬರವು ಈಗ ಆರ್ಬಿಐನ ಶೇಕಡಾ 2 ರಿಂದ 6 ರ ಗುರಿ ವ್ಯಾಪ್ತಿಯ ಶೇಕಡಾ 4 ಕ್ಕಿಂತ ಹೆಚ್ಚಾಗಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಕೇಂದ್ರ ಬ್ಯಾಂಕ್ ಬಡ್ಡಿದರಗಳನ್ನು ಕಡಿತಗೊಳಿಸದಿರಲು ಮುಖ್ಯ ಕಾರಣವಾಗಿದೆ. ಸ್ಥಿರತೆ ಖಚಿತಪಡಿಸಿಕೊಳ್ಳಲು ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಆರ್ಬಿಐ ಉತ್ಸುಕವಾಗಿದೆ ಮತ್ತು ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಗಳಲ್ಲಿ ಸತತ ಆರು ಬಾರಿ ರೆಪೋ ದರವನ್ನು ಶೇಕಡಾ 6.5 ರಲ್ಲಿ ಸ್ಥಿರವಾಗಿರಿಸಿದೆ. ಆರ್ಬಿಐನ ಹಣಕಾಸು ನೀತಿ ಸಮಿತಿ (ಎಂಪಿಸಿ) ಏಪ್ರಿಲ್ 3 ರಿಂದ 5 ರ ಮಧ್ಯೆ ಮತ್ತೆ ಸಭೆ ಸೇರುವ ವಾರಗಳ ಮೊದಲು ಹಣದುಬ್ಬರ ದತ್ತಾಂಶ ಪ್ರಕಟವಾಗಿದೆ.
ಕೈಗಾರಿಕಾ ಉತ್ಪಾದನೆ ಜನವರಿಯಲ್ಲಿ ಶೇ.3.8ರಷ್ಟು ಏರಿಕೆ: ಭಾರತದ ಕೈಗಾರಿಕಾ ಉತ್ಪಾದನೆಯು ಜನವರಿಯಲ್ಲಿ ಶೇಕಡಾ 3.8ರಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಅಂಕಿ - ಅಂಶ ಸಚಿವಾಲಯ ಮಂಗಳವಾರ ಬಿಡುಗಡೆ ಮಾಡಿದ ಅಂಕಿ - ಅಂಶಗಳು ತಿಳಿಸಿವೆ. 2022-23 ರ ಇದೇ ಅವಧಿಯಲ್ಲಿ ದಾಖಲಾದ ಶೇಕಡಾ 5.5 ರಷ್ಟು ಬೆಳವಣಿಗೆಗೆ ಹೋಲಿಸಿದರೆ 2023-24ರ ಏಪ್ರಿಲ್-ಜನವರಿಯಲ್ಲಿ ಒಟ್ಟಾರೆ ಕೈಗಾರಿಕಾ ಬೆಳವಣಿಗೆಯು ಶೇಕಡಾ 5.9 ರಷ್ಟಿದೆ.
3.8 ರಷ್ಟಿರುವ ಕೈಗಾರಿಕಾ ಬೆಳವಣಿಗೆಯ ಅಂಕಿ - ಅಂಶಗಳು ಈ ಹಿಂದೆ ಬಿಡುಗಡೆಯಾದ ಡಿಸೆಂಬರ್ 2023 ರ ತಾತ್ಕಾಲಿಕ ಅಂಕಿ - ಅಂಶಗಳಿಗೆ ಸಮಾನವಾಗಿವೆ. ಆದಾಗ್ಯೂ, ಕಳೆದ ತಿಂಗಳು ಅಂಕಿ - ಅಂಶಗಳನ್ನು ಘೋಷಿಸಿದಾಗಿನಿಂದ ಹೆಚ್ಚಿನ ದತ್ತಾಂಶಗಳು ಬಂದಿದ್ದರಿಂದ ಡಿಸೆಂಬರ್ ತಿಂಗಳ ಸಂಖ್ಯೆಯನ್ನು ಮಂಗಳವಾರ ಶೇಕಡಾ 4.2 ಕ್ಕೆ ಪರಿಷ್ಕರಿಸಲಾಯಿತು.
ಇದನ್ನೂ ಓದಿ : ಯುರೋಪ್ ರಾಷ್ಟ್ರಗಳೊಂದಿಗೆ $100 ಬಿಲಿಯನ್ ಹೂಡಿಕೆ ಒಪ್ಪಂದ: 10 ಲಕ್ಷ ಉದ್ಯೋಗ ಸೃಷ್ಟಿ ನಿರೀಕ್ಷೆ